ನೀರ್ಚಾಲು : ವಿದ್ಯಾರ್ಥಿಗಳು ಶಾಲೆಯಲ್ಲಿ ನೀತಿ ಪಾಠಗಳನ್ನು ಕಲಿಯಬೇಕು. ನ್ಯಾಯ ಅನ್ಯಾಯಗಳನ್ನು ಶಾಲೆಯು ಮಗುವಿಗೆ ತಿಳಿಹೇಳುತ್ತದೆ. ಶಾಲೆಗಳಲ್ಲಿ ನೈತಿಕತೆಯನ್ನು ಕಲಿಯುವ ಮೂಲಕ ಮನುಷ್ಯ ನಾಗರಿಕನಾಗುತ್ತಾನೆ. ವಿಜ್ಞಾನ ಮತ್ತು ತತ್ವಜ್ಞಾನಗಳು ವಿರೋಧಾಭಾಸಗಳಲ್ಲ ಎನ್ನುತ್ತಾನೆ ಐನ್ಸ್ಟೀನ್. ಈ ಬಗ್ಗೆ ವಿವಿಧ ಕೃತಿಗಳನ್ನು ಅಧ್ಯಯನ ಮಾಡಿ ‘ಜ್ಞಾನ, ವಿಜ್ಞಾನ ಮತ್ತು ತತ್ವಜ್ಞಾನ ಎಂಬ ಅನುವಾದಿತ ಕೃತಿಗೆ ರೂಪುನೀಡುತ್ತಿದ್ದೇನೆ. ಈ ಕೃತಿಯ ಬರವಣಿಗೆಯ ಹೊತ್ತಿನಲ್ಲಿ ತಾಯ್ನೆಲದ ಅನುಭವ ಶ್ರೀಮಂತಿಕೆ ನನ್ನ ಮೇಲೆ ಪ್ರಭಾವ ಬೀರಿದೆ.
ಗುರುಗಳಾದ ಎಸ್.ವಿ.ಎಲ್.ಎನ್ ಶರ್ಮ, ಬೊಳುಂಬು ಸುಬ್ರಾಯ ಭಟ್ಟರು ನನ್ನ ಪ್ರೌಢ ಶಿಕ್ಷಣದ ಹಂತದಲ್ಲಿ ನನ್ನ ಮೇಲೆ ಪ್ರಭಾವ ಬೀರಿದವರಲ್ಲಿ ಪ್ರಮುಖರು. ಅಧ್ಯಾಪಕರು ಶಾಲೆಯ ಆತ್ಮ, ಮನ:ಸಾಕ್ಷಿ ಇದ್ದ ಹಾಗೆ ಇರಬೇಕಾದವರು. ಶಾಲೆಗಳಲ್ಲಿ ಹಿಂಸೆ ನೀಡುವ ಶಿಕ್ಷೆಗಳನ್ನು ನೀಡಬಾರದು. ಶಿಕ್ಷಣಕ್ಕೆ ಸಮೀಪದ ಶಿಕ್ಷೆ ಇರಬೇಕು. ಅಲ್ಲಿ ಸಂವಾದ ಜರಗಬೇಕು, ವಾಗ್ವಾದವಲ್ಲ. ವಿಮರ್ಶೆ ಇಲ್ಲದೆ ಪ್ರಗತಿ ಇಲ್ಲ. ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಗಳಾದ ನಂತರ ಶುಚಿತ್ವದ ಬಗ್ಗೆ ಕಾಳಜಿ ಹೆಚ್ಚಾಗಿದೆ. ನನಗೆ ದೊರೆತ ಈ ಪ್ರಶಸ್ತಿಯ ಮೊತ್ತವೂ ಸಾಮಾಜಿಕ ಕಾರ್ಯಕ್ಕೆ ಬಳಕೆಯಾಗಲಿ. ಎಂದು ಪ್ರಸಿದ್ಧ ಸಾಹಿತಿ, ಶಿಕ್ಷಣ ತಜ್ಞ ಕೆ.ವಿ. ತಿರುಮಲೇಶ್ ಅಭಿಪ್ರಾಯಪಟ್ಟರು. ಅವರು ತಮಗೆ ದೊರೆತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಮೊತ್ತವಾದ ರೂಪಾಯಿ ಒಂದು ಲಕ್ಷವನ್ನು ತಾವು ಪ್ರೌಢ ಶಿಕ್ಷಣವನ್ನು ಪೂರೈಸಿದ ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗೆ ಸಮರ್ಪಿಸಿ ಮಾತನಾಡುತ್ತಿದ್ದರು.
ಬುಧವಾರ ಅಪರಾಹ್ನ 4 ಗಂಟೆಗೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಂ.ಸುಬ್ರಾಯ ಭಟ್ ವಹಿಸಿದರು. ಈ ಸಂದರ್ಭದಲ್ಲಿ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಪಡಿಯಡ್ಪು ಶಂಕರ ಭಟ್ಟರು ಕೆ.ವಿ.ತಿರುಮಲೇಶರನ್ನು ಅಭಿನಂದಿಸಿದರು. ಚಿತ್ರ ಕಲಾವಿದ ಪಿ.ಎಸ್.ಪುಣಿಂಚಿತ್ತಾಯ, ಐತಪ್ಪ ಮುಳಿಯಾರು, ಗೋಪಾಲಕೃಷ್ಣ ಶಾಸ್ತ್ರಿ, ಡಾ|ಹರಿಕೃಷ್ಣ ಭರಣ್ಯ, ಡಾ|ಮಹೇಶ್ವರಿ.ಯು, ವಿ.ಬಿ.ಕುಳಮರ್ವ ಶುಭ ಹಾರೈಸಿದರು.
ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ.ಎಂ.ಸುಬ್ರಾಯ ಭಟ್ಟರನ್ನು ಕೆ.ವಿ.ತಿರುಮಲೇಶ್ ಕುಟುಂಬಿಕರು ಗೌರವಿಸಿದರು. ಶಾಲಾ ವ್ಯವಸ್ಥಾಪಕ ಜಯದೇವ ಖಂಡಿಗೆ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಧನ್ಯವಾದ ಸಮರ್ಪಿಸಿದರು. ಶಿಕ್ಷಕಿ ಶೈಲಜ.ಬಿ ಪ್ರಾರ್ಥಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.