News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ಬಿಸಿಸಿಐಗೆ ಕಾಯಕಲ್ಪ: ಗಾವಸ್ಕರ್‌ಗೆ ಗುರುತರ ಸವಾಲು

sunil-gavaskarಲೋಕಸಭೆಗೆ ಚುನಾವಣೆ ಎಂಬ ಮಹಾ ಕುರುಕ್ಷೇತ್ರ ಕಾಳಗ ದೇಶದಾದ್ಯಂತ ಕಾವು ಪಡೆದಿರುವ ಸನ್ನಿವೇಶದಲ್ಲಿ ಒಂದು ಪ್ರಮುಖ ಘಟನೆ ಅಷ್ಟಾಗಿ ಯಾರ ಗಮನವನ್ನೂ ಸೆಳೆಯಲಿಲ್ಲ. ಅದು ರಾಜಕೀಯಕ್ಕೆ ಸಂಬಂಧಪಟ್ಟಿದ್ದಲ್ಲ. ಆದರೆ ರಾಜಕೀಯ, ಭ್ರಷ್ಟಾಚಾರ ಬೆರೆತ ವಿದ್ಯಮಾನವದು. ಸುಪ್ರೀಂಕೋರ್ಟ್ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ಮೇಜರ್ ಸರ್ಜರಿ ಮಾಡಿದ ಪ್ರಸಂಗ ಅದು.

ಭ್ರಷ್ಟಾಚಾರ, ಸ್ವಜನಪಕ್ಷಪಾತ, ಮೋಸದಾಟ, ಮ್ಯಾಚ್‌ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಮುಂತಾದ ಹತ್ತುಹಲವು ಹಗರಣ, ವಿವಾದಗಳಲ್ಲಿ ಮುಳುಗಿದ್ದ ಬಿಸಿಸಿಐಗೆ ಸುಪ್ರೀಂಕೋರ್ಟ್ ಈಗ ಸೂಕ್ತ ಕಾಯಕಲ್ಪವನ್ನೇ ಮಾಡಿದೆ ಎನ್ನಬಹುದು. ಅಧಿಕಾರದಿಂದ ಯಾರೇ ಹೇಳಿದರೂ ಕೆಳಗಿಳಿಯಲಾರೆ ಎನ್ನುತ್ತಿದ್ದ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರನ್ನು ತಾತ್ಕಾಲಿಕವಾಗಿ ಕೆಳಗಿಳಿಸಿ ಆ ಜಾಗದಲ್ಲಿ ಆಡಳಿತದ ಕೀಲಿ ಕೈಯನ್ನು ಸುಪ್ರೀಂಕೋರ್ಟ್ ಇಬ್ನರು ಹಿರಿಯ ಕ್ರಿಕೆಟಿಗರ ಕೈಗೆ ಒಪ್ಪಿಸಿದೆ. ಇದೇ ಏಪ್ರಿಲ್ 16 ರಿಂದ ಆರಂಭವಾಗಲಿರುವ ಐಪಿಎಲ್ ಟೂರ್ನಿಯ 7ನೇ ಆವೃತ್ತಿಯ ವ್ಯವಹಾರಗಳನ್ನು ನಿಭಾಯಿಸುವ ಜವಾಬ್ದಾರಿಯನ್ನು ಮಾಜಿ ಹಿರಿಯ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಸುನಿಲ್ ಗಾವಸ್ಕರ್ ಅವರಿಗೆ ನೀಡಲಾಗಿದೆ. ಐಪಿಎಲ್ ಹೊರತಾದ ಮಂಡಲಿಯ ಇತರ ಆಡಳಿತವನ್ನು ಬಿಸಿಸಿಐನ ಹಿರಿಯ ಉಪಾಧ್ಯಕ್ಷ ಶಿವಲಾಲ್ ಯಾದವ್ ನೋಡಿಕೊಳ್ಳಬೇಕೆಂಬುದು ಸುಪ್ರೀಂಕೋರ್ಟ್‌ನ ಸೂಚನೆ. ಕೆಟ್ಟು ಕೆರ ಹಿಡಿದು ಹೋಗಿರುವ ಬಿಸಿಸಿಐನ ಆಡಳಿತ ನಿಭಾಯಿಸಲು ಇನ್ನಾವುದೇ ಉದ್ಯಮಿ ಅಥವಾ ರಾಜಕಾರಣಿಗೆ ಸುಪ್ರೀಂಕೋರ್ಟ್ ಸೂಚಿಸಿಲ್ಲ ಎನ್ನುವುದು ಇಲ್ಲಿ ಗಮನಾರ್ಹ.

ಹೀಗೆ ಬಿಸಿಸಿಐ ಆಡಳಿತ ನಿರ್ವಹಣೆಯನ್ನು ಸದ್ಯಕ್ಕೆ ಇಬ್ಬರು ಹಿರಿಯ ಕ್ರಿಕೆಟಿಗರ ಕೈಗೆ ಒಪ್ಪಿಸಿರುವುದು ಅವರಿಬ್ಬರಿಗೂ ಸಂದ ಬಲುದೊಡ್ಡ ಗೌರವ ಎಂದೇ ಹೇಳಬೇಕು. ದೇಶದಲ್ಲೆ ಅತ್ಯಂತ ಶ್ರೀಮಂತ ಕ್ರೀಡಾ ಸಂಸ್ಥೆಯಾಗಿರುವ, ಲಕ್ಷಾಂತರ ಕೋಟಿ ಮೌಲ್ಯದ ವ್ಯವಹಾರ ನಡೆಸುತ್ತಿರುವ ಬಿಸಿಸಿಐಗೆ ಕಾಯಕಲ್ಪ ನೀಡಬೇಕಾದ ಅಗತ್ಯವಂತೂ ಖಂಡಿತ ಇತ್ತು. ಬಿಸಿಸಿಐ ಆಡಳಿತ ಸಂಪೂರ್ಣ ಪಾರದರ್ಶಕವಾಗಿರಬೇಕಿತ್ತು. ಆದರೆ ಹಾಗಿರಲಿಲ್ಲ ಎನ್ನುವುದೇ ದುರಂತ. ಇದೇ ಕಾರಣಕ್ಕಾಗಿ ಮ್ಯಾಚ್ ಫಿಕ್ಸಿಂಗ್ ಸೇರಿದಂತೆ ಹತ್ತು ಹಲವು ಹಗರಣಗಳ ಕೊಳೆ ಈ ಸಂಸ್ಥೆಗೆ ಅಂಟಿಕೊಂಡಿದೆ. ಯಾವ ಡಿಟರ್ಜೆಂಟ್ ಪೌಡರ್ ಹಾಕಿ ತೊಳೆದರೂ ಮಾಯವಾಗದ ಕೊಳೆ ಅದು. ಆ ಕೊಳೆಯ ಬಗ್ಗೆ ದೇಶದಾದ್ಯಂತ ಕ್ರಿಕೆಟ್ ಪ್ರೇಮಿಗಳಲ್ಲಿ ಅಪಾರ ವಿಷಾದವಿದೆ. ಕ್ರಿಕೆಟನ್ನೇ ಉಸಿರಾಡುವ, ಅದನ್ನೇ ಪ್ರಾಣವನ್ನಾಗಿಸಿಕೊಂಡಿರುವ ಕ್ರಿಕೆಟ್ ಪ್ರೇಮಿಗಳು ಬಿಸಿಸಿಐ ಈ ಪರಿ ಕೆಟ್ಟು ಕೆರಹಿಡಿದು ಹೋಗಿದ್ದಕ್ಕೆ ಅದೆಷ್ಟು ಮಮ್ಮಲ ಮರುಗಿದ್ದಾರೋ ಗೊತ್ತಿಲ್ಲ! ಕ್ರಿಕೆಟ್ ಆಡಳಿತ ಕಳಂಕರಹಿತವಾಗಿರಲಿ ಅನ್ನುವುದೇ ಅವರೆಲ್ಲರ ಒಡಲಾಳದ ಆಶಯವಾಗಿತ್ತು. ಬರಿದೇ ಆಶಯವಿದ್ದರೇನು? ಹಗರಣಗಳ ಮಸಿಯನ್ನು ಮೈಗಂಟಿಸಿಕೊಂಡವರೇ ಅಧಿಕಾರ ಸ್ಥಾನದಲ್ಲಿ ಮೆರೆಯುತ್ತಿದ್ದರು. ಅವರನ್ನು ಕದಲಿಸುವುದು ಅಷ್ಟೇನೂ ಸುಲಭ ಸಾಧ್ಯವಾಗಿರಲಿಲ್ಲ. ಹೇಗೆ ಕದಲಿಸಬಹುದು ಎಂಬುದು ಒಂದು ಸಮಸ್ಯೆಯೇ ಆಗಿತ್ತು. ಇಂತಹ ಸಂದಿಗ್ಧದ ಸನ್ನಿವೇಶದಲ್ಲಿ ಸುಪ್ರೀಂಕೋರ್ಟ್ ಸ್ವತಃ ಮಧ್ಯೆ ಪ್ರವೇಶಿಸಿದ್ದು ಕ್ರಿಕೆಟ್‌ಪ್ರಿಯರಿಗೆ ಆಶಾಕಿರಣವೆನಿಸಿದ್ದು ಸಹಜ. ಕ್ರಿಕೆಟ್‌ನಂತಹ ಕ್ರೀಡಾಸಂಸ್ಥೆಯ ಆಡಳಿತ ಬದಲಾವಣೆಗೂ ದೇಶದ ಅತ್ಯುನ್ನತ ನ್ಯಾಯಾಲಯ ಹಸ್ತಕ್ಷೇಪ ನಡೆಸಬೇಕಾಗಿ ಬಂತಲ್ಲ ಎನ್ನುವುದು ಖೇದದ ಸಂಗತಿ. ಆದರೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಒಂದು ಪ್ರಜಾತಾಂತ್ರಿಕ ಸಂಸ್ಥೆಯಾಗಿರುವುದರಿಂದ ಅದರ ಆಡಳಿತವನ್ನು ನೇರ್ಪುಗೊಳಿಸಲು ಸುಪ್ರೀಂಕೋರ್ಟ್ ಮಧ್ಯೆ ಪ್ರವೇಶಿಸಿದ್ದು ಅನಿವಾರ್ಯವೇ. ಭ್ರಷ್ಟ ಅಧ್ಯಕ್ಷ ಶ್ರೀನಿವಾಸನ್ ಅವರನ್ನು ತಾತ್ಕಾಲಿಕವಾಗಿ ದೂರ ಇರಿಸಿ, ಇಬ್ಬರು ಮಾಜಿ ಆಟಗಾರರಿಗೆ ಆಡಳಿತ ಹೊಣೆಯನ್ನು ನೀಡಿದ್ದು ಕ್ರಿಕೆಟ್ ಆಡಳಿತದ ಶುದ್ಧೀಕರಣದ ನಿಟ್ಟಿನಲ್ಲಿ ಕೋರ್ಟ್ ತೆಗೆದುಕೊಂಡ ಒಂದು ದಿಟ್ಟ ನಿರ್ಧಾರವೇ ಸರಿ.

ತಾನು ನಿರೀಕ್ಷಿಸಿಯೇ ಇರದ ಗುರುತರ ಹೊಣೆಗಾರಿಕೆ ಹೆಗಲಿಗೇರಿದೊಡನೆ ಗಾವಸ್ಕರ್ ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿರುವುದು ಸ್ವಾಗತಾರ್ಹ. ಅಧಿಕಾರವಹಿಸಿಕೊಂಡ ಕೂಡಲೇ ಗಾವಸ್ಕರ್ ಮತ್ತು ಯಾದವ್ ಉತ್ತಮ ಹೆಜ್ಜೆಗಳನ್ನೇ ಇಟ್ಟಿದ್ದಾರೆ. ಬಿಸಿಸಿಐ ಭ್ರಷ್ಟಾಚಾರಕ್ಕೆ ಪರೋಕ್ಷ ಕಾರಣವಾಗಿದ್ದ, ಆ ಸಂಸ್ಥೆಯಲ್ಲಿದ್ದ ಇಂಡಿಯಾ ಸಿಮೆಂಟ್ಸ್ ಕಂಪೆನಿಯ ನೌಕರರನ್ನು ಸೇವೆಯಿಂದ ತೆಗೆದು ಹಾಕಿದ್ದಾರೆ. ಇಂಡಿಯ ಸಿಮೆಂಟ್ಸ್ ಕಂಪೆನಿಯ ಆಡಳಿತ ನಿರ್ದೇಶಕ ಮತ್ತಾರೂ ಅಲ್ಲ, ಬಿಸಿಸಿಐ ಅಧ್ಯಕ್ಷರಾಗಿದ್ದ ಶ್ರೀನಿವಾಸನ್! ಜೊತೆಗೆ ಈತ ಚೆನ್ನೈ ಸೂಪರ್‌ಕಿಂಗ್ಸ್ (ಸಿಎಸ್‌ಕೆ)ತಂಡದ ಮಾಲಿಕ ಬೇರೆ! ಈ ತಂಡದ ಮುಖ್ಯ ಅಧಿಕಾರಿಯಾಗಿದ್ದ ಗುರುನಾಥ್ ಮೇಯಪ್ಪನ್ ಶ್ರೀನಿವಾಸನ್ ಅವರ ಅಳಿಯ. ಆತ ಸ್ಪಾಟ್‌ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಈಗ ಆರೋಪಿ. ಹಾಗಾಗಿ ಐಪಿಎಲ್ ಏಳನೇ ಆವೃತ್ತಿಯಲ್ಲಿ ಶ್ರೀನಿವಾಸನ್ ಯಾವುದೇ ರೀತಿಯಲ್ಲೂ ಕೈಯಾಡಿಸದಂತೆ ನೋಡಿಕೊಳ್ಳಬೇಕು ಎಂದು ಸುಪ್ರೀಂ ತಾಕೀತು ಮಾಡಿದೆ. ಇದೇ ಹಿನ್ನೆಲೆಯಲ್ಲಿ ಐಪಿಎಲ್‌ನ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದ ಇಂಡಿಯ ಸಿಮೆಂಟ್ಸ್ ನೌಕರ ಕೆ. ಪ್ರಸನ್ನ ಸೇರಿದಂತೆ ಹಲವರನ್ನು ಬಿಸಿಸಿಐನಿಂದ ಕಿತ್ತೊಗೆಯಲಾಗಿದೆ. ಶುದ್ಧೀಕರಣವಂತೂ ಪ್ರಾರಂಭವಾಗಿದೆ.

ಹಾಗೆ ನೋಡಿದರೆ ಸುನಿಲ್ ಗಾವಸ್ಕರ್‌ಗೂ ಕ್ರಿಕೆಟ್ ಮಂಡಳಿ ಆಡಳಿತಕ್ಕೂ ಅರ್ಥಾರ್ಥ ಸಂಬಂಧವಿಲ್ಲ. ಗಾವಸ್ಕರ್‌ಗೆ ಐಪಿಎಲ್ ನಿರ್ವಹಣೆಯ ಹೊಣೆ ಹೊರಿಸಿರುವುದು ಸಂಬಳಕ್ಕಾಗಿ ದುಡಿಯುವ ಉದ್ಯೋಗಿಗೆ ಮೂರು ತಿಂಗಳ ಮಟ್ಟಿಗೆ ಕಂಪೆನಿಯ ಮಾಲಿಕತ್ವವನ್ನೇ ಕೊಟ್ಟಂತೆ ಎಂಬಂತಾಗಿದೆ. ಒಬ್ಬ ಯಶಸ್ವೀ ಕ್ರಿಕೆಟಿಗರಾಗಿ ವಿಶ್ವಮಟ್ಟದಲ್ಲಿ ವರ್ಚಸ್ಸು ಹೊಂದಿದ್ದ ಗಾವಸ್ಕರ್ ಮನಸ್ಸು ಮಾಡಿದ್ದರೆ ಯಾವತ್ತೋ ಬಿಸಿಸಿಐನ ಮುಖ್ಯಸ್ಥರೇ ಆಗಬಹುದಿತ್ತು. ಆದರೆ ಗಾವಸ್ಕರ್‌ಗೆ ಇದ್ದ ಹಿತಾಸಕ್ತಿಗಳೇ ಬೇರೆ. ಬಿಸಿಸಿಐಗೆ ಒಡೆಯನಾಗುವುದಕ್ಕಿಂತ ಅದರ ಉದ್ಯೋಗಿಯಾಗಿರುವುದರಲ್ಲೇ ಅವರು ಹಿತ ಕಂಡವರು.

ಗಾವಸ್ಕರ್ ಭಾರತದ ಸರ್ವಶ್ರೇಷ್ಠ ಬ್ಯಾಟ್ಸ್‌ಮನ್, ಶ್ರೇಷ್ಠ ಆರಂಭಿಕ ಬ್ಯಾಟ್ಸ್‌ಮನ್, ಈಗಿರುವವರ ಪೈಕಿ ಅತ್ಯುತ್ತಮ ಕ್ರಿಕೆಟ್ ವೀಕ್ಷಕ ವಿವರಣೆಗಾರ… ಅದೆಲ್ಲ ಸರಿ. ಆದರೆ ಅವರು ತಮ್ಮ ಕ್ರಿಕೆಟ್ ಬದುಕಿನುದ್ದಕ್ಕೂ ತೆಗೆದುಕೊಂಡ ಹಲವು ನಿರ್ಧಾರಗಳು ವಿವಾದಕ್ಕೆ ಕಾರಣವಾಗಿರುವುದನ್ನು ಮರೆಯುವುದು ಹೇಗೆ? 1975 ರ ವಿಶ್ವಕಪ್‌ನಲ್ಲಿ ಗಾವಸ್ಕರ್ ೬೦ ಓವರ್ ಪೂರ್ಣ ಆಡಿ 174 ಎಸೆತಗಳಲ್ಲಿ 36 ರನ್ ಬಾರಿಸಿ ಅಜೇಯರಾಗಿ ಉಳಿದಿದ್ದರು. ಭಾರತ ತಂಡ ಆಗ ಸೋತು ಹೋಗಿತ್ತು. ಅವರ ಈ ವೈಪರೀತ್ಯದ ಆಟದ ಬಗ್ಗೆ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು. ಎಸ್.ವೆಂಕಟರಾಘವನ್‌ಗೆ ನಾಯಕ ಪಟ್ಟ ನೀಡಿದ್ದರಿಂದಲೇ ಗಾವಸ್ಕರ್ ಹೀಗೆ ಆಡುವ ಮೂಲಕ ಪ್ರತಿಭಟಿಸಿದ್ದರೆಂದು ಮಾಧ್ಯಮಗಳಲ್ಲಿ ವಿಶ್ಲೇಷಿಸಲಾಗಿತ್ತು. 1980-81 ರ ಮೆಲ್ಬೋರ್ನ್ ಟೆಸ್ಟ್‌ನಲ್ಲಿ 70 ರನ್ ಗಳಿಸಿ ಔಟಾದಾಗ ಜೊತೆಗಾರ ಚೇತನ್ ಚೌಹಾಣ್‌ರನ್ನೂ ಪೆವಿಲಿಯನ್‌ಗೆ ಕರೆದು ಪಂದ್ಯವನ್ನೇ ಬಾಯ್‌ಕಾಟ್ ಮಾಡಲು ಹೊರಟಿದ್ದರು. ಅವರು ಆಟಗಾರನಾಗಿದ್ದ ದಿನಗಳಲ್ಲಿ ಅವರ ವಿರುದ್ಧ ಸ್ವಾರ್ಥಕಾರಣದ ಅನೇಕ ಆರೋಪಗಳಿದ್ದವು. ಇವಿಷ್ಟೇ ಅಲ್ಲ, ವೀಕ್ಷಕ ವಿವರಣೆಗಾರರಾಗಿಯೂ ಗಾವಸ್ಕರ್ ವಸ್ತುನಿಷ್ಠ, ಸ್ಪಷ್ಟ ನಿಲುವು ಹೊಂದಿದವರಲ್ಲ. ಭಾರತ ತಂಡ ಸೋತಾಗ ವಾಚಾಮಗೋಚರವಾಗಿ ಟೀಕಿಸುವ, ಗೆದ್ದಾಗ ಹೊಗಳಿ ಅಟ್ಟಕ್ಕೇರಿಸುವ ಗಾವಸ್ಕರ್ ವಿವರಣೆಯನ್ನು ವಸ್ತುನಿಷ್ಠ ವಿಶ್ಲೇಷಣೆ ಎಂದು ಬಣ್ಣಿಸುವುದಾದರೂ ಹೇಗೆ? ಬಿಸಿಸಿಐ ವಿರುದ್ಧ ಮಾತ್ರ ಅವರು ಅಷ್ಟಾಗಿ ಹರಿಹಾಯ್ದಿಲ್ಲ. ಏಕೆಂದರೆ ಬಿಸಿಸಿಐನ ಅಧಿಕೃತ ವೀಕ್ಷಕ ವಿವರಣೆಗಾರರಾಗಿ ಅವರು ಪಡೆಯುತ್ತಿದ್ದ ಸಂಭಾವನೆ ವಾರ್ಷಿಕ 3.6 ಕೋಟಿ ರೂ.! ಇಷ್ಟೊಂದು ಸಂಬಳ ಕೊಡುವ ಧಣಿಯ ವಿರುದ್ಧ ವೃಥಾ ಟೀಕೆ ಅವರೇಕೆ ಮಾಡಿಯಾರು?

ಈಗ ಭಾರತ ತಂಡದ ಕೋಚ್ ಆಗಿರುವ ಡಂಕನ್ ಫ್ಲೆಚರ್ ವಿರುದ್ಧವೂ ಗಾವಸ್ಕರ್ ಟೀಕಿಸಿದ್ದುಂಟು. ಫ್ಲೆಚರ್ ಸಾಧನೆ ಶೂನ್ಯ. ತಕ್ಷಣ ಅವರನ್ನು ಮನೆಗೆ ಕಳುಹಿಸಿ, ರಾಹುಲ್ ದ್ರಾವಿಡ್‌ರನ್ನು ಕೋಚ್ ಸ್ಥಾನಕ್ಕೆ ನೇಮಿಸಬೇಕು ಎಂದು ಭಾರತ ಏಷ್ಯಾ ಕಪ್‌ನಲ್ಲಿ ಸೋತಾಗ ಆಗ್ರಹಿಸಿದ್ದರು. ಆದರೆ ಇದೀಗ ಟಿ-20 ವಿಶ್ವಕಪ್‌ನಲ್ಲಿ ಭಾರತ ಎಲ್ಲ ಪಂದ್ಯಗಳನ್ನೂ ಗೆಲ್ಲುತ್ತಿರುವಾಗ ಫ್ಲೆಚರ್ ಅವಧಿಯನ್ನು ಮುಂದಿನ ಏಕದಿನ ವಿಶ್ವಕಪ್‌ವರೆಗೂ ಮುಂದುವರಿಸಬೇಕೆಂದು ಹೇಳುತ್ತಿರುವವರೂ ಅವರೇ.

ಗಾವಸ್ಕರ್ ಒಬ್ಬ ಪ್ರತಿಭಾವಂತ, ಬುದ್ಧಿವಂತ ಕ್ರಿಕೆಟಿಗ, ನಿಜ. ಆದರೆ ಆಡಳಿತಗಾರನಾಗಿ ಒಂದು ಕ್ಲಬ್ ನಿರ್ವಹಿಸಿದ ಅನುಭವ ಕೂಡ ಅವರಿಗಿಲ್ಲ. ಹೀಗಿರುವಾಗ ಬಿಸಿಸಿಐನ ಆಡಳಿತ ಸೂತ್ರವನ್ನು ತಾತ್ಕಾಲಿಕವಾಗಿಯಾದರೂ ಅವರ ಕೈಗೆ ಕೊಟ್ಟಿದ್ದು ಎಷ್ಟು ಸರಿ? ಈ ಜವಾಬ್ದಾರಿಯಿಂದ ಗಾವಸ್ಕರ್‌ಗೆ ಆರ್ಥಿಕವಾಗಿಯಂತೂ ಭಾರೀ ಲಾಭ ಇದ್ದೇ ಇದೆ. ಏಕೆಂದರೆ ಈ ಋತುವಿನಲ್ಲಿ ವೀಕ್ಷಕ ವಿವರಣೆ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಗದ್ದಕ್ಕೆ ಗಾವಸ್ಕರ್‌ಗಾಗುವ ನಷ್ಟ ತುಂಬಿ ಕೊಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ. ಜೊತೆಗೆ ಆಡಳಿತ ನಡೆಸಿದ್ದಕ್ಕೆ ವೇತನವಂತೂ ಇದ್ದೇ ಇದೆ. ಹೀಗಾಗಿ ಕೈ ತುಂಬಾ, ಜೇಬು ತುಂಬಾ ಝಣ ಝಣ ಹಣ ಹರಿದು ಬರುವುದಂತೂ ನಿಜ.

ಅದೇನೇ ಇರಲಿ, ಆಡಳಿತ ನಿರ್ವಹಣೆಯ ಅನುಭವ ಇಲ್ಲದಿದ್ದರೂ ಬಿಸಿಸಿಐ ಶುದ್ಧೀಕರಣ ಮಾಡುವ ತಾಕತ್ತಂತೂ ಗಾವಸ್ಕರ್‌ಗೆ ಇದ್ದೇ ಇದೆ. ಅವರು ಅದನ್ನು ಹೇಗೆ ಮಾಡುತ್ತಾರೆ ಎಂಬುದು ಮಾತ್ರ ಈಗ ಕ್ರಿಕೆಟ್ ಪ್ರೇಮಿಗಳನ್ನು ಕಾಡುತ್ತಿರುವ ಕುತೂಹಲ. ಈ ಬಾರಿಯ ಐಪಿಎಲ್ – 7 ನಿರ್ವಹಣೆ ಅಷ್ಟೇನೂ ಸುಲಭವಾಗಿಲ್ಲ. ಕಳೆದ ವರ್ಷ ಐಪಿಎಲ್ ಸಂದರ್ಭದಲ್ಲಿ ನಡೆದ ಸ್ಪಾಟ್‌ಫಿಕ್ಸಿಂಗ್, ಬೆಟ್ಟಿಂಗ್ ಹಗರಣಗಳು ಇನ್ನೂ ತನಿಖಾ ಹಂತದಲ್ಲಿವೆ. ಚುನಾವಣೆ ಕಾರಣದಿಂದಾಗಿ ಈ ಬಾರಿ ಐಪಿಎಲ್ – 7ರ ಮೊದಲ ಹಂತದ ಪಂದ್ಯಗಳನ್ನು ಯುಎಇಗೆ ಸ್ಥಳಾಂತರಿಸಿರುವುದು ಬೆಟ್ಟಿಂಗ್ ದೊರೆಗಳಿಗೆ ಸ್ವರ್ಗವೇ ಕೈಗೆಟುಕಿದಂತಾಗಿದೆ. ಟಿ-20 ಪಂದ್ಯಗಳಲ್ಲಿ ಆಟಗಾರರು, ಆಟಕ್ಕಿಂತ ಹೆಚ್ಚಿನ ಗಮನ ಚಿಯರ್‌ಗರ್ಲ್ಸ್ ಮೇಲಿದೆ. ಅದು ಬದಲಾಗಲು ಸಾಧ್ಯವಿಲ್ಲವೆ? ಕ್ರಿಕೆಟ್ ಆಟಕ್ಕೂ ಚಿಯರ್‌ಗರ್ಲ್ಸ್ ಕುಣಿತಕ್ಕೂ ಎಲ್ಲಿಗೆಲ್ಲಿಯ ಸಂಬಂಧ? ಇಂತಹ ಹಲವಾರು ಸವಾಲುಗಳು ಗಾವಸ್ಕರ್ ಮುಂದಿವೆ. ಇಷ್ಟು ದಿನ ವೀಕ್ಷಕ ವಿವರಣೆಗಾರರಾಗಿ ತಮಗನಿಸಿದ್ದನ್ನು ನೇರವಾಗಿ ಟೀಕೆಯ ರೂಪದಲ್ಲಿ ವ್ಯಕ್ತಪಡಿಸುತ್ತಿದ್ದ ಗಾವಸ್ಕರ್ ಈಗ ಹಾಗೆ ಮಾಡುವಂತಿಲ್ಲ. ಟೀಕೆಗಳಿಗೆ ಸೂಕ್ತ ಉತ್ತರ ನೀಡುವ ಸ್ಥಾನದಲ್ಲಿ ಅವರು ಕುಳಿತಿದ್ದಾರೆ. ಟೀಕಿಸುವುದು ಸುಲಭ. ಆದರೆ ಟೀಕೆಗಳಿಗೆ ಉತ್ತರಿಸುವುದು ಅಷ್ಟು ಸುಲಭವಲ್ಲ. ಇವೆಲ್ಲ ಸವಾಲುಗಳನ್ನು ಗಾವಸ್ಕರ್ ಹೇಗೆ ನಿಭಾಯಿಸುತ್ತಾರೆ ಎಂದು ಇಡೀ ಕ್ರಿಕೆಟ್ ಜಗತ್ತು ಕುತೂಹಲದಿಂದ ಕಾಯುತ್ತಿದೆ.

ಗಾವಸ್ಕರ್ ತಮ್ಮ ಹೊಸ ಇನ್ನಿಂಗ್ಸ್‌ನಲ್ಲಿ ಟಿ-20 ಪಂದ್ಯದ ಶಾಟ್‌ಗಳನ್ನು ಬಾರಿಸುವಂತಿಲ್ಲ. ಟೆಸ್ಟ್ ಪಂದ್ಯದಂತೆ ಎಚ್ಚರಿಕೆಯ ಆಟವಾಡಬೇಕಾಗಿದೆ. ಅಂತಹ ಆಟವಾಡಿ ಬಿಸಿಸಿಐಗೆ ಕಾಯಕಲ್ಪ ನೀಡಲಿ ಎಂಬುದು ಕ್ರಿಕೆಟ್ ಪ್ರೇಮಿಗಳ ಆಶಯ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top