ಉಡುಪಿ : ಹರಿಯಾಣ, ಮಹಾರಾಷ್ಟ್ರ, ಜಾರ್ಕಂಡ್, ಜಮ್ಮೂ ಕಾಶ್ಮೀರ ಸೇರಿದಂತೆ ದೇಶದೆಲ್ಲೆಡೆ ಬೆ.ಜೆ.ಪಿ ಪಕ್ಷದ ಪಾರಮ್ಯ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷದ ಸದ್ಯದ ಸ್ಥಿತಿ ನೋಡಿದರೆ ಮುಂದಿನ 5 ವರ್ಷಗಳಲ್ಲಿ ನೆಲಸಮವಾಗಲಿದೆ ಎಂದು ಮಾಜಿ ಮುಖ್ಯ ಮಂತ್ರಿ, ಸಂಸದ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಭಾಜಪಾ ಪಕ್ಷಕ್ಕೆ ನೂತನವಾಗಿ ಸೇರಿಕೊಂಡ ಸುರೇಶ್ ಶೆಟ್ಟಿ ಗುರ್ಮೆಯವರನ್ನು ಸ್ವಾಗತಿಸುವ ಕಾರ್ಯಕ್ರಮ ಮತ್ತು ಕಾಪು ವಿಧಾನ ಸಭಾ ಕ್ಷೇತ್ರದ ವತಿಯಿಂದ ಕಾಪು ಪೇಟೆಯಲ್ಲಿ ಜರುಗಿದ ಕಾರ್ಯಕರ್ತರ ಬ್ರಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
2 ತಿಂಗಳಿಂದ ಕಣ್ಮರೆಯಾಗಿದ್ದ ರಾಹುಲ್ ಗಾಂಧಿ ಈಗ ರೈತರ ಪರ ಮಾತನಾಡುತ್ತಿದ್ದಾರೆ. ರೈತರ ಕಷ್ಟ ನಷ್ಟಗಳ ಅನುಭವ ರಾಹುಲ್ಗಿಲ್ಲ. ರೈತರ ಬಗ್ಗೆ ಮಾತನಾಡಲು ರಾಹುಲ್ ಗಾಂಧಿಗೆ ನೈತಿಕತೆ ಇಲ್ಲ. ಯು.ಪಿ.ಎ ಆಡಳಿತಾವಧಿಯಲ್ಲಿ ಮನಮೋಹನ್ ಸಿಂಗ್ರನ್ನು ದುರುಪಯೋಗ ಪಡಿಸಿಕೊಂಡು 208 ಗಣಿ ಕೇಂದ್ರಗಳ ಲೂಟಿ ಮಾಡಿದ್ದಾರೆ. ಆದರೆ ಮೋದಿ ಪ್ರಧಾನಿಯಾದ ಬಳಿಕ ಒಂದೇ ಒಂದು ಭ್ರಷ್ಠಾಚಾರ ಪ್ರಕರಣ ಇಲ್ಲ. ಒಂದು ಭ್ರಷ್ಟಾಚಾರ ಕೇಂದ್ರದಲ್ಲಿ ನಡೆದಿದ್ದರೆ ನಾನು ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದರು.
ಮೋದಿಜಿ ಪ್ರಧಾನಿಯಾದ ಬಳಿಕ ಕೇಂದ್ರಾಡಳಿತದ ಕಚೇರಿಯ ಅಧಿಕಾರಿಗಳ ಕಾರ್ಯ ವೈಖರಿಯಲ್ಲಿ ವೇಗಬಂದಿದೆ. ಭಾರತ ಜಗತ್ತಿನಲ್ಲಿ ಅತೀ ಶಕ್ತಿಯುತ ರಾಷ್ಟ್ರವಾಗಿ ಹೊರಹೊಮ್ಮುತ್ತಿದ್ದು, ಆರ್ಥಿಕಾಭಿವೃದ್ಧಿಯಲ್ಲಿ ಚೀನಾ ದೇಶವನ್ನು ಸದ್ಯದಲ್ಲೇ ಹಿಂದಿಕ್ಕಲಿದ್ಧೇವೆ ಎಂದು ವಲ್ಡ್ಬ್ಯಾಂಕ್ ಸಮೀಕ್ಷೆ ಹೇಳಿದೆ ಎಂದರು.
ಬಿ.ಜೆ.ಪಿ ಕೆಂದ್ರದಲ್ಲಿ ಅಧಿಕಾರಕ್ಕೆ ಬಂದು 11 ತಿಂಗಳಾಗಿದೆ. ನಮ್ಮ ಸರ್ಕಾರ ಒಂದೇ ಒಂದು ಎಕ್ರೆ ಭೂಮಿಯನ್ನು ರೈತರಿಂದ ಈವರೆಗೆ ಕಸಿದುಕೊಂಡಿಲ್ಲ. 60 ವರ್ಷದಾಟಿದ ರೈತರಿಗೆ ರೂ 5 ಸಾವಿರ ಪೆನ್ಶನ್, ಬೆಳೆಹಾನಿಗೆ ಹೆಚ್ಚಿನ ಪರಿಹಾರ ಧನ ಒದಗಿಸುತ್ತಿರುವ ಕೀರ್ತಿ ನರೇಂದ್ರ ಮೋದಿಯವರಿಗಿದೆ. ಕಳೆದ 2 ವರ್ಷದಿಂದ ಸಿದ್ದರಾಮಯ್ಯ ಸರ್ಕಾರ ಒಂದೇ ಒಂದು ಕೈಗಾರಿಕೆಗೆ ಚಾಲನೆ ನೀಡಿಲ್ಲ. ನಮ್ಮ ಸರ್ಕಾರ ತಂದಿದ್ಧ ಜನಪರ ಯೋಜನೆಗಳನ್ನು ನಿಲ್ಲಿಸುವ ಮೂಲಕ ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿದೆ. ಈ ಬಗ್ಗೆ ಜನಜಾಗೃತಿಯನ್ನು ತರಲು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿ.ಜೆ.ಪಿ ಸಮಾವೇಶ ನಡೆಸಲಿದ್ದು, ಕಾಪುವಿನ ಸಮಾವೇಶ ಆರಂಭಿಕ ಹಂತವಾಗಿದೆ ಎಂದೂ ಯಡಿಯೂರಪ್ಪ ಹೇಳಿದರು.
ಶಾಸಕ ಸಿಟಿ ರವಿ ಮಾತನಾಡಿ, ಸ್ವತಂತ್ರ ಭಾರತದ ನಂತರ ದೇಶದಲ್ಲಿ ಭೂ ಒತ್ತುವರಿ ಮಾಡಿದರವರು ಕಾಂಗ್ರೆಸಿಗರಾಗಿದ್ದಾರೆ. ಹರಿಯಣದಲ್ಲಿ ಸೋನಿಯಾಗಾಂಧಿ ಅಳಿಯ ರಾಬಟ್ ವಾದ್ರಾಗೆ ಭೂಮಿ ನೀಡಿದಾಗ ಬೊಬ್ಬೆ ಹಾಕದವರು, ಅರ್ಕಾವತಿ, ಕೆಂಪೇಗೌಡ ಲೇಔಟ್ ಪ್ರಕರಣ ನಡೆದಾಗ ಬಾಯಿಬಿಡದವರು ಈಗ ಕೇಂದ್ರದ ವಿರುದ್ಧ ಹೋರಟ ನಡೆಸೋ ನೈತಿಕತೆ ಇಲ್ಲ. ಶಿವಮೊಗ್ಗದಲ್ಲಿನ ಕೋಮುಗಲಭೆಯಲ್ಲಿ ಪ್ರಾಣತೆತ್ತ ವೈದ್ಯರ ಕುಟುಂಬಕ್ಕಾಗಲೀ, ಎನ್ ಕೌಂಟರ್ನಲ್ಲಿ ಜೀವ ಕಳೆದುಕೊಂಡವರಿಗೆ ೧ ನಯಪೈಸೆಯ ಪರಿಹಾರಧನ ನೀಡಿಲ್ಲ. ಆದರೆ ಗೋ ಸಾಗಾಟ ಮಾಡುತ್ತಿದ್ದ ಆರೋಪಿ ಸತ್ತರೆ ೧೦ ಲಕ್ಷ ಪರಿಹಾರಧನ ನೀಡೋ ಕಾಂಗ್ರೆಸ್ ಸರ್ಕಾರ ಕಮ್ಯುನಲ್ ಮತ್ತು ಕ್ರಿಮಿನಲ್ ಸರ್ಕಾರವಾಗಿದೆ ಎಂದರು.
ಪಕ್ಷಕ್ಕೆ ನೂತನವಾಗಿ ಸೇರಿಕೊಂಡ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಬಡತನದ ಬಂದವ ನಾನು ಜನರ ಕಷ್ಟ, ನಷ್ಟಗಳ ಅರಿವಿದೆ. ಬಿ.ಜೆ.ಪಿ ಪಕ್ಷಕ್ಕೆ ಸೇರ್ಪಡೆಗೊಂಡ ದಿನ ನನ್ನ ಜೀವನದ ಸಾರ್ಥಕದ ದಿನವಾಗಿದ್ದು, ಇದೇ ನನ್ನ ಮನೆ. ಅಲ್ಲಿರುವುದು ಸುಮ್ಮನೆ. ಜನ ಸೇವೆ ಮತ್ತು ಪಕ್ಷದ ಸೇವೆಗಾಗಿ ಯಾವುದೇ ಪ್ರತಿಫಲಪೇಕ್ಷೆ ಇಲ್ಲದೆ ಬಿ.ಜೆ.ಪಿ. ಸೇರಿದ್ದೇನೆ ಎಂದರು. ಈ ಸಂದರ್ಭ ಬೈಂದೂರು ಕ್ಷೇತ್ರದಲ್ಲಿ 50 ಸಾವಿರಕ್ಕೂ ಬಿ.ಜೆ.ಪಿ ಸದಸ್ಯತ್ವ ನೊಂದಣಿ ಮಾಡಿದ ಸುಕುಮಾರ್ ಶೆಟ್ಟಿಯವರನ್ನು ಅಭಿನಂದಿಸಲಾಯಿತು.
ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸುನಿಲ್ ಕುಮಾರ್, ಮಾಜಿ ಕಾಪು ಕ್ಷೇತ್ರ ಬಿ.ಜೆ.ಪಿ. ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಶಾಸಕರಾದ ಲಾಲಾಜಿ ಆರ್ ಮೆಂಡನ್, ಮೋನಪ್ಪ ಭಂಡಾರಿ, ಮಾಜಿ ಸಚಿವ ವಸಂತ ವಿ ಸಾಲ್ಯಾನ್, ಕ್ಯಾ. ಗಣೇಶ್ ಕಾರ್ಣಿಕ್, ಶ್ಯಾಮಲ ಎಸ್. ಕುಂದರ್, ಸವಿತಾ ಶಿವಾನಂದ ಕೋಟ್ಯಾನ್, ಮಟ್ಟಾರು ರತ್ನಾಕರ ಹೆಗ್ಡೆ, ನಯನ ಗಣೇಶ್, ಕತ್ಯಾರು ನವೀನ್ ಶೆಟ್ಟಿ, ಉದಯಕುಮಾರ್ ಶೆಟ್ಟಿ, ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ರಾಘವೆಂದ್ರ ಕಿಣಿ, ಅರುಣ್ ಶೆಟ್ಟಿ ಪಾದೂರು, ಸಂಧ್ಯಾ ರಮೇಶ್, ಉಷಾ ಶೇಣೈ, ಯಶ್ಪಾಲ್ ಸುವರ್ಣ, ಸಂತೋಷ್ ಕುಮಾರ್, ಮನೀಂದ್ರ ಶೆಟ್ಟಿ, ರಾಜೇಶ್ ಕಾವೇರಿ, ಕಟಪಾಡಿ ಶಂಕರಪ್ರಜಾರಿ, ಉಷಾ ಶೆಣೈ, ಸಂಧ್ಯಾ ರಮೇಶ್, ಜೆರಾಲ್ಡ್ ಫೆರ್ನಾಂಡಿಸ್, ಚಂದ್ರಹಾಸ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುತ್ಯಾರು ಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.