News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 21st November 2024


×
Home About Us Advertise With s Contact Us

`ಮಿಷನ್ 44 ಪ್ಲಸ್’ ಗುರಿಯತ್ತ ಬಿಜೆಪಿ ಚಿತ್ತ

28bjp-flag_20130325-300x186ಕಳೆದ ಮೇ ತಿಂಗಳ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 282 ಸ್ಥಾನಗಳನ್ನು ಗೆದ್ದು ಕೇಂದ್ರದಲ್ಲಿ ಅಧಿಕಾರ ಹಿಡಿದಾಗ ಈ ಬೃಹತ್ ಗೆಲುವಿಗೆ ಕಾರಣವಾದದ್ದು ಉತ್ತರ ಪ್ರದೇಶದ 72 ಸ್ಥಾನಗಳ ಗೆಲುವು ಎಂದೇ ಎಲ್ಲ ರಾಜಕೀಯ ಪಂಡಿತರು ವಿಶ್ಲೇಷಿಸಿದ್ದರು. ಅದು ನಿಜ ಕೂಡ ಆಗಿತ್ತು. ಆದರೆ ಅದೊಂದೇ ಅಂಶ ಬಿಜೆಪಿಯ 282 ಸ್ಥಾನಗಳ ಗೆಲುವಿಗೆ ಕಾರಣವಾಗಿರಲಿಲ್ಲ. ದೇಶದ ಉಳಿದ ರಾಜ್ಯಗಳಲ್ಲಿ ಪಡೆದ ನಿರ್ಣಾಯಕ ಗೆಲುವು ಕೂಡ ಮುಖ್ಯ ಪಾತ್ರವಹಿಸಿತ್ತು.

ಅಂತಹ ಗೆಲುವಿನಲ್ಲಿ ಜಮ್ಮು-ಕಾಶ್ಮೀರ ಪ್ರಾಂತದಲ್ಲಿ ಪಡೆದ ಗೆಲುವು ಕೂಡ ಪ್ರಮುಖವಾಗಿತ್ತು. ಮೊದಲ ಬಾರಿಗೆ ಜಮ್ಮು – ಕಾಶ್ಮೀರದ ಒಟ್ಟು 6 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ 3 ಸ್ಥಾನಗಳನ್ನು ಗೆದ್ದು ಇತಿಹಾಸ ನಿರ್ಮಿಸಿತ್ತು. ಜಮ್ಮು ಭಾಗದಲ್ಲಿ ಎರಡು ಹಾಗೂ ಲಢಾಕ್‌ನಲ್ಲಿ ಒಂದು ಸ್ಥಾನವನ್ನು ಅದು ಗೆದ್ದಿತ್ತು. ಕಾಶ್ಮೀರ ಕಣಿವೆಯ ಉಳಿದ ಮೂರು ಸ್ಥಾನಗಳು ಪಿಡಿಪಿಯ ಪಾಲಾಗಿತ್ತು. ಆಡಳಿತ ಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಅದರ ಮಿತ್ರಪಕ್ಷ ಕಾಂಗ್ರೆಸ್ ಇಡೀ ರಾಜ್ಯದಲ್ಲಿ ಒಂದೂ ಸ್ಥಾನವನ್ನು ಗೆಲ್ಲಲಾಗದೆ ಹೀನಾಯ ಸೋಲು ಅನುಭವಿಸಿದ್ದವು. ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಶೇ. 52 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಜಮ್ಮು – ಕಾಶ್ಮೀರದಲ್ಲಿ ಶೇ. 50 ಸ್ಥಾನಗಳನ್ನು ಪಡೆದುಕೊಂಡಿವೆ. 2009 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಈ ರಾಜ್ಯದಲ್ಲಿ ಪಡೆದ ಮತ ಶೇ. 18.6 ಆಗಿದ್ದರೆ ಈ ಬಾರಿ ಅದು ಶೇ. 32.4 ರಷ್ಟು. ಜಮ್ಮು ಹಾಗೂ ಲಢಾಕ್ ಭಾಗ ಸೇರಿದರೆ ಭೌಗೋಳಿಕವಾಗಿ ಜಮ್ಮು – ಕಾಶ್ಮೀರದ ಶೇ. 85 ರಷ್ಟು ಆಗುತ್ತದೆ. ಉಳಿದ ಕಾಶ್ಮೀರ ಕಣಿವೆ ಶೇ. 15 ರಷ್ಟು ಭಾಗ ಮಾತ್ರ.

ಜಮ್ಮು – ಕಾಶ್ಮೀರ ಲೋಕಸಭಾ ಚುನಾವಣೆಯಲ್ಲಿ ಡಾ. ಫರೂಕ್ ಅಬ್ದುಲ್ಲಾ, ಗುಲಾಂ ನಬೀ ಆಜಾದ್‌ರಂತಹ ಘಟಾನುಘಟಿಗಳೇ ಈ ಬಾರಿ ಮಣ್ಣು ಮುಕ್ಕಿದರು. ಬಿಜೆಪಿಯ ರಾಜ್ಯಾಧ್ಯಕ್ಷ ಜುಗಲ್ ಕಿಶೋರ್ ಶರ್ಮಾ ಜಮ್ಮು ಕ್ಷೇತ್ರದಲ್ಲಿ ಗೆದ್ದಿದ್ದು 2,57,280 ಮತಗಳ ಭಾರೀ ಅಂತರದಿಂದ.ಡಾ. ಫರೂಕ್ ಅಬ್ದುಲ್ಲಾ ಅವರು ಕಳೆದ 32 ವರ್ಷಗಳಿಂದ ಸೋಲರಿಯದ ಸರದಾರನೆಂದೇ ಖ್ಯಾತರಾಗಿದ್ದರು. ಆದರೆ ಈ ಬಾರಿ ಅವರು ಪಿಡಿಪಿ ಅಭ್ಯರ್ಥಿಯೆದುರು ಶರಣಾಗಬೇಕಾಯಿತು. ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಕೂಟ ಚುನಾವಣೆ ಪ್ರಚಾರದ ವೇಳೆ 370ನೇ ವಿಧಿಯ ಸಂರಕ್ಷಕರು ತಾವೇ ಎಂದು ಘೋಷಿಸಿದ್ದರು. ಪಿಡಿಪಿ `ಬಿಜೆಪಿಯ ಬಿ ಟೀಮ್’ ಎಂದು ಲೇವಡಿ ಮಾಡಿದ್ದರು. ಬಿಜೆಪಿಗೆ ಓಟು ಹಾಕಿದರೆ 370ನೇ ವಿಧಿ ಖಂಡಿತ ರದ್ದಾಗುತ್ತದೆ ಎಂದು ಮತದಾರರಿಗೆ ಭೀತಿ ಹುಟ್ಟಿಸಿದ್ದರು. ಆದರೆ ಇದಾವುದೂ ಜಮ್ಮು – ಕಾಶ್ಮೀರ ಮತದಾರರ ಮೇಲೆ ಪ್ರಭಾವ ಬೀರಲೇ ಇಲ್ಲ. ಅವರೆಲ್ಲರ ಮೇಲೆ ಪ್ರಭಾವ ಬೀರಿದ್ದು ಮಾತ್ರ ನರೇಂದ್ರ ಮೋದಿಯವರ ಭರವಸೆಯ ಭಾಷಣ.

ಜಮ್ಮು – ಕಾಶ್ಮೀರ ಪ್ರಾಂತದಲ್ಲಿ ಮೂರು ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಈಗ ಸುಮ್ಮನೆ ಕುಳಿತಿಲ್ಲ. ಲೋಕಸಭಾ ಚುನಾವಣೆಯಲ್ಲಿ ಪಡೆದ ಶೇ. 32 ಮತ ಪ್ರಮಾಣ ಆ ಪಕ್ಷಕ್ಕೆ ಆಶಾಕಿರಣವಾಗಿ ಕಂಗೊಳಿಸಿದ್ದರೆ ಅದರಲ್ಲಿ ಆಶ್ಚರ್ಯವಿಲ್ಲ. ಬಹುಶಃ ಅದೇ ಹಿನ್ನೆಲೆಯಲ್ಲಿ ಬಿಜೆಪಿ ಈಗ, ಈ ವರ್ಷದ ಅಂತ್ಯದೊಳಗೆ ಎದುರಾಗುವ ಅಸೆಂಬ್ಲಿ ಚುನಾವಣೆಯಲ್ಲಿ ಮಿಷನ್ 44 ಪ್ಲಸ್ ಗುರಿಯನ್ನು ಇಟ್ಟುಕೊಂಡಿರುವುದಕ್ಕೆ ಕಾರಣವಿರಬಹುದು. (ಅಸೆಂಬ್ಲಿ ಚುನಾವಣೆ ಮುಂದಿನ ಅಕ್ಟೋಬರ್ ಮತ್ತು ಡಿಸೆಂಬರ್ ನಡುವೆ ಯಾವಾಗ ಬೇಕಾದರೂ ನಡೆಯಬಹುದು. 2014 ಜನವರಿ 4 ರೊಳಗೆ ಹೊಸ ಸರ್ಕಾರ ಅಲ್ಲಿ ಅಸ್ತಿತ್ವಕ್ಕೆ ಬರಬೇಕಾಗಿದೆ.) ಜಮ್ಮು – ಕಾಶ್ಮೀರ ರಾಜ್ಯದ ಬಿಜೆಪಿ ಅಧ್ಯಕ್ಷ ಜುಗಲ್ ಕಿಶೋರ್ ಶರ್ಮಾ `ಮಿಷನ್ 44 ಪ್ಲಸ್’ ಗುರಿಯನ್ನು ಇತ್ತೀಚೆಗೆ ಪಕ್ಷದ ಹಿರಿಯ ನಾಯಕರು, ಶಾಸಕರು, ಜಿಲ್ಲಾ ಮತ್ತು ಮಂಡಲ ಅಧ್ಯಕ್ಷರ ಮುಂದೆ ಘೋಷಿಸಿದ್ದಾರೆ.

ಬಿಜೆಪಿಯ ಮಿಷನ್ 44 ಪ್ಲಸ್ ಗುರಿಯನ್ನು ನೋಡಿ ಯಾರಿಗಾದರೂ ನಗು ಬರಬಹುದು. ಒಟ್ಟು 87 ಸ್ಥಾನಗಳನ್ನು ಹೊಂದಿರುವ ಜಮ್ಮು – ಕಾಶ್ಮೀರ ಅಸೆಂಬ್ಲಿಯಲ್ಲಿ ಬಿಜೆಪಿ 44 ಕ್ಕಿಂತ ಹೆಚ್ಚು ಸ್ಥಾನ ಗಳಿಸಲು ಹೇಗೆ ಸಾಧ್ಯ? ರಾಜಕೀಯ ಪಂಡಿತರು ಹಾಗೂ ಟೀಕಾಕಾರರು `ಇದು ಕೇವಲ ಕನಸಷ್ಟೆ. ಬಿಜೆಪಿ ಇದನ್ನು ಸಾಧಿಸಲು ಸಾಧ್ಯವಿಲ್ಲ’ ಎಂದೇ ಹೇಳುತ್ತಿದ್ದಾರೆ. ಇದಕ್ಕೆ ಅವರು ಸಮರ್ಥನೆಯನ್ನೂ ನೀಡಿದ್ದಾರೆ.  2008 ರ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಆ ರಾಜ್ಯದಲ್ಲಿ 10 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು. 1957 ರಿಂದ 2002 ರ ತನಕವೂ ಬಿಜೆಪಿ ಆ ರಾಜ್ಯದಲ್ಲಿ 1 ರಿಂದ 8 ರವರೆಗೆ ಮಾತ್ರ ಶಾಸಕರನ್ನು ಹೊಂದಿತ್ತು. ಹೀಗಿರುವಾಗ ಮಿಷನ್  44 ಪ್ಲಸ್ ಹೇಗೆ ಸಾಧ್ಯ? ಇದು ರಾಜಕೀಯ ವಿಶ್ಲೇಷಕರ ಪ್ರಶ್ನೆ.

ನಿಜ. 2008 ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಅಲ್ಲಿ 11 ಸ್ಥಾನಗಳನ್ನು ಗೆದ್ದಿತ್ತು. ಅದೇ ಇದುವರೆಗಿನ ಗರಿಷ್ಠ ಸ್ಥಾನಗಳು. ಆದರೆ 1998 ಮತ್ತು 1999 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 30 ಕ್ಕೂ ಹೆಚ್ಚು ಅಸೆಂಬ್ಲಿ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಆಗ ಜಮ್ಮು ವಲಯದ ಎರಡು ಲೋಕಸಭಾ ಸ್ಥಾನಗಳಲ್ಲೂ ಭಾರೀ ಅಂತರದೊಂದಿಗೆ ಜಯ ಸಾಧಿಸಿತ್ತು . ಅಂದರೆ ಜಮ್ಮು ವಲಯದ 37 ಅಸೆಂಬ್ಲಿ ಕ್ಷೇತ್ರಗಳಲ್ಲಿ ಬಹುತೇಕ ಬಿಜೆಪಿಗೆ ಬೆಂಬಲವಿದೆ ಎಂಬುದು ಸುವ್ಯಕ್ತ. ಈ ಬಾರಿ ಲಢಾಕ್ ಲೋಕಸಭಾ ಕ್ಷೇತ್ರವನ್ನೂ ಬಿಜೆಪಿ ಗೆದ್ದಿರುವುದು ಅದರ ಕಿರೀಟಕ್ಕೆ ಇನ್ನೊಂದು ಗರಿ. ಲಢಾಕ್‌ನ 4ಅಸೆಂಬ್ಲಿ ಕ್ಷೇತ್ರಗಳ ಪೈಕಿ ಮೂರರಲ್ಲಿ ಅದು ಈ ಬಾರಿ ಅತ್ಯುತ್ತಮ ನಿರ್ವಹಣೆ ತೋರಿದೆ.

ಕಾಶ್ಮೀರ ಕಣಿವೆಯಲ್ಲಿ ಸ್ಪರ್ಧಿಸಿದ್ದ ಮೂವರು ಬಿಜೆಪಿ ಅಭ್ಯರ್ಥಿಗಳೂ ಈ ಬಾರಿ ಸೋತಿದ್ದಾರೆ. ಅಲ್ಲಿ ಬಿಜೆಪಿ ಇದುವರೆಗೆ ಒಂದೇ ಒಂದು ಬಾರಿ ಗೆದ್ದ ನಿದರ್ಶನವಿಲ್ಲ. ಏಕೆಂದರೆ ಅಲ್ಲಿನ ಧೃವೀಕೃತ ರಾಜಕೀಯ ಸಮೀಕರಣವೇ ಹಾಗಿದೆ. ಮುಸ್ಲಿಂ ಬಾಹುಳ್ಯದ ಕಣಿವೆಯಲ್ಲಿ ಬಿಜೆಪಿ ಮತಗಳನ್ನು ಗಳಿಸುವುದು ಅಷ್ಟು ಸುಲಭವಲ್ಲ. ಆದರೆ ಈ ಬಾರಿ ಬಿಜೆಪಿ ಅಲ್ಲಿ ಸೋತಿದ್ದರೂ ಸಾಕಷ್ಟು ಮಂದಿ ಮುಸ್ಲಿಮರು ಬಿಜೆಪಿ ಪರವಾಗಿ ಮತ ಚಲಾಯಿಸಿರುವುದು ಸ್ಪಷ್ಟ. ಕಣಿವೆಯ ಅನೇಕ ವಿದ್ಯಾವಂತ ಹಾಗೂ ಪ್ರಜ್ಞಾವಂತ ಮುಸ್ಲಿಮರು ಇದೀಗ ಕೇಂದ್ರದ ನರೇಂದ್ರ ಮೋದಿ ಸರ್ಕಾರವನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಇದೆಲ್ಲವೂ ಜಮ್ಮು – ಕಾಶ್ಮೀರ ಪ್ರಾಂತದ ರಾಜಕೀಯ ರಂಗದಲ್ಲಿ ನಿಧಾನವಾಗಿ ಆಗುತ್ತಿರುವ ಸದ್ದಿಲ್ಲದ ಪಲ್ಲಟಗಳು.

ಕೇಂದ್ರದಲ್ಲಿ ಬಿಜೆಪಿ 282 ಸ್ಥಾನಗಳನ್ನು ಗಳಿಸಿ, ಅನ್ಯ ಪಕ್ಷಗಳ ನೆರವಿಲ್ಲದೆ ತಾನಾಗಿಯೇ ಬಹುಮತ ಸಾಧಿಸಿರುವುದಕ್ಕೆ ದೇಶಾದ್ಯಂತ ಸುಮಾರು ಶೇ. 10 ರಿಂದ 11 ರಷ್ಟು ಮುಸಲ್ಮಾನರು ಬಿಜೆಪಿಯನ್ನು ಬೆಂಬಲಿಸಿರುವುದೂ ಒಂದು ಕಾರಣ. ಗುಜರಾತ್‌ನಲ್ಲಿ ಮಾತ್ರವಲ್ಲ, ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ದೆಹಲಿ, ರಾಜಸ್ಥಾನ, ಜಮ್ಮು, ಲಢಾಕ್ ಮೊದಲಾದ ಕಡೆಗಳಲ್ಲೂ ಮುಸಲ್ಮಾನರು ಬಿಜೆಪಿಗೆ ಮತ ಚಲಾಯಿಸಿದ್ದಾರೆ.

ಬಿಜೆಪಿಯ `ಮಿಷನ್ 44 ಪ್ಲಸ್’ ಕನಸು ನನಸಾಗುವುದಕ್ಕೆ ನಿಧಾನವಾಗಿ ಜಮ್ಮು – ಕಾಶ್ಮೀರ ರಾಜ್ಯದ ನೆಲ ಹದಗೊಳ್ಳುತ್ತಿದೆಯೆ? ಏಕೆಂದರೆ ಇತ್ತೀಚೆಗೆ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ತಮ್ಮ ನಡುವಣ ಮೈತ್ರಿಯನ್ನು ಕಡಿದುಕೊಂಡಿವೆ. ಉಭಯ ಪಕ್ಷಗಳೂ ಮುಂದಿನ ಅಸೆಂಬ್ಲಿ ಚುನಾವಣೆಯನ್ನು ಸ್ವತಂತ್ರವಾಗಿ ಎದುರಿಸುವುದಾಗಿ ಹೇಳಿಕೆ ನೀಡಿವೆ. 6 ವರ್ಷಗಳ ಮೈತ್ರಿಗೆ ತೆರೆಬಿದ್ದಿದೆ. ಇದೊಂದು ಪರಸ್ಪರ ಒಪ್ಪಿ ತೆಗೆದುಕೊಂಡ ನಿರ್ಧಾರವೆಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಮೈತ್ರಿ ಮುರಿದು ಹೋಗಿರುವುದಕ್ಕೆ ಯಾರು ಕಾರಣ ಎಂಬುದನ್ನು ಹೇಳಲು ಉಭಯ ಪಕ್ಷಗಳ ನಾಯಕರಿಗೆ ಧೈರ್ಯವಿಲ್ಲ. ಈ ಮೈತ್ರಿ ಕೂಟ ಸರ್ಕಾರವಿದ್ದಾಗ ನಡೆದ ಭ್ರಷ್ಟಾಚಾರ ಪ್ರಕರಣಗಳು, ಉದ್ಯೋಗ ಒದಗಿಸದೆ ಯುವಕರನ್ನು ನಿರಾಶರನ್ನಾಗಿಸಿದ್ದು , ಅಭಿವೃದ್ಧಿಯಲ್ಲಿ ಕುಸಿತ ಇತ್ಯಾದಿ ಸಂಗತಿಗಳನ್ನು ಅಲ್ಲಿನ ಮತದಾರರು ಮಾತ್ರ ಮರೆತಿಲ್ಲ. ಕಳೆದ ಐದು ವರ್ಷಗಳಲ್ಲಿ ಅನುಭವಿಸಿದ ಈ ಎಲ್ಲ ಸಂಕಟಗಳಿಗೆ ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಸರ್ಕಾರವೇ ಹೊಣೆ ಎಂಬುದು ಜನರ ಅಭಿಮತ. ಈಗ ಪ್ರತ್ಯೇಕಗೊಂಡ ಮಾತ್ರಕ್ಕೆ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಮತದಾರರು ಸಾರ್ವಜನಿಕವಾಗಿಯೇ ಟೀಕಿಸಿದ್ದಾರೆ.

ನ್ಯಾಷನಲ್ ಕಾನ್ಫರೆನ್ಸ್ ಹಾಗೂ ಕಾಂಗ್ರೆಸ್ ಮೈತ್ರಿಕೂಟ ಒಂದಾಗಿ ಹೋರಾಡಿದಾಗಲೂ ಕಳೆದ ಮೇ ತಿಂಗಳ ಲೋಕಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲಲಾಗಲಿಲ್ಲ. ಹಾಗಿರುವಾಗ ಈಗ ಅವೆರಡು ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಗೆಲ್ಲಲು ಸಾಧ್ಯವೆ? ಮೈತ್ರಿಕೂಟ ಮುರಿದು ಹೋಗಿದ್ದರಿಂದ ಅವೆರಡೂ ಪಕ್ಷಗಳಿಗೆ ನಷ್ಟ ತಪ್ಪಿದ್ದಲ್ಲ ಎಂಬುದಂತೂ ಶತಃಸಿದ್ಧ. ಆದರೆ ಇದರ ಲಾಭ ಯಾರಿಗೆ? ಪಿಡಿಪಿಗೋ ಅಥವಾ ಬಿಜೆಪಿಗೋ? ಪಿಡಿಪಿಯನ್ನು ಗೆಲ್ಲಿಸಿದರೆ ರಾಜ್ಯಕ್ಕೆ ಆಗುವ ಲಾಭ ಅಷ್ಟಕ್ಕಷ್ಟೆ. ಆದರೆ ಬಿಜೆಪಿಯನ್ನು ಗೆಲ್ಲಿಸಿದರೆ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಇರುವುದರಿಂದ, ರಾಜ್ಯದ ಅಭಿವೃದ್ಧಿಗೆ ಅದೃಷ್ಟದ ಬಾಗಿಲು ತೆರೆದಂತಾಗುತ್ತದೆ ಎಂಬುದು ಜಮ್ಮು – ಕಾಶ್ಮೀರ ಮತದಾರರ ಹೊಸ ಚಿಂತನೆ.

ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಿಂದ ಗರಿಷ್ಠವೆಂದರೆ 50 ಸ್ಥಾನಗಳು ಲಭ್ಯವಾಗಬಹುದು ಎಂಬುದು ಬಿಜೆಪಿಯ ನಿರೀಕ್ಷೆಯಾಗಿತ್ತು. ಆದರೆ ಫಲಿತಾಂಶ ಬಂದಾಗ ಆ ರಾಜ್ಯದಿಂದ ದೊರಕಿದ್ದು 72 ಸ್ಥಾನಗಳು! ಅಮಿತ್‌ಶಾ ಅಲ್ಲಿ ಮೋಡಿ ಮಾಡಿದ್ದರು. 1984 ರಲ್ಲಿ ಲೋಕಸಭೆಯಲ್ಲಿ ಬಿಜೆಪಿ ಹೊಂದಿದ್ದ ಸ್ಥಾನ ಕೇವಲ 2. ಆದರೆ ಈಗ 2014ರಲ್ಲಿ ಆ ಸಂಖ್ಯೆ 282. 2 ಸ್ಥಾನ ಎಲ್ಲಿ? 282 ಸ್ಥಾನ ಎಲ್ಲಿ? 30 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಅದೆಂತಹ ಬದಲಾವಣೆ! ಇಂತಹ ಬದಲಾವಣೆ ಜಮ್ಮು – ಕಾಶ್ಮೀರ ರಾಜ್ಯದಲ್ಲೂ ಏಕೆ ಸಾಧ್ಯವಾಗಬಾರದು? ಉ.ಪ್ರ.ದಲ್ಲಿ ಮೋಡಿ ಮಾಡಿದ ಅಮಿತ್ ಶಾ ಈಗಂತೂ ಬಿಜೆಪಿಯ ಸಾರಥ್ಯವನ್ನೇ ವಹಿಸಿದ್ದಾರೆ. ಅದೂ ಕೂಡ ಒಂದು ಪ್ಲಸ್ ಪಾಯಿಂಟ್.

ಏರುತ್ತಿರುವ ಅಗತ್ಯ ವಸ್ತುಗಳ ಬೆಲೆ ಇಳಿಕೆ, ಜನರಿಗೆ ನೆಮ್ಮದಿ ಕಲ್ಪಿಸುವ ದಕ್ಷ ಆಡಳಿತ, ಜಡ್ಡುಗಟ್ಟಿರುವ ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ… ಇತ್ಯಾದಿ ಜನಪರ ಕ್ರಮಗಳಿಗೆ ಕೇಂದ್ರದ ಬಿಜೆಪಿ ಸರ್ಕಾರ ತುರ್ತಾಗಿ ಮುಂದಾಗಬೇಕಾದ ಅಗತ್ಯವಿದೆ. ಇತ್ತೀಚೆಗೆ ನಡೆದ ಉತ್ತರಾಖಂಡದ ಉಪಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದುಕೊಂಡಿರುವುದಕ್ಕೆ ಬೆಲೆ ಏರಿಕೆಯ ವಿರುದ್ಧ ಕೇಂದ್ರ ಬಿಜೆಪಿ ಸರ್ಕಾರ ಕ್ರಮ ಕೈಗೊಂಡಿಲ್ಲ ಎಂಬ ಮತದಾರರ ಅಸಮಾಧಾನವೂ ಒಂದು ಪ್ರಮುಖ ಕಾರಣವಿರಬಹುದು. `ಮಿಷನ್ 44 ಪ್ಲಸ್’ ಕನಸು ನನಸಾಗಬೇಕಾದರೆ ಬಿಜೆಪಿ ಈ ಹಿನ್ನೆಲೆಯಲ್ಲಿ ಗಂಭೀರವಾಗಿ ಚಿಂತಿಸಬೇಕು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top