ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳನ್ನು ಶೀಘ್ರಗತಿಯಲ್ಲಿ ಮತ್ತು ಅತ್ಯಂತ ಕಡಿಮೆ ಖರ್ಚಿನಲ್ಲಿ ಮುಗಿಸಲು ಲೋಕ ಅದಾಲತ್ಗಳಿಗಿಂತ ಅತ್ಯಂತ ಸುಲಭ ವಿಧಾನ ಬೇರೆ ಇರಲಾರದು. ಅಪಘಾತಗಳಾಗಿ ವರ್ಷಗಳ ತನಕ ನ್ಯಾಯಾಲಯದಲ್ಲಿ ಪ್ರಕರಣ ಸಾಗಿ ಅಲ್ಲಿ ತನಕ ಆ ಅಪಘಾತಕ್ಕೆ ಒಳಗಾದ ವ್ಯಕ್ತಿ ನಿತ್ಯವೂ ದೈಹಿಕ, ಮಾನಸಿಕ ಯಾತನೆಯನ್ನು ಅನುಭವಿಸುತ್ತಾ ನಂತರ ನ್ಯಾಯಾಲಯ ನಿಗದಿ ಪಡಿಸಿದ ಒಂದು ಮೊತ್ತವನ್ನು ಮನಸ್ಸಿದ್ದೋ ಅಥವಾ ಅನಿವಾರ್ಯವಾಗಿಯೋ ಪಡೆಯುವುದಕ್ಕಿಂತ ಲೋಕ ಅದಾಲತ್ನಲ್ಲಿ ಸಮಾಧಾನಕರವಾಗಿ ಒಂದು ರಾಜಿಗೆ ಬರುವುದು ಶ್ರೇಯಸ್ಕರ ಎನ್ನುವುದು ನಮ್ಮ ಭಾವನೆ. ಈಗಂತೂ ಲೋಕ ಅದಾಲತ್ನಲ್ಲಿ ರಾಜೀ ಪ್ರಕರಣಗಳು ಆದಷ್ಟು ಶೀಘ್ರವಾಗಿ ಮುಗಿಸಲು ಕಕ್ಷಿದಾರರು ಮುಂದಕ್ಕೆ ಬರುತ್ತಿರುವುದು ಒಳ್ಳೆಯ ಭಾವನೆ. ಅಷ್ಟಕ್ಕೂ ನಾಗರಿಕರು ಈ ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳ ಒಂದಿಷ್ಟು ತಿಳಿದುಕೊಂಡಿರುವುದು ಒಳ್ಳೆಯದು.
ಯಾವುದೇ ಪ್ರಕರಣವಾದಾಗ ನೊಂದವರು ತಮಗೆ ಆದ ಅನ್ಯಾಯವನ್ನು ಯಾವುದೇ ನ್ಯಾಯಾಲಯದ ವ್ಯಾಪ್ತಿಯಲ್ಲಿಯೂ ದಾಖಲಿಸಲು ಸ್ವತಂತ್ರನಾಗಿರುತ್ತಾನೆ. ಉದಾಹರಣೆ ನೀವು ಮೈಸೂರಿನಲ್ಲಿ ಅಪಘಾತಕ್ಕೆ ಒಳಗಾಗಿದ್ದೀರಿ ಎಂದು ಇಟ್ಟುಕೊಳ್ಳಿ. ನಿಮ್ಮ ಮನೆ ಮಂಗಳೂರಿನಲ್ಲಿ ಇದ್ದರೆ ನೀವು ಆ ಪ್ರಕರಣವನ್ನು ಮಂಗಳೂರು ನ್ಯಾಯಾಲಯದಲ್ಲಿ ವಿಚಾರಣೆಗೆ ತೆಗೆದುಕೊಳ್ಳಲು ಮನವಿ ಸಲ್ಲಿಸುವ ಸ್ವಾತಂತ್ರ ಹೊಂದಿದ್ದೀರಿ. ಇನ್ನೂ ಪಂಜಾಬಿನ ಒಬ್ಬ ಲಾರಿ ಚಾಲಕ ಇಲ್ಲಿ ಅಪಘಾತಕ್ಕೆ ಒಳಗಾದರೆ ಆತ ಪಂಜಾಬಿನ ಯಾವುದೇ ನ್ಯಾಯಾಲಯದಲ್ಲಿ ಕೇಸ್ ನಡೆಸಲು ಕೇಳಿಕೊಳ್ಳಬಹುದು ಮತ್ತು ಇದಕ್ಕೆ ಯಾವುದೇ ಕಾಲಮಿತಿ ಇಲ್ಲ ಎಂದು ಕಾನೂನು ಸ್ಪಷ್ಟಪಡಿಸುತ್ತದೆ. ಇಲ್ಲಿ ಕಾನೂನು ನೊಂದವರ ಪರವಾಗಿಯೇ ಇರುತ್ತದೆ. ಇನ್ನೂ ಮೋಟಾರು ವಾಹನ ಅಪಘಾತ ಪ್ರಕರಣದಲ್ಲಿ ಯಾವುದೇ ರೀತಿಯ ನಷ್ಟಗಳಿಗೆ ನೊಂದವರು ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ಒಂದು ಸಣ್ಣ ಗಾಯವಾಗಿರಲಿ ಅಥವಾ ಜೀವನ ಪರ್ಯಂತದ ದುಡಿಮೆಯ ನಷ್ಟವಾಗಲಿ ಆ ವ್ಯಕ್ತಿ ಪರಿಹಾರ ಪಡೆಯಬಹುದು. ಆದರೆ ಹೇಗೆ?
ನನ್ನ ಗೆಳೆಯನ ಉದಾಹರಣೆಂiiನ್ನೇ ತೆಗೆದುಕೊಳ್ಳೋಣ. ಆತನ ಅಣ್ಣನಿಗೆ ಎರಡು ವರ್ಷಗಳ ಹಿಂದೆ ಅಪಘಾತವಾಗಿತ್ತು. ಬೈಕಿನಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಒಂದು ಟಿಪ್ಪರ್ ಬಂದು ಡಿಕ್ಕಿ ಹೊಡೆದಿತ್ತು. ಎರಡು ತಿಂಗಳು ಆಸ್ಪತ್ರೆಯಲ್ಲಿ ಮತ್ತು ಒಂದು ವರ್ಷ ಮನೆಯಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳಲಾಯಿತು. ಆತ ವೃತ್ತಿಯಲ್ಲಿ ಪೌರೋಹಿತ್ಯ ಮಾಡುತ್ತಿದ್ದ ಕಾರಣ ಕನಿಷ್ಟ ತಿಂಗಳಿಗೆ ೨೫ ಸಾವಿರದಷ್ಟು ಆದಾಯವಿತ್ತು. ಆದರೆ ನ್ಯಾಯಾಲಯದ ಪ್ರಕಾರ ಆತನ ತಿಂಗಳ ವೇತನ ೬ ಸಾವಿರ. ನ್ಯಾಯಾಧೀಶರ ಬಳಿ ಯಾವ ವೃತ್ತಿಯಲ್ಲಿರುವ ವ್ಯಕ್ತಿಗೆ ಎಷ್ಟು ವೇತನ ಇರುತ್ತದೆ ಮತ್ತು ಆತನ ಆದಾಯದ ಬಗ್ಗೆ ಒಂದು ಅಂದಾಜು ಪಟ್ಟಿ ಇರುತ್ತದೆ. ಉದಾಹರಣೆಗೆ ಕೂಲಿ ಮಾಡುವ ವ್ಯಕ್ತಿ ಎಷ್ಟೇ ದುಡಿಯುತ್ತಿರಲಿ, ಎಷ್ಟೇ ಆದಾಯ ಗಳಿಸುತ್ತಿರಲಿ, ಅವನ ಆದಾಯ ಇಷ್ಟೇ ಎಂದು ನಿಗದಿಯಾಗಿರುತ್ತದೆ. ಗೆಳೆಯನ ಮನೆಯವರು ತಮ್ಮ ಹುಡುಗನಿಗೆ ಆದ ನಷ್ಟಕ್ಕೆ 8 ಲಕ್ಷ ಪರಿಹಾರ ಬೇಕೆಂದು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಕೊನೆಗೆ ಒಂದೂವರೆ ಎರಡು ವರ್ಷದ ಬಳಿಕ ನ್ಯಾಯಾಲಯ ಘೋಷಿಸಿದ ಪರಿಹಾರದ ಮೊತ್ತ ೨ ಲಕ್ಷ ೬೦ ಸಾವಿರ. ಅದರಲ್ಲಿ ೫೦ ಸಾವಿರದಷ್ಟು ಇವರ ವಕೀಲರಿಗೆ ಹೋಗಿತ್ತು, ಬಲಗಾಲಿಗೆ ಆದ ಪೆಟ್ಟಿನಿಂದ ಮಧ್ಯ ವಯಸ್ಸಿನ ಆ ವ್ಯಕ್ತಿ ಇನ್ನೂ ಜೀವಮಾನವೀಡಿ ಯಾವುದೇ ಕಠಿಣ ಕೆಲಸ ಮಾಡುವಂತಿಲ್ಲ. ಅದೇ ಲೋಕ ಅದಾಲತ್ ಆದರೆ ಇಂತಹ ಪ್ರಕರಣಗಳು ಬಹಳ ಶೀಘ್ರಗತಿಯಲ್ಲಿ ಪರಿಹಾರ ಕಾಣುತ್ತವೆ. ಈ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಎಲ್ಲಾ ನ್ಯಾಯಾಲಯಗಳಲ್ಲಿರುವ ಲೋಕ ಅದಾಲತ್ನಲ್ಲಿ ವಿಶೇಷವಾಗಿ ಈ ಮೋಟಾರು ವಾಹನ ಅಪಘಾತ ಪ್ರಕರಣಗಳಿಗೆನೆ ಒತ್ತು ಕೊಟ್ಟು ವಿಲೇವಾರಿ ಮಾಡಬೇಕು ಎಂದು ತೀರ್ಮಾನಿಸಲಾಗಿದೆ. ಇದರಿಂದ ಬಡ ಕಕ್ಷಿದಾರರಿಗೆ ಕೂಡಲೇ ತಮಗೆ ಸಮಾಧಾನ ಎನಿಸುವಷ್ಟು ಪರಿಹಾರವನ್ನು ಪಡೆಯಲು ನ್ಯಾಯ ವ್ಯವಸ್ಥೆ ಅನುವು ಮಾಡಿಕೊಟ್ಟಿದೆ.
ಅಪಘಾತಕ್ಕೆ ಒಳಗಾದವರು ಮತ್ತು ಇನ್ಯೂರೆನ್ಸ್ ಕಂಪೆನಿಯ ಪ್ರತಿನಿಧಿಗಳನ್ನು ಲೋಕ ಅದಾಲತ್ನಲ್ಲಿ ನ್ಯಾಯಾಧೀಶರು ನೋಟಿಸ್ ಕೊಡುವ ಮೂಲಕ ಕರೆಸಿ ಅಲ್ಲಿಯೇ ರಾಜಿ ಪಂಚಾಯತಿಯ ಮೂಲಕ ನೊಂದವರಿಗೆ ನ್ಯಾಯಯುತವಾಗಿ ಎಷ್ಟು ಪರಿಹಾರ ಬರಬೇಕು ಎಂದು ನಿಶ್ಚಯಿಸಿ ಎರಡು ಕಡೆಯವರ ಒಪ್ಪಿಗೆ ಪಡೆದು ಒಂದು ನಿರ್ದಿಷ್ಟ ಮೊತ್ತಕ್ಕೆ ಎರಡು ಕಡೆಯವರು ಒಪ್ಪಿಸಿ ಆ ಪ್ರಕರಣವನ್ನು ಅಲ್ಲಿಯೇ ಮುಗಿಸಿಬಿಡುತ್ತಾರೆ. ಇದರಿಂದ ತಮಗೆ ಯಾವಾಗ ಎಷ್ಟು ಹಣ ಸಿಗಬಹುದು ಎನ್ನುವ ಯಕ್ಷ ಪ್ರಶ್ನೆಯನ್ನು ಎದುರಿಗೆ ಇಟ್ಟುಕೊಂಡು ಚಾತಕಪಕ್ಷಿಯಂತೆ ಕಾಯುವ ಕರ್ಮ ಅಪಘಾತಕ್ಕೆ ಒಳಗಾದವರಿಗೆ ಇರುವುದಿಲ್ಲ.
ಇನ್ನೂ ನೀವು ಅಪಘಾತಕ್ಕೆ ಒಳಗಾದ ತಕ್ಷಣ ಮೊದಲು ಮಾಡಬೇಕಾದ ಕೆಲಸ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವುದು. ನಿಮಗೆ ಯಾವ ವಾಹನದಿಂದ ಅಪಘಾತ ಆಗಿದೆ ಎನ್ನುವುದು ಮತ್ತು ಆ ವಾಹನದ ನಂಬರ್ ಪ್ಲೇಟ್ನಲ್ಲಿ ನಮೂದಿಸಿರುವ ಸಂಖ್ಯೆಗಳ ಬಗ್ಗೆ ನೀವು ನಿಖರ ಜ್ಙಾನ ಹೊಂದಿರಬೇಕು. ಒಂದು ವೇಳೆ ನಿಮ್ಮ ವಾಹನ ಯಾವುದೇ ಮರಕ್ಕೆ ಹೊಡೆದು ಅಪಘಾತಕ್ಕೆ ಒಳಗಾದರೂ ನಿಮಗೆ ಆದ ನಷ್ಟಕ್ಕೆ ಪರಿಹಾರ ಸಿಗಲು ನೀವು ಅರ್ಹರು. ಅದಕ್ಕಾಗಿ ಮುಖ್ಯವಾಗಿ ನೀವು ಮಾಡಬೇಕಾದದ್ದು ಇಷ್ಟೇ. ನೀವು ಕಾಲಕಾಲಕ್ಕೆ ಇನ್ಯೂರೆನ್ಸ್ ನವೀಕರಿಸುತ್ತಾ ಇರಬೇಕು. ಒಂದು ವೇಳೆ ನೀವು ಪಾದಚಾರಿಯಾಗಿ ಹೋಗುತ್ತಿದ್ದಲ್ಲಿ ನಿಮಗೆ ರಸ್ತೆಯಲ್ಲಿ ಹೋಗುತ್ತಿದ್ದ ಯಾವುದೇ ವಾಹನ ಬಂದು ಡಿಕ್ಕಿಯಾಯಿತು ಎಂದು ಅಂದುಕೊಳ್ಳಿ. ಆಗ ಆ ವಾಹನಕ್ಕೆ ವಿಮೆ ಇಲ್ಲದಿದ್ದಲ್ಲಿ ಅದರ ವಾಹನದ ಮಾಲೀಕನೇ ನಿಮಗೆ ಪರಿಹಾರ ಕೊಡಲು ಭಾದಸ್ಥರಾಗಿರುತ್ತಾರೆ. ಆತ ಪರಿಹಾರ ನೀಡಲು ವಿಳಂಬ ಮಾಡಿದ್ದಲ್ಲಿ ಆತನ ಆಸ್ತಿಯನ್ನು ಕೂಡ ಮುಟ್ಟುಗೋಲು ಹಾಕಿ ಪರಿಹಾರ ಕೊಡಿಸಲು ನ್ಯಾಯಾಲಯ ಆದೇಶಿಸುತ್ತದೆ. ಆದರೆ ಎಲ್ಲಕ್ಕಿಂತ ಸುಲಭ ಮಾರ್ಗವೆಂದರೆ ನಿಮ್ಮ ಪ್ರಕರಣವನ್ನು ಶೀಘ್ರವಾಗಿ ಲೋಕ ಅದಾಲತ್ನಲ್ಲಿ ಪರಿಹರಿಸಿಕೊಳ್ಳುವುದು. ಅದಕ್ಕಾಗಿ ನಿಮಗೆ ನೆರವು ನೀಡಲು ಪ್ರತಿ ನ್ಯಾಯಾಲಯದಲ್ಲಿ ಕಾನೂನು ಸೇವಾ ಪ್ರಾಧಿಕಾರ ತಯಾರಾಗಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.