ನವದೆಹಲಿ: 2016-17ನೇ ಸಾಲಿನ ದೆಹಲಿ ಬಜೆಟ್ ಇಂದು ಬಿಡುಗಡೆಗೊಂಡಿದ್ದು ದೆಹಲಿ ಪುರಸಭೆಗೆ ಈ ಬಾರಿ 1000 ಕೋಟಿ ಹೆಚ್ಚುವರಿ ಅನುದಾನ ನೀಡಲಾಗಿದ್ದು, 5900 ಕೋಟಿಯಿಂದ 6900 ಗೆ ಏರಿಸಲಾಗುವುದು ಎಂದು ದೆಹಲಿಯ ವಿತ್ತ ಸಚಿವ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಸಿದ್ಧ ಉಡುಪು, ಗಡಿಯಾರ, ಇಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನಗಳ ದರಗಳಲ್ಲಿ ಇಳಿಕೆಯಾಗಲಿದೆ ಎಂದು ಹೇಳಲಾಗಿದ್ದು, ಶಿಕ್ಷಣ, ಆರೋಗ್ಯ ಮತ್ತು ಸಾರಿಗೆ ವಿಭಾಗಗಳದ್ದು ಸಿಂಹಪಾಲಾಗಿದೆ.
ಶಿಕ್ಷಣಕ್ಕೆ 10,690 ಕೋಟಿ ರೂ.ಯೊಂದಿಗೆ ದೆಹಲಿಯ ಶಾಲೆಗಳ ಪ್ರತಿ ಕೊಠಡಿಗಳಲ್ಲಿ ಸಿಸಿಟಿವಿ ಅಳವಡಿಸಲು 100 ಕೋಟಿ ರೂ. ಮಂಜೂರು ಮಾಡಲಾಗಿದೆ. 8000 ಹೊಸ ಕೊಠಡಿಗಳನ್ನು ನಿರ್ಮಿಸಲಾಗುವುದು. ನಾವು ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗಿಂತ ಉತ್ತಮಗೊಳಿಸಲು ಬಯಸುತ್ತೇವೆ ಎಂದು ಸಿಸೋದಿಯಾ ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಒಟ್ಟು 46,600 ಲಕ್ಷ ಕೋಟಿ ರೂ. ಬಜೆಟ್ ಘೋಷಿಸಿದ್ದು, ಆಮ್ ಆದ್ಮಿ ಕ್ಯಾನ್ಟೀನ್ಗೆ 10 ಕೋಟಿ ರೂ. ಇರಿಸಲಾಗಿದೆ. ತಮಿಳುನಾಡಿನ ಜಯಲಲಿತಾ ಸರ್ಕಾರದ ’ಅಮ್ಮ ಕ್ಯಾಂಟೀನ್’ ಆಧಾರದಲ್ಲಿ ದೆಹಲಿಯಲ್ಲಿ ಆಮ್ ಆದ್ಮಿ ಕ್ಯಾಂಟೀನ್ ಆರಂಭಿಸಲಾಗುವುದು. ವಲಸೆ ಕಾರ್ಮಿಕರಿಗೆ, ಉದ್ಯೋಗಸ್ಥರಿಗೆ 5-10 ರೂ. ಅಗ್ಗದ ದರದಲ್ಲಿ ಪೌಷ್ಠಿಕ ಆಹಾರ ಒದಗಿಸುವುದು ಇದರ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರಿಗೆ ಕ್ಷೇತ್ರಕ್ಕೆ 1,735 ಕೋಟಿ ರೂ. ಮಂಜೂರು ಮಾಡಲಾಗಿದೆ. 676 ಕೋಟಿ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಮಹಿಳಾ ಸಬಲೀಕರಣಕ್ಕೆ 1,068 ಕೋಟಿ ಹಾಗೂ ಮೊಹಲ್ಲಾ ಸಭಾ ಯೋಜನೆಗೆ 350 ಕೋಟಿ ಮಂಜೂರು ಮಾಡಲಾಗಿದೆ ಎಂದು ಸಿಸೋದಿಯಾ ಹೇಳಿದ್ದಾರೆ.
ಬಸ್ಗಳು, ರೈಲ್ವೆ ನಿಲ್ದಾಣ ಮತ್ತಿತರ ಪ್ರದೇಶಗಳಲ್ಲಿ ವೈಫೈ ಸೇವೆ ಆರಂಭಿಸುವ ಮೂಲಕ ಪ್ರಯೋಗ ನಡೆಸಲಾಗುವುದು. ಇದರ ಬಗ್ಗೆ ಹೆಚ್ಚಿನ ಅಧ್ಯಯನ, ಜನರ ಪ್ರತಿಕ್ರಿಯೆಯ ಆಧಾರದ ಮೇಲೆ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಲಾಗುವುದು ಎಂದು ಸಿಸೋದಿಯಾ ಈ ಸಂದರ್ಭ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.