ಅಕ್ಷಯ ತದಿಗೆಯು ಮೂರೂವರೆ ಮುಹೂರ್ತಗಳಲ್ಲಿ ಒಂದಾಗಿದೆ. ಕೆಲವರ ಅಭಿಪ್ರಾಯದಂತೆ ಇದು ಕೃತಯುಗ ಅಥವಾ ತ್ರೇತಾಯುಗದ ಆರಂಭದ ದಿನವಾದುದರಿಂದ ಇದಕ್ಕೆ ಮಹತ್ವ ಬಂದಿದೆ. ಪ್ರತಿಯೊಂದು ಕಾಲ ವಿಭಾಗದ ಮೊದಲ ದಿನವು ಭಾರತೀಯರಿಗೆ ಯಾವಾಗಲೂ ಪವಿತ್ರವಾಗಿದೆ. ಆದುದರಿಂದ ಇಂತಹ ತಿಥಿಗಳಂದು ಸ್ನಾನದಾನಾದಿ ಧರ್ಮಕಾರ್ಯಗಳನ್ನು ಹೇಳಲಾಗಿದೆ.
ಈ ದಿನದ ವಿಧಿಯೆಂದರೆ ಪವಿತ್ರ ತೀರ್ಥಸ್ನಾನ, ವಿಷ್ಣುವಿನ ಪೂಜೆ, ಜಪ, ಹೋಮ, ದಾನ ಮತ್ತು ಪಿತೃತರ್ಪಣ. ಈ ದಿನ ಅಪಿಂಡಕ ಶ್ರಾದ್ಧವನ್ನು ಮಾಡಬೇಕು ಮತ್ತು ಅದು ಸಾಧ್ಯವಿಲ್ಲದಿದ್ದರೆ ಕನಿಷ್ಠಪಕ್ಷ ಎಳ್ಳಿನ ತರ್ಪಣವನ್ನಾದರೂ ನೀಡಬೇಕು ಎಂದು ಹೇಳಲಾಗಿದೆ. ಈ ದಿನ ಬಿಸಿಲಿನಿಂದ ರಕ್ಷಿಸುವ ಛತ್ರಿ, ಪಾದರಕ್ಷೆ ಮುಂತಾದ ವಸ್ತುಗಳನ್ನು ಕೂಡ ದಾನ ಮಾಡುತ್ತಾರೆ. ಅಕ್ಷಯ ತದಿಗೆ ಸ್ತ್ರೀಯರಿಗೆ ಮಹತ್ವದ್ದಾಗಿದೆ. ಸ್ತ್ರೀಯರು ಚೈತ್ರದಲ್ಲಿ ಕೂಡಿಸಿದ ಚೈತ್ರಗೌರಿಯನ್ನು ಈ ದಿನ ವಿಸರ್ಜನೆ ಮಾಡುತ್ತಾರೆ. ಇದರ ಪ್ರಯುಕ್ತ್ತ ಅವರು ಅರಿಶಿನ- ಕುಂಕುಮ ನೀಡುವ ಕಾರ್ಯಕ್ರಮವನ್ನೂ ಮಾಡುತ್ತಾರೆ. ವೈಶಾಖ ಶುದ್ಧ ತದಿಗೆಗೆ ಅಕ್ಷಯ ತದಿಗೆ ಎಂದು ಹೆಸರು ಬರಲು `ಮದನರತ್ನ’ ಗ್ರಂಥದಲ್ಲಿ ಮುಂದಿನಂತೆ ಕಾರಣವನ್ನು ಹೇಳಲಾಗಿದೆ.
ಅಕ್ಷಯ ತೃತೀಯ ವನ್ನು ರಾಷ್ಟ್ರದಾದ್ಯಂತ ಆಚರಿಸಲಾಗುತ್ತದೆ. ಇದು ವೈಶಾಖ ಮಾಸದ ತೃತೀಯ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ವಿಷ್ಣುವಿನ ಅವತಾರವಾದ ಪರಶುರಾಮನು ಜನಸಿದ್ದು, ಈದೇ ದಿನದಂದು ಮಹರ್ಷಿ ವೇದವ್ಯಾಸರು ಮತ್ತು ಗಣಪತಿ ಮಾಹಾಭಾರತವನ್ನು ಬರೆಯಲು ಪ್ರಾರಂಭಿಸಿದ್ದು ಈ ಎಲ್ಲಾ ಕಾರಣಗಳಿಂದಾಗಿ ಈ ದಿನವು ಅತ್ಯಂತ ಮಹತ್ವ ಪಡೆದಿದೆ.
ಅಕ್ಷಯ ಎಂಬ ಶಬ್ದದ ಅರ್ಥವೇ ಎಂದೂ ಮುಗಿಯದ ಅಥವಾ ಕೊನೆಯಿಲ್ಲದ ಸಂಪತ್ತು ಎಂದು. ಅಕ್ಷಯ ತೃತೀಯದಂದು ಮೃತ್ತಿಕ್ಕಾ ಪೂಜನ ಎಂದರೆ ಭೂಮಿ ಪೂಜೆ ನಡೆಸಿದರೆ ಒಳಿತು ಎನ್ನುವ ಪ್ರತೀತಿಯಿದೆ. ಆದರೆ ಇತ್ತೀಚಿನ ದಿನಮಾನಗಳಲ್ಲಿ ಚಿನ್ನವನ್ನು ಖರೀದಿಸಿದರೆ ಒಳಿತು ಎಂಬ ನಂಬಿಕೆ ಇದೆ.
ಪಾಂಡವರ ವನವಾಸದ ಸಂಧರ್ಭ ದ್ರೌಪದಿಗೆ ಸೂರ್ಯನಾರಾಯಣನಿಂದ ಅಕ್ಷಯಪಾತ್ರೆ ದೊರೆತದ್ದು ಮಾತ್ರವಲ್ಲ ಅದರ ಮೊದಲು ದ್ರೌಪದಿಯ ವಸ್ತ್ರಾಪಹರಣ ನಡೆದದ್ದು ಕೂಡಾ ಇದೇ ದಿನ. ಶ್ರೀ ಕೃಷ್ಣ ಕೃಷ್ಣೆಗಾಗಿ ಅಕ್ಷಯ ನೀರೆಯನ್ನು ಕರುಣಿಸಿದ್ದನು. ಇದೇ ದಿನದಂದು ಶ್ರೀಲಕ್ಷ್ಮೀ ದೇವಿಯು ಕುಬೇರನಿಗೆ ಪ್ರಾಪ್ತಿಯಾಗಿದ್ದು ತ್ರೇತಾಯುಗದ ಪ್ರಾರಂಭ ಮತ್ತು ಗಂಗಾಮಾತೆ ಸ್ವರ್ಗದಿಂದ ಧರೆಗಿಳಿದು ಗಂಗಾವತರಣವಾದ ದಿನ ಎಂದು ಹೇಳಲಾಗುತ್ತದೆ.
ಅಲ್ಲದೇ ಆದಿಶಂಕರಾಚಾರ್ಯರು ಕನಕಧಾರ ಸ್ತೋತ್ರವನ್ನು ರಚಿಸಿದ್ದು ಅಕ್ಷಯ ತೃತೀಯದಂದೇ. ಅವರು ಭಿಕ್ಷೆಗೆಂದು ತೆರಳಿದಾಗ ಅವರಿಗೆ ಬಡದಂಪತಿಗಳಿಂದ ನೆಲೆಕಾಯಿ ಭಿಕ್ಷೆಯಾಗಿ ದೊರಕಿತು ಆದುದರಿಂದ ಬಡವರಿಗಾಗಿ ಮರುಗಿದ ಶಂಕರರು ಈ ಸ್ತೋತ್ರವನ್ನು ರಚಿಸಿದರು ಎನ್ನಲಾಗಿದೆ. ಈ ಸ್ತೋತ್ರವನ್ನು ಪಠಿಸಿದರೆ ಸಿರಿ ಸಂಪತ್ತು ಪ್ರಾಪ್ತಿಯಾಗುವುದು ಎಂಬ ನಂಬಿಕೆಯಿದೆ. ಈ ಎಲ್ಲಾ ಕಾರಣಗಳಿಂದ ಅಕ್ಷಯ ತೃತೀಯದ ದಿನ ಶ್ರೇಷ್ಠ ದಿನವಾಗಿದೆ. ಆದುದರಿಂದ ಅಕ್ಷಯ ತೃತೀಯ ಬಹಳ ಪ್ರಮುಖವಾಗಿದೆ.
ಅಸ್ಯಾಂ ತಿಥೌ ಕ್ಷಯಮುರ್ಪತಿ ಹುತಂ ನ ದತ್ತಂ |
ತೇನಾಕ್ಷಯೇತಿ ಕಥಿತಾ ಮುನಿಭಿಸ್ತ ತೀಯಾ |
ಉದ್ದಿಶ್ಯ ದೈವತಪಿತೃನ್ಕ ಯತೇ ಮನುಷೈ ಃ |
ತತ್ ಚ ಅಕ್ಷಯಂ ಭವತಿ ಭಾರತ ಸರ್ವಮೇವ ||
ಅರ್ಥ : (ಶ್ರೀಕೃಷ್ಣನು ಹೇಳುತ್ತಾನೆ) ಎಲೈ ಯುಧಿಷ್ಟಿರನೇ, ಈ ತಿಥಿಯ ದಿನ ಮಾಡಿದ ದಾನ ಮತ್ತು ಹವನಗಳು ಕ್ಷಯವಾಗುವುದಿಲ್ಲ; ಆದುದರಿಂದ ಋಷಿಗಳು ಇದಕ್ಕೆ ಅಕ್ಷಯ ತದಿಗೆ ಎಂದಿದ್ದಾರೆ. ಈ ತಿಥಿಯ ದಿನ ದೇವರು ಮತ್ತು ಪಿತೃಗಳನ್ನುದ್ದೇಶಿಸಿ ಮಾಡಿದ ಎಲ್ಲ ಕರ್ಮಗಳು ಅಕ್ಷಯವಾಗುತ್ತವೆ (ಕ್ಷಯವಾಗುವುದಿಲ್ಲ).
ಅಕ್ಷಯ ತದಿಗೆಯ ದಿನ ದಾನ ಮಾಡುವುದರಿಂದ ಏನು ಲಾಭವಾಗುತ್ತದೆ ?
ದಾನ ಮಾಡುವುದರಿಂದ ಪುಣ್ಯವು ಸಿಗುತ್ತದೆ. ಅಕ್ಷಯ ತದಿಗೆಯ ದಿನ ಮಾಡಿದ ದಾನವು ಯಾವಾಗಲೂ ಕ್ಷಯವಾಗುವುದಿಲ್ಲ. ಅಕ್ಷಯ ತದಿಗೆಯ ದಿನ ಮಾಡಿದ ದಾನದಿಂದ ಬಹಳಷ್ಟು ಪುಣ್ಯ ಸಿಗುತ್ತದೆ. ಬಹಳಷ್ಟು ಪುಣ್ಯವು ಲಭಿಸುವುದರಿಂದ ವ್ಯಕ್ತಿಯ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಯಾವುದಾದರೊಂದು ಜೀವದ ಮುಂಚಿನ ಕರ್ಮಗಳು ಒಳ್ಳೆಯದಾಗಿದ್ದರೆ ಅವನ ಪುಣ್ಯದ ಸಂಗ್ರಹವು ಹೆಚ್ಚಾಗುತ್ತದೆ. ಇದರಿಂದ ಅವನಿಗೆ ಸ್ವರ್ಗಪ್ರಾಪ್ತಿ ಆಗಬಹುದು. ಸಾಧಕರಿಗೆ ಪುಣ್ಯವನ್ನು ಪ್ರಾಪ್ತಿ ಮಾಡಿಕೊಂಡು ಸ್ವರ್ಗಪ್ರಾಪ್ತಿ ಮಾಡಿಕೊಳ್ಳುವುದಿರುವುದಿಲ್ಲ, ಸಾಧಕರಿಗೆ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದಿರುತ್ತದೆ.
ಆದುದರಿಂದ ಸಾಧಕರು ಸತ್ಪಾತ್ರರಿಗೆ ದಾನ ಮಾಡಬೇಕು. ಎಲ್ಲಿ ಅಧ್ಯಾತ್ಮದ ಪ್ರಸಾರದ ಜೊತೆಗೆ ರಾಷ್ಟ್ರ ಮತ್ತು ಧರ್ಮಗಳಿಗಾಗಿ ಕಾರ್ಯ ಮಾಡಲಾಗುತ್ತದೆಯೋ, ಇಂತಹ ಸತ್ಕಾರ್ಯಗಳಿಗೆ ದಾನ ಮಾಡುವುದೆಂದರೆ ಸತ್ಪಾತ್ರೇ ದಾನ. ಸತ್ಪಾತ್ರರಿಗೆ ದಾನ ಮಾಡುವುದರಿಂದ ದಾನ ಮಾಡುವವನಿಗೆ ಪುಣ್ಯವು ಸಿಗದೆ ದಾನದ ಕರ್ಮವು ಅಕರ್ಮಕರ್ಮವಾಗುತ್ತದೆ. ಇದರಿಂದ ಅವನ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ಆಧ್ಯಾತ್ಮಿಕ ಉನ್ನತಿಯಾಗುವುದರಿಂದ ಸಾಧಕನು ಸ್ವರ್ಗಲೋಕಕ್ಕೆ ಹೋಗದೆ ಉಚ್ಚಲೋಕಕ್ಕೆ ಹೋಗುತ್ತಾನೆ.
ಅಕ್ಷಯ ತದಿಗೆಯ ದಿನ ಉಚ್ಚಲೋಕದಿಂದ ಸಾತ್ತ್ವಿಕತೆಯು ಬರುತ್ತಿರುತ್ತದೆ. ಈ ಸಾತ್ತ್ವಿಕತೆಯನ್ನು ಗ್ರಹಣ ಮಾಡಲು ಭುವಲೋಕದಲ್ಲಿನ ಅನೇಕ ಜೀವಗಳು (ಲಿಂಗದೇಹಗಳು) ಪೃಥ್ವಿಯ ಸಮೀಪಕ್ಕೆ ಬರುತ್ತವೆ. ಭುವಲೋಕದಲ್ಲಿರುವ ಬಹುತಾಂಶ ಜೀವಗಳು ಮನುಷ್ಯರ ಪೂರ್ವಜರಾಗಿರುತ್ತಾರೆ ಮತ್ತು ಅವರು ಪೃಥ್ವಿಯ ಸಮೀಪ ಬರುವುದರಿಂದ ಮನುಷ್ಯರಿಗೆ ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಪೂರ್ವಜರ ಋಣವೂ ಮನುಷ್ಯರ ಮೇಲೆ ಬಹಳಷ್ಟು ಇರುತ್ತದೆ. ಈ ಋಣವನ್ನು ತೀರಿಸಲು ಮನುಷ್ಯರು ಪ್ರಯತ್ನ ಮಾಡುವುದು ಈಶ್ವರನಿಗೆ ಅಪೇಕ್ಷಿತವಾಗಿದೆ. ಪೂರ್ವಜರಿಗೆ ಗತಿ ಸಿಗಬೇಕೆಂದು ಅಕ್ಷಯ ತದಿಗೆಯ ದಿನ ಎಳ್ಳು ತರ್ಪಣೆಯನ್ನು ಮಾಡುತ್ತಾರೆ.
ಎಳ್ಳು ತರ್ಪಣೆ ಮಾಡುವ ಪದ್ಧತಿ : ಒಂದು ತಟ್ಟೆಯನ್ನು ತೆಗೆದುಕೊಂಡು ತಟ್ಟೆಯಲ್ಲಿ ಶ್ರೀ ವಿಷ್ಣು, ಬ್ರಹ್ಮ ಅಥವಾ ದತ್ತನಿಗೆ ಆವಾಹನೆಯನ್ನು ಮಾಡಬೇಕು. ಆಮೇಲೆ ದೇವತೆಗಳು ಸೂಕ್ಷ ದಲ್ಲಿ ಆ ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ಕೈಯಲ್ಲಿ ಎಳ್ಳನ್ನು ತೆಗೆದುಕೊಂಡು ಅವರ ಚರಣಗಳ ಮೇಲೆ ಅರ್ಪಿಸಬೇಕು. ಇನ್ನೊಂದು ತಟ್ಟೆಯನ್ನು ತೆಗೆದುಕೊಂಡು ನಮ್ಮ ಪೂರ್ವಜರ ಆವಾಹನೆಯನ್ನು ಮಾಡಬೇಕು. ಆಮೇಲೆ ಪೂರ್ವಜರು ತಟ್ಟೆಯಲ್ಲಿ ಬಂದಿದ್ದಾರೆಂದು ಭಾವವನ್ನಿಟ್ಟು ದೇವತೆಗಳ ತತ್ತ್ವದಿಂದ ಯುಕ್ತಸಂಪನ್ನವಾದ ಎಳ್ಳನ್ನು ಅವರಿಗೆ ಅರ್ಪಿಸಬೇಕು ಅಂದರೆ ಸಾತ್ತ್ವಿಕವಾಗಿರುವ ಈ ಎಳ್ಳನ್ನು ಕೈಯಲ್ಲಿ ತೆಗೆದುಕೊಂಡು ಅದರ ಮೇಲಿನಿಂದ ತಟ್ಟೆಯಲ್ಲಿ ನಿಧಾನವಾಗಿ ನೀರನ್ನು ಬಿಡಬೇಕು ಮತ್ತು ಆ ಸಮಯದಲ್ಲಿ ಬ್ರಹ್ಮ, ಶ್ರೀ ವಿಷ್ಣು ಅಥವಾ ಇವರಿಬ್ಬರ ಅಂಶವಿರುವ ದತ್ತನಿಗೆ ಪೂರ್ವಜರಿಗೆ ಗತಿ ನೀಡಬೇಕೆಂದು ಪ್ರಾರ್ಥನೆಯನ್ನು ಮಾಡಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.