ಬಂಟ್ವಾಳ : ಆಡಂಬರದ ಮದುವೆಯ ಬದಲು ಸರಳ ವಿವಾಹಕ್ಕೆ ಒತ್ತು ನೀಡಬೇಕು ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಕರೆ ನೀಡಿದರು.
ಅವರು ಭಾನುವಾರ ಬಿ.ಸಿ.ರೋಡಿನ ಗಾಣದಪಡ್ಪು ನಾರಾಯಣ ಗುರು ಸಭಾಂಗಣದಲ್ಲಿ ಬಿಲ್ಲವ ಅಸೋಸಿಯೇಶನ್ ಬೆಂಗಳೂರು, ಮತ್ತು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನಡೆದ ವಧು-ವರಾನ್ವೇಷಣಾ ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ರಾಜಮಹಾರಾಜರ ಕಾಲದಲ್ಲಿ ಸ್ವಯಂವರ ಪದ್ದತಿ ಇದ್ದಂತೆ ಅರ್ಹ ವರನನ್ನು ಆಯ್ಕೆ ಮಾಡಲು ಇಂತಹ ಕಾರ್ಯಕ್ರಮ ಹಾಕಿಕೊಂಡಿರುವ ಇಂದಿನ ಕಾಲದ ಸಂಘಟಕರ ಪ್ರಯತ್ನ ಶ್ಲಾಘನೀಯ , ಇದೊಂದು ಉತ್ತಮ ಕಾರ್ಯಕ್ರಮ ಎಂದರು.
ಇದೊಂದು ಸಾಮಾಜಿಕ ಸೇವೆ. ಗುರುಗಳ ಸಂದೇಶದಂತೆ ಗುರುತತ್ವ ಅನುಷ್ಠಾನಿಸಿ, ಶೈಕ್ಷಣಿಕ ಉದ್ದೇಶಕ್ಕೆ ಮಹತ್ವ ನೀಡಿ ಎಂದ ಅವರು ಅಭಿವೃದ್ಧಿಯಲ್ಲಿ ಪ್ರಪಂಚಕ್ಕೆ ಭಾರತ ಮಾದರಿಯಾಗಿದೆ ಎಂದು ತಿಳಿಸಿದರು.
ಬಂಟ್ವಾಳ ತಾಲೂಕು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಕೆ. ಸೇಸಪ್ಪ ಕೋಟ್ಯಾನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ವಧು-ವರನ್ವೇಷಣೆ ಇಂದಿನ ಕಾಲಘಟ್ಟದಲ್ಲಿ ಸ್ತುತ್ಯಾರ್ಹವಾಗಿದೆ ಎಂದರು.
ಇನ್ನೊರ್ವ ಮುಖ್ಯ ಅತಿಥಿ ಕೆ. ಹರಿಕೃಷ್ಣ ಬಂಟ್ವಾಳ್ ಮಾತನಾಡಿ ಬದುಕಿನಲ್ಲಿ ತ್ಯಾಗವೇ ಯಶಸ್ವಿ ದಾಂಪತ್ಯ ಜೀವನದ ಗುಟ್ಟು. ಮದುವೆ ಎರಡು ಕುಟುಂಬಗಳ ಸಾಮರಸ್ಯಕ್ಕೆ ನಾಂದಿಯಾಗುತ್ತದೆ ಎಂದರು. ಸಂಚಾಲಕ ಬೇಬಿ ಕುಂದರ್ ಪ್ರಾಸ್ತವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಚಾಲಕಿ ಮಾಲತಿ ಎ. ಪೂಜಾರಿ,ಹಿರಿಯ ಉಪಾಧ್ಯಕ್ಷ ಭಾಸ್ಕರ್ ಸಿ.ಅಮೀನ್, ಉಪಾಧ್ಯಕ್ಷೆ ಕೆ. ಶಾರದಾಕೃಷ್ಣ, ಪ್ರ.ಕಾರ್ಯದರ್ಶಿ ಭಾಸ್ಕರ ಪೂಜಾರಿ, ಜತೆ ಕಾರ್ಯದರ್ಶಿ ರಾಜೇಶ್ ಕುಮಾರ, ಕೋಶಾಧಿಕಾರಿ ಕೆ.ಡಿ.ಪೂಜಾರಿ, ಸಂಘಟನಾ ಕಾರ್ಯದರ್ಶಿ ಬಿ.ಎಂ. ಉದಯ ಕುಮಾರ್, ಗಿರೀಶ್ ಪೂಜಾರಿ ಬಸ್ರ, ತಿಮ್ಮಪ್ಪ ಪೂಜಾರಿ, ರಾಜೇಶ್ ಸುವರ್ಣ ಮೊದಲಾದವರು ವೇದಿಕೆಯಲ್ಲಿದ್ದರು.
ಬೆಂಗಳೂರು ಸಂಘದ ಅಧ್ಯಕ್ಷ ಎಂ. ವೇದಕುಮಾರ್ ಸ್ವಾಗತಿಸಿದರು. ಸುಮಾರು ನೂರ ಐವತ್ತಕ್ಕೂ ಹೆಚ್ಚು ವಧುವರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಧು-ವರನ್ವೇಷಯಾ ಸಮಿತಿ ಅಧ್ಯಕ್ಷೆ ಸುಶೀಲ ಚಂದ್ರಶೇಖರ್ ವಂದಿಸಿದರು. ಭಾರತಿ ಬೇಬಿ ಕುಂದರ್, ಬಿ ಶ್ರೀಧರ ಅಮೀನ್ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.