“ಅತಿಕ್ರಮಣಕಾರರನ್ನು ಹಿಂದಕ್ಕಟ್ಟಿ ಗಡಿಯಲ್ಲಿ ಯಥಾಸ್ಥಿತಿ ಪಾಲಿಸಲು ಭಾರತ ಬದ್ಧವಾಗಿದೆ, ಕಾರ್ಯಾಚರಣೆಯನ್ನು ಮಾತ್ರ ನಿಲ್ಲಿಸುವುದಿಲ್ಲ” ಎಂದು ಆಗಿನ ಪ್ರಧಾನಿ ವಾಜಪೇಯಿ ಘೋಷಣೆ.
ಯುದ್ಧ ವಿಮಾನ ಹೊಡೆದುರುಳಿಸುವ ಕ್ಷಿಪಣಿ ಇತ್ತೆಂದರೆ ಇದು ಪಾಕಿಸ್ಥಾನದ್ದೇ ಕೈವಾಡ ಎಂಬುದು ಬಯಲಿಗೆ ಬಂತು. ಅಮೇರಿಕ, ಫ್ರಾನ್ಸ್ ಮತ್ತು ಬ್ರಿಟನ್ ದೇಶಗಳು ಈ ಷಡ್ಯಂತರಕ್ಕೆ ಕಳವಳ ವ್ಯಕ್ತಪಡಿಸಿದವು. ವಿಶ್ವ ಸಂಸ್ಥೆಗೆ ವಿಷಯ ತಲುಪಿತು, ವಿಶ್ವ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೋಶಿ ಅನ್ನಾನ್ ಆತಂಕ ವ್ಯಕ್ತಪಡಿಸಿ ಕಾಶ್ಮೀರ ಸಮಸ್ಯೆಗೆ ರಾಜಕೀಯ ಪರಿಹಾರ ಕಂಡುಕೊಳ್ಳಬೇಕೆಂದು ಮನವಿ ಮಾಡಿದರು.
ಭಾರತ ನಾವು ಕಾರ್ಯಾಚರಣೆ ಮಾಡುತ್ತೇವೆಯೇ ಹೊರತು ಸಂಧಾನಕ್ಕೆ ಸಿದ್ಧವಿಲ್ಲ ಎಂದು ಸ್ಪಷ್ಟವಾಗಿ ಘೋಷಿಸಿತು. ಭಾರತ ಎಲ್ಲಾ ದೇಶದ ರಾಯಭಾರಿಗಳಿಗೆ ತಾನು ಕೈಗೊಂಡ ಕಾರ್ಯಾಚರಣೆಯ ಕುರಿತಂತೆ ವಿವರಣೆ ನೀಡಿತು. ಈ ಅತಿಕ್ರಮಣಕಾರಿಗಳು ನುಸುಳಿ ಬಂದದ್ದಾದರು ಹೇಗೆ ಎಂಬ ಪ್ರಶ್ನೆ ಮೂಡಿತು. ಪ್ರತಿ ಹೆಜ್ಜೆಗೆ ಒಬ್ಬ ಯೋಧನನ್ನು ಕಾವಲಿರಿಸಬಹುದಾದ ರೀತಿಯಲ್ಲಿ ಕಾರ್ಗಿಲ್ ಪ್ರದೇಶ ಇಲ್ಲ. ಅಲ್ಲದೇ ಅಲ್ಲಿ ಯಾವ ಗಲಭೆಗಳೂ ನಡೆದಿರಲಿಲ್ಲ. ಅದು ಸದಾ ಶಾಂತವಾಗಿದ್ದ ಪ್ರದೇಶ. ಈ ಪ್ರದೇಶವನ್ನು ಅಲುಗಾಡಿಸುವ ದುರಂತದ ಷಡ್ಯಂತರ ನಡೆದಿದೆ ಎಂಬುದು ಬೆಳಕಿಗೆ ಬಂದಂತಿತ್ತು.
“ನಮ್ಮ ಪ್ರದೇಶವನ್ನು ಅತಿಕ್ರಮಣಕಾರರು ಕೂಡಲೇ ತೆರವು ಮಾಡಬೇಕು; ಇಲ್ಲದಿದ್ದರೆ ನಾವು ಅವರನ್ನು ಅಟ್ಟುತ್ತೇವೆ” ಎಂದು ವಾಜಪೇಯಿರವರು ದಿಟ್ಟನುಡಿಯಾಡಿದರು.
”ನಮ್ಮ ದೇಶದ ಭದ್ರತೆ ಮುಖ್ಯ. ಅದಕ್ಕಾಗಿ ನಮ್ಮ ಶಸ್ತ್ರಕೋಟೆಯಲ್ಲಿರುವ ಯಾವುದೇ ಅಸ್ತ್ರವನ್ನಾದರು ಬಳಸಲು ಹಿಂಜರಿಯುವುದಿಲ್ಲ” ಎಂದು ಪಾಕ್ ವಿದೇಶಾಂಗ ಕಾರ್ಯದರ್ಶಿ ಶಂಷಾದ್ ಅಹಮದ್ ಮೇ 31 ರಂದು ಗೊಡ್ಡು ಬೆದರಿಕೆ ಹಾಕಿದರು. ಆದರೆ ಅಂತಹ ಯಾವುದೇ ಹೇಳಿಕೆ ನೀಡಿಲ್ಲವೆಂದು ಅನಂತರ ಪಾಕ್ ವಿದೇಶಾಂಗ ಕಚೇರಿ ಸ್ಪಷ್ಟನೆ ನೀಡಿತು. “ಅತಿಕ್ರಮಣಕಾರರನ್ನು ವಾಸ್ತವ ನಿಯಂತ್ರಣ ರೇಖೆಯಿಂದ ಆಚೆ ಅಟ್ಟುವವರೆಗೂ ಕದನವಿರಾಮದ ಪ್ರಶ್ನೆಯೇ ಇಲ್ಲವೆಂದರು” ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್.
ಈ ನಡುವೆ ರಾಜತಾಂತ್ರಿಕ ಪ್ರಯತ್ನಗಳೂ ಶುರುವಾದವು. ಫ್ರಾನ್ಸ್ ಮತ್ತು ಅಮೇರಿಕಗಳು ಕಾಶ್ಮೀರದೊಳಗೆ ಅತಿಕ್ರಮಣಕಾರಿಗಳ ಪ್ರವೇಶಕ್ಕೆ ಪಾಕಿಸ್ಥಾನವೇ ನೇರ ಹೊಣೆಯೆಂದು ಸಾರಿದವು. ಗಡಿ ನಿಯಂತ್ರಣ ರೇಖೆಯನ್ನು ಗೌರವಿಸುವಂತೆ ಆ ದೇಶಗಳು ಪಾಕ್ಗೆ ಕರೆ ನೀಡಿದವು.
ಗುಜರಾತ್ ಹಾಗೂ ಉತ್ತರಪ್ರದೇಶ ಸರ್ಕಾರಗಳು ಪಾಕಿಸ್ಥಾನ್ ಟಿವಿ ಪ್ರದರ್ಶನಕ್ಕೆ ನಿಷೇಧ ಹೇರಿದವು. ಅನಂತರ ರಾಷ್ಟ್ರಾದ್ಯಂತ ಪಾಕಿಸ್ಥಾನ್ ಟಿವಿ ಪ್ರದರ್ಶನ ನಿಷೇಧಕ್ಕೆ ಇದು ನಾಂದಿಯಾಯಿತು.
ರಾಷ್ಟ ರಕ್ಷಾ ರ್ಯಾಲಿ
“ಶಾಂತಿಗೆ ಬದ್ಧವಾಗಿದ್ದರೂ ಭಾರತ ಯುದ್ಧಕ್ಕೇನೂ ಹೆದರುವುದಿಲ್ಲ. ಪಾಕಿಸ್ಥಾನದ ಜೊತೆ ನಾವು ಮೂರು ಸಲ ಯುದ್ಧ ಮಾಡಿದ್ದೇವೆ. 1947 ರಿಂದ ಅವರು ಕಾಶ್ಮೀರ ಕಬಳಿಸಲು ಯತ್ನಿಸಿ ವಿಫಲಗೊಂಡರು. 1965 ರಲ್ಲಿ ಕಛ್ ಅನ್ನು ಕಿತ್ತುಕೊಳ್ಳಲು ಹೊಂಚು ಹಾಕಿ ಮಣ್ಣು ಮುಕ್ಕಿದರು. 1971 ರಲ್ಲಿ ಬಾಂಗ್ಲಾದೇಶವನ್ನು ಕಳೆದುಕೊಂಡರು. ಈಗ ಅವರೇನು ಕಳೆದುಕೊಳ್ಳಬೇಕೆಂದಿರುವರೋ ಗೊತ್ತಿಲ್ಲ.”
ಭಾರತೀಯ ಜನತಾ ಪಕ್ಷ ಜೂನ್ 25 ರಂದು ಪಟ್ನಾದಲ್ಲಿ ಏರ್ಪಡಿಸಿದ್ದ ರಾಷ್ಟ್ರ ರಕ್ಷಾ ರ್ಯಾಲಿಯಲ್ಲಿ ಪ್ರಧಾನಿ ವಾಜಪೇಯಿ ಹೇಳಿದರು. ಕಾರ್ಗಿಲ್ ವಿಚಾರದಲ್ಲಿ ಭಾರತ ಅಭೂತಪೂರ್ವ ರಾಜತಾಂತ್ರಿಕ ಗೆಲುವು ಸಾಧಿಸಿದೆ, ಪಾಶ್ಚಾತ್ಯ ಶಕ್ತಿಗಳು ಕೂಡ ಭಾರತದ ನಿಲುವನ್ನು ಬೆಂಬಲಿಸಿವೆ ಎಂಬುದನ್ನು ಅವರು ಈ ಸಂದರ್ಭದಲ್ಲಿ ಮನವರಿಕೆ ಮಾಡಿಕೊಟ್ಟರು.
ಜಾಗತಿಕ ರಾಜತಾಂತ್ರಿಕ ಹಿನ್ನಡೆಯಿಂದ ಪಾಕ್ ಪ್ರಧಾನಿ ನವಾಜ್ ಶರೀಫ್ ಕಂಗೆಟ್ಟರು. ಕೊನೆಯ ಪ್ರಯತ್ನವಾಗಿ ಪಾಕ್ಗೆ ಬೆಂಬಲ ಕೋರಿ ಚೀನಾಕ್ಕೆ ಭೇಟಿ ನೀಡಿದರು. ಆದರೆ ಅಲ್ಲೂ ನಿರಾಸೆ ಕಾದಿತ್ತು. ಚೀನಾ ಪಾಕ್ ಪರ ವಿಶೇಷ ಆಸಕ್ತಿ ತೋರಲಿಲ್ಲ. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಶರೀಫ್ ವಾಪಸಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.