ನವದೆಹಲಿ : ಕಳೆದ ಒಂದು ತಿಂಗಳಿನಿಂದ ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಿಎಂ ಮೆಹಬೂಬಾ ಮುಫ್ತಿ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು.
ಪ್ರಧಾನಿಯ ದೆಹಲಿ ನಿವಾಸದಲ್ಲಿ ಇಬ್ಬರು ಗಣ್ಯರು ಕಾಶ್ಮೀರದ ವಿಷಯವಾಗಿ ಮಾತುಕತೆಯನ್ನು ನಡೆಸಿದ್ದಾರೆ. ಈ ವೇಳೆ ಮೆಹಬೂಬಾ ಅವರು ಅಟಲ್ ಬಿಹಾರಿ ವಾಜಪೇಯಿಯವರಂತೆ ಮೋದಿಯವರು ಕಾಶ್ಮೀರಿಗರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಶಾಂತಿ ಸ್ಥಾಪನೆ, ಕಾನೂನು ಸುವ್ಯವಸ್ಥೆ ಬಗ್ಗೆ ಸಮಾಲೋಚನೆಗಳನ್ನು ನಡೆಸಲಾಗಿದ್ದು, ಕಾಶ್ಮೀರಿಗರ ನೋವನ್ನು ಶಮನಗೊಳಿಸಲು ಮೋದಿ ಕಾಶ್ಮೀರಿಗರೊಂದಿಗೆ ಮಾತುಕತೆ ನಡೆಸಬೇಕು ಎಂದು ಮೆಹಬೂಬಾ ಕೇಳಿಕೊಂಡಿದ್ದಾರೆ.
ಅಲ್ಲದೆ ಪಾಕಿಸ್ಥಾನದೊಂದಿಗೂ ಕಾಶ್ಮೀರದ ವಿಷಯವಾಗಿ ಭಾರತ ಮಾತುಕತೆಯನ್ನು ನಡೆಸಬೇಕು. ಕಾಶ್ಮೀರ ಉಭಯ ದೇಶಗಳ ನಡುವಿನ ಸೇತುವೆಯಂತೆ ಕಾರ್ಯ ನಿರ್ವಹಿಸಲಿದೆ. ಕೇವಲ ಮಾತುಕತೆಯಿಂದ ಮಾತ್ರ ಕಣಿವೆ ರಾಜ್ಯದ ಸಮಸ್ಯೆ ನೀಗಲು ಸಾಧ್ಯ ಎಂದು ಮೆಹಬೂಬಾ ಹೇಳಿದ್ದಾರೆ.
ಮೋದಿಯವರನ್ನು ಭೇಟಿಯಾದ ಬಳಿಕ ಅವರು ಗೃಹಸಚಿವ ರಾಜ್ನಾಥ್ ಸಿಂಗ್ ಅವರನ್ನು ಭೇಟಿಯಾಗಿ ಕಣಿವೆ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.
ಜುಲೈ 8 ರಂದು ಹಿಜ್ಬುಲ್ ಮುಖಂಡ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ಅದನ್ನು ನಿಯಂತ್ರಿಸಲು ಮೆಹಬೂಬಾ ಸರ್ಕಾರ ಹರಸಾಹಸ ಪಡುತ್ತಿದೆ. ಇದಕ್ಕಾಗಿ ಕೇಂದ್ರದ ನೆರವನ್ನು ಕೇಳುವ ಸಲುವಾಗಿ ಅವರು ದೆಹಲಿಗೆ ಆಗಮಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.