ಖಂಡ್ವಾ : ಮಧ್ಯಪ್ರದೇಶದ ಅಲಿರಾಜ್ಪುರ್ ಜಿಲ್ಲೆಯಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಸಮಾವೇಶಕ್ಕೆ ಸ್ಕೂಲ್ ಬಸ್ನ್ನು ಬಳಕೆ ಮಾಡಲು ನಿರ್ಧರಿಸಿರುವುದನ್ನು ಖಂಡಿಸಿ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರಿಗೇ ಭಾವನಾತ್ಮಕ ಪತ್ರ ಬರೆದಿದ್ದಾನೆ.
ಆತನ ಪತ್ರದಿಂದಾಗಿ ಜಿಲ್ಲಾಡಳಿತ ಶಾಲಾ ವಾಹನವನ್ನು ಬಳಸುವ ತನ್ನ ಆದೇಶವನ್ನೇ ಹಿಂದಕ್ಕೆ ಪಡೆದುಕೊಂಡಿದೆ.
ಚಂದ್ರಶೇಖರ್ ಆಜಾದ್ ಅವರ ಜನ್ಮಸ್ಥಳ ಭದ್ರಾ ಗ್ರಾಮಕ್ಕೆ ಭೇಟಿ ಕೊಡಲಿರುವ ಪ್ರಧಾನಿ ಅಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೆ ಅಲ್ಲಿ ‘70 ಸಾಲ್ ಆಜಾದಿ, ಯಾದ್ ಕರೋ ಕುರ್ಬಾನಿ’ ಅಭಿಯಾನಕ್ಕೆ ಚಾಲನೆಯನ್ನೂ ನೀಡಲಿದ್ದಾರೆ.
ಈ ಸಮಾವೇಶಕ್ಕೆ ಜನರ ಸಂಚಾರ ವ್ಯವಸ್ಥೆಗೋಸ್ಕರ ಶಾಲಾ ವಾಹನವನ್ನು ಬಳಸಲು ನಿರ್ಧರಿಸಲಾಗಿತ್ತು. ಆದರೆ ದೇವಾಂಶ್ ಜೈನ್ ಎಂಬ ೮ನೇ ತರಗತಿ ವಿದ್ಯಾರ್ಥಿ ಇದನ್ನು ಖಂಡಿಸಿ ಮೋದಿಗೆ ಪತ್ರ ಬರೆದಿದ್ದಾನೆ.
‘ನಿಮ್ಮ ಸಭೆ ಶಾಲೆಗಿಂತಲೂ ಮುಖ್ಯವೇ ? ನೀವು ಅಮೇರಿಕಾದಲ್ಲಿ ಮಾಡಿದ ಭಾಷಣವನ್ನು ನಾನು ಆಲಿಸಿದ್ದೇನೆ. ಆದರೆ ಅಲ್ಲಿಗೆ ಯಾರೂ ಸ್ಕೂಲ್ ಬಸ್ನಲ್ಲಿ ಬಂದಿರಲಿಲ್ಲ ಅಲ್ಲವೇ ?’ ಎಂದು ಪತ್ರದಲ್ಲಿ ಮೋದಿಯವರನ್ನೇ ಪ್ರಶ್ನಿಸಿದ್ದಾನೆ.
ನಾನು ಕೂಡಾ ಮೋದಿ ಅಭಿಮಾನಿ ಎಂದಿರುವ ಆತ, ಮನ್ ಕಿ ಬಾತ್ ಕಾರ್ಯಕ್ರಮವನ್ನು ತಪ್ಪದೇ ಕೇಳುತ್ತಾ ಬಂದಿದ್ದೇನೆ. ಮೋದಿ ಅಭಿಮಾನಿ ಎಂದು ವ್ಯಂಗ್ಯ ಮಾಡುತ್ತಿದ್ದ ಸಹಪಾಠಿಗಳೊಂದಿಗೂ ಜಗಳವಾಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಅವರಿಗೆ ನಿಮ್ಮ ಕಾರ್ಯಕ್ರಮಕ್ಕೆ ಸ್ಕೂಲ್ ಬಸ್ ಬಳಸದಂತೆ ಹೇಳಿ ಎಂದು ಆತ ಪತ್ರದಲ್ಲಿ ಮೋದಿಯನ್ನು ಕೇಳಿಕೊಂಡಿದ್ದಾನೆ.
ನೀವು ಕಾಂಗ್ರೆಸ್ ನಾಯಕರಂತಲ್ಲ. ನಿಮಗೆ ನಮ್ಮ ಶಿಕ್ಷಣ ಮತ್ತು ಭವಿಷ್ಯದ ಬಗ್ಗೆ ಚಿಂತೆ ಇದೆ ಎಂದು ಮೋದಿಯನ್ನು ಆತ ಬಣ್ಣಿಸಿದ್ದಾನೆ.
ಆತ ಮೋದಿಗೆ ಬರೆದ ಪತ್ರವನ್ನು ತಿಳಿದುಕೊಂಡ ಜಿಲ್ಲಾಡಳಿತ ಇದೀಗ ಸಮಾವೇಶಕ್ಕೆ ಶಾಲಾ ವಾಹನವನ್ನು ಬಳಸುವ ನಿರ್ಧಾರವನ್ನು ಹಿಂದಕ್ಕೆ ಪಡೆದಿದೆ.
ಇದೀಗ ದೇವಾಂಶ್ ಮೋದಿಗೆ ಬರೆದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.