ಬೆಂಗಳೂರು : `ನಾವಿಕ’ ಸಂಸ್ಥೆ ಎರಡು ವರ್ಷಗಳಿಗೊಮ್ಮೆ ಆಯೋಜಿಸುವ `ನಾವಿಕೋತ್ಸವ’ಕ್ಕೆ ದಿನಗಣನೆ ಶುರುವಾಗಿದೆ. ಸ್ಥಳೀಯ ಮತ್ತು ಅನಿವಾಸಿ ಕನ್ನಡಿಗರ ಸಾಹಿತ್ಯ ಮತ್ತು ಸಂಸ್ಕೃತಿಯ ವಿನಿಮಯ ಮತ್ತು ಸಮಾಗಮದ ಸಂಕೇತವಾಗಿರುವ ನಾವಿಕೋತ್ಸವ ಈ ಬಾರಿ ಜುಲೈನಲ್ಲಿ ನಡೆಯಲಿದೆ.
ಈ ಸಾಂಸ್ಕೃತಿಕ ಉತ್ಸವಕ್ಕಾಗಿ ಈಗಾಗಲೇ ಭರದ ಸಿದ್ಧತೆ ನಡೆಯುತ್ತಿದ್ದು, ನಾವಿಕ ಸಂಸ್ಥೆಯ ಅಧ್ಯಕ್ಷರಾದ ಡಾ. ರೇಣುಕಾ ರಾಮಪ್ಪ ಇದರ ರೂಪುರೇಷೆಗಳನ್ನು ರೂಪಿಸಿದ್ದಾರೆ. ಖಜಾಂಚಿಯಾದ ವೀಣಾರಾಜ್ ಅವರು ಸಹಕರಿಸುತ್ತಿದ್ದಾರೆ. `ನಾವಿಕೋತ್ಸವ-2016′ ಸಮಿತಿಯ ಸಂಚಾಲಕ ಯಶವಂತ ಸರದೇಶಪಾಂಡೆ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅನಿವಾಸಿ ಭಾರತೀಯ ಸಮಿತಿ ಮತ್ತು ಕನ್ನಡ ಪ್ರಾಧಿಕಾರ ಸಹಯೋಗದಲ್ಲಿ ನಾವಿಕ (ನಾರ್ತ್ ಅಮೆರಿಕ ವಿಶ್ವಕನ್ನಡ ಆಗರ) 2 ದಿನಗಳ ಕಾಲ `ನಾವಿಕೋತ್ಸವ’ವನ್ನು ಆಯೋಜಿಸಿದೆ.
ಅಮೆರಿಕಾದ ನಾವಿಕ ಸಂಸ್ಥೆ ೨ ವರ್ಷಗಳಿಗೊಮ್ಮೆ ನಡೆಸುವ ಈ ಸಾಂಸ್ಕೃತಿಕ ಉತ್ಸವ ಈ ಬಾರಿಯೂ ಬೆಂಗಳೂರಿನಲ್ಲಿ ನಡೆಯಲಿದೆ. ಜುಲೈ ೧೬ ಮತ್ತು ೧೭ ಎರಡು ದಿನಗಳ ಕಾಲ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಈ ಸಾಂಸ್ಕೃತಿಕ ಉತ್ಸವಕ್ಕೆ ವಿವಿಧ ದೇಶಗಳ ೯೦ಕ್ಕೂ ಹೆಚ್ಚು ಕನ್ನಡದ ಸಂಘ-ಸಂಸ್ಥೆಗಳನ್ನು ಆಹ್ವಾನಿಸಲಾಗಿದೆ. ೨೦೦೦ಕ್ಕೂ ಹೆಚ್ಚು ಅನಿವಾಸಿ ಕನ್ನಡಿಗರು ನಾವಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ.
ಎರಡು ದಿನಗಳ ಕಾಲ ನಡೆಯುವ `ನಾವಿಕೋತ್ಸವ’ದಲ್ಲಿ ಕನ್ನಡ ಸಾಹಿತ್ಯಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರಾಧನೆ ನಡೆಯಲಿದ್ದು, ಖ್ಯಾತ ಸಾಹಿತಿಗಳು, ಕಲಾವಿದರು, ಅಧಿಕಾರಿಗಳು, ಸರ್ಕಾರದ ವಿವಿಧ ಇಲಾಖೆಗಳ ಸಚಿವರು ಭಾಗವಹಿಸಲಿದ್ದಾರೆ. ಎರಡೂ ದಿನಗಳ ಕಾಲ ಬೆಳಗ್ಗೆ ೮ರಿಂದ ರಾತ್ರಿ ೧೦ರವರೆಗೆ ಎಡೆಬಿಡದೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.
ಈ ಹಿಂದೆ ಅಮೆರಿಕನ್ನಡೋತ್ಸವ ಎಂಬ ಹೆಸರಿನಲ್ಲಿ ಆಯೋಜಿಸಲಾಗುತ್ತಿದ್ದ ಸಾಂಸ್ಕೃತಿಕ ಉತ್ಸವವನ್ನು ಈ ಬಾರಿ `ನಾವಿಕೋತ್ಸವ’ ಎಂಬ ಹೆಸರಿನಲ್ಲಿ ನಡೆಸಲು ನಾವಿಕ ಸಂಘಟನೆ ನಿರ್ಧರಿಸಿದೆ. ಸಹ ಸಂಚಾಲಕರಾದ ಸಂಜಯ್ ಜೋಷಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
`ಯುವಸೂಚಿ’ಗೆ ಚಾಲನೆ : ಈ ಬಾರಿಯ ವಿಶ್ವ ಕನ್ನಡೋತ್ಸವದ ವಿಶೇಷತೆ ಎಂದರೆ `ಯುವಸೂಚಿ’ ಎಂಬ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕರ್ನಾಟಕದಿಂದ ಅಮೆರಿಕಾಗೆ ತೆರಳುವ ಯುವಕರಿಗೆ ಮಾರ್ಗದರ್ಶನ ನೀಡಿ, ಸೂಕ್ತ ಸಹಾಯ ಒದಗಿಸುವ ನಿಟ್ಟಿನಲ್ಲಿ ನಾವಿಕ ಸಂಸ್ಥೆಯು ಅಮೆರಿಕಾದಲ್ಲಿ ಯುವಸೂಚಿ ಎಂಬ ನೂತನ ಕಾರ್ಯಕ್ರಮವನ್ನು ರೂಪಿಸಿದೆ. ಈ ಬಾರಿಯ ನಾವಿಕೋತ್ಸವ-೨೦೧೬ರಲ್ಲಿ ಈ ವಿಶೇಷ ಯೋಜನೆಗೆ ಚಾಲನೆ ಸಿಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.