ಬೆಳ್ತಂಗಡಿ : ತಾಲೂಕಿನ ಗ್ರಾಮೀಣ ಪ್ರದೇಶವಾದ ನಿಡ್ಲೆಯ ಕರುಂಬಿತ್ತಿಲ್ ಮನೆಯಂಗಳದಲ್ಲಿ ಖ್ಯಾತ ವಾಯಲಿನ್ ಕಲಾವಿದ ವಿದ್ವಾನ್ ವಿಠಲ ರಾಮಮೂರ್ತಿ ಅವರ ನೇತೃತ್ವದಲ್ಲಿ ಮೇ 23 ರಿಂದ 28 ರ ವರೆಗೆ 17ನೇ ವರ್ಷದ 6 ದಿನಗಳ ‘ಕುಂಬಿತ್ತಿಲ್’ ಸಂಗೀತ ಶಿಬಿರದಲ್ಲಿ ಸುಮಾರು 200 ಕ್ಕೂ ಹೆಚ್ಚು ಶಿಬಿರಾರ್ಥಿಗಳು ಸಂಗೀತ ಅಭ್ಯಾಸ ನಡೆಸಿ ಧನ್ಯತಾ ಭಾವ ಪಡೆದರು. ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದರಿಂದ ಸಂಗೀತಾಭ್ಯಾಸ ನಡೆಸುವ ಅಪೂರ್ವ ಸುಯೋಗ ಒದಗಿಬಂದಿತ್ತು.
ಮನೆಯವರ ಒಡನಾಟ, ಅತಿಥ್ಯದಲ್ಲಿ ಶಿಬಿರದಲ್ಲಿ ಸಂಗೀತಾಭ್ಯಾಸದ ಜತೆಗೆ ಹಿರಿಯಕಲಾವಿದರ ಸಂಗೀತ ಕಾರ್ಯಕ್ರಮ ಶಿಬಿರಾರ್ಥಿಗಳಿಗೆ ಮರೆಯಲಾರದ ಅನುಭವ ನೀಡಿತು. ಕಳೆದ 16 ವರ್ಷಗಳಲ್ಲಿ ಅಭ್ಯಾಸ ನಡೆಸಿದ 10-12 ಶಿಬಿರಾರ್ಥಿಗಳು ಶ್ರೇಷ್ಠ ಸಂಗೀತಕಾರರಾಗಿ ಮೂಡಿಬಂದಿರುವುದು ಶಿಬಿರದ ಹಿರಿಮೆ. ಹಿರಿಯ ಕಲಾವಿದರ ಪ್ರೋತ್ಸಾಹದಿಂದ ಗ್ರಾಮೀಣ ಪ್ರದೇಶದಲ್ಲಿ ಮನೆಯಲ್ಲೇ ಉಳಿದು ಸಂಗೀತ ಕಲಾಶಾಲೆಯ ತರಗತಿಯಲ್ಲಿ ಸಂಗೀತಾಭ್ಯಾಸ ನಡೆಸುತ್ತಿರುವುದು ತೃಪ್ತಿತಂದಿದೆಯೆಂದು ವಿಠಲ ರಾಮಮೂರ್ತಿಅಭಿಪ್ರಾಯ ಪಡುತ್ತಾರೆ.
ಹಿರಿಯ ಕಲಾವಿದ ಅಭಿಷೇಕ್ ರಘುರಾಮ್ ಅವರಿಂದ ಉದ್ಘಾಟಿಸಲ್ಪಟ್ಟ ಕರುಂಬಿತ್ತಿಲ್ ಸಂಗೀತ ಶಿಬಿರದಲ್ಲಿ ರಮಣ ಬಾಲಚಂದ್ರನ್ (ವೀಣೆ), ಎಸ್ ಗೋವಿಂದರಾಜನ್ (ಮೃದಂಗ), ಅರವಿಂದ ಭಾರದ್ವಾಜ (ಮಾಂಡೋಲಿನ್), ನೇಹಾ ಕೃಷ್ಣಮಾಚಾರಿ (ವಯಲಿನ್), ಎಸ್.ವಿ. ರಮಣಿ (ಮೃದಂಗ), ಯತಿರಾಜಆಚಾರ್ (ಸಂಗೀತ), ಪೂರ್ಣಪ್ರಜ್ಞ (ವಯಲಿನ್),.ನಿಕ್ಷಿತ ಪುತ್ತುರು (ಮೃದಂಗ), ಪ್ರಮೋದ ಗೋಖಲೆ (ಸಂಗೀತ), ಅರವಿಂದ ನಾಗರಾಜನ್ (ವಯಲಿನ್) ಮತ್ತು ಸುನಿಲ್ ಸುಬ್ರಹ್ಮಣ್ಯ (ಮೃದಂಗ) ಸಂಪನ್ಮೂಲ ವ್ಯಕ್ತಿಗಳಾಗಿ ಶಿಬಿರಾರ್ಥಿಗಳಿಗೆ ಸಂಗೀತಾಭ್ಯಾಸ ಹಾಗೂ ಪಾಠ ನಡೆಸಿಕೊಟ್ಟರು. ಶಿಬಿರದ ಸಮಾರೋಪ ದಿನದಂದು ಶಿಬಿರಾರ್ಥಿಗಳಿಂದ ಪರಿಣಾಮಕಾರಿಯಾಗಿ ಯಶಸ್ವಿಯಾಗಿ ಮೂಡಿ ಬಂದಿತು.ಇದೇ ಸಂದರ್ಭದಲ್ಲಿ ಸಂಗೀ ತಗುರು ಮುಂಬೈ ಜಯಶ್ರೀಯವರನ್ನು ಶಿಬಿರದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸಮಾರೋಪದ ಸಂಗೀತ ಕಲಾ ಕಾರ್ಯಕ್ರಮವಾಗಿ ಹಿರಿಯ ಕಲಾವಿದ ಆರ್.ಕುಮಾರ್ಅವರಿಂದ ವಯಲಿನ್ ವಾದನ ಚೇತೋಹಾರಿಯಾಗಿ ಮೂಡಿಬಂದಿತು. ವಿಠಲ ರಾಮಮೂರ್ತಿಯವರು ಪ್ರತಿವರ್ಷ ತಮ್ಮ ಕೃಷ್ಣ ಗಾನಸುಧಾ ಗ್ಲೋಬಲ್ ಆರ್ಟ್ಸ್ಅಕಾಡೆಮಿಯ ಮೂಲಕ ಸಂಗೀತ ಕ್ಷೇತ್ರದ ಮೇರು ದಿಗ್ಗಜರನ್ನು ಕರೆಸಿ ಶಿಬಿರ ನಡೆಸಿ ಸ್ಥಳೀಯ ಸಂಗೀತಾಸಕ್ತರಿಗೆ ಸಂಗೀತ ಸುಧೆಯನ್ನು ಉಣಬಡಿಸುತ್ತಿರುವುದು ನಿಜಕ್ಕೂ ಅಭಿನಂದನೀಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.