News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಹೆಡಗೇವಾರ್ ಚಿಂತನೆಗಳ ಪ್ರಸ್ತುತತೆ

hedgewarಆರೆಸ್ಸೆಸ್ ಇಂದು ಜಾಗತಿಕವಾಗಿ ಮನ್ನಣೆ ಪಡೆದ ಒಂದು ಸಂಘಟನೆ. ಆದರೆ ಅದನ್ನು ನಕಾರಾತ್ಮಕ ಕಾರಣಗಳಿಗಾಗಿಯೇ ವಿಜೃಂಭಿಸಲಾಗುತ್ತಿದೆ. ಸಂಘಸ್ಥಾಪಕ ಡಾ. ಹೆಡಗೇವಾರ್ ಅವರ ಮೂಲಚಿಂತನೆಗಳ ಕುರಿತು ಪೂರ್ವಗ್ರಹಪೀಡಿತವಲ್ಲದ ಚರ್ಚೆಗಳು ನಡೆಯುವ ಅಗತ್ಯವಿದೆ. ಹೆಡಗೇವಾರ್ ಅವರ ಜನ್ಮದಿನವಾದ ಇಂದು ಅವರ ಕುರಿತು ಒಂದಿಷ್ಟು ಸ್ಮರಣೆ ಇಲ್ಲಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ, ಅಂದರೆ ಆರೆಸ್ಸೆಸ್ ಎಂದು ಜನಪ್ರಿಯತೆ ಪಡೆದಿರುವ ಹಿಂದು ಸಂಘಟನೆಯ ಹೆಸರು ಪ್ರಸ್ತಾಪವಾದಾಗಲೆಲ್ಲ ಅಲ್ಲಿ ವಿಜೃಂಭಿಸುವುದು ಕೋಮುವಾದ, ಮುಸ್ಲಿಂ ವಿರೋಧ, ಹಿಂಸೆ ಇತ್ಯಾದಿ ಋಣಾತ್ಮಕ ಸಂಗತಿಗಳು ಮಾತ್ರ. ಆರೆಸ್ಸೆಸ್‌ನ ಮೂಲ ಉದ್ದೇಶವಾಗಲೀ, ಅದರ ಸಂಸ್ಥಾಪಕ ಡಾ.ಕೇಶವ ಬಲಿರಾಮ್ ಹೆಡಗೇವಾರ್ ಅವರ ಚಿಂತನೆಗಳಾಗಲೀ ಚರ್ಚೆಗೆ ಒಳಗಾಗುವುದೇ ಇಲ್ಲ. ಇದೊಂದು ವಿಪರ್ಯಾಸವೇ ಸರಿ. ಆರೆಸ್ಸೆಸ್‌ ಅನ್ನು ಡಾ. ಹೆಡಗೇವಾರ್ ಸ್ಥಾಪಿಸಿದ್ದು ಈಗ ವಿರೋಧಿಗಳು ಟೀಕಿಸುತ್ತಿರುವ ಯಾವುದೇ ಉzಶಗಳಿಗಾಗಿ ಆಗಿರಲಿಲ್ಲ. ಹಿಂದೂ ಸಮಾಜದ ಸಂಘಟನೆಗಾಗಿ ಸಂಘವನ್ನು ಹೆಡಗೇವಾರ್ ಪ್ರಾರಂಭಿಸಿದ್ದರೂ ಅವರು ಈ ಸಂಘಟನೆಗೆ ಇಟ್ಟ ಹೆಸರು ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬುದು ಅನೇಕರಿಗೆ ಇನ್ನೊಂದು ಅಚ್ಚರಿಯ ಸಂಗತಿ. ಅವರೇಕೆ ಹಿಂದು ಸ್ವಯಂಸೇವಕ ಸಂಘ ಎಂದಿಡಬಾರದಿತ್ತು ಎಂದು ಸಿನಿಕತನದ ಪ್ರಶ್ನೆ ಕೇಳುವವರೂ ಇದ್ದಾರೆ. ಆಗಲೂ ಅಷ್ಟೆ, ಹಿಂದೂ ಸಂಘಟನೆಯನ್ನು `ರಾಷ್ಟ್ರೀಯ’ ಎಂದು ಕರೆಯುವುದೇ ವಿಚಿತ್ರವೆಂದು ಜನರು ಭಾವಿಸಿದ್ದ ದಿನಗಳವು. ಹಿಂದುಗಳು, ಮುಸಲ್ಮಾನರು, ಕ್ರೈಸ್ತರು, ಪಾರಸಿಗಳು ಮುಂತಾದ ಎಲ್ಲರೂ ಇದ್ದರೆ ಮಾತ್ರ ಅದನ್ನು ರಾಷ್ಟ್ರೀಯ ಕೆಲಸವೆಂದು ತಿಳಿಯಲಾಗುತ್ತಿತ್ತು. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸನ್ನು ರಾಷ್ಟ್ರೀಯ ಸಂಸ್ಥೆಯೆಂದು ಕರೆಯುತ್ತಿದ್ದುದು ಅದೇ ಕಾರಣಕ್ಕಾಗಿ. ಇಂತಹ ಸ್ಥಿತಿಯಲ್ಲಿ ಸಂಘಕ್ಕೆ ರಾಷ್ಟ್ರೀಯವೆನ್ನುವ ಹೆಸರಿಟ್ಟಿದ್ದು ಪ್ರಚಲಿತ ವಿಚಾರ ಸರಣಿಗೆ ಧಕ್ಕೆ ನೀಡಿದ ಕೆಲಸವೇ ಆಗಿತ್ತು. ಆದರೆ ಹೆಡಗೇವಾರ್ ಈ ಹೆಸರನ್ನು ಆಯ್ದುಕೊಂಡಿದ್ದುದು ವಿಚಾರಪೂರ್ವಕವಾಗಿಯೇ. ಹಿಂದುಸ್ಥಾನದಲ್ಲಿ ಹಿಂದುಗಳ ಸಂಘಟನೆಯೇ ರಾಷ್ಟ್ರೀಯವೆನಿಸಿದ್ದು. ಹಿಂದುಗಳ ಪ್ರತಿಯೊಂದು ಕಾರ್ಯವೂ ರಾಷ್ಟ್ರೀಯವೆಂದೇ ಪರಿಗಣಿಸಲ್ಪಡಬೇಕು. ಇದು ಹೆಡಗೇವಾರ್ ಅವರ ಚಿಂತನೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಅವರೆಂದು ರಾಜಿ ಮಾಡಿಕೊಳ್ಳಲಿಲ್ಲ. ಹಿಂದು ಸಮಾಜವನ್ನು ಮತ್ತು ಅದರ ತಾಯ್ನಾಡಾದ ಹಿಂದುಸ್ಥಾನವನ್ನು ಕೆಟ್ಟ ಕಣ್ಣಿನಿಂದ ನೋಡುವ, ಅವಮಾನಿಸುವ ಸಾಹಸ ಯಾರಲ್ಲೂ ಉಂಟಾಗದಂತೆ ಹಿಂದುಗಳಲ್ಲಿ ಅಜೇಯ ಶಕ್ತಿ ನಿರ್ಮಿಸಬೇಕು ಎಂಬುದು ಹೆಡಗೇವಾರ್ ಅವರ ಮನದ ಇಚ್ಛೆಯಾಗಿತ್ತು. ಅದೇ ಅವರ ಜೀವನ ಕಾರ್ಯವೂ ಅಯಿತು.

ಸ್ವಯಂಸೇವಕ ಎಂಬ ಶಬ್ದಕ್ಕೂ ಒಂದು ಖಚಿತ ಅರ್ಥ ನೀಡುವ ಸಫಲ ಪ್ರಯತ್ನ ಅವರದಾಗಿತ್ತು. ಡಾ. ಹೆಡಗೇವಾರ್ ಅವರ ದೃಷ್ಟಿಯಲ್ಲಿ ಸ್ವಯಂಸೇವಕ ಎಂದರೆ ಸ್ವಪ್ರೇರಣೆಯಿಂದ ದೇಶ ಕಾರ್ಯಕ್ಕಾಗಿ ಕಷ್ಟ ಸಹಿಸುವವನು. ಅದಕ್ಕಾಗಿ ಸಮಯ ನೀಡುವವನು, ತಾನೇ ಮುಂದಾಗಿ ಯಾರ ಸೂಚನೆಗೂ ಕಾಯದೆ ದೇಶದ ಕೆಲಸ ಮಾಡುವವನು, ತನ್ನದೆಲ್ಲವನ್ನೂ ಸಮರ್ಪಿಸಲು ಸಿದ್ಧವಿರುವವನು, ಸ್ವಇಚ್ಛೆಯಿಂದ ಶಿಸ್ತು ಅಥವಾ ಅನುಶಾಸನದ ಬಂಧನವನ್ನು ಸ್ವೀಕರಿಸುವವನು, ತೀಕ್ಷ್ಣ ಬುದ್ಧಿ ಹಾಗೂ ದೇಶಭಕ್ತಿಗಳಿಂದ ಸಂಪನ್ನನಾದ ಕಾರ್ಯಕರ್ತನೇ ಸ್ವಯಂಸೇವಕ – ಇದು ಡಾಕ್ಟರ್‌ಜೀ ಅವರು ನೀಡಿದ ಕಲ್ಪನೆ. ನಾಯಕರು ಹೇಳಿದ ಎಲ್ಲ ಕೆಲಸಗಳನ್ನು ವಿಧೇಯತೆಯಿಂದ ಮಾಡುವ, ಸಭೆ ಸಮಾರಭಗಳಲ್ಲಿ ಕುರ್ಚಿ, ಠ್ರ್ಪೀಬಲ್ ಜೋಡಿಸಿ ತೆಗೆದಿಡುವ, ಜಮಖಾನೆ ಹಾಸುವ ಕೆಲಸ ಮಾಡುವುದಷ್ಟಕ್ಕೇ ಸ್ವಯಂಸೇವಕ ಸೀಮಿತನಲ್ಲ. ಅದು ಸ್ವಯಂಸೇವಕತನ ಅಲ್ಲವೇ ಅಲ್ಲ ಎಂಬುದನ್ನು ಹೆಡಗೇವಾರ್ ಸ್ಪಷ್ಟಪಡಿಸಿದ್ದರು. ಅದೇ ರೀತಿ ಸಂಘ ಎಂಬ ಶಬ್ದಕ್ಕೂ ಡಾ.ಹೆಡಗೇವಾರ್ ನೀಡಿದ ಅರ್ಥ ಅತ್ಯಂತ ವಿಶಾಲವಾದದ್ದು. ಸಮಾನ ರಾಷ್ಟ್ರೀಯ ಧ್ಯೇಯದಿಂದ ಒಡಗೂಡಿದ ಜನರ ಸಂಘಟನೆಯೇ ಸಂಘ ಎಂಬ ಆಶಯವನ್ನು ಅವರು ಸಂಘ ಶಬ್ದದಲ್ಲಿ ತುಂಬಿದ್ದರು.

ಹಿಂದು ಸಮಾಜದ ಸಂಘಟನೆಗೆ ಹೆಡಗೇವಾರ್ ಬಳಸಿದ ತಂತ್ರವೆಂದರೆ ನಿತ್ಯ ಶಾಖೆಯ ಪದ್ಧತಿ. ಪ್ರತಿನಿತ್ಯ ಒಂದೆಡೆ ಎಲ್ಲರೂ ಒಟ್ಟಿಗೆ ಸೇರಿ ಪರಸ್ಪರ ಕಲೆತು ಆಟವಾಡಿ, ಭಾರತಮಾತೆಯನ್ನು ಸ್ಮರಿಸುವ ಮೂಲಕ ಅದ್ಭುತವಾದ ಸಾಂಘಿಕ ಶಕ್ತಿಯನ್ನು ಸಂಚಯಿಸಬಹುದು ಎಂಬುದನ್ನು ಅವರು ತೋರಿಸಿಕೊಟ್ಟರು. ಸಮಾಜದಲ್ಲಿರುವ ಜಾತಿ, ಮತ, ಪಂಥ ಮುಂತಾದ ಅಂತರಗಳನ್ನು ಯಾವುದೇ ಘೋಷಣೆ ಮಾಡದೆ, ಮೌನವಾಗಿ ತೊಡೆದು ಹಾಕಲು ಶಾಖೆ ಒಂದು ಉತ್ತಮ ವಿಧಾನ ಎಂಬುದನ್ನು ಅವರು ತೋರಿಸಿಕೊಟ್ಟರು. ನಾಲ್ಕು ಜನ ಮೈದಾನವೊಂದರಲ್ಲಿ ಭಗವಾ ಬಾವುಟ ಹಾರಿಸಿ, ಅದರ ಕೆಳಗೆ ಆಟವಾಡಿಬಿಟ್ಟರೆ, ಶ್ಲೋಕ, ವಚನ, ಪ್ರಾರ್ಥನೆ ಹಾಡಿ ಭಾರತಮಾತಾ ಕೀ ಜೈ ಎಂದು ಘೋಷಿಸಿಬಿಟ್ಟರೆ ಹಿಂದು ಸಮಾಜ ಶಕ್ತಿಶಾಲಿಯಾಗುವುದು ಹೇಗೆ ಸಾಧ್ಯ? ಎಂಬ ಅನೇಕರ ಅನುಮಾನಗಳಿಗೆ ಅವರು ಪರಿಹಾರ ನೀಡಿದ್ದು ಇದೇ ನಿತ್ಯ ಶಾಖೆಯ ತಂತ್ರದ ಮೂಲಕ.

ಹಿಂದು ಸಮಾಜದಲ್ಲಿದ್ದ ಮೇಲುಕೀಳೆಂಬ ಅಸ್ಪೃಶ್ಯತೆಯನ್ನು ತೊಡೆದು ಹಾಕಲು ಡಾ.ಅಂಬೇಡ್ಕರ್, ಜ್ಯೋತಿಬಾ ಫುಲೆ, ಮಹಾತ್ಮಾ ಗಾಂಧಿ ಮೊದಲಾದ ಮಹನೀಯರೆಲ್ಲ ಶ್ರಮಿಸಿದ್ದರು. ಅಸ್ಪೃಶ್ಯತೆಯನ್ನು ತೊಡೆದುಹಾಕಲು ಈ ಮಹನೀಯರು ತಮ್ಮದೇ ಆದ ವಿಧಾನಗಳನ್ನು ಅನುಸರಿಸಿದ್ದರು. ಗಾಂಧೀಜಿ ಅಸ್ಪೃಶ್ಯರೆನಿಸಿಕೊಂಡವರಿಗೆ `ಹರಿಜನ’ ಎಂದು ಹೊಸ ನಾಮಕರಣ ಮಾಡಿದರು. ಹೀಗೆ ಮಾಡಿದರೆ ಅಸ್ಪೃಶ್ಯತೆ ನಿವಾರಣೆಯಾಗಬಲ್ಲದು ಎಂಬ ಆಸೆ ಅವರದಾಗಿತ್ತು. ಆದರಿಂದು ಹರಿಜನ ಎಂಬುದು ಒಂದು ಪ್ರತ್ಯೇಕ ವರ್ಗವಾಗಿ, ಹರಿಜನರೆಂದರೆ ಅಸ್ಪೃಶ್ಯರೆನಿಸಿಕೊಂಡವರು ಎಂಬ ಅದೇ ಅರ್ಥ ಮುಂದುವರೆದಿದೆ. ಆದರೆ ಡಾ. ಹೆಡಗೇವಾರ್ ಸಮಾಜದಲ್ಲಿದ್ದ ಮೇಲುಕೀಳು ಭಾವನೆಯನ್ನು ತೊಲಗಿಸಲು ನೀಡಿದ ಹೊಸ ಮಂತ್ರ – ನಾವೆಲ್ಲರೂ ಹಿಂದುಗಳು, ಹಿಂದು ಇದೇ ನಮ್ಮ ಗುರುತು, ಹಿಂದು ಇದೇ ನಮ್ಮ ಜಾತಿ, ಇದೇ ನಮ್ಮ ಧರ್ಮ. ಸಂಘದ ಶಾಖೆಗೆ ಬರುವ ತರುಣರು, ಬಾಲಕರು ಒಟ್ಟಿಗೆ ಆಟವಾಡುತ್ತಾರೆ, ಪರಸ್ಪರ ಸ್ಪರ್ಶಿಸದೇ ಆಟವಾಡಲು ಸಾಧ್ಯವಿಲ್ಲ. ಆಗ ಪರಸ್ಪರ ಆತ್ಮೀಯತೆ, ಸ್ನೇಹದಿಂದ ನಮ್ಮ ನಮ್ಮ ಜಾತಿ ಯಾವುದು ಎಂಬ ಅಂಶವೇ ಗೌಣವಾಗುತ್ತದೆ. ಶಾಖೆಗೆ ಯಾವುದೋ ಒಂದು ನಿರ್ದಿಷ್ಟ ಜಾತಿಯವರೇ ಬರಬೇಕೆಂದು ಹೆಡಗೇವಾರ್ ಹೇಳಲಿಲ್ಲ ಬದಲಿಗೆ ಯಾವ ಶಾಖೆಯೂ ಏಕಜಾತೀಯ ಶಾಖೆಯಾಗದಂತೆ ಅವರು ಆರಂಭದಿಂದಲೂ ಕಾಳಜಿವಹಿಸಿದ್ದರು. ಸಂಘದ ಬೈಠಕ್, ಶಿಬಿರಗಳಲ್ಲಿ ಎಲ್ಲರದೂ ಒಟ್ಟಿಗೇ ಊಟ, ಒಂದೊಂದು ದಿನ ಒಂದೊಂದು ತಂಡ ಬಡಿಸುವ ವ್ಯವಸ್ಥೆ, ಜೊತೆಗೆ ಪ್ರತಿಯೊಬ್ಬರ ಮನೆಗಳಿಂದ ತಂದ ಆಹಾರವನ್ನು ಎಲ್ಲರೂ ಹಂಚಿ ತಿನ್ನುವುದು – ಇಂತಹ ವಿಧಾನದಿಂದಾಗಿ ಜಾತಿಭೇದ ಕ್ರಮೇಣ ನಿವಾರಣೆಯಾಯಿತು. ಗಾಂಧೀಜಿ ಹಾಗೂ ಅಂಬೇಡ್ಕರ್ ಸಂಘದ ಶಿಬಿರಗಳಿಗೆ ಬಂದಾಗ, ಇಲ್ಲಿ ಅಸ್ಪೃಶ್ಯರು ಯಾರಿದ್ದಾರೆ ಎಂಬ ಪ್ರಶ್ನೆಗೆ, ಇಲ್ಲಿ ಅಸ್ಪೃಶ್ಯರು ಯಾರೂ ಇಲ್ಲ , ಇಲ್ಲಿರುವವರೆಲ್ಲ ಹಿಂದುಗಳು ಎಂಬ ಸಂಘದ ಪ್ರಮುಖರ ಉತ್ತರ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರಿಗೆ ಆಶ್ಚರ್ಯ ತಂದಿತಾದರೂ, ಇದರ ಸತ್ಯಾಸತ್ಯತೆಯನ್ನು ಅವರು ಪರೀಕ್ಷಿಸಿದಾಗ ಸಂಘದ ಶಿಬಿರಗಳಲ್ಲಿ ಅಸ್ಪೃಶ್ಯರೆನಿಸಿಕೊಂಡವರೂ ಕೂಡ ಭಾಗವಹಿಸಿದ್ದರು ಎಂಬ ಸಂಗತಿ ವೇದ್ಯವಾಗಿ ಅವರಿಗಾದ ಸಂತಸ ಅಷ್ಟಿಷ್ಟಲ್ಲ. ಡಾ. ಹೆಡಗೇವಾರ್ ಹಿಂದುಸಮಾಜದಲ್ಲಿ ಹೆಪ್ಪುಗಟ್ಟಿದ್ದ ಅಸ್ಪೃಶ್ಯತೆಯನ್ನು ಯಾವುದೇ ಘೋಷಣೆ, ಆಂದೋಲನ ಇಲ್ಲದೆ ಸದ್ದಿಲ್ಲದೆ ನಿವಾರಿಸಿದ್ದು ಹೀಗೆ. ಸಂಘದಲ್ಲಿ ಎಲ್ಲ ಜಾತಿಯ ವ್ಯಕ್ತಿಗಳು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತಿರುವುದು ಇದಕ್ಕೊಂದು ದೃಷ್ಟಾಂತ. ಅನೇಕ ಬಾರಿ ಪ್ರಮುಖ ಹುದ್ದೆಯಲ್ಲಿರುವವರ ಜಾತಿ ಯಾವುದೆಂಬುದು ತುಂಬಾ ಜನ ಕಾರ್ಯಕರ್ತರಿಗೆ ಗೊತ್ತೇ ಇಲ್ಲದಿರುವುದು ಇದೇ ಕಾರಣಕ್ಕಾಗಿ.

ನಿತ್ಯ ಶಾಖೆ, ಅದಾದ ಬಳಿಕ ನಡೆಯುವ ಅನೌಪಚಾರಿಕ ಮಿಲನ, ಬೈಠಕ್‌ಗಳ ಮೂಲಕ ಸಂಘದ ಸ್ವಯಂಸೇವಕರನ್ನು ರಾಷ್ಟ್ರ ನಿರ್ಮಿಸುವ ಧೀರಯೋಧರನ್ನಾಗಿ ಮಾಡಬಹುದು ಎಂದು ಡಾಕ್ಟರ್‌ಜೀ ತೋರಿಸಿಕೊಟ್ಟರು. ಸಂಘದ ಸ್ವಯಂಸೇವಕರಲ್ಲಿ ಈ ವಿಧಾನಗಳ ಮೂಲಕವೇ ಪರಸ್ಪರ ಆತ್ಮೀಯತೆ, ವಿಶ್ವಾಸ ನಿರ್ಮಾಣವಾಗಿ ನಾವೆಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು ಎಂಬ ಭಾವ ಹುಟ್ಟುತ್ತದೆ. ಡಾ. ಹೆಡಗೇವಾರ್ ತಮ್ಮ ಜೀವನದುದ್ದಕ್ಕೂ ತಮ್ಮ ಸುತ್ತಮುತ್ತ 14 ರಿಂದ 20 ವಯಸ್ಸಿನ ಎಳೆಯರ ಗುಂಪನ್ನು ಕೂಡಿಸಿಕೊಂಡು ತಮಾಷೆ, ಹಾಸ್ಯ, ಹರಟೆ ಹೊಡೆಯುತ್ತಲೇ ಆ ಎಳೆಯರಿಗೆ ಉಚಿತ-ಅನುಚಿತ ಸಂಗತಿಗಳ ಕುರಿತು ಯೋಚಿಸುವಂತೆ ಮಾಡಿದ್ದು, ಅವರಲ್ಲಿ ಉತ್ತಮ ಸಂಸ್ಕಾರ ಬಿತ್ತಿದ್ದು, ಅವರ ಧ್ಯೇಯನಿಷ್ಠೆಯ ಅಲುಗನ್ನು ಹರಿತಗೊಳಿಸಿದ್ದು, ಅವರಲ್ಲಿ ಪರಸ್ಪರ ಸ್ನೇಹದ ಬೆಸುಗೆ ಬೆಸೆದದ್ದು ಇಂತಹ ಬೈಠಕ್‌ಗಳ ಮೂಲಕವೇ. ಕೇಶವಕೃಪಾದಲ್ಲಿ ಬೈಠಕ್ ಮಾಡಿ, ಊಟ ಹೊಡೆದರೆ ದೇಶ ಉದ್ಧಾರವಾಗುತ್ತದೆಯೇ ಎಂದು ಬಿಸಿರಕ್ತದ ಅಂಕಣಕಾರರೊಬ್ಬರು ತಮ್ಮ ಅಂಕಣದಲ್ಲಿ ಹಿಂದೆ ಲೇವಡಿ ಮಾಡಿದ್ದರು. ಆದರೆ ಅಂತಹ ಬೈಠಕ್‌ಗಳಿಂದಲೇ ದಿನದಯಾಳಜೀ, ವಾಜಪೇಯಿ, ಆಡ್ವಾಣಿ, ಮುರಳಿಮನೋಹರ ಜೋಷಿ, ನರೇಂದ್ರಮೋದಿ ಮೊದಲಾದ ಪ್ರಮುಖ ರಾಜಕೀಯ ನಾಯಕರು ಸಿದ್ಧಗೊಂಡರು. ಕನ್ಯಾಕುಮಾರಿಯಲ್ಲಿ ಸಮುದ್ರದ ನಡುವೆ ಬಂಡೆಯ ಮೇಲೆ ಸ್ವಾಮಿ ವಿವೇಕಾನಂದರ ಭವ್ಯ ಶಿಲಾಸ್ಮಾರಕವನ್ನು ನಿರ್ಮಿಸಿದ ಸಾಹಸವಂತ ವ್ಯಕ್ತಿ ಏಕನಾಥ್‌ಜೀ ರಾನಡೆ ಕೂಡ ತಯಾರಾಗಿದ್ದು ಇಂತಹ ಬೈಠಕ್‌ಗಳಲ್ಲಿ ಗಂಟೆಗಟ್ಟಲೆ ಕುಳಿತು ಯೋಚಿಸಿದ್ದರಿಂದಲೇ ಎಂಬ ವಾಸ್ತವವನ್ನು ಮರೆಯುವುದು ಹೇಗೆ?

ಸಂಘದ ಅತ್ಯಂತ ವರಿಷ್ಠ ಸ್ಥಾನವಾಗಿದ್ದ ಸರಸಂಘಚಾಲಕ ಹುದ್ದೆಯಲ್ಲಿದ್ದರೂ ಡಾ. ಹೆಡಗೇವಾರ್ ತಾನೊಬ್ಬ ಪ್ರತಿಷ್ಠಿತ ವ್ಯಕ್ತಿ ಎಂದು ತೋರಿಸಿಕೊಂಡಿದ್ದೇ ಇಲ್ಲ. ಪದವಿ-ಪ್ರತಿಷ್ಠೆಗಳ ಬಯಕೆ ಅವರಿಗಿರಲಿಲ್ಲ. ಸಂಘವನ್ನು ಆರಂಭಿಸಿದ್ದು ಅವರೇ ಆದರೂ ತಾನೊಬ್ಬ ಸ್ವಯಂಸೇವಕ ಎಂಬ ಭಾವವೇ ಅವರಲ್ಲಿ ಕೊನೆಯವರೆಗೂ ಉಳಿದಿತ್ತು. ಯಾವುದೇ ಶಾಖೆಗೆ ಹೋದಾಗ, ಪೊರಕೆ ಹಿಡಿದು ಸಂಘಸ್ಥಾನವನ್ನು ಗುಡಿಸುವುದು , ಕಿರಿಯರು ಹಿರಿಯರೆನ್ನದೆ ಎಲ್ಲರೊಡನೆ ವಿನಯಪೂರ್ವಕವಾಗಿ ಕಲೆತು ಮಾತನಾಡುವುದು, ಕಾರ್ಯಾಲಯಕ್ಕೆ ಬಂದ ಪ್ರತಿಯೊಬ್ಬರನ್ನೂ ತಪ್ಪದೇ ಕುಶಲ ವಿಚಾರಿಸಿ ಸ್ನೇಹದಿಂದ ಮಾತನಾಡುವುದು ಹೆಡಗೇವಾರ್ ಅನುಸರಿಸಿದ ವರ್ತನೆಯಾಗಿತ್ತು. ಮಹತ್ವವಿರುವುದು ವ್ಯಕ್ತಿಗಲ್ಲ, ಸಂಘಕಾರ್ಯಕ್ಕೆ ಎಂಬ ಅಂಶ ಅವರ ಮನದಲ್ಲಿ ಶಾಶ್ವತವಾಗಿ ನೆಲೆಸಿತ್ತು. ಪ್ರಸಿದ್ಧಿ ಪರಾಙ್ಮುಖತೆಗೇ ಅವರು ಒತ್ತು ನೀಡಿದ್ದರಿಂದಾಗಿ ಈಗಲೂ ಅನೇಕರಿಗೆ ಆರೆಸ್ಸೆಸ್ ಗೊತ್ತಿದ್ದರೂ ಹೆಡಗೇವಾರ್ ಯಾರು, ಅವರ ಬದುಕಿನ ವಿವರಗಳೇನು ಎಂಬುದು ಅಷ್ಟಾಗಿ ತಿಳಿದಿಲ್ಲ.

ಡಾ. ಹೆಡಗೇವಾರ್ ಸಂಘ ಪ್ರಾರಂಭಿಸುವುದಕ್ಕಿಂತ ಮುಂಚೆ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು ಎಂಬ ಸಂಗತಿಯೂ ಕೆಲವರಿಗೆ ಅಚ್ಚರಿ ಮೂಡಿಸಬಹುದು. ಕಾಂಗ್ರೆಸ್‌ನಲ್ಲಿ ಕಾರ್ಯದರ್ಶಿ ಸ್ಥಾನವನ್ನೂ ಅವರು ಹೊಂದಿದ್ದರು. ಬ್ರಿಟಿಷರ ವಿರುದ್ಧ ಸತ್ಯಾಗ್ರಹದಲ್ಲೂ ಪಾಲ್ಗೊಂಡಿದ್ದರು. ಅಸಹಕಾರ ಆಂದೋಲನ ಸಂದರ್ಭದಲ್ಲಿ ಅವರು ಮಾಡಿದ ಭಾಷಣ ಅತ್ಯಂತ ಪ್ರಖರವಾಗಿತ್ತು. ಅದೇ ಕಾರಣಕ್ಕೆ ಅವರ ಬಂಧನವೂ ಆಗಿತ್ತು. ಕೋರ್ಟಿನಲ್ಲಿ ತನ್ನ ಆ ಭಾಷಣದ ಕುರಿತು ಸಮರ್ಥಿಸಿಕೊಂಡ ಡಾ. ಹೆಡಗೇವಾರರ ನುಡಿಗಳು ಇನ್ನಷ್ಟು ಜ್ವಲಂತ ಕೆಂಡದುಂಡೆಯಂತಿತ್ತು. ಅವರ ಸಮರ್ಥನಾ ಹೇಳಿಕೆಯನ್ನು ಕೇಳಿದ ಮ್ಯಾಜಿಸ್ಟ್ರೇಟರು `ಇವರ ಮೂಲ ಭಾಷಣಕ್ಕಿಂತಲೂ ಈ ಹೇಳಿಕೆಯೇ ಹೆಚ್ಚು ರಾಜದ್ರೋಹವಾಗಿದೆ’ (This Statement is more seditious than his speech) ಎಂದು ಉದ್ಗಾರವೆತ್ತಿದ್ದರು! ಆದರೆ ಕಾಂಗ್ರೆಸ್‌ನಂತಹ ಸೀಮಿತ ಉzಶದ ಸಂಸ್ಥೆಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ ಎಂಬುದನ್ನು ಡಾಕ್ಟರ್‌ಜೀ ಆಗಲೇ ಅರಿತುಕೊಂಡಿದ್ದರು. ಸಮಗ್ರ ಸಮಾಜದ ಏಕತೆಗೆ ಸಂಘ ಸ್ಥಾಪನೆಯೊಂದೇ ದಿವ್ಯ ಔಷಧ ಎಂದು ಭಾವಿಸಿದ ಅವರು ಸಂಘವನ್ನು ಸ್ಥಾಪಿಸಿದ್ದರು. ಸಂಘ ಪ್ರಾರಂಭವಾಗಿ 89 ದೀರ್ಘ ವರ್ಷಗಳ ಬಳಿಕ ಈಗ ಹಿಂತಿರುಗಿ ನೋಡಿದರೆ, ಸಂಘ ಸ್ಥಾಪನೆ ಒಂದು ವೇಳೆ ಆಗದೇ ಇದ್ದಿದ್ದರೆ ದೇಶ ಹೇಗಿರುತ್ತಿತ್ತು ಎಂಬ ಪ್ರಶ್ನೆ ಹಾಕಿಕೊಂಡರೆ ಸಂತಸ, ಸಮಾಧಾನ ಪಡುವಂತಹ ದಿನಗಳಂತೂ ಈಗಿರುತ್ತಿರಲಿಲ್ಲವೆನಿಸುತ್ತದೆ.

ಸಂಘದ ಸರಸಂಘಚಾಲಕರಾಗಿದ್ದರೂ, ದೇಶ ಕಾರ್ಯಕ್ಕಾಗಿ ಶ್ರಮಿಸುತ್ತಿದ್ದ ಹಲವು ಗಣ್ಯರ ಸಂಪರ್ಕ ಹೆಡಗೇವಾರ್ ಅವರಿಗಿದ್ದಿದ್ದು ಅವರ ಪ್ರಭಾವಕ್ಕೆ ನಿದರ್ಶನ. ೧೯೨೮ರಲ್ಲಿ ಕಲ್ಕತ್ತೆಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ ಅವರ ಮತ್ತು ನೇತಾಜಿ ಸುಭಾಷ್‌ಚಂದ್ರ ಬೋಸರ ಭೇಟಿಯಾಗಿತ್ತು. ಡಾಕ್ಟರ್‌ಜೀ ಅವರ ಹಿಂದು ಸಂಘಟನೆಯ ಕಲ್ಪನೆ ನೇತಾಜಿಯವರಿಗೆ ಮೆಚ್ಚುಗೆಯಾಗಿತ್ತು. ಅದಾದ ಬಳಿಕ ಎರಡು ಬಾರಿ ಹೆಡಗೇವಾರ್ ಅವರನ್ನು ಭೇಟಿ ಮಾಡಲು ನೇತಾಜಿ ಬಂದಿದ್ದರು. ತೀವ್ರ ಅನಾರೋಗ್ಯವಿದ್ದುದರಿಂದ ಡಾಕ್ಟರ್‌ಜೀ ಹಾಗೂ ಅವರ ಮುಖಾಮುಖಿ ನಡೆಯಲಿಲ್ಲ. ಹುತಾತ್ಮ ಭಗತ್ ಸಿಂಹನೂ ಡಾಕ್ಟರ್‌ಜೀಯವರನ್ನು ಭೇಟಿಯಾಗಿದ್ದ. ಆತನ ಸಹಕಾರಿ ರಾಜಗುರುವಿಗೆ ಡಾಕ್ಟರ್‌ಜೀಯವರೇ ಉಮರೇಡಿನ ಭಯ್ಯಾಜಿ ದಾಣಿಯವರ ಮನೆಯಲ್ಲಿ ಅಜ್ಞಾತವಾಸದಲ್ಲಿರಲು ವ್ಯವಸ್ಥೆ ಮಾಡಿದ್ದರು. ಅರವಿಂದ ಘೋಷ್, ಲೋಕಮಾನ್ಯ ತಿಲಕ್ ಮೊದಲಾದವರ ಸಂಪರ್ಕವೂ ಅವರಿಗಿತ್ತು.

ದೇಶ, ವಿದೇಶಗಳಲ್ಲಿ ಜಾಗತಿಕ ಮಟ್ಟದಲ್ಲಿ ಇಂದು ಜನಪ್ರಿಯತೆ ಪಡೆದಿರುವ, ಮಾಧ್ಯಮಗಳಲ್ಲಿ ಪ್ರತಿನಿತ್ಯ ವಿವಿಧ ಕಾರಣಗಳಿಗಾಗಿ ಒಂದಲ್ಲ ಒಂದು ಸುದ್ದಿಗೆ ಗ್ರಾಸವಾಗಿರುವ ಆರೆಸ್ಸೆಸ್‌ನ ಮೂಲಚಿಂತನೆಗಳು ಹಾಗೂ ಈ ಸಂಸ್ಥೆಯನ್ನು ಸ್ಥಾಪಿಸಿದ ಡಾ.ಹೆಡಗೇವಾರ್ ಅವರ ವ್ಯಕ್ತಿತ್ವದ ಕುರಿತು ಸ್ವಯಂಸೇವಕರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ವಾಸ್ತವ ಅಂಶಗಳನ್ನು ತಿಳಿದುಕೊಳ್ಳುವ ಅಗತ್ಯವಿದೆ. ಚುನಾವಣೆ ವೇಳೆ ಸಂಘ ಕಾರ್ಯಾಲಯಕ್ಕೆ ಎಡತಾಕಿ ಡಾಕ್ಟರ್‌ಜೀ ಅವರ ಭಾವಚಿತ್ರಕ್ಕೆ ದೀಡು ನಮಸ್ಕಾರ ಸಲ್ಲಿಸುವ ಮಹನೀಯರೂ ಹೆಡಗೇವಾರರ ಜೀವನಚರಿತ್ರೆಯನ್ನು ಸಂಕ್ಷಿಪ್ತವಾಗಿಯಾದರೂ ಓದುವ ಅಗತ್ಯವಿದೆ. ಸಂಘವೆಂದರೆ ಏನು ಎಂಬುದು ಅರ್ಥವಾಗುವುದು ಆಗ ಮಾತ್ರ ಸಾಧ್ಯ. ಸಂಘವೆಂದರೆ ಏನಲ್ಲ ಎಂಬುದರ ಅರಿವಿಗೂ ಇದೇ ಹೋಂವರ್ಕ್ ಅನಿವಾರ್ಯ. ಹೆಡಗೇವಾರ್ ಜನ್ಮದಿನವಾದ ಈ ವರ್ಷಪ್ರತಿಪದ (ಯುಗಾದಿ)ದಿನದಂದು ಇಷ್ಟಾದರೂ ಮಾಡಿದಲ್ಲಿ ಅವರ ಚಿಂತನೆಗಳ ಪ್ರಸ್ತುತತೆಗೆ ಕಾವು ಕೊಟ್ಟಂತಾಗಬಹುದು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top