ಬೆಳ್ತಂಗಡಿ : ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳಿಂದ ದೇಶದ ಕೋಟ್ಯಾಂತರ ಬೀಡಿ ಕಾರ್ಮಿಕ ಮಹಿಳೆಯರು ಬೀದಿಪಾಲಾಗುತ್ತಿದ್ದಾರೆ. ಬೀಡಿ ಕಾರ್ಮಿಕರ ಅನ್ನದ ಬಟ್ಟಲಿಗೆ ಕಲ್ಲು ಹಾಕುವ ನೀಚ ರಾಜಕೀಯ ಮಾಡುತ್ತಿದ್ದಾರೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ, ಸೌತ್ಕೆನರಾ ಬೀಡಿ ವರ್ಕರ್ಸ್ ಫೆಡರೇಶನ್ ದ.ಕ.ಜಿಲ್ಲಾಧ್ಯಕ್ಷ ಬಿ.ಎಂ.ಭಟ್ರವರು.
ಅವರು ಮಂಗಳವಾರ ಬೀಡಿ ಕೈಗಾರಿಕೆ ಸ್ಥಗಿತವನ್ನು ವಿರೋಧಿಸಿ ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗಕ್ಕೆ ಆಗ್ರಹಿಸಿ ಬೆಳ್ತಂಗಡಿ ಭಾರತ್ ಬೀಡಿ ಕಂಪೆನಿ ಎದುರು ಅನಿರ್ದಿಷ್ಟಾವದಿ ನಡೆಯುತ್ತಿರುವ ಹೋರಾಟವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕೇಂದ್ರ ಸರ್ಕಾರ ತಂಬಾಕು ಉತ್ಪನ್ನ ನಿಷೇಧದಿಂದಾಗಿ ಏ.1 ರಿಂದ ಬೀಡಿ ಕೈಗಾರಿಕೆ ಸ್ಥಗಿತಗೊಂಡಿದ್ದು, ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ನೀಡದೆ ಬೀಡಿ ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ ಎಂದ ಅವರು ಬೀಡಿ ಕೈಗಾರಿಕೆ ಸ್ಥಗಿತದ ಬಗ್ಗೆ ಕಾಂಗ್ರೆಸ್, ಬಿಜೆಪಿಯ ಶಾಸಕರು, ಎಂ.ಪಿ ಗಳು ಮೌನವಹಿಸಿರುವುದು ಬೀಡಿ ಕಾರ್ಮಿಕರ ಪರವಾದ ಅವರ ಬದ್ಧತೆಯನ್ನು ಬಹಿರಂಗಪಡಿಸದೆ ಚುನಾವಣೆಯ ಸಂದರ್ಭ ಬೀಡಿ ಕಾರ್ಮಿಕರ ಮತ ಪಡೆದುಕೊಂಡವರು ಬಾಯಿಗೆ ಬೀಗ ಜಡಿದುಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಸಿಐಟಿಯು ತಾಲೂಕು ಕಾರ್ಯದರ್ಶಿ ವಸಂತ ನಡ ಮಾತನಾಡಿ, ಬೀಡಿ ಕಾರ್ಮಿಕರಿಗೆ ಪರ್ಯಾಯ ಉದ್ಯೋಗ ನೀಡದ ಕೇಂದ್ರ ಸರ್ಕಾರ ಮತ್ತು ಬೀಡಿ ಕಾರ್ಮಿಕರ ತುಟ್ಟಿಭತ್ಯೆಯನ್ನು ಎರಡು ವರ್ಷಗಳಿಂದ ತಡೆ ಹಿಡಿದ ರಾಜ್ಯ ಸರ್ಕಾರ ಬೀಡಿ ಕಾರ್ಮಿಕರ ಪಾಲಿಗೆ ಇದ್ದು ಸತ್ತಂತಿದೆ. ಸಂಘಟನೆಗಳು ಬೀಡಿ ಕೈಗಾರಿಕೆ ಸ್ಥಗಿತದ ಬಗ್ಗೆ ಮೌನಿಗಳಾಗಿದ್ದಾರೆ. ಸಿಐಟಿಯು ಮಾತ್ರ ಬೀಡಿಕಾರ್ಮಿಕರಿಗೆ ನ್ಯಾಯ ಸಿಗುವ ತನಕ ನಿರಂತರ ಹೋರಾಟ ನಡೆಸಲಿದೆ. ಇದು ಮಾಡು ಇಲ್ಲವೇ ಮಡಿ ಹೋರಾಟ. ಕಾರ್ಮಿಕರ ನೆಮ್ಮದಿಗಾಗಿ ಯಾವುದೇ ತ್ಯಾಗಕ್ಕೂ ಸಿಐಟಿಯು ಬದ್ದವಾಗಿದೆ. ಹೋರಾಟದಿಂದಾಗುವ ಎಲ್ಲಾ ಕಷ್ಟ-ನಷ್ಟಗಳಿಗೆ ನಮ್ಮನಾಳುವ ಸರ್ಕಾರಗಳು ಜವಾಬ್ದಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಬೀಡಿ ಕೆಲಸಗಾರರ ಸಂಘದ ಮುಖಂಡರಾದ ಜಯರಾಂ ಮಯ್ಯ, ರೋಹಿಣಿ ಪೆರಾಡಿ, ಈಶ್ವರಿ ಪದ್ಮುಂಜ, ನೆಬಿಸ ಬೆಳ್ತಂಗಡಿ, ಪುಷ್ಪ ಮುಗುಳಿ, ಕುಸುಮ ಮಾಚಾರು, ಜಯಂತಿ ನೆಲ್ಲಿಂಗೇರಿ , ಮೀನಾಕ್ಷಿ ಪಡಂಗಡಿ, ಸಿಐಟಿಯು ಮುಖಂಡ ಶೇಖರ. ಎಲ್, ಬೀಡಿಗುತ್ತಿಗೆದಾರರ ಸಂಘದ ಅಧ್ಯಕ್ಷ ಸಿ.ಮಹಮ್ಮದ್ ಸೇರಿದಂತೆ ಬೀಡಿ ಗುತ್ತಿಗೆದಾರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.