ಮಂಗಳೂರು : ಶ್ರೀ ಮಂಗಳಾದೇವಿ ಕ್ರಿಯೇಷನ್ಸ್, ಕುಡ್ಲ ಇವರ ಚೊಚ್ಚಲ ತುಳು ಚಿತ್ರ “ಬೊಳ್ಳಿಲು” ಮಂಗಳೂರು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಎ. 29 ರಂದು ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕ ಶರತ್ಚಂದ್ರ ಕುಮಾರ್, ಕದ್ರಿ ತಿಳಿಸಿದ್ದಾರೆ.
ಚಿತ್ರದ ಬಿಡುಗಡೆ ಸಮಾರಂಭದ ಕುರಿತು ನಗರದ ಮಲ್ಲಿಕಟ್ಟೆಯ ‘ಸುಮ ಸದನ’ದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಚಿತ್ರವು ಹೊಸ ಹಾಗೂ ಪ್ರಬುದ್ಧ ಕಲಾವಿದರನ್ನು ಹೊಂದಿದ್ದು, ಉತ್ತಮ ಕಥೆ ಹಾಗೂ ಮನೋರಂಜನೆಯನ್ನು ಹೊಸ ಶೈಲಿಯಲ್ಲಿ ಚಿತ್ರ ಪ್ರೇಮಿಗಳಿಗೆ ನೀಡಿದ್ದೇವೆ ಎಂದು ಹೇಳಿದರು.
ತುಳು ಚಿತ್ರಗಳು ಎಷ್ಟೇ ಬಂದರೂ ಪ್ರೇಕ್ಷಕರಿಗೆ ಮನರಂಜನೆ ಕಡಿಮೆಯಾಗುವುದಿಲ್ಲ.“ಬೊಳ್ಳಿಲು” ಕಾದಂಬರಿಯನ್ನು ಆಧಾರಿಸಿ ಮಾಡಿದ ಚಿತ್ರವಾದುದರಿಂದ ಇಲ್ಲಿ ವಿಶೇಷ ಕಥೆಯೊಂದಿಗೆ ಚೆನ್ನಾಗಿ ಮೂಡಿಬಂದಿದೆ ಎಂದು ಚಿತ್ರದ ನಿರ್ಮಾಪಕ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಮಿತ್ರ ಹೆರಾಜೆ ಹೇಳಿದರು.
ಚಿತ್ರದ ಕಲಾವಿದ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ವಿಶ್ವನಾಥ್ ಪಂಡಿತ್ ಮಾತನಾಡಿ ತುಳುವಿನಲ್ಲಿ ಎಷ್ಟೇ ಚಿತ್ರಗಳು ಬಂದರೂ ಹೊಸತನವೆಂಬುದು ಇದ್ದೇ ಇರುತ್ತದೆ. .“ಬೊಳ್ಳಿಲು” ವಿಶೇಷ ರೀತಿಯಲ್ಲಿ ಮೂಡಿ ಬಂದಿದ್ದು ಹೊಸತನದೊಂದಿಗೆ ಹೊಸ ಕಲಾವಿದರ ಪ್ರಯತ್ನವನ್ನು ತುಳುವರು ಪ್ರೋತ್ಸಾಹಿಸ ಬೇಕೆಂದು ವಿನಂತಿಸಿದರು.
ನಾಯಕ ನಟ ಶ್ರವಣ್ ಕುಮಾರ್ ಹಾಗೂ ನಟಿ ಸೌಜನ್ಯ ಹಗ್ಡೆ ಮಾತನಾಡಿ ತುಳು ಸಿನಿಮಾ ರಂಗ ಇಂದು ಈ ಮಟ್ಟಕ್ಕೆ ಬೆಳೆಯಲು ತುಳು ಚಿತ್ರ ಪ್ರೇಮಿಗಳ ಪ್ರೋತ್ಸಹವೇ ಕಾರಣ, ನಮ್ಮ ಚಿತ್ರಕ್ಕೂ ನೀವು ಆರ್ಶೀವದಿಸಿ ಎಂದು ಕೇಳಿಕೊಂಡರು.
ಪತ್ರಿಕಾಗೋಷ್ಟಿಯಲ್ಲಿ ಲಯನ್ ಸದಾಶಿವ ಹೆಗ್ಡೆ, ಶಶಿಕಲಾ ರಾಜಶೇಖರ್, ಶಕೀಲಾ ಶರತ್ ಮೊದಲಾದವರು ಉಪಸ್ಥಿತರಿದ್ದರು.