ನಮ್ಮ ಪೂರ್ವಜರ ವೀರಗಾಥೆಗಳು ಹಾಗು ಆದರ್ಶ ಬದುಕು ಸದಾ ಸ್ಪೂರ್ತಿದಾಯಕವೇ ಆಗಿದೆ. ಇಂತಹ ವೀರ ನಾರಿಯರ ಜೀವನ ಅವರ ತ್ಯಾಗ ಬಲಿದಾನಗಳಿಗೆ ಸದಾ ಚಿರರುಣಿಗಳಾಗಬೇಕು. ಈ ಹಿನ್ನಲೆಯಲ್ಲಿಯೇ ರಾಣಿಬಾಯಿಯ ಜೀವನವು ಮಹತ್ವವನ್ನು ಗಳಿಸಿದೆ.
ಕ್ರಿ.ಶ. ಎಂಟನೇ ಶತಮಾನದ ಕಾಲ. ಭಾರತದ ಮೇಲೆ ಅನೇಕ ವಿದೇಶಿಯರು ದಾಳಿ ಮಾಡಿದ್ದರೂ, ಮುಸಲ್ಮಾನರ ಪ್ರವೇಶವಾದದ್ದು ಈ ಕಾಲದಲ್ಲೇ. ಅವರ ದಾಳಿಗಳು ದಾರುಣವಾಗಿಯೂ ಮುಖ್ಯವಾಗಿ ಅಮಾನುಷವಾಗಿಯೂ ಇರುತ್ತಿದ್ದವು. ನಮ್ಮ ದೇಶದಲ್ಲಿ ಆಗ ಸಿಂಧ್ ರಾಜ್ಯಕ್ಕೆ ದಾಹಿರ ಎಂಬ ರಾಜನಿದ್ದ. ಈತನ ರಾಣಿಯೇ ರಾಣಿಬಾಯಿ.
ಈ ಹೊತ್ತಿಗೆ ಭಾಗ್ದಾದ್ನಲ್ಲಿ ಆಗ ಹೊಸ ಖಲೀಫನು ಬಂದಿದ್ದ. ಇಡೀ ವಿಶ್ವದಲ್ಲಿಯೇ ಅವನ ಸಾಮ್ರಾಜ್ಯ ಸ್ಥಾಪಿಸಬೇಕು ಎಂದಿದ್ದ. ತನ್ನ ಪ್ರತಿನಿಧಿಗಳನ್ನು ಎಲ್ಲೆಡೆ ಕಳಿಸಿ ಆಕ್ರಮಣ ನಡೆಸುವ ಮೂಲಕ ಭಯ ಹುಟ್ಟಿಸಿ ರಾಜ್ಯವನ್ನು ಸ್ಥಾಪಿಸುತ್ತಿದ್ದ. ವೈಭವದಿಂದಿದ್ದ ಭಾರತದ ಮೇಲೆಯೂ ಆತನ ಕಣ್ಣು ಬಿದ್ದಿತು. ತನ್ನ ಪ್ರತಿನಿಧಿಯಾಗಿದ್ದ ಬಿನ್ ಕಾಸೀಮನನ್ನು ಭಾರತಕ್ಕೆ ಕಳಿಸಿದ. ಖಲೀಫನ ಆಜ್ಞೆ ಪಾಲಿಸಲು ಬಿನ್ ಕಾಸೀಮನು ಸಿಂಧ್ ದೇಶದ ಮೇಲೆ ಕ್ರಿ.ಶ. 712 ರಲ್ಲಿ ದಾಳಿ ಮಾಡಿದ. ವೀರರಾಜ ದಾಹೀರನು ಕಾಸೀಮನ ಸೈನ್ಯವನ್ನು ಸೋಲಿಸಿದನು. ಪಟ್ಟು ಬಿಡದೇ 15 ಸಲ ಸೋಲಿಸಲ್ಪಟ್ಟು ಹಿಮ್ಮೆಟ್ಟಿದನು. ಆದರೆ ಈ ಬಾರಿ ವಿಶಾಲ ಸೈನ್ಯದೊಂದಿಗೆ ‘ದೇವಲ ನಗರ’ದ ಮೇಲೆ ದಾಳಿ ಮಾಡಿದ. ಅನೇಕ ದೇವಸ್ಥಾನಗಳನ್ನು ನೆಲಸಮ ಮಾಡುತ್ತ ನೈರನ್ ನಗರವನ್ನು ತಲುಪಿದನು.
ರಾಜ ದಾಹಿರನಿಗೆ ವಿಷಯ ತಿಳಿಯಿತು. ಆತ ತನ್ನ ಸೈನ್ಯವನ್ನು ಕರೆಸಿ ಈ ವಿಷಯ ತಿಳಿಸಿ ಸಕಲ ಶಸ್ತ್ರಗಳ ಜೊತೆ ಸಿದ್ಧನಾದನು. ಕಾಸೀಮನ ಕುತಂತ್ರದ ಬುದ್ಧಿ ಮಹಾರಾಜನಿಗೆ ಮೊದಲೇ ತಿಳಿದಿತ್ತು. ಹಾಗಾಗಿಯೇ ಮಹಾರಾಣಿ ರಾಣಿಬಾಯಿ ಮತ್ತು ಯುವರಾಜ ಜಯಸಿಂಹನ ಸಮೇತ ರಾವರ್ ಕೋಟೆಯನ್ನು ಸೇರಿದನು. ಮಹಾರಾಜನು ಅಂದುಕೊಂಡಿದ್ದ ಹಾಗೆಯೇ ಆಯಿತು. ಬಿನ್ ಕಾಸೀಮ್ ರಾವರ್ ಕೋಟೆಯ ಮೇಲೆ ದಾಳಿ ಮಾಡಿದ. ಅದುವರೆಗಿನ ಅವನ ಅನುಭವ ಈ ಯುದ್ಧದಲ್ಲಿ ಸಹಾಯಕವಾಯಿತು. ದೀರ್ಘಕಾಲ ಹೋರಾಟ ನಡೆಯಿತು.
ಅಲ್ ಬಿಲಾದರ್ ಎನ್ನುವ ಇತಿಹಾಸಕಾರನು ಈ ಯುದ್ಧದ ಬಗ್ಗೆ ಬರೆಯುತ್ತಾ “ಇಷ್ಟೊಂದು ಬೃಹತ್ತಾದ ಭಯಾನಕ ಸಂಗ್ರಾಮವು ಇದುವರೆಗಿನ ಇತಿಹಾಸದಲ್ಲಿ ಹಿಂದೆಂದೂ ನಡೆದಿರಲಿಲ್ಲ” ಎಂದು ತಿಳಿಸುತ್ತಾನೆ.
ಯುದ್ಧ ಮುಗಿಯಿತೆಂಬ ಸಂಜ್ಞೆ ನೀಡಿದ ನಂತರ ಶಸ್ತ್ರವನ್ನು ಒಳಗಡೆ ಇಟ್ಟುಕೊಂಡು ಹಿಂದಿರುಗುವಾಗ ಕಾಸೀಮ್ ಎಕಾಏಕಿ ಮೋಸದಿಂದ ದಾಳಿಮಾಡಿ ಅವರನ್ನು ಕೊಂದು ಬಿಟ್ಟನು. ಪತಿಯ ಮೃತ್ಯುವಿನ ಸಮಾಚಾರ ತಿಳಿದ ತಕ್ಷಣ ಮಹಾರಾಣಿ ಕೋಪದಿಂದ ಕುದಿದಳು. ಬಿನ್ ಕಾಸೀಮನನ್ನು ಅಂತ್ಯಗೊಳಿಸಲು ಕತ್ತಿ ಹಿಡಿದಳು. ಹದಿನೈದು ಸಾವಿರ ಸೈನಿಕರೊಂದಿಗೆ ರಾಣಿಬಾಯಿ ಭಯಂಕರ ದಾಳಿ ಪ್ರಾರಂಭಿಸಿದಳು. ತಾನೂ ಯುದ್ಧ ಮಾಡುತ್ತಲೇ ತನ್ನ ತನ್ನ ಸೈನಿಕರ ಹೃದಯದಲ್ಲಿ ರಣೋತ್ಸಾಹವನ್ನು ತುಂಬಿಸುತ್ತಾ, ರಾಣಿಬಾಯಿ “ವೀರರೇ ಮುಂದಡಿ ಇಡುತ್ತಾ ಮುನ್ನುಗ್ಗಿರಿ, ಈ ಪವಿತ್ರ ಭಾರತ ಭೂಮಿಯಿಂದ ಧರ್ಮದ್ರೋಹಿಗಳನ್ನು ಒದ್ದೋಡಿಸುವುದು ಪ್ರತಿಯೊಬ್ಬ ಹಿಂದುವಿನ ಕರ್ತವ್ಯವಾಗಿದೆ. ಗೋಬ್ರಾಹ್ಮಣರು, ದೀನದಲಿತರು ಹಾಗು ಆರ್ಯಧರ್ಮವನ್ನು ರಕ್ಷಿಸುವುದರಿಂದಲೇ ನಾವು ಧನ್ಯರಾಗಬಲ್ಲೆವು” ಎಂದು ಕರೆ ಕೊಡುತ್ತಿದ್ದಳು.
ಆದರೆ ಕೊನೆಯಲ್ಲಿ ರಾಣಿಯು ಸೋತುಹೋದಳು. ಮೋಸ ಮತ್ತು ಕುತಂತ್ರದಿಂದ ಕಾಸೀಮ ಗೆದ್ದ. ಕೋಟೆಯು ಅರಬ್ಬರ ವಶವಾಯಿತು. ಇದನ್ನು ಕಂಡ ಮಹಾರಾಣಿಗೆ ತನ್ನ ಅಂತಿಮ ಕರ್ತವ್ಯದ ಪಾಲನೆಯಲ್ಲಿ ನಿಧಾನ ಮಾಡಬಾರದೆಂದೆನಿಸಿತು. ಕೋಟೆಯಲ್ಲಿನ ಎಲ್ಲಾ ಸ್ತ್ರೀಯರನ್ನು ರಾಣಿಯರನ್ನು ಕರೆಸಿ ಹೀಗೆಂದಳು “ಗೋಹತ್ಯೆ ಮಾಡುವವರ ಕೈಗೆ ಸ್ವಾತಂತ್ರ್ಯವು ಸಿಕ್ಕಿದೆ. ಯಾವುದೇ ಕಾರಣದಿಂದಲೂ ನಾವು ಅಂತಹವರ ನೆರಳಿಗೆ, ಗುಲಾಮಗಿರಿಗೆ ಹೋಗಬಾರದು. ನಮ್ಮ ಸತೀತ್ವವನ್ನು ಭಗ್ನಗೊಳಿಸಿಕೊಂಡು ಪರಾಧೀನರಾಗಿ ಜೀವನ ನಡೆಸುವುದು ಹಿಂದೂ ಸ್ತ್ರೀಯರಿಗೆ ಶೋಭಿಸುವುದಿಲ್ಲ. ವೀರನಾರಿಯರಿಗೆ ತಕ್ಕಂತೆ ನಮ್ಮ ಧರ್ಮ ಮೂಲದ ಕರ್ತವ್ಯವನ್ನು ಪಾಲಿಸೋಣ” ಎಂದು ತಿಳಿಸಿದಳು.
ಅಂತೆಯೇ ವಿಶಾಲವಾದ ಅಗ್ನಿಕುಂಡವೊಂದು ಸಿದ್ಧವಾಯಿತು. ರಕ್ತವರ್ಣದ ವಸ್ತ್ರಗಳನ್ನು ಧರಿಸಿ, ಭಗವಂತ ಹಾಗು ಧರ್ಮದ ಸಾಕ್ಷಿಯಾಗಿ ಮೊಟ್ಟಮೊದಲು ಮಹಾರಾಣಿ ರಾಣಿಬಾಯಿಯು ಉರಿಯುವ ಬೆಂಕಿಯಲ್ಲಿ ಧುಮುಕಿದಳು. ಬೆಂಕಿಯ ಜ್ವಾಲೆಗಳು ಗಗನದೊಂದಿಗೆ ಸಂಭಾಷಿಸುತ್ತಿದ್ದವು ರಾಣೀಬಾಯಿಯ ಸೊಸೆಯಂದಿರು, ಹಾಗು ನೂರಾರು ಸ್ತ್ರೀಯರು ರಾಣಿಯನ್ನು ಅನುಸರಿಸಿ ತಮ್ಮನ್ನು ತಾವೇ ಹೋಮ ಮಾಡಿಕೊಂಡರು.
ಅರಬ್ಬರ ರಾಜ್ಯವು ಸಾವು-ನೋವಿನ ಸ್ಮಶಾನ ಮೌನದ ಭೀಕರ ರೌದ್ರತೆಯ ಮೇಲೆ ನಿಂತಿತು. ಈ ಇಡೀ ಪ್ರಕರಣವು ಎಂದಿಗೂ ಮರೆಯಲಾಗದಂತಹದ್ದು. ಸಿಂಧ್ನ ಕೋಟೆಗಳು ಇಂದಿಗೂ ಈ ರೋದನೆಯನ್ನು ತೋರುತ್ತಾ ನಿಂತಿದೆ. ರಾಣಿಬಾಯಿಯ ತ್ಯಾಗ ಅವರ ಧೀರ ನುಡಿಗಳು ಇಂದಿಗೂ ಎಂಥವರ ಮನಸ್ಸನ್ನಾದರು ಕಲುಕಿಸಬಹುದು. ಈಕೆ ಭಾರತೀಯ ನಾರಿಯರಿಗೆ ತ್ಯಾಗ ಬಲಿದಾನದ ಆದರ್ಶ ಮೂರ್ತಿಯಾಗಿ ನೆಲೆಸುವಳು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.