ಈ ಬಾರಿಯ ದಸರಾ ಉತ್ಸವ ಭಾರತೀಯರೆಲ್ಲರಿಗೂ ಅತ್ಯಂತ ಸಂಭ್ರಮ ಉಂಟುಮಾಡಿರಲೇಬೇಕು. ಅದಕ್ಕೆ ಕಾರಣ, ಭಾರತ ಜಾಗತಿಕವಾಗಿ ವಿಜ್ಞಾನ ಕ್ಷೇತ್ರದಲ್ಲಿ ಅಪೂರ್ವ ಗೆಲುವನ್ನು ಸಾಧಿಸಿದ್ದು. ಭಾರತದ ವಿಜ್ಞಾನಿಗಳು ಅಸಾಧ್ಯವಾದುದನ್ನು ಸಾಧ್ಯ ಎಂದು ಸಾಬೀತುಪಡಿಸಿದ್ದು. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಈಗ ಇತಿಹಾಸವನ್ನೇ ನಿರ್ಮಿಸಿ ಬಿಟ್ಟಿದೆ. ಮಂಗಳ ಗ್ರಹಕ್ಕೆ ನೌಕೆ ಕಳುಹಿಸುವ ಕಾರ್ಯದಲ್ಲಿ ಯಶಸ್ವಿಯಾಗಿದೆ. ವಿಜ್ಞಾನಿಗಳು ಕಳುಹಿಸಿದ ನೌಕೆ ಮಂಗಳ ಕಕ್ಷೆಗೆ ಯಶಸ್ವಿಯಾಗಿ ಸೇರಿ ತನ್ನ ಕಾರ್ಯ ಆರಂಭಿಸಿದೆ. ವಿಜ್ಞಾನಿಗಳ ಈ ಅದ್ಭುತ ಸಾಹಸವನ್ನು ಕೊಂಡಾಡಲು ಬೆಂಗಳೂರಿನ ಇಸ್ರೊ ಕೇಂದ್ರಕ್ಕೆ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಆಗಮಿಸಿ, ಅಲ್ಲಿದ್ದ ಹಿರಿಯ ವಿಜ್ಞಾನಿಗಳಿಂದ ಹಿಡಿದು ಇಸ್ರೊ ಸಂಸ್ಥೆಯ ಸಾಮಾನ್ಯ ನೌಕರನನ್ನೂ ಪ್ರೀತಿಯಿಂದ ಮಾತನಾಡಿಸಿ, ಬೆನ್ನು ತಟ್ಟಿ ಹೋದ ವಿದ್ಯಮಾನವಂತೂ ಇಸ್ರೊ ಸಿಬ್ಬಂದಿ ವರ್ಗಕ್ಕೆ ಆನೆಯ ಬಲ ತಂದುಕೊಟ್ಟಿರುವುದು ಉತ್ಪ್ರೇಕ್ಷೆಯ ಮಾತಲ್ಲ.
ಮಂಗಳಯಾನ ಯೋಜನೆ ಅಷ್ಟು ಸುಲಭದ್ದೇನೂ ಆಗಿರಲಿಲ್ಲ. 66 ಕೋಟಿ ಕಿ.ಮೀ. ದೂರಕ್ಕೆ ಬಾಹ್ಯಾಕಾಶ ನೌಕೆಯೊಂದನ್ನು ಯಶಸ್ವಿಯಾಗಿ ಕಳುಹಿಸಬೇಕಾದ ಸವಾಲಿತ್ತು. ಅಮೆರಿಕ, ರಷ್ಯ ಹಾಗೂ ಯುರೋಪ್ ಸ್ಪೇಸ್ ಏಜನ್ಸಿಗಳು ಈ ಸವಾಲನ್ನು ಎದುರಿಸಲು ಪಡಬಾರದ ಕಷ್ಟ ಪಟ್ಟಿದ್ದರು. ವೈಫಲ್ಯಗಳನ್ನೂ ಅನುಭವಿಸಿದ್ದರು. ಅವೆಲ್ಲವನ್ನೂ ಸೂಕ್ಷ್ಮವಾಗಿ ಅಧ್ಯಯನ ಮಾಡಿ, ಅಂತಹ ತಪ್ಪುಗಳು ಮರುಕಳಿಸದಂತೆ ಇಸ್ರೊ ಎಚ್ಚರವಹಿಸಬೇಕಾಗಿತ್ತು. ಅಷ್ಟೇ ಅಲ್ಲ, ಕೇವಲ 15 ತಿಂಗಳ ಅಲ್ಪಾವಧಿಯಲ್ಲಿ ಈ ಯೋಜನೆಯನ್ನು ಕಾರ್ಯಗತಗೊಳಿಸಬೇಕಿತ್ತು. ಈ ತನಕ ಭೂ ಕಕ್ಷೆಯಲ್ಲಿ ಸುತ್ತುವ ಕೇವಲ 36 ಸಾವಿರ ಕಿ.ಮೀ. ದೂರದ ಉಪಗ್ರಹಗಳ ಜೊತೆಗೆ ಸಂವಹನ ಸಾಧಿಸಲಷ್ಟೇ ಶಕ್ತವಾಗಿದ್ದ ಇಸ್ರೊ ಈಗ 66 ಕೋಟಿ ಕಿ.ಮೀ. ದೂರದ ತನಕ ಸಂದೇಶ ಕಳುಹಿಸಬೇಕಾಗಿತ್ತು. ಆದರೆ ಇಂತಹ ಕಠಿಣ ಸವಾಲನ್ನು ಇಸ್ರೊ ವಿಜ್ಞಾನಿಗಳ ತಂಡ ಯಶಸ್ವಿಯಾಗಿ ನಿರ್ವಹಿಸಿರುವುದು ನಿಜಕ್ಕೂ ಅಭಿನಂದನೀಯ ಸಂಗತಿ. ಇಸ್ರೊ ಅಧ್ಯಕ್ಷ ರಾಧಾಕೃಷ್ಣನ್ ಅವರೊಂದಿಗೆ ಡಾ. ಎಸ್.ಕೆ.ಶಿವಕುಮಾರ್, ಬಿ.ಎಸ್. ಚಂದ್ರಶೇಖರ್, ಎಸ್. ಅರುಣನ್, ಡಾ. ಎಂ. ಅಣ್ಣಾದುರೈ ಮೊದಲಾದ ಪ್ರಮುಖರು ಹಗಲು ರಾತ್ರಿ ಶ್ರಮಿಸಿದ್ದರ ಫಲವೇ ಈ ಯಶೋಗಾಥೆಯ ಅನಾವರಣ.
ಮಂಗಳ ಕಕ್ಷೆ ಅಭಿಯಾನದ ಯೋಜನಾ ನಿರ್ದೇಶಕರಾಗಿ ಪ್ರಮುಖ ಪಾತ್ರ ವಹಿಸಿದ್ದ ಸುಬ್ಬಯ್ಯ ಅರುಣನ್ ಕಳೆದ 400 ದಿನಗಳ ಅವಧಿಯಲ್ಲಿ ಒಂದು ದಿನವೂ ರಜೆ ತೆಗೆದುಕೊಂಡಿರಲಿಲ್ಲ. ಇವರ ಜೊತೆ ಶ್ರಮಿಸಿದ 200 ಕ್ಕೂ ಹೆಚ್ಚು ವಿಜ್ಞಾನಿಗಳ ಕಥೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ. ಎಷ್ಟೋ ದಿನ ನೌಕೆ ಸಿದ್ಧತಾ ಕೇಂದ್ರದಲ್ಲೇ ಇವರ ನಿದ್ದೆ, ಊಟ. ದಿನಕ್ಕೆ 2 ಗಂಟೆ ಕಾಲ ಮಾತ್ರ ಮನೆಗೆ ಹೋಗುತ್ತಿದ್ದರು. ಅದೂ ಸ್ನಾನ ಮತ್ತು ಪೂಜೆ ನೆರವೇರಿಸುವುದಕ್ಕಾಗಿ! ಬಾಹ್ಯಾಕಾಶ ನೌಕೆ ಮಂಗಳನ ಕಕ್ಷೆಗೆ ಯಶಸ್ವಿಯಾಗಿ ಸೇರಿದಾಗ ಈ ವಿಜ್ಞಾನಿಗಳಿಗೆ ಆದ ಸಂತೋಷ ಬಣ್ಣಿಸಲಸದಳ. ಅದು ಕ್ರಿಕೆಟ್‌ನಲ್ಲಿ ಗೆದ್ದಿದ್ದಕ್ಕಿಂತ, ಒಲಂಪಿಕ್‌ನಲ್ಲಿ ಚಿನ್ನದ ಪದಕ ಬಾಚಿಕೊಂಡಿದ್ದಕ್ಕಿಂತ, ಜ್ಞಾನಪೀಠ,ಭಾರತರತ್ನದಂತಹ ಅತ್ಯುನ್ನತ ಪುರಸ್ಕಾರ ಪಡೆದದ್ದಕ್ಕಿಂತ ಹೆಚ್ಚಿನ ಸಂತೋಷ.
ವಿಜ್ಞಾನಿಗಳಿಗಾದ ಈ ಸಂತೋಷದ ಬಗ್ಗೆ ನಾವೆಲ್ಲ ಪ್ರತಿಕ್ರಿಯಿಸಿದ್ದಾದರೂ ಹೇಗೆ? ಪ್ರಧಾನಿ ಮೋದಿ ಇಸ್ರೊ ಕೇಂದ್ರದಲ್ಲಿ ಮಾತನಾಡುತ್ತಾ, `ಕ್ರಿಕೆಟ್‌ನಲ್ಲಿ ಗೆದ್ದರೆ ಬೀದಿ ಬೀದಿಯಲ್ಲಿ ಮೆರವಣಿಗೆ, ಸಂಭ್ರಮ ಆಚರಿಸುವ ನಾವು ಬಾಹ್ಯಾಕಾಶದಲ್ಲಿ ಇಸ್ರೊ ನಿರ್ಮಿಸಿದ ಹೊಸ ಇತಿಹಾಸವನ್ನ್ನು ಹತ್ತು ಪಟ್ಟು ಹೆಚ್ಚು ಸಂಭ್ರಮದಿಂದ ಆಚರಿಸಬೇಕು’ ಎಂದು ಕರೆಕೊಟ್ಟಿದ್ದರು. ಆದರೆ ನಾವು ಹಾಗೆ ಮಾಡಲೇ ಇಲ್ಲ. ಬೀದಿ ಬೀದಿಯಲ್ಲಿ ಸಂಭ್ರಮಾಚರಣೆ ಕಂಡು ಬರಲೇ ಇಲ್ಲ. ಮಂಗಳಯಾನ ಯಶಸ್ವಿಯಾಗಿದ್ದಕ್ಕೆ ಲಡ್ಡು, ಪೇಢೆ ಹಂಚಿದ ದೃಶ್ಯ ಎಲ್ಲೂ ಕಂಡುಬರಲಿಲ್ಲ. ಮಂಗಳಯಾನದ ರೂವಾರಿಗಳಾದ ಇಸ್ರೊ ವಿಜ್ಞಾನಿಗಳ ಅಳೆತ್ತರದ ಪ್ಲೆಕ್ಸ್ ಯಾರೂ ಕಟ್ಟಲಿಲ್ಲ. ಒಂದು ಸಾಧಾರಣ ಸಿನಿಮಾ ಬಿಡುಗಡೆಯಾದರೆ ಅದರಲ್ಲಿ ನಟಿಸಿದ ಸಿನಿಮಾ ನಾಯಕನ ಪ್ಲೆಕ್ಸ್ ಎಲ್ಲೆಡೆ ಹಾಕಲಾಗುತ್ತದೆ. ಕೆಲವು ಅಭಿಮಾನಿಗಳು ಅದಕ್ಕೆ ಹಾಲಿನ ಅಭಿಷೇಕವನ್ನೂ ಮಾಡುತ್ತಾರೆ. ಆದರೆ ನಮ್ಮ ವಿಜ್ಞಾನಿಗಳ ಗೆಲುವಿಗೆ ಯಾರೂ ಅಷ್ಟಾಗಿ ಸಂಭ್ರಮಿಸಲಿಲ್ಲ. ಏಕೆ?
ಹೋಗಲಿ, ಶಾಲೆಗಳಲ್ಲಾದರೂ ಇಸ್ರೊ ಮಾಡಿದ ಐತಿಹಾಸಿಕ ಸಾಧನೆಯನ್ನು ನಮ್ಮ ಮಕ್ಕಳಿಗೆ ಮನವರಿಕೆಯಾಗುವಂತೆ ಅಧ್ಯಾಪಕರು ತಿಳಿಸಿದ್ದಾರಾ ಎಂದರೆ ಅದೂ ಕೂಡ ಆಗಿಲ್ಲ. ಏಕೆ ಹೀಗೆ? ಕ್ರಿಕೆಟ್‌ನ್ನು ಸಂಭ್ರಮಿಸುವ ನಾವು ಮನುಕುಲದ ಏಳಿಗೆಗೆ ಕಾರಣವಾಗುವ ವಿಜ್ಞಾನದ ಯಶಸ್ಸನ್ನು ಏಕೆ ಸಂಭ್ರಮಿಸುವುದಿಲ್ಲ? ಕ್ರಿಕೆಟ್‌ನಲ್ಲಿ ವಿಶ್ವಕಪ್ ಗೆದ್ದರೆ ಪ್ರತಿಯೊಬ್ಬ ಆಟಗಾರನಿಗೆ ಕೋಟಿ ರೂಪಾಯಿ ಬಹುಮಾನ ಕೊಡಲಾಗುತ್ತದೆ. ರೌಡಿಗಳನ್ನು ಸದೆಬಡಿದ ಪೊಲೀಸರಿಗೆ ಬಹುಮಾನ ನೀಡಲಾಗುತ್ತದೆ. ಆದರೆ ಹಗಲಿರುಳು ಊಟ, ನಿದ್ದೆ, ಸಂಸಾರದ ಚಿಂತೆ ಬದಿಗೊತ್ತಿ ಯೋಜನೆಯ ಯಶಸ್ಸಿಗೆ ಶ್ರಮಿಸಿದ ಈ ವಿಜ್ಞಾನಿಗಳಿಗೆ ಏಕೆ ಸರ್ಕಾರ ಬಹುಮಾನ ಘೋಷಿಸುವುದಿಲ್ಲ? ಮಂಗಳ ಗ್ರಹಕ್ಕೆ ಮೊದಲ ಯತ್ನದಲ್ಲೇ ನೌಕೆ ಕಳುಹಿಸಿದ ವಿಜ್ಞಾನಿಗಳ ಸಾಧನೆ ಹಾಗಿದ್ದರೆ ಅದಕ್ಕಿಂತ ಕಳಪೆಯೇ? ಈ ಪ್ರಶ್ನೆಯನ್ನು ನಾವೆಲ್ಲರೂ ಕೇಳಿಕೊಳ್ಳಬೇಕು.
ಇಸ್ರೊ ವಿಜ್ಞಾನಿಗಳ ಈ ಸಾಧನೆ ನಿಜಕ್ಕೂ ಅತ್ಯದ್ಭುತ. ಅಮೆರಿಕ ಮಂಗಳಯಾನಕ್ಕೆ ವೆಚ್ಚಮಾಡಿದ್ದ ಮೊತ್ತ 4 ಸಾವಿರ ಕೋಟಿ ರೂ.ಗಳಾದರೆ ಭಾರತ ವೆಚ್ಚ ಮಾಡಿದ್ದು ಬರೀ 450 ಕೋಟಿ ರೂ. ಮಾತ್ರ. ಕೆಲವು ಹಾಲಿವುಡ್ ಚಿತ್ರ ತಯಾರಿಕೆಗೆ ಇದಕ್ಕಿಂತಲೂ ಹೆಚ್ಚು ಮೊತ್ತವನ್ನು ಖರ್ಚು ಮಾಡಲಾಗುತ್ತದೆ. ಕಡಿಮೆ ಮೊತ್ತ ಖರ್ಚು ಮಾಡಲಾಗಿದೆ ಎಂದ ಮಾತ್ರಕ್ಕೆ ಇಸ್ರೊ ವಿಜ್ಞಾನಿಗಳು ಬಳಸಿದ ತಂತ್ರಜ್ಞಾನ, ಉಪಕರಣಗಳು ಗುಣಮಟ್ಟದಲ್ಲಿ ಕಳಪೆಯದ್ದೇನಲ್ಲ. ಈ ಅಂಶ ಈಗ ಅಮೆರಿಕದ ವಿಜ್ಞಾನಿಗಳಿಗೂ ತಲೆಬಿಸಿಯುಂಟುಮಾಡಿರಬೇಕು. ಇದೇ ವರ್ಷ ಜನವರಿ 5 ರಂದು ಸಂಪೂರ್ಣ ಸ್ವದೇಶಿ ನಿರ್ಮಿತ ಕ್ರಯೋಜನಿಕ್ ಇಂಜಿನ್ ಅಳವಡಿಸಿದ್ದ ಜಿಎಸ್‌ಎಲ್‌ವಿ – ಡಿ5 ಶ್ರೀಹರಿ ಕೋಟಾದಿಂದ ಗಗನಕ್ಕೆ ಜಿಗಿದಾಗ ಭಾರತೀಯರಿಗಾದ ಸಂತಸ ಅಷ್ಟಿಷ್ಟಲ್ಲ. ಏಕೆಂದರೆ ಕ್ರಯೋಜನಿಕ್ ತಂತ್ರಜ್ಞಾನದಲ್ಲೂ ಭಾರತ ಸ್ವಾವಲಂಬನೆ ಸಾಧಿಸಿದ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇಂತಹ ಸ್ವದೇಶಿ ತಂತ್ರಜ್ಞಾನದ ರೂವಾರಿ ಇಸ್ರೊದ ಹಿರಿಯ ವಿಜ್ಞಾನಿಯಾಗಿದ್ದ ಎಸ್. ನಂಬಿ ನಾರಾಯಣನ್. ಆದರೆ ಅಂತಹ ಒಬ್ಬ ತಪಸ್ವೀ ವಿಜ್ಞಾನಿಯನ್ನು ಬಂಧಿಸಿ 50 ದಿನಗಳ ಕಾಲ ಜೈಲಿಗಟ್ಟಲಾಗಿತ್ತು. ಕ್ರಯೋಜನಿಕ್ ತಂತ್ರಜ್ಞಾನವನ್ನು ಶತ್ರುದೇಶಗಳಿಗೆ ಮಾರಾಟ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂಬ ಕಾರಣಕ್ಕಾಗಿ ಕೇರಳದ ಪೊಲೀಸರು ನಾರಾಯಣನ್ ಅವರನ್ನು ಬಂಧಿಸಿದ್ದರು. ಆದರೆ ತನಿಖೆಯ ಬಳಿಕ ಈ ಎಲ್ಲ ಅರೋಪಗಳು ಸಂಪೂರ್ಣ ಕಪೋಲಕಲ್ಪಿತ ಎಂದು ಸಾಬೀತಾಯಿತು. 1998 ರಲ್ಲಿ ಸುಪ್ರಿಂ ಕೋರ್ಟ್ ಈ ಪ್ರಕರಣವನ್ನೇ ವಜಾಗೊಳಿಸಿ ತೀರ್ಪು ನೀಡಿತ್ತು. ಅನ್ಯಾಯವಾಗಿ ಬಂಧನಕ್ಕೊಳಗಾದ ನಂಬಿಯವರಿಗೆ 10 ಲಕ್ಷ ರೂ. ಪರಿಹಾರ ಕೊಡುವಂತೆ ಕೇರಳ ಹೈಕೋರ್ಟ್ ಅಲ್ಲಿನ ಸರ್ಕಾರಕ್ಕೆ ಅದೇಶಿಸಿತ್ತು. ಅಷ್ಟರಲ್ಲಿ ನಂಬಿ ನಾರಾಯಣನ್ ಅವರ ವೃತ್ತಿ ಜೀವನದ ಅಮೂಲ್ಯ 13 ವರ್ಷಗಳು ವ್ಯರ್ಥವಾಗಿದ್ದವು. ಅಷ್ಟೇ ಅಲ್ಲ , ಇಸ್ರೊ ಸಕಾಲಕ್ಕೆ ಏನನ್ನು ಸಾಧಿಸಬೇಕಿತ್ತೋ ಅದನ್ನು ಸಾಧಿಸಲಾಗಿರಲಿಲ್ಲ. ಭಾರತ ಉಪಗ್ರಹಗಳನ್ನು ಉಡಾವಣೆ ಮಾಡಲು ಅದುವರೆಗೆ ಅವಲಂಬಿಸಿದ್ದು ಪಿಎಸ್‌ಎಲ್‌ವಿ ರಾಕೆಟ್‌ಗಳನ್ನು. ಆದರೆ ಇದರಿಂದ ಅತೀ ಹೆಚ್ಚು ತೂಕದ ಉಪಗ್ರಹಗಳನ್ನು ಕಳುಹಿಸಲು ಸಾಧ್ಯವಾಗುತ್ತಿರಲಿಲ್ಲ. ಹೆಚ್ಚಿನ ಭಾರದ ಉಪಗ್ರಹಗಳನ್ನು ಕಳುಹಿಸಲು 500 ಕೋಟಿ ರೂ. ಹಣ ತೆತ್ತು ವಿದೇಶಿ ರಾಕೆಟ್‌ಗಳ ನೆರವು ಪಡೆಯಬೇಕಿತ್ತು. ಆದರೀಗ ಕ್ರಯೋಜೆನಿಕ್ ತಂತ್ರಜ್ಞಾನದಿಂದಾಗಿ ಇನ್ನು ಮುಂದೆ 2,000 ದಿಂದ 4,000 ಟನ್ ತೂಕದ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಬಹುದಾಗಿದೆ. ಮಂಗಳಯಾನದ ಯೋಜನಾ ನಿರ್ದೇಶಕ ಎಸ್.ಅರುಣನ್ ಅವರ ಪತ್ನಿ ಗೀತಾ, ನಂಬಿ ನಾರಾಯಣನ್ ಅವರ ಪುತ್ರಿ. ನಾರಾಯಣನ್ ಅವರ ಸ್ಫೂರ್ತಿಯಿಂದಲೇ ಅರುಣನ್ ಬಾಹ್ಯಾಕಾಶ ಕ್ಷೇತ್ರಕ್ಕೆ ಕಾಲಿಟ್ಟಿದ್ದು.
ನಾವು ನಮ್ಮ ಮಕ್ಕಳನ್ನು ಪಿಯುಸಿ ಮುಗಿದ ಕೂಡಲೇ ಒಂದೋ ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಪದವಿ ಕಡೆಗೆ ದೂಡಿ ನಿರಾಳರಾಗುತ್ತೇವೆ. ಎರಡೂ ಕಡೆ ಅವಕಾಶ ಸಿಗದಿದ್ದರೆ ಬಿ.ಕಾಂಗೋ, ಬಿ.ಬಿ.ಎಂಗೋ ಸೇರಿಸಿ ಬಿಡುತ್ತೇವೆ. ವಿಜ್ಞಾನ ಪದವಿ ತರಗತಿಗೆ ನಮ್ಮ ಮಕ್ಕಳನ್ನು ಸೇರಿಸಬೇಕೆಂದು ಯೋಚಿಸುವವರು ಇಲ್ಲವೇ ಇಲ್ಲ. ಎಲ್ಲ ತಂದೆ ತಾಯಿಗಳಿಗಿರುವ ಬಹುದೊಡ್ಡ ಕನಸೆಂದರೆ ತಮ್ಮ ಮಕ್ಕಳು ಕಂಪೆನಿಯೊಂದರಲ್ಲಿ ಸಾಫ್ಟವೇರ್ ಕೂಲಿಯಾಗಿ ಕೈ ತುಂಬಾ ಸಂಬಳ ತರಬೇಕೆಂಬುದು. ತಮಗೆ ಕಟ್ಟಲು ಸಾಧ್ಯವಾಗದ ಮನೆ, ತಮಗೆ ಖರೀದಿಸಲಾಗದ ಕಾರು ತಮ್ಮ ಮಕ್ಕಳಿಗಾದರೂ ಕೈವಶವಾಗುವಂತಾಗಲಿ. ಅಷ್ಟಾದರೆ ಜೀವನ ಸಾರ್ಥಕ. ಇದೇ ಬಹುತೇಕ ತಂದೆತಾಯಂದಿರ ಅಭೀಷ್ಟ. ತಮ್ಮ ಮಕ್ಕಳು ವಿಜ್ಞಾನಿಗಳಾಗಲಿ, ಇಸ್ರೊದಂತಹ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಗೆ ಸೇರಿ ಸಂಶೋಧನೆ ಮಾಡಲಿ, ಹೊಸ ಹೊಸ ಸಾಧನೆಗಳಿಗೆ ಸಾಕ್ಷಿಯಾಗಲಿ… ಮುಂತಾದ ಭವ್ಯ ಕನಸುಗಳೇ ಈ ತಂದೆತಾಯಂದಿರಿಗೆ ಇರುವುದಿಲ್ಲ. ಮಕ್ಕಳು ಸಾಫ್ಟ್‌ವೇರ್ ಕೂಲಿಯಾದರೂ ಚಿಂತೆಯಿಲ್ಲ, ಪ್ರತಿ ತಿಂಗಳು ಹೇರಳ ಹಣ ಕೈಗೆ ಸಿಗುತ್ತಿರಬೇಕು. ಇಂತಹ ಸ್ವಾರ್ಥದ ಬಯಕೆಯೇ ತುಂಬಿರುವ ಮನಸ್ಸುಗಳಲ್ಲಿ ವಿಜ್ಞಾನದ ಸಾಧನೆ, ದೇಶ ಹಿತ ಮುಂತಾದ ಕನಸುಗಳಿರಲು ಹೇಗೆ ತಾನೆ ಸಾಧ್ಯ?
ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಶುದ್ಧ ವಿಜ್ಞಾನ (Pure Science) ಪದವಿ ಅಧ್ಯಯನ ಮಾಡುವವರೇ ಇಲ್ಲದೆ ಆ ಇಲಾಖೆಯನ್ನು ಮುಚ್ಚಬೇಕಾದ ಸ್ಥಿತಿ ಈಗ ಒದಗಿದೆ. ಭಾರತ ಬಹಳ ಹಿಂದಿನಿಂದಲೂ ವಿಜ್ಞಾನ, ತಂತ್ರಜ್ಞಾನಗಳಿಗೆ ಹೆಸರುವಾಸಿಯಾದ ದೇಶವಾಗಿತ್ತು. ಖಗೋಳ ವಿಜ್ಞಾನ, ಗಣಿತ, ಆಯುರ್ವೇದ, ಶರೀರ ರಚನಾಶಾಸ್ತ್ರ, ರಸಾಯನ ಶಾಸ್ತ್ರ, ಭೌತಶಾಸ್ತ್ರ, ಲೋಹ ಶಾಸ್ತ್ರ, ಯಂತ್ರಶಾಸ್ತ್ರ… ಹೀಗೆ ಎಲ್ಲದರಲ್ಲೂ ಮುಂಚೂಣಿಯಲ್ಲಿತ್ತು. ಕ್ರಿ. ಶ. 5 ನೇ ಶತಮಾನದಲ್ಲೇ ಆರ್ಯಭಟ ಎಂಬ ಖಗೋಳ ಶಾಸ್ತ್ರಜ್ಞ ಪ್ರಸಿದ್ಧನಾಗಿದ್ದ. ಭಾರತೀಯ ಖಗೋಳ ಶಾಸ್ತ್ರದಲ್ಲಿನ ಸಂಕೀರ್ಣ ಗುಣಾಕಾರಗಳಿಂದ ಕೂಡಿದ ಗಣಿತ ಭಾಗವನ್ನು ಆರ್ಯಭಟ ಸರಳೀಕರಿಸಿದ್ದ. ಕಳೆದ ಶತಮಾನದಲ್ಲಿ ಗ್ರೆಗೋರಿಯನ್ ಕ್ಯಾಲೆಂಡರ್ ಚಾಲ್ತಿಗೆ ಬರುವವರೆಗೆ ಈ ದೇಶದಲ್ಲಿ ಆರ್ಯಭಟ ರಚಿಸಿದ್ದ ಆರ್ಯಭಟೀಯ ಆಧಾರದ ಪಂಚಾಂಗ ಪದ್ಧತಿಯೇ ಜಾರಿಯಲ್ಲಿತ್ತು. ಸ್ಮಾರ್ಟ್ ಎಂಬ ಖಗೋಳ ಶಾಸ್ತ್ರಜ್ಞನಿಗಿಂತ ನೂರಾರು ವರ್ಷಗಳ ಮೊದಲೇ ಭಾಸ್ಕರಾಚಾರ್ಯ ಎಂಬ ಭಾರತೀಯ ಖಗೋಳ ಶಾಸ್ತ್ರಜ್ಞ ಭೂಮಿಗೆ ಸೂರ್ಯನನ್ನು ಒಂದು ಪ್ರದಕ್ಷಿಣೆ ಹಾಕುವುದಕ್ಕೆ ಬೇಕಾಗುವ ಸಮಯವನ್ನು ಕಂಡುಹಿಡಿದಿದ್ದರು. ದೆಹಲಿಯಲ್ಲಿರುವ ಗುಪ್ತರ ಕಾಲದ (1600 ವರ್ಷಕ್ಕೂ ಹಿಂದಿನದು) ಕಬ್ಬಿಣದ ಸ್ತೂಪ ಈಗಲೂ ತುಕ್ಕು ಹಿಡಿಯದೆ ನಿಂತಿರುವುದರ ರಹಸ್ಯದ ಬಗ್ಗೆ ಜಗತ್ತಿನ ವಿಜ್ಞಾನಿಗಳೆಲ್ಲ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
ಇಂತಹ ಇನ್ನೂ ಅದೆಷ್ಟೋ ಪ್ರಾಚೀನ ಭಾರತದ ವೈಜ್ಞಾನಿಕ ಸಾಧನೆಗಳನ್ನು ಪಟ್ಟಿ ಮಾಡಬಹುದು. ಇಂತಹ ವೈಜ್ಞಾನಿಕ ಸಾಧನೆ ಮುಂದುವರಿಯಬೇಡವೇ? ಭಾರತದಲ್ಲಿ ವಿಜ್ಞಾನಿಗಳ ಸಂಖ್ಯೆ ವೃದ್ಧಿಸುವುದು ಬೇಡವೇ? ಬರೀ ಸಾಫ್ಟ್‌ವೇರ್ ತಂತ್ರಜ್ಞರನ್ನು ತಯಾರಿಸಿ ಬಿಟ್ಟರೆ ದೇಶ ಅಭಿವೃದ್ಧಿ ಹೊಂದುತ್ತದೆಯೇ? ನಾವೆಲ್ಲರೂ ಗಂಭೀರವಾಗಿ ಚಿಂತಿಸಬೇಕಾದ ಪ್ರಶ್ನೆಗಳಿವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.