ಬೆಂಗಳೂರು : ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಸಿಎಂ ಸಿದ್ದರಾಮಯ್ಯನವರ ಹಿರಿಯ ಪುತ್ರ ರಾಕೇಶ್ ಇಂದು ನಿಧನರಾಗಿದ್ದಾರೆ.
ಬೆಲ್ಜಿಯಂನ ಬ್ರುಸೆಲ್ಸ್ನ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳಿಂದ ಅವರ ಅನಾರೋಗ್ಯ ತೀವ್ರ ಉಲ್ಬಣಗೊಂಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಮೃತರಾಗಿದ್ದಾರೆ. ಪ್ಯಾಂಕ್ರಿಯಾಸಿಸ್ ಸಮಸ್ಯೆ ಅವರನ್ನು ಕಾಡುತ್ತಿತ್ತು ಎನ್ನಲಾಗಿದೆ.
ಇದೇ ತಿಂಗಳು 39 ನೇ ವರ್ಷದ ಹುಟ್ಟುಹಬ್ಬವನ್ನು ರಾಕೇಶ್ ಆಚರಿಸಿಕೊಂಡಿದ್ದರು.
ಟುಮಾರೋಲ್ಯಾಂಡ್ನಲ್ಲಿ ನಡೆಯುತ್ತಿದ್ದ ಸಂಗೀತೋತ್ಸವದಲ್ಲಿ ಪಾಲ್ಗೊಂಡಿದ್ದ ಅವರು ಕಾರ್ಯಕ್ರಮದ ನಂತರ ಅನಾರೋಗ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾದರು.
ತಂದೆಯಂತೆಯೇ ರಾಜಕೀಯದಲ್ಲಿ ಬೆಳೆಯುವ ಎಲ್ಲಾ ಲಕ್ಷಣಗಳೂ ಅವರಲ್ಲಿತ್ತು. ಆದರೆ ಅಕಾಲಿಕವಾಗಿ ವಿಧಿಯಾಟಕ್ಕೆ ಬಲಿಯಾಗಿದ್ದಾರೆ.
ಸಿದ್ದರಾಮಯ್ಯ ಮತ್ತು ಅವರ ಪತ್ನಿ ಬೆಲ್ಜಿಯಂನಲ್ಲಿದ್ದು ನಾಳೆ ಅಥವಾ ಸೋಮವಾರ ಬೆಳಗ್ಗೆ ರಾಕೇಶ್ ಅವರ ಪಾರ್ಥಿವ ಶರೀರ ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಸಿದ್ದರಾಮಯ್ಯ ಅವರಿಗೆ ದೂರವಾಣಿ ಕರೆ ಮಾಡಿದ್ದು, ಸಾಂತ್ವನ ಹೇಳಿದ್ದಾರೆ. ತಕ್ಷಣವೇ ಬೆಲ್ಜಿಯಂನ ರಾಯಭಾರಿ ಕಛೇರಿಯನ್ನು ಸಂಪರ್ಕಿಸಿ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಎಲ್ಲಾ ರೀತಿಯ ಸಹಾಯವನ್ನು ನೀಡಲು ಹೇಳಿದ್ದಾರೆ.
ರಾಕೇಶ್ ನಿಧನಕ್ಕೆ ಬಿ.ಎಸ್. ಯಡ್ಯೂರಪ್ಪ, ಅನಂತ್ ಕುಮಾರ್ ಸೇರಿದಂತೆ ಹಲವು ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.