ಮಂಗಳೂರು: ಪಾಣಾಜೆ ಗ್ರಾಮದ ಆರ್ಲಪದವು ಎಂಬಲ್ಲಿಯ ಇಬ್ಬರು ರೋಗಿಗಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮೃತಪಟ್ಟ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥ ವೈದ್ಯರನ್ನು ತಕ್ಷಣ ಬಂಧಿಸಬೇಕು. ಸಂತ್ರಸ್ಥ ಕುಟುಂಬಗಳಿಗೆ ಆರ್ಥಿಕ ಪರಿಹಾರ ನೀಡಬೇಕು ಎಂದು DYFI ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.
ವಾಜಪೇಯಿ ಆರೋಗ್ಯಶ್ರೀ ಯೋಜನೆಯ ಅನ್ವಯ ಆರ್ಲಪದವಿನಲ್ಲಿ ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಮಂಗಳೂರಿನ ಒಮೇಗಾ ಆಸ್ಪತ್ರೆ ಆಯೋಜಿಸಿದ್ದ ವೈದ್ಯಕೀಯ ತಪಾಸಣೆ, ಆನಂತರ ಏಕಕಾಲಕ್ಕೆ ಇಪ್ಪತ್ತಕ್ಕೂ ಹೆಚ್ಚು ರೋಗಿಗಳ ಹೃದಯದ ಶಸ್ತ್ರಚಿಕಿತ್ಸೆ ಮೇಲ್ನೋಟಕ್ಕೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಸರಕಾರ ಪಾವತಿಸುವ ದುಡ್ಡಿನಲ್ಲಿ ಶಸ್ತ್ರಚಿಕಿತ್ಸೆ ನಡೆಸುವ ಯೋಜನೆಗೆ ಒಮೇಗಾ ಆಸ್ಪತ್ರೆಯ ಜೊತೆಗೆ ಜಿಲ್ಲಾ ಆರೋಗ್ಯ ಇಲಾಖೆ ಸಹಭಾಗಿತ್ವ ಹೊಂದಿದ್ದು ಯಾಕೆ? ಏಕಕಾಲದಲ್ಲಿ ಅಷ್ಟೊಂದು ರೋಗಿಗಳಿಗೆ ದೊಡ್ಡದಾದ ಸರ್ಜರಿಗಳನ್ನು ನಡೆಸಿದ್ದ ಹಿಂದಿರುವ ಕಾರಣಗಳೇನು. ಏಕಕಾಲದಲ್ಲಿನ ಅಷ್ಟೊಂದು ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲು ಆರೋಗ್ಯ ಇಲಾಖೆ ಹೇಗೆ ಅನುಮತಿ ನೀಡಿತು, ಶಸ್ತ್ರಚಿಕಿತ್ಸೆ ನಡೆಯುವ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ವೈದ್ಯರು ಉಪಸ್ಥಿತರಿಲ್ಲದೇ ಇರಲು ಕಾರಣಗಳೇನು ಎಂಬ ಹಲವು ಸಂದೇಹಗಳು ಹುಟ್ಟಿಕೊಂಡಿವೆ. ಸರಕಾರದ ಹಣವನ್ನು ಕಬಳಿಸಲು ಗ್ರಾಮೀಣ ಪ್ರದೇಶದ ಬಡವರನ್ನು ಬಲಿಪಶು ಮಾಡಲಾಗುತ್ತಿದೆ. ಸರಕಾರದ ಯೋಜನೆಗಳ ದುಡ್ಡನ್ನು ಆರೋಗ್ಯ ಇಲಾಖೆಯ ಶಾಮೀಲಾತಿಯಲ್ಲಿ ಖಾಸಗಿ ಆಸ್ಪತ್ರೆಗಳು ಅಕ್ರಮವಾಗಿ ಕಬಳಿಸುತ್ತಿರುವ ಅನುಮಾನಗಳು ಮೂಡುತ್ತಿವೆ.
ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಪ್ರಕರಣದ ಸಂಪೂರ್ಣ ಪಾರದರ್ಶಕ ತನಿಖೆ ನಡೆಸಬೇಕು. ಬಡಪಾಯಿಗಳ ಸಾವಿಗೆ ಕಾರಣರಾದ ಒಮೇಗಾ ಆಸ್ಪತ್ರೆಯ ವೈದ್ಯರನ್ನು ಬಂಧಿಸಬೇಕು ಮತ್ತು ಸಂತ್ರಸ್ತ ಕುಟುಂಬಗಳಿಗೆ ಆರ್ಥಿಕ ಪರಿಹಾರ ಒದಗಿಸಬೇಕು ಎಂದು DYFI ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.