ಬೆಳ್ತಂಗಡಿ : ನೀರಿನ ಕೊರತೆಯನ್ನು ಗಮನಿಸಿ ಅನಧಿಕೃತ ನೀರು ಬಳಕೆ ನಿಷೇಧಿಸಲು ತಾಲೂಕಿನ ಮಾಲಾಡಿ ಗ್ರಾಮ ಪಂಚಾಯಿತಿ ಸಮಿತಿ ರಚನೆ ಮಾಡಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಬವಣೆಯಿದ್ದು, ಇದನ್ನು ನೀಗಿಸಲು ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಸೋಣಂದೂರು, ಪುರಿಯ, ಸುತ್ತಮುತ್ತ ಕೆಲವೆಡೆ ನೀರಿನ ಸಮಸ್ಯೆ ಕಾಡಿದ್ದು, ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಂಡಿದೆ.
ಕಳೆದ ಐದು ವರ್ಷಗಳಿಂದ ನನೆಗುದಿಗೆ ಬಿದ್ದು, ಮುಗಿಯದ ಪುರಿಯ ಟ್ಯಾಂಕ್ ಕಾಮಗಾರಿಗೆ ಮತ್ತೆ ಚಾಲನೆ ದೊರೆತಿದೆ. ಪುರಿಯ ಟ್ಯಾಂಕಿ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಟ್ಯಾಂಕಿಯಿಂದ ನೀರಿನ ಸಂಪರ್ಕ ಕೊಡುವುದು ಬಾಕಿ ಉಳಿದಿದೆ. ಈ ನಿಟ್ಟಿನಲ್ಲಿ ಕೆಲಸಗಳು ಭರದಿಂದ ಸಾಗಿವೆ. ನೀರಿನ ತತ್ವಾರ ಎದುರಿಸುತ್ತಿರುವ ಉರ್ಲ, ಪುರಿಯ, ಪೇರಡೆ ಊರ ಜನರಿಗೆ ನೀರಿನ ಸಂಪರ್ಕ ದೊರೆಯಲಿದೆ.
ನೀರಿನ ಹಾಹಾಕಾರ ಹೆಚ್ಚಾಗುತ್ತಿದ್ದದ್ದನ್ನು ಗಮನಿಸಿ ಮಾಲಾಡಿ ಪಂಚಾಯತ್ ಸಮೀಪ ಪಾಳುಬಿದ್ದಂತ್ತಿದ್ದ ಟ್ಯಾಂಕಿ ದುರಸ್ತಿ ಕಾರ್ಯಕ್ಕೂ ಚಾಲನೆ ನೀಡಿದೆ. ಪಂಪ್ಗೆ ವಿದ್ಯುತ್ ಪೂರೈಕೆ ಹಾಗೂ ಅಂತಿಮ ಹಂತದ ಕಾಮಗಾರಿ ಬಾಕಿ ಇದ್ದು, ಅಧಿಕಾರಿಗಳು ಮುತುವರ್ಜಿ ವಹಿಸಿ ಶೀಘ್ರ ಕೆಲಸ ಮಗಿಸಿದಲ್ಲಿ ನೀರು ಸರಬರಾಜು ವ್ಯವಸ್ಥೆ ಕಲ್ಪಿಸಬಹುದಾಗಿದೆ. ಕಳೆದ ಕೆಲ ವರ್ಷಗಳಿಂದ ಈ ಬಗ್ಗೆ ಮಾತುಕತೆ ನಡೆಯುತ್ತಿದೆಯಾದರೂ ಇನ್ನೂ ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ.
ಈಗಾಗಲೇ ಅನಧಿಕೃತ ನೀರು ಬಳಕೆ, ತೋಟಕ್ಕೆ ನೀರು ಹಾಯಿಸುವಿಕೆ ನಿಷೇಧಿಸುವಂತೆ ಪಂಚಾಯಿತಿ ಸಮಿತಿಗಳನ್ನು ರಚಿಸಿದೆ. ಸೋಣಂದೂರು ಭಾಗದಲ್ಲಿ ಹಾಗೂ ಮಾಲಾಡಿ ಪಂಚಾಯಿತಿ ವ್ಯಾಪ್ತಿಯ ಎಲ್ಲೆಡೆ ಸಮಿತಿಗಳನ್ನು ರಚಿಸಿ ಅನಧಿಕೃತ ನೀರು ಬಳಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಕುಡಿಯಲು ಯೋಗ್ಯ ನೀರನ್ನು ತೋಟಕ್ಕೆ ಹಾಯಿಸದಂತೆ ಸಮಿತಿಗಳ ಮೂಲಕ ಸೂಚಿಸಲಾಗುತ್ತಿದೆ.
ನೀರಿನ ಸಮಸ್ಯೆ ನಿವಾರಿಸಲು ಮಡಂತ್ಯಾರು ಆಶೀರ್ವಾದ ಹಾಲ್ ಬಳಿ ಹಾಗೂ ಮಾಲಾಡಿ ಗ್ರಾಮ ಪಂಚಾಯಿತಿ ಪಕ್ಕದ ಶಾಲೆಯ ಹತ್ತಿರ ಎರಡು ಕೊಳವೆ ಬಾವಿ ಕೊರೆಸುವ ಬಗ್ಗೆ ಕಾರ್ಯ ಪ್ರವೃತ್ತವಾಗಿದೆ. ನೀರಿನ ಸಮಸ್ಯೆ ಕಾಡದಿರಲು ಮಾಲಾಡಿ ಗ್ರಾ.ಪಂ. ಭರದಿಂದ ಕಾಮಗಾರಿಗಳಿಗೆ ಚಾಲನೆ ನೀಡಿದೆ.
ಸದಸ್ಯರ ಬೆಂಬಲದಿಂದ ನೀರಿನ ಸಮಸ್ಯೆ ನಿವಾರಿಸಲು ಕಟ್ಟಿನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ. ಅನಕೃತ ನೀರಿನ ಬಳಕೆ ಮಾಡುವವರ ವಿರುದ್ಧ ಕ್ರಮ, ಅಲ್ಲಲ್ಲಿ ಸಮಿತಿ ರಚಿಸಿ ನೀರು ಪೋಲಾಗದಂತೆ ನಿಗಾ ವಹಿಸುತ್ತಿದ್ದೇವೆ. ಗ್ರಾಪಂ ವ್ಯಾಪ್ತಿಯ ಎಲ್ಲ ಟ್ಯಾಂಕಿಗಳ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದ್ದು ಅಂತಿಮ ಹಂತದ ಕಾಮಗಾರಿಗಳು ನಡೆಯುತ್ತಿದೆ. – ಎಸ್. ಬೇಬಿ ಸುವರ್ಣ, ಮಾಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.