ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ..
ಹಸಿರು ಹಚ್ಚಿ ಚುಚ್ಚಿ ಮೇಲಕ್ಕರಿಸಿಣ ಹಚ್ಚಿ;
ಹೊನ್ನ ಚಿಕ್ಕಿ ಚಿಕ್ಕಿ; ಇಟ್ಟು ಬೆಳ್ಳಿ ಅಕ್ಕಿ !
– ವರಕವಿ ಡಾ. ದ.ರಾ. ಬೇಂದ್ರೆ (1931 ‘ಗರಿ ಕವನ ಸಂಕಲನ)
ಧಾರವಾಡ : ಜೂನ್ 4, ಶನಿವಾರ ಚಿಟ್ಟೆಗಳ ಜಾಗತಿಕ ದಿನ ಆಚರಣೆ. ಕವಿವಿ ಆವರಣದ ಆಯ್ದ 5 ಸ್ಥಳಗಳಲ್ಲಿ ಅಧ್ಯಯನ ಕೈಗೊಂಡು 36 ಪ್ರಬೇಧಗಳಿಗೆ ಸೇರಿದ, 5 ಕುಟುಂಬಗಳ ಚಿಟ್ಟೆಗಳ ಜೀವನ ಕ್ರಮದ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ ಸಹ ಪ್ರಾಧ್ಯಾಪಕ ಡಾ. ಪುಲಿಕೇಶಿ ಬಿರಾದಾರ ಹಾಗೂ ಅವರ ಮೂವರು ವಿದ್ಯಾರ್ಥಿಗಳು.
ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಹಿರಿಯ ವಿದ್ಯಾರ್ಥಿಗಳಾದ ಉಮಾಪತಿ ವೈ., ಉಷಾ ಡಿ. ನಾಯಕ್ ಹಾಗೂ ವೇದವತಿ ಜಿ. ನಾಯಕ್ ಕವಿವಿಯ ಆವರಣದಲ್ಲಿ ದುಂಬಿಗಳ ವೈವಿಧ್ಯತೆ ಕುರಿತ ಶಾಸ್ತ್ರೀಯ ಅಧ್ಯಯನ ವರ್ಷಪೂರ್ತಿ ಕೈಗೊಂಡು, ಪ್ರೌಢ ಪ್ರಬಂಧ ಮಂಡಿಸಿದ್ದು, ಆವರಣದ ಹೂಸಸ್ಯ ಸಂಪತ್ತು ಮತ್ತು ದುಂಬಿಗಳಿಗಿರುವ ಅವಿನಾಭಾವ ಸಂಬಂಧ ಪತ್ತೆ ಹಚ್ಚಿದ್ದಾರೆ. ಕಳೆದ ಫೆಬ್ರವರಿ 2015 ರಿಂದ ಅಕ್ಟೋಬರ್ 2015ರ ವರೆಗೆ 9 ತಿಂಗಳುಗಳ ಕಾಲ ಈ ಅಧ್ಯಯನ ಹಮ್ಮಿಕೊಳ್ಳಲಾಗಿದೆ.
36 ಪ್ರಜಾತಿಗೆ ಸೇರಿದ 5 ಕುಟುಂಬಗಳ ಪಾತರಗಿತ್ತಿಗಳ ಪೈಕಿ ತುಂಬ ವಿರಳವಾದ ಎರಡು ದುಂಬಿಗಳನ್ನೂ ಸಹ ನಮ್ಮ ತಂಡ ದಾಖಲಿಸಿದೆ. (Gram Blue – Euchrysops Cnnejus) ಗ್ರಾಮ್ ಬ್ಲೂ ಮತ್ತು (Brown King Crow – Euple ploea klugii) ಬ್ರೌನ್ ಕಿಂಗ್ ಕ್ರೋ ನಮ್ಮ ಆವರಣದ ರಾಜರು ಎನ್ನುತ್ತಾರೆ ಪ್ರೊ. ಪುಲಿಕೇಶಿ ಬಿರಾದಾರ.
ಬೊಟಾನಿಕಲ್ ಗಾರ್ಡ್ನ್, ಶ್ರೀನಗರ ಸರ್ಕಲ್, ವಿವಿ ಉಪಾಹಾರ ಗೃಹ, ಕೇಂದ್ರ ಗ್ರಂಥಾಲಯ, ನಿಜಲಿಂಗಪ್ಪ ಹಾಸ್ಟೆಲ್ ಮತ್ತು ಗ್ರೀನ್ ಗಾರ್ಡನ್-ಫ್ಲಾವರ್ ಗಾರ್ಡನ್ ಹೀಗೆ ಪ್ರಮುಖ 5 ಸ್ಥಳಗಳನ್ನು ಕವಿವಿ ಆವರಣದಲ್ಲಿ ಗುರುತಿಸಿ, ಸುತ್ತಲೂ 500 ಮೀಟರ್ ವ್ಯಾಪ್ತಿಯಲ್ಲಿ ಹೆಚ್ಚೂ ಕಡಿಮೆ 400 ಎಕರೆ ವಿಸ್ತಾರದ ಪ್ರದೇಶದಲ್ಲಿ ದುಂಬಿಗಳ ಅಧ್ಯಯನ ನಡೆದಿದೆ.
ಪ್ರೊ. ಗಿರೀಶ ಕಾಡದೇವರು ಹೇಳುವಂತೆ -ದುಂಬಿಗಳ ನಯನ ಮನೋಹರ ಹಾರಾಟ ವೀಕ್ಷಿಸಲು ಪ್ರಶಸ್ತವಾದ ಸಮಯ ಬೆಳಗ್ಗೆ 8 ರಿಂದ 11 ಗಂಟೆ; ಸಂಜೆ 4 ರಿಂದ 6 ಗಂಟೆ. ನಮ್ಮ ದೇಶದಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ದುಂಬಿಗಳ ದಿನಾಚರಣೆ ಹಮ್ಮಿಕೊಳ್ಳುವುದು ಸೂಕ್ತ. ಜಾಗತಿಕ ದಿನಾಚರಣೆ ಸಂದರ್ಭದಲ್ಲಿ (ಜೂನ್ 4) ಮಳೆಗಾಲದ ಹೊಸ್ತಿಲಲ್ಲಿ ನಾವಿರುವುದರಿಂದ ಅವುಗಳ ಚಿನ್ನಾಟ ಗೋಚರಿಸುವುದು ಕಷ್ಟಸಾಧ್ಯ.
(Nymphalidaes) ನಿಂಫಾಲಿಡಿಯೇಸ್ 16 ಪ್ರಬೇಧಗಳಿಗೆ ಸೇರಿದ 11 ಕುಲಗಳ ದುಂಬಿಗಳು ಶೇ. 44 ರಷ್ಟು, (Pieridae) ಪೈಯೆರೇಡಿಯೇ ಕುಟುಂಬದ 8 ಪ್ರಬೇಧಗಳಿಗೆ ಸೇರಿದ ಶೇ. 22 ರಷ್ಟು ಪಾತರಗಿತ್ತಿಗಳು, (Papillionidae) ಪಾಪಿಲ್ಲಿಯೋನಿಡೇಯಿ 6 ಪ್ರಬೇಧಗಳಿಗೆ ಸೇರಿದ ಶೇ. 16 ರಷ್ಟು ದುಂಬಿಗಳು, (Lycae nidae) ಲೈಕೆ ನಿಡೆಯೀ ಕುಟುಂಬದ 4 ಪ್ರಬೇಧಗಳಿಗೆ ಸೇರಿದ ಶೇ. 11 ರಷ್ಟು ಪಾತರಗಿತ್ತಿಗಳು, (Hesperidae) ಹೆಸ್ಪೆರಿಡೆಯೀ ಕುಟುಂಬದ 2ಪ್ರಬೇಧಗಳಿಗೆ ಸೇರಿದ ಶೇ. 5.5 ರಷ್ಟಿರುವ ದುಂಬಿಗಳನ್ನು ಕವಿವಿಯ ಆವರಣದಲ್ಲಿ ತಜ್ಞರ ತಂಡ ಪ್ರಥಮ ಬಾರಿಗೆ ದಾಖಲಿಸಿದೆ.
ಕವಿವಿ ಆವರಣದ ಸೌಂದರ್ಯವನ್ನು ಇಮ್ಮಡಿಸುವಲ್ಲಿ, ಗಣನೀಯ ಪ್ರಮಾಣದಲ್ಲಿ ಹೂವುಗಿಡಗಳ ಬೀಜಪ್ರಸಾರ ಮತ್ತು ಪರಾಗಸ್ಪರ್ಷದಲ್ಲಿ ದಣಿವರಿಯದ ದುಡಿಮೆ ದುಂಬಿಗಳದ್ದು. ಹಾಗಾಗಿ, ಕವಿವಿಯ 789 ಎಕರೆ ಪ್ರದೇಶದಲ್ಲಿ ಹಬ್ಬಿರುವ 150 ಕುಟುಂಬಗಳಿಗೆ ಸೇರಿದ ಹೂ-ಹಣ್ಣಿನ ಗಿಡಗಳ ಪರಿಣಾಮವಾಗಿ ಇಷ್ಟೊಂದು ಹೇರಳವಾಗಿ ದುಂಬಿಗಳು ಇಲ್ಲಿ ಕಾಣಸಿಗುವ ವಿಶೇಷ ಕಾರಣವನ್ನು ನಮ್ಮ ತಂಡ ಪತ್ತೆ ಹಚ್ಚಿದೆ ಎನ್ನುತ್ತಾರೆ ವಿದ್ಯಾರ್ಥಿ ಉಮಾಪತಿ ವೈ.
ಶೀತ ರಕ್ತ ಕೀಟ ಪ್ರಜಾತಿಗೆ ಸೇರಿದ ದುಂಬಿಗಳು, ಹಗಲಿನಲ್ಲಿ ಮಾತ್ರ ಚಟುವಟಕೆಯಿಂದ ಕೂಡಿದ್ದು 29 ಡಿಗ್ರಿ ತಾಪಮಾನವಿರುವ ಪ್ರದೇಶದಲ್ಲಿ ಮಾತ್ರ ಬದುಕಿ ಬಾಳಬಲ್ಲವು! ಗಂಡು ದುಂಬಿ ತುಂಬ ಆಕರ್ಷಕವಾಗಿದ್ದು, ಸೂರ್ಯನ ಕಿರಣಗಳಿಗೆ ಅವು ತಮ್ಮ ರೆಕ್ಕೆಯನ್ನು ಒಡ್ಡಿದಾಗ ‘ಅಲ್ಟ್ರಾ ವಯೋಲೆಟ್ ಮಾರ್ಕಿಂಗ್ ಮತ್ತು ‘ಮೈಕ್ರೋ ಸ್ಕೇಲ್ಸ್ ಹೊಳೆದು ತನ್ನ ಸಂಗಾತಿಯನ್ನು (ಅದೇ ಕುಟುಂಬ, ತನ್ನದೇ ಪ್ರಜಾತಿ ಮತ್ತು ಕುಲಕ್ಕೆ ಸೇರಿದ ಹೆಣ್ಣು!) ಅವು ಆಕರ್ಷಿಸುವಲ್ಲಿ ಯಸ್ವಿಯಾಗುತ್ತಿರುವುದನ್ನು ಸಹ ತಂಡ ದಾಖಲಿಸಿದೆ. ವಿಶೇಷವೆಂದರೆ ಹೆಣ್ಣು ದುಂಬಿ ಸಹ ತನ್ನ ‘ಮೇಟಿಂಗ್ ಬಿಹೇವಿಯರ್ ಗಂಡು ದುಂಬಿಯ ಪುರುಷತ್ವ ಗ್ರಹಿಸಿ, ಒಪ್ಪುತ್ತದೆ! ಕಾರಣ, ತನ್ನ ಮುಂಬರುವ ಪೀಳಿಗೆ ಸದೃಢವಾಗಿರಬೇಕಲ್ಲ!
ವಿಶೇಷವೆಂದರೆ, ಹೆಣ್ಣು ದುಂಬಿಗಳು ಮಕರಂಧ ಹೀರಿ ಉದರಂಭರಣ ಮಾಡಿದರೆ ಗಂಡು ಪಾತರಗಿತ್ತಿಗಳು ‘ಮಡ್ ಪಡ್ಲಿಂಗ್ ಅಂದರೆ, ತರಿ ಭೂಮಿ, ಜೌಗು ಪ್ರದೇಶದಲ್ಲಿ ನೆಲದ ಮೇಲೆ ಕುಕ್ಕರಿಸಿ ಮಣ್ಣಿನಲ್ಲಿ ಹುದುಗಿದ ಲವಣಾಂಶ ಮತ್ತು ಪೋಷಕಾಂಶಗಳನ್ನು ಮಾತ್ರ ಹೀರಿ, ವೀರ್ಯದೊಂದಿಗೆ ಹೆಣ್ಣು ದುಂಬಿಗೆ ಅವು ಪೂಷಿಸುತ್ತವೆ! ತಮ್ಮ ಮರಿಗಳಿಗೆ ರಕ್ಷಣೆ ಮತ್ತು ಪೋಷಣೆ ಒದಗಿಸಬಲ್ಲ ಗಿಡಗಳನ್ನಷ್ಟೇ ಅತ್ಯಂತ ಜಾಣತನಿಂದ ಹೆಣ್ಣುದುಂಬಿ ಆಯ್ದುಕೊಂಡು ಎಲೆಗಳ ಬುಡಕ್ಕೆ ಕನಿಷ್ಟ 1,000 ಮೊಟ್ಟೆಯೂಡುತ್ತದೆ! ಗರಿಷ್ಟ 2,000 ಮೊಟ್ಟೆಗಳೂ ಇರಬಹುದು. ಬದುಕುಳಿಯುವ ಸಂಖ್ಯೆ ಕೇವಲ ಶೇ. 10 ರಷ್ಟು. ಈ ಹಂತ ಸುಮಾರು 2 ರಿಂದ 4 ವಾರಗಳ ಕಾಲವಿದ್ದು, ಪ್ರೌಢ ಹಂತ ತಲುಪಿದ ದುಂಬಿ 1 ರಿಂದ 2 ತಿಂಗಳುಗಳ ಕಾಲ ಬದುಕುಳಿದ ದಾಖಲೆಗಳಿವೆ. ಕೆಲ ಪ್ರಜಾತಿಯ ದುಂಬಿಗಳು ‘ಮೊನಾರ್ಕ್ 9 ತಿಂಗಳು ಸಹ ಜೀವಿಸಬಲ್ಲವು ಎಂದು ಅಭಿಪ್ರಾಯಪಡುತ್ತಾರೆ ಡಾ. ಪುಲಿಕೇಶಿ ಬಿರಾದಾರ.
ಪೋಸ್ಟ್ ಡಾಕ್ಟರಲ್ ಫೆಲೋ ಡಾ. ಧೀರಜ್ ವೀರನಗೌಡರ ಪ್ರಕಾರ, ಈ ದುಂಬಿಗಳಿಗೂ ಶತ್ರುಗಳ ಕಾಟ ಇಲ್ಲದಿಲ್ಲ! ಹಾಗಾಗಿ, ಮೈಬಣ್ಣಕ್ಕೆ ಸರಿ ಹೊಂದುವ ಪರಿಸgದಲ್ಲಿ ‘ಕಾಮೋಫ್ಲೆಜ್ ಆಗಿ ಬಾಳುವ, ಪಾತರಗಿತ್ತಿ ಪಕ್ಕದ ಮೇಲಿನ ಬಣ್ಣವನ್ನು ತೀಕ್ಷ್ಣವಾಗಿ ಹೊಳೆಸಿ ಹೆದರಿಸುವ ಮೂಲಕ, ನಂಜುಕಾರಕ ದ್ರವ ಹೊರಸೂಸಿ ವಿಷ ಹರಡುವ ಮೂಲಕ, ಬಚಾವಾಗುವ ತಂತ್ರ ಸಿದ್ಧಿಸಿಕೊಂಡಿವೆ.
ದುಂಬಿಗಳನ್ನು ಪರಿಸರ ಆರೋಗ್ಯದ ಸೂಚಕವಾಗಿಯೂ ತಜ್ಞರು ಗುರುತಿಸುತ್ತಾರೆ. ಪಶ್ಚಿಮ ಘಟ್ಟ ವ್ಯಾಪ್ತಿಯ ಪ್ರದೇಶದಲ್ಲಿ ಈಗಾಗಲೇ ತಜ್ಞರು 334 ಪ್ರಬೇಧಗಳಿಗೆ ಸೇರಿದ ಪಾತರಗಿತ್ತಿಗಳನ್ನು ದಾಖಲಿಸಿದ್ದಾರೆ. ಆ ಪೈಕಿ 37 ಪ್ರಜಾತಿಯ ದುಂಬಿಗಳು ಈಗ ವಿನಾಶದ ಅಂಚಿನಲ್ಲಿವೆ. ಐಯುಸಿಎನ್ ‘ರೆಡ್ ಲಿಸ್ಟ್ ದಾಖಲೆ ಪ್ರಕಾರ, ಈಗಾಗಲೇ 39 ಪ್ರಜಾತಿಯ ದುಂಬಿಗಳು ಸಸ್ಯ ವೈವಿಧ್ಯ ನಾವು ಕಳೆದುಕೊಂಡ ಹಿನ್ನೆಲೆಯಲ್ಲಿ ವಿಲುಪ್ತಿಯಾಗಿವೆ ಎಂದೂ ಹೇಳಿದೆ.
ನಮ್ಮ ದೇಶದಲ್ಲಿ 1,500 ಪ್ರಜಾತಿಗೆ ಸೇರಿದ ದುಂಬಿಗಳನ್ನು ದಾಖಲಿಸಲಾಗಿದ್ದು, ಜಗತ್ತಿನಾದ್ಯಂತ 18,000 ಪ್ರಬೇಧಗಳ ದುಂಬಿಗಳ ದಾಖಲೆ ಲಭ್ಯವಿದೆ. ಹಿಮಾಲಯದ ತಪ್ಪಲು ಅತ್ಯಂತ ವಿಶೇಷವಾದ ದುಂಬಿಗಳ ಪ್ರಜಾತಿಗೆ ಹೆರಿಗೆ ಮನೆ ಎಂದು ಗುರುತಿಸಲಾಗಿದ್ದು, ಪ್ರವಾಸಿಗರ ದಟ್ಟಣೆಯಿಂದ ಅವುಗಳ ಪಾರಿಸಾರಿಕ ವ್ಯವಸ್ಥೆಗೆ ಧಕ್ಕೆ ಬಂದೊದಗಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ.
ಪರಿಸರ ಸ್ನೇಹಿಯಾಗಿ, ವಾತಾವರಣದ ಆರೋಗ್ಯ ಸೂಚಕ ದುಂಬಿಗಳ ದಿನಾಚರಣೆ ನಡೆಯಲಿ ಎಂಬುದೇ ಆಶಯ ಎನ್ನುತ್ತಾರೆ, ನೇಚರ್ ರಿಸರ್ಚ್ ಸೆಂಟರ್ ಅಧ್ಯಕ್ಷ, ಲ್ಯಾಂಡ್ ಸ್ಕೇಪ್ ಇಂಜಿನಿಯರ್ ಪಂಚಯ್ಯ ಹಿರೇಮಠ.
ಲೇಖಕ : ಹರ್ಷವರ್ಧನ ವಿ. ಶೀಲವಂತ
ಮುಖ್ಯಸ್ಥ, (ಯೋಜನೆ, ಸಂಶೋಧನೆ, ಅನುಷ್ಟಾನ ಹಾಗೂ ನ್ಯಾಯ ಪ್ರತಿಪಾದನೆ)
ನೇಚರ್ ರಿಸರ್ಚ್ ಸೆಂಟರ್, ಧಾರವಾಡ.
ಸಂಪರ್ಕ: 9886521664
Butterfly Names
1. Lime butterfly (Papiliodemoleus) | 2. Common jay (Graphiumdoson) |
3. Tailed jay (Graphium Agamemnon) | 4. Spot swordtail (Graphiumnomius) |
5. Crimson rose (Atrophaneure hectors) | 6. Common rose (Atrophaneurearistolochia) |
7. Common grass yellow (Euremahecabe) | 8. Common emigrant (Catopsilia Pomona) |
9. Mottled emigrant (Catopsiliapyranthe) | 10. Common gull (Ceporanerissa) |
11. Plain orange tip(Calotis eucharis) | 12. Common jezebel (Delias eucharis) |
13. Grass yellow(Eurema brigitta) | 14. Common albatross(Appias albino) |
15.Blue tiger (Tirumala limniace) | 16. Plain tiger(Danaus chrysippus) |
17. Brown king crow (Euploea klugii) | 18. Common crow(Euploea core) |
19. Common evening brown(Melanitis leda) | 20. Tawny coster(Acraea terspicore) |
21. Common leopard(Phalanta phalantha) | 22. Common sailer(Neptis hylas) |
23. Gaudy baron (Euthalia lubentina) | 24. Common castor(Ariadne merione) |
25. Blue pansy (Junonia orithya) | 26. Yellow pansy (Junonia hierta) |
27. Chocolate pansy (Junonia iphita) | 28. Lemmon pansy (Junonia lemonias) |
29. Danaid eggfly(Hyptolimnus misipus) | 30. Common fourring(Ypthima huebneri) |
31. Zebra blue (Leptotes plinius) | 32. Red pierrot (Talicada nyseus) |
33. Gram blue (Euchrysops cnejus) | 34. Pale grass blue (Pseudozizeerias maha) |
35. Chestnut bob (Iambrix salsala) | 36. Indian skipper (Spialia galba) |
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.