ದಕ್ಷಿಣ ಕೊರಿಯಾದ ಇಂಚೆನ್‌ನಲ್ಲಿ ನಡೆದ 17ನೇ ಏಷ್ಯನ್ ಕ್ರೀಡಾಕೂಟ ಭಾರತದ ಪಾಲಿಗೆ ಒಂದಿಷ್ಟು ಸಿಹಿ, ಮತ್ತೆ ಒಂದಿಷ್ಟು ಕಹಿ. ಒಟ್ಟಾರೆ ಗಳಿಸಿದ ಪದಕಗಳಿಗೆ ಹೋಲಿಸಿದರೆ, ಭಾರತ 2010 ರ ಏಷ್ಯನ್ ಕ್ರೀಡಾಕೂಟಕ್ಕಿಂತ ಹೆಚ್ಚು ಪದಕಗಳನ್ನು ಗೆಲ್ಲಲಿಲ್ಲ. ಆದರೆ ಕೆಲವು ಸಕಾರಾತ್ಮಕ ಅಂಶಗಳು ಇಂಚೆನ್‌ನಲ್ಲಿ ಹೊರಹೊಮ್ಮಿವೆ. ಸತತ 3ನೇ ವರ್ಷ ಪದಕ ಗಳಿಕೆಯಲ್ಲಿ `ಅರ್ಧ ಶತಕ’ ಬಾರಿಸಿದೆ. 2006ರ ದೋಹಾ ಕೂಟದಲ್ಲಿ 53 ಮತ್ತು 2010 ರ ಗುವಾಂಗ್ ಜೌ ಕೂಟದಲ್ಲಿ ಭಾರತಕ್ಕೆ 65 ಪದಕಗಳು ಲಭಿಸಿದ್ದರೆ ಈ ಬಾರಿ ಲಭಿಸಿದ ಒಟ್ಟು ಪದಕಗಳ ಸಂಖ್ಯೆ 57. ವಿಶೇಷವಾಗಿ ಸ್ಕ್ವಾಷ್‌ನಲ್ಲಿ ಚಿನ್ನದ ಪದಕ ಗಳಿಸಿದ್ದು ಈ ಬಾರಿಯ ವಿಶೇಷತೆ. ಆದರೆ ಕಾಮನ್‌ವೆಲ್ತ್ ಕೂಟದಲ್ಲಿ ಬಂಗಾರ ಗೆದ್ದಿದ್ದ ಕರ್ನಾಟಕದ ವಿಕಾಸ್ ಗೌಡ ಇಂಚೆನ್‌ನಲ್ಲಿ ಚಿನ್ನ ಗೆಲ್ಲುವ ಭರವಸೆ ಹುಸಿಯಾಯಿತು. ಆತ ಬೆಳ್ಳಿಗಷ್ಟೇ ತೃಪ್ತಿ ಪಡಬೇಕಾಯಿತು. ಹಾಕಿ ಮತ್ತು ಕಬಡ್ಡಿ ಯಲ್ಲಿ ಮಾತ್ರ ಭಾರತದ್ದೇ ಪಾರುಪತ್ಯ. ಒಟ್ಟಾರೆ 11 ಚಿನ್ನ 10 ಬೆಳ್ಳಿ ಹಾಗೂ 36 ಕಂಚು ಪದಕಗಳೊಂದಿಗೆ ಭಾರತ ತವರಿಗೆ ಮರಳಿದೆ. ಪದಕ ಪಟ್ಟಿಯಲ್ಲಿ 8 ನೇ ಸ್ಥಾನ ಪಡೆದಿದೆ. ಕೇವಲ 17 ಕೋಟಿ ಜನಸಂಖ್ಯೆ ಹೊಂದಿರುವ ಕಝಕಸ್ಥಾನಕ್ಕೆ 28 ಚಿನ್ನ 23 ಬೆಳ್ಳಿ, 33 ಕಂಚು – ಒಟ್ಟು 84 ಪದಕಗಳು. ಅದೆ ರೀತಿ ಭಾರತಕ್ಕಿಂತಲೂ ಕಡಿಮೆ ಜನಸಂಖ್ಯೆ ಹೊಂದಿರುವ ಕೊರಿಯಾ, ಜಪಾನ್, ಇರಾನ್, ಥೈಲಾಂಡ್‌ಗಳು ಈ ಬಾರಿ ಪದಕ ಪಟ್ಟಿಯಲ್ಲಿ ಕ್ರಮವಾಗಿ 2, 3, 5 ಹಾಗೂ 6ನೇ ಸ್ಥಾನ ಪಡೆದು ಭಾರತವನ್ನು ಹಿಂದಿಕ್ಕಿರುವುದು ಗಮನಾರ್ಹ ಸಂಗತಿ. ಆ ದೇಶಗಳಿಗೆ ಸಾಧ್ಯವಾಗುವ ಪದಕಗಳನ್ನು ಕೊಳ್ಳೆ ಹೊಡೆಯುವ ತಾಕತ್ತು ಭಾರತಕ್ಕೇಕೆ ಸಾಧ್ಯವಿಲ್ಲ?
ಇನ್ನು ಭಾರತಕ್ಕಿಂತ ಜನಸಂಖ್ಯೆಯಲ್ಲಿ ಮುಂದಿರುವ ಚೀನಾ ದೇಶದ ತಾಕತ್ತಿನ ಬಗ್ಗೆ ಕೇಳುವುದೇ ಬೇಡ. ಅದು ಒಲಂಪಿಕ್ ಇರಲಿ, ಏಷ್ಯನ್ ಕ್ರೀಡಾಕೂಟ ಇರಲಿ ಆ ದೇಶ ಮುಂಚೂಣಿಯಲ್ಲೇ ಇರುತ್ತದೆ. ಈ ಬಾರಿ ಚೀನಾ ಪಡೆದಿರುವ ಪದಕಗಳು ಗಾಬರಿ ಹುಟ್ಟಿಸುವಂತಿವೆ. 151 ಚಿನ್ನ, 108 ಬೆಳ್ಳಿ, 83 ಕಂಚು – ಒಟ್ಟು 342 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಚೀನಾದ್ದು ಅಗ್ರಸ್ಥಾನ. ಉಳಿದ ಯಾವ ದೇಶಗಳೂ ಅದರ ಸಮೀಪಕ್ಕೂ ಸುಳಿದಿಲ್ಲ. ಚೀನಾ ಪಡೆದಷ್ಟು ಕಂಚಿನ ಪದಕಗಳು ಭಾರತ ತನ್ನ ಒಟ್ಟು ಪದಕ ಪಟ್ಟಿಯಲ್ಲೂ ಗಳಿಸಿಲ್ಲ. ಖತಾರ್, ಉಜ್‌ಬೇಕಿಸ್ಥಾನ್, ಮಲೇಶಿಯಾ, ಸಿಂಗಾಪುರ್‌ನಂತಹ ಸಣ್ಣ ಪುಟ್ಟ ದೇಶಗಳೂ ಕೂಡ ಎರಡಂಕಿಯ ಚಿನ್ನದ ಪದಕಗಳನ್ನು ಈ ಬಾರಿ ಬಾಚಿಕೊಂಡಿವೆ. ಆ ದೇಶಗಳ ಸಾಧನೆಗೆ ಹೋಲಿಸಿದರೆ ಭಾರತದ್ದು ಕಳಪೆಯೇ
ಭಾರತ ಚೀನಾದಂತೆ ಕ್ರೀಡಾಕೂಟದಲ್ಲಿ ಹೆಚ್ಚು ಹೆಚ್ಚು ಪದಕಗಳನ್ನು ಗೆಲ್ಲಲು ಏಕೆ ಸಾಧ್ಯವಾಗುತ್ತಿಲ್ಲ? ಏಕೆಂದರೆ ಭಾರತದಲ್ಲಿ ಎಲ್ಲರ ಮನೆಯಲ್ಲೂ ಸಾಕಷ್ಟು ಚಿನ್ನವಿದೆ. ಅದೂ ಅಲ್ಲದೆ ದುಬೈ, ಸೌದಿಗಳಿಗೆ ಹೋದವರು ಸಾಕಷ್ಟು ಚಿನ್ನವನ್ನು ಜೊತೆಗೆ ತರುತ್ತಾರೆ. ಹಾಗಿರುವಾಗ ನಮಗೆ ಇನ್ನೇಕೆ ಚಿನ್ನದ ಪದಕಗಳು ಎಂದು ತಮಾಷೆಯಾಗಿ ಉತ್ತರಿಸುವವರೂ ಇದ್ದಾರೆ. ಅದೇನಿದ್ದರೂ ತಮಾಷೆಗೆ ಸೀಮಿತ. ಆದರೆ ಭಾರತವೂ ಸೇರಿದಂತೆ ಉಳಿದ ದೇಶಗಳಲ್ಲಿಲ್ಲದ ಅಗಾಧ ಕ್ರೀಡಾ ಸಾಮರ್ಥ್ಯ ಬೆಳೆಸಿಕೊಳ್ಳಲು ಚೀನಾಕ್ಕೆ ಹೇಗೆ ಸಾಧ್ಯವಾಯಿತು ಎಂಬ ಪ್ರಶ್ನೆ ಅತ್ಯಂತ ಪ್ರಸ್ತುತ ಹಾಗೂ ಚರ್ಚಾರ್ಹ.
ಚೀನಾ ಹೇಳಿ ಕೇಳಿ ಕಮ್ಯುನಿಸ್ಟ್ ದೇಶ. ಅಲ್ಲಿರುವುದು ಸರ್ವಾಧಿಕಾರದ ಆಡಳಿತ. ಸಮಾನತೆಯ ಹೆಸರಲ್ಲಿ ಎಲ್ಲರ ಮೇಲೂ ದಬ್ಬಾಳಿಕೆಯ ಆಡಳಿತ ನಡೆಸಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ ಅಂತಹದೊಂದು ದೇಶದಲ್ಲಿ ಎಲ್ಲ ಬಗೆಯ ಕ್ರೀಡೆಗಳಲ್ಲೂ ಜಾಗತಿಕ ಮಟ್ಟದ ಸಾಧಕರನ್ನು ಸೃಷ್ಟಿಸಲು ಅದಕ್ಕೆ ಹೇಗೆ ಸಾಧ್ಯವಾಗಿದೆ? 1949 ರಿಂದ ಚೀನಾ 8 ಬೇಸಿಗೆ ಕಾಲದ ಒಲಂಪಿಕ್ಸ್ ಮತ್ತು 9 ಚಳಿಗಾಲದ ಒಲಂಪಿಕ್ಸ್ ಕೂಟಗಳಲ್ಲಿ ಭಾಗವಹಿಸಿದೆ. ಬೇಸಿಗೆ ಒಲಂಪಿಕ್ಸ್‌ನಲ್ಲಿ 385 ಪದಕ ಹಾಗೂ ಚಳಿಗಾಲದ ಒಲಂಪಿಕ್ಸ್ ಕೂಟದಲ್ಲಿ 44 ಪದಕಗಳನ್ನು ಗಳಿಸಿದೆ. ಲಾಸ್‌ಏಂಜಲೀಸ್, ಬಾರ್ಸೆಲೋನಾ ಮತ್ತು ಆಟ್ಲಾಂಟಾ ಒಲಂಪಿಕ್ಸ್‌ಗಳಲ್ಲಿ ಪದಕ ಪಟ್ಟಿಯಲ್ಲಿ ಚೀನಾ 4 ನೇ ಸ್ಥಾನಕ್ಕೇರಿದ್ದರೆ ಅಥೆನ್ಸ್ ಒಲಪಿಂಕ್ಸ್‌ನಲ್ಲಿ 2 ನೇ ಸ್ಥಾನ ಹಾಗೂ ಬೀಜಿಂಗ್ ಒಲಪಿಂಕ್ಸ್‌ನಲ್ಲಿ ಮೊದಲನೇ ಸ್ಥಾನಕ್ಕೆ ಜಿಗಿಯಿತು. ಇದು ಚೀನಾದ ನಿರಂತರ ಸಾಧನೆಗೆ ಹಿಡಿದ ಕನ್ನಡಿ.
ಬ್ಯಾಡ್ಮಿಂಟನ್, ಬೇಸ್‌ಬಾಲ್, ಬಾಸ್ಕೆಟ್ ಬಾಲ್, ಬಾಕ್ಸಿಂಗ್, ಚೆಸ್, ವಾಲಿಬಾಲ್, ಕರ್ಲಿಂಗ್, ಫುಟ್ಬಾಲ್, ಮೋಟಾರ್ ರೇಸಿಂಗ್, ಸ್ನೂಕರ್, ಪಿಂಗ್‌ಪಾಂಗ್, ಟೆನ್ನಿಸ್,ಜಿಮ್ನಾಶಿಯಮ್, ಸ್ವಿಮಿಂಗ್, ಶೂಟಿಂಗ್… ಹೀಗೆ ಚೀನಾ ಇಂದು ಹಲವಾರು ಬಗೆಯ ಕ್ರೀಡೆಗಳಲ್ಲಿ ಮುಂಚೂಣಿ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆದರೆ ಇಂತಹ ಒಂದೊಂದು ಕ್ರೀಡೆಯಲ್ಲೂ ಅಗ್ರಸ್ಥಾನ ಪಡೆಯಲು ಅದು ತುಳಿದ ಹಾದಿ ಮಾತ್ರ ಹೂವಿನ ಹಾಸಿಗೆಯಾಗಿರಲಿಲ್ಲ. ಕರ್ಲಿಂಗ್ ಎಂಬ ಕ್ರೀಡೆಯ ಹೆಸರನ್ನು ಭಾರತ ಜನತೆ ಹೇಗೆ ಅಷ್ಟಾಗಿ ಕೇಳಿಲ್ಲವೋ ಚೀನಾದ ಜನರೂ ಕೇಳಿಲ್ಲ. ಆದರೆ ಇಂದು ಚೀನಾದಲ್ಲಿ ಕರ್ಲಿಂಗ್ ಕ್ರೀಡೆಯಲ್ಲಿ ಪುರುಷರ ಹಾಗೂ ಮಹಿಳೆಯರ ಪ್ರಬಲ ತಂಡಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಯಾರಾಗಿವೆ. 2008 ರ ಫೋರ್ಡ್ ವಿಶ್ವ ಮಹಿಳೆಯರ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಚೀನಾ ತಂಡ ಆಶ್ಚರ್ಯಕರವಾಗಿ ಬೆಳ್ಳಿ ಪದಕ ಗೆದ್ದಿತ್ತು. 2009 ರ ಮಾರ್ಚ್‌ನಲ್ಲಿ ಚೀನಾ ತಂಡ ಸ್ವೀಡನ್ ತಂಡವನ್ನು ಫೈನಲ್ ಪಂದ್ಯದಲ್ಲಿ ಸೋಲಿಸಿ ಏಷ್ಯಾದ ಮೊಟ್ಟಮೊದಲ ಕರ್ಲಿಂಗ್ ಚಾಂಪಿಯನ್‌ಶಿಪ್ ಪದಕ ಗಿಟ್ಟಿಸಿತು. 2010 ರ ಚಳಿಗಾಲದ ಒಲಂಪಿಕ್ಸ್‌ನಲ್ಲಿ ಮಹಿಳಾ ತಂಡ ಸ್ವಿಜರ್ಲೆಂಡ್ ತಂಡವನ್ನು ಸೋಲಿಸಿ ಕಂಚಿನ ಪದಕ ಪಡೆಯಿತು. ಇಷ್ಟೆಲ್ಲ ಆಗಲು ಅದು ಸತತ ಪರಿಶ್ರಮ ಪಟ್ಟಿತ್ತು ಎಂಬುದು ಕೂಡ ಅಷ್ಟೇ ಮುಖ್ಯವಾದುದು.
ಸ್ವಿಮಿಂಗ್ ಇರಲಿ, ಶೂಟಿಂಗ್ ಇರಲಿ, ಬಾಕ್ಸಿಂಗ್ ಇರಲಿ ಚೀನಾ ಅಗ್ರಸ್ಥಾನಕ್ಕೇರಿರುವುದು ಯಾವುದೇ ಮ್ಯಾಜಿಕ್‌ನಿಂದಲ್ಲ. ವ್ಯವಸ್ಥಿತ ಯೋಜನೆ ಹಾಗೂ ಕ್ರಮಬದ್ಧ ಪ್ರಯತ್ನಗಳಿಂದ. ಜಾಗತಿಕ ಮಟ್ಟದ ಕ್ರೀಡಾಳುಗಳ ತಯಾರಿಗೆ ಚೀನಾ ಸರ್ಕಾರ ಹರಿಸಿದಷ್ಟು ಗಮನವನ್ನು ಭಾರತ ಖಂಡಿತ ಹರಿಸಿಲ್ಲ. ಚೀನಾದಲ್ಲಿ ಸರ್ಕಾರದ ಪ್ರೋತ್ಸಾಹದ ಜೊತೆಗೆ ಖಾಸಗಿ ಸಂಸ್ಥೆಗಳ ಸಹಭಾಗಿತ್ವ ಹಾಗೂ ಉತ್ತೇಜನವೂ ಕ್ರೀಡೆಗಳ ಪ್ರಗತಿಗೆ ನೆರವಾಗಿದೆ. ಅಲ್ಲದೆ ಚೀನಾ ಸರ್ಕಾರ ರಾಷ್ಟ್ರಾದ್ಯಂತ ಶಾರೀರಿಕ ಸದೃಢತೆ ಕಾರ್ಯಕ್ರಮ (Physical Fitness Programme) ಕ್ಕೆ ತುಂಬಾ ಮಹತ್ವ ನೀಡಿದೆ. 7 ರಿಂದ 70 ವಯಸ್ಸಿನ ಜನರಲ್ಲಿ ಶೇ. 33.9 ಮಂದಿ ಪ್ರತಿನಿತ್ಯ ನಿಯಮಿತವಾಗಿ ವ್ಯಾಯಾಮ ಮಾಡುತ್ತಾರೆ. ನಗರ ಪ್ರದೇಶದ ಜನರಲ್ಲಿ ಶೇ. 60.7 ಮಂದಿ ಫಿಟ್‌ನೆಸ್‌ಗಾಗಿ ಸ್ಪೋರ್ಟ್ಸ್ ಕ್ಲಬ್‌ಗಳಿಗೆ ತಪ್ಪದೇ ಹೋಗುತ್ತಾರೆ. 15 ವರ್ಷಗಳ ಅವಧಿಯ ಈ ಶಾರೀರಿಕ ಸದೃಢತೆಯ ಕಾರ್ಯಕ್ರಮದನ್ವಯ ಚೀನಾದ ಪ್ರತಿಯೊಬ್ಬ ಪ್ರಜೆಯೂ ಸಶಕ್ತ ವ್ಯಕ್ತಿಯಾಗಿರಬೇಕೆಂಬುದು ಅಲ್ಲಿನ ಸರ್ಕಾರದ ಅಪೇಕ್ಷೆ.
ಚೀನಾದಲ್ಲಿ ಸುಮಾರು 6,20,000 ಜಿಮ್ನಾಶಿಯಮ್‌ಗಳು ಹಾಗೂ ಕ್ರೀಡಾಂಗಣಗಳಿವೆ. ಇವುಗಳಲ್ಲಿ ಬಹುತೇಕ ಕಡೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ. ಚೀನಾದ ಇನ್ನೊಂದು ವಿಶೇಷತೆಯೇನೆಂದರೆ ಕ್ರೀಡಾಪಟುವನ್ನು ತರಬೇತುಗೊಳಿಸಿ ಅಷ್ಟಕ್ಕೇ ಬಿಡುವುದಿಲ್ಲ. ಆತ, ಆಕೆ ಆ ಕ್ರೀಡೆಯಲ್ಲಿ ಉತ್ತುಂಗ ಸ್ಥಾನ ತಲುಪುವವರೆಗೆ ಸರ್ಕಾರ ಅಥವಾ ಸಂಬಂಧಿಸಿದ ಕ್ಲಬ್ ಸತತ ತರಬೇತಿ, ಅಗತ್ಯವಿರುವ ಎಲ್ಲ ಬಗೆಯ ಸೌಕರ್ಯಗಳನ್ನು ನೀಡುತ್ತದೆ. ಅಗ್ರಸ್ಥಾನಕ್ಕೇರಲೇಬೇಕೆಂಬ ಜಿದ್ದನ್ನು ಬೆಳೆಸುತ್ತದೆ. ಒಲಂಪಿಕ್ಸ್ ಕೂಟಕ್ಕೆ ಎರಡು ವರ್ಷಗಳಿರುವಾಗಲೇ ಸತತ ಸಿದ್ಧತೆ, ಕಠಿಣ ತರಬೇತಿ ನಡೆಯುತ್ತಲೇ ಇರುತ್ತದೆ. ಹಾಗಾಗಿಯೇ ಚೀನಾ ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನಿಯಾಗಿ ಹೊಮ್ಮಲು ಸಾಧ್ಯವಾಗಿರುವುದು.
ಅದೇ ಭಾರತದಲ್ಲಿ ತಯಾರಿ, ತರಬೇತಿ ಹೇಗಿರುತ್ತದೆ? ಒಲಂಪಿಕ್ಸ್ ಕೂಟಕ್ಕೆ ಇನ್ನೇನು ಕೇವಲ ಎರಡು ತಿಂಗಳು ಉಳಿದಿದೆ ಎನ್ನುವಾಗಲೂ ನಿಯಮಿತ ತರಬೇತಿ, ಸಿದ್ಧತೆ ಆರಂಭವಾಗಿರುವುದಿಲ್ಲ. ಅಸಲಿಗೆ ತಾವು ಒಲಂಪಿಕ್ಸ್ ಕೂಟಕ್ಕೆ ಆಯ್ಕೆ ಆಗಿದ್ದೇವೋ ಇಲ್ಲವೋ ಎಂಬ ಮಹತ್ವದ ಮಾಹಿತಿ ಕೂಡ ಸಂಭಾವ್ಯ ಕ್ರೀಡಾಪಟುಗಳಿಗೆ ತಿಳಿದಿರುವುದೇ ಇಲ್ಲ. ಎಲ್ಲವೂ ಅನಿಶ್ಚಿತ, ಗೊಂದಲಪೂರಿತ, ರಾಜಕೀಯ ಪ್ರೇರಿತ. ವಶೀಲಿಬಾಜಿ, ರಾಜಕೀಯದ್ದೇ ಇಲ್ಲಿ ಮೇಲಾಟ. ಹಾಗಾಗಿ `ಯುದ್ಧ ಕಾಲೇ ಶಸ್ತ್ರಾಭ್ಯಾಸ’ ಭಾರತದಲ್ಲಿ ಅನಿವಾರ್ಯವಾಗಿ, ಪದಕ ಗೆಲ್ಲುವಲ್ಲಿ ಹಿನ್ನಡೆ ಕಟ್ಟಿಟ್ಟ ಬುತ್ತಿಯಾಗುತ್ತಿದೆ. ಆಯ್ಕೆಯಾದ ಕೆಲವು ಕ್ರೀಡಾಪಟುಗಳ ವಿಮಾನ ವೆಚ್ಚ ಭರಿಸುವ ಪ್ರಾಯೋಜಕರೇ ಇರುವುದಿಲ್ಲ. ಕ್ರಿಕೆಟ್‌ಗೆ ಕೊಟ್ಟಷ್ಟು ಪ್ರಚಾರ, ಗಮನ ಉಳಿದ ಕ್ರೀಡೆಗಳಿಗೆ ಸುತರಾಂ ಇಲ್ಲ. ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯದು ಈಗ ಫೋರ್ಬ್ಸ್ ಪಟ್ಟಿಯಲ್ಲಿ 5 ನೇ ಸ್ಥಾನ. ಆತ 20 ದಶಲಕ್ಷ ಅಮೆರಿಕನ್ ಡಾಲರ್ ಮೊತ್ತಕ್ಕೆ ಅಧಿಪತಿ. ಫೋರ್ಬ್ಸ್ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಲೆಬ್ರಾನ್ ಜೇಮ್ಸ್ ಅಮೆರಿಕನ್ ಬಾಸ್ಕೆಟ್‌ಬಾಲ್ ಕ್ರೀಡಾಪಟು. ಅದೇ ರೀತಿ ಅನಂತರದ ಸ್ಥಾನದಲ್ಲಿರುವ ಟೈಗರ್ ಉಡ್ಸ್ ಗಾಲ್ಫ್ ಪಟು ಹಾಗೂ ರೋಜರ್ ಫೆಡರರ್ ಟೆನ್ನಿಸ್ ಆಟಗಾರ. ಕ್ರಿಕೆಟ್‌ನಲ್ಲಿ ಧೋನಿ ಬಿಟ್ಟರೆ ಯಾರೂ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಅಲಂಕರಿಸಿಲ್ಲ. ಧೋನಿ ಪಡೆದಿರುವ ಈ ಶ್ರೀಮಂತಿಕೆಗೇರಲು ನಮ್ಮ ಹಾಕಿ, ಕಬಡ್ಡಿ, ಟೆನ್ನಿಸ್ ಕ್ರೀಡೆಗಳ ಪ್ರತಿಭಾವಂತ ಆಟಗಾರರಿಗೆ ಸಾಧ್ಯವೆ?
ಚೀನಾದ ಧೋರಣೆ, ರಾಜಕೀಯ ಸಿದ್ಧಾಂತ ಏನೇ ಇರಲಿ,ಅದು ಬೇರೆ ವಿಷಯ. ಆದರೆ ಆ ದೇಶದಿಂದಲೂ ನಾವು ಕಲಿಯಬೇಕಾದ ಪಾಠಗಳು ಬಹಳಷ್ಟಿವೆ. ಕ್ರೀಡಾ ಕ್ಷೇತ್ರದಲ್ಲಿ ಪದಕಗಳನ್ನು ಕೊಳ್ಳೆ ಹೊಡೆಯುವ ಕಲೆಯನ್ನು ನಾವು ಚೀನಾದಿಂದಲೇ ಕಲಿಯಬೇಕು. ಕ್ರೀಡಾಕ್ಷೇತ್ರದಲ್ಲಿ ಚೀನಾದ ಪಾರಮ್ಯವನ್ನು ಮುರಿಯಲು ನಮಗೆ ಅದೊಂದೇ ಮಾರ್ಗ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.