ಉಡುಪಿ: ಕಳೆದೊಂದು ತಿಂಗಳ ಹಿಂದೆ ಪ್ರಾಯೋಗಿಕವಾಗಿ ಜಾರಿಗೆ ಬಂದಿದ್ದ ಹೆಲಿಕಾಪ್ಟರ್ ಪಯಣದ “ಹೆಲಿ ಟೂರಿಸಂ’ನ ಕಾಪ್ಟರ್ ಸದ್ದು ಈಗ ಕೇಳುತ್ತಿಲ್ಲ. ಪ್ರಾಯೋಗಿಕ ಹಾರಾಟದಂದು ಅಧಿಕಾರಿಗಳು, ಮಾಧ್ಯಮದವರು, ಪೊಲೀಸರಿದ್ದ ತಂಡ ನಾ ಮುಂದು-ತಾ ಮುಂದು ಎನ್ನುವಂತೆ ಹೆಲಿಕಾಪ್ಟರ್ನಲ್ಲಿ ಪಯಣ ಬೆಳೆಸಿ ಮೊದಲ ಅನುಭವ ಪಡೆದುಕೊಂಡಿದ್ದೂ ಆಗಿತ್ತು.
“ಹೆಲಿ ಟೂರಿಸಂ’ ವ್ಯವಸ್ಥೆ ಅನಾವರಣಗೊಂಡ ಮುಂದಿನ ವಾರ ಶನಿವಾರ ಮತ್ತು ರವಿವಾರ ಆದಿಉಡುಪಿ ಹೆಲಿಪ್ಯಾಡ್ನಿಂದ ಮೇಲೆ ಸಾಗುತ್ತಿದ್ದ ಕಾಪ್ಟರ್ ಸದ್ದು ಕೇಳುತ್ತಿತ್ತು. ಆದಿ ಉಡುಪಿಯಿಂದ ಚಿಕ್ಕಮಗಳೂರು, ಬೆಂಗಳೂರು ಕಡೆ ಹೋಗುವ ಸಂದರ್ಭ ಹೆಲಿಕಾಪ್ಟರ್ ಸದ್ದು ಮಾಡುತ್ತಿತ್ತು. ಆನಂತರ ಆ ಸದ್ದು ಕೇಳಿಸಲೇ ಇಲ್ಲ. ಹಾಗಾದರೆ ಉಡುಪಿ, ಮಲ್ಪೆ, ಮಣಿಪಾಲ ಭಾಗದಲ್ಲಿ ವೀಕೆಂಡ್ ಮಜಾ ನೀಡಿದ “ಹೆಲಿ ಟೂರಿಸಂ’ ಯೋಜನೆಯ ಹೆಲಿಕಾಪ್ಟರ್ ಹಾರಾಟ ಆಮೇಲೆ ಎಲ್ಲಿ ಹೋಯಿತು?
ಪಯಣಕ್ಕೆ ಜನರ ಕಾತರ : ಕಾಪ್ಟರ್ ಹಾರಾಡದಿರುವ ವಿಚಾರ ಸಾರ್ವಜನಿಕರಲ್ಲಿಯೂ ಹಲವು ಅನುಮಾನ, ಕುತೂಹಲ ಮೂಡಿಸಿತ್ತು. ಈ ಬಗ್ಗೆ ಹೆಲಿ ಟೂರಿಸಂ ವ್ಯವಸ್ಥೆ ಉಸ್ತುವಾರಿ ಸುದೇಶ್ ಶೆಟ್ಟಿ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ ಪ್ರತಿಕ್ರಿಯಿಸಿದ ಅವರು, ಹೆಲಿಕಾಪ್ಟರ್ ಪ್ರಯಾಣ ಬುಕ್ಕಿಂಗ್ಗೆ ಯಾವುದೇ ಕೊರತೆ ಇಲ್ಲ. ಜನರಿಂದ ಹೆಚ್ಚಿನ ಬೇಡಿಕೆ ಬರುತ್ತಲಿದೆ. ಪ್ರಯಾಣಕ್ಕೆ ಫೆ. 15ರ ಅನಂತರದ ಒಂದು ಶನಿವಾರ 170ಕ್ಕೂ ಅಧಿಕ ಮಂದಿ, ರವಿವಾರ 70ಕ್ಕೂ ಅಧಿಕ ಮಂದಿ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸಿ ಭೂಸೌಂದರ್ಯ ಆಸ್ವಾದಿಸಿ ಮೆಚ್ಚಿಕೊಂಡಿದ್ದಾರೆ. 2ನೇ ಬಾರಿಯ ಪ್ರಯಾಣಕ್ಕೂ ಮುಂದಾಗಿದ್ದ ಸಂದರ್ಭವೂ ಇತ್ತು. ಆ ಬಳಿಕವೂ ತುಂಬಾ ಮಂದಿ ಬುಕ್ಕಿಂಗ್ ನೋಂದಣಿಗೆ ಕಾತರರಾಗಿದ್ದಾರೆ. ಆದರೆ ನಮಗೆ ಇಲ್ಲಿಗೆ ಹೆಲಿಕಾಪ್ಟರ್ ಸೌಲಭ್ಯ ನೀಡುತ್ತಿರುವ ಚಿಪ್ಸನ್ ಏವಿಯೇಶನ್ ಸಂಸ್ಥೆಯವರ ಹೆಲಿಕಾಪ್ಟರ್ ಪ್ರತಿದಿನ ಬ್ಯುಸಿ ಶೆಡ್ನೂಲ್ನಲ್ಲಿರುವ ಕಾರಣ ಉಡುಪಿಗೆ ಹೆಲಿಕಾಪ್ಟರ್ ನೀಡಲು ಸಂಸ್ಥೆಯವರಿಗೆ ಸಾಧ್ಯವಾಗುತ್ತಿಲ್ಲ. ಈ ಒಂದು ಕಾರಣದಿಂದ ಮಾತ್ರ ಜನರ “ಹೆಲಿ’ ಪ್ರಯಾಣಕ್ಕೆ ಅನುವು ಮಾಡಿಕೊಡಲು ಅಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಿ ಅನುವು ಮಾಡಿಕೊಡಲಾಗುವುದು ಎಂದಿದ್ದಾರೆ.
ಮತ್ತೆ ಕೇಳಿಸಲಿದೆ “ಕಾಪ್ಟರ್ ಘರ್ಜನೆ’.!? : ರವಿಶಂಕರ್ ಗುರೂಜಿ ಕಾರ್ಯಕ್ರಮದಿಂದ ಹಿಡಿದು ಇತ್ತೀಚೆಗೆ ಘೋಷಣೆಯಾದ ಪಂಚ ರಾಜ್ಯಗಳ ಚುನಾವಣೆ ಪ್ರಚಾರಕ್ಕೆ ರಾಜಕೀಯ ಗಣ್ಯರು ಪ್ರಯಾಣ ಬೆಳೆಸಲು ಕೂಡ ಚಿಪ್ಸನ್ ಏವಿಯೇಶನ್ ಸಂಸ್ಥೆಯವರ ಹೆಲಿಕಾಪ್ಟರ್ ಬುಕ್ಕಿಂಗ್ ಆಗಿದೆ. ಹಾಗಾಗಿ ಅವರಿಗೆ ಉಡುಪಿಗೆ ಕಾಪ್ಟರ್ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಮಾ. 27ರಂದು ಉಡುಪಿಗೆ ಬರುವುದಾಗಿ ಚಿಪ್ಸನ್ ಸಂಸ್ಥೆಯ ನಿರ್ದೇಶಕರು ಹೇಳಿದ್ದಾರೆ. ಅಂದು ಮಾತುಕತೆ ನಡೆಸಿ ದಿನನಿತ್ಯ ಉಡುಪಿಯಲ್ಲಿಯೇ ಹೆಲಿಕಾಪ್ಟರ್ ಇರುವಂತೆ ವ್ಯವಸ್ಥೆ ಮಾಡಲು ಸಾಧ್ಯವಿದೆಯೇ ಎನ್ನುವುದನ್ನು ಚರ್ಚಿಸಲಾಗುವುದು.
ಆದಿಉಡುಪಿ ಹೆಲಿಪ್ಯಾಡ್ನಲ್ಲಿ ಪ್ರತಿದಿನ ಕಾಪ್ಟರ್ ನಿಲ್ಲಿಸಲು, ರಕ್ಷಣೆ, ಇಂಧನ ತುಂಬಿಸುವ ಸಕಲ ವ್ಯವಸ್ಥೆಯನ್ನೂ ಮಾಡಲಾಗಿದೆ. ಎಮರ್ಜೆನ್ಸಿ ಸಂದರ್ಭ ರೋಗಿಗಳನ್ನು ಕೂಡ ಸಾಗಿಸಲು ಅನುವಾಗುವಂತೆ ಸ್ಟ್ರೆಚರ್ ವ್ಯವಸ್ಥೆ ಇರುವ ಹೆಲಿಕಾಪ್ಟರ್ ಅನ್ನು ಮುಂದಿನ ದಿನದಲ್ಲಿ ಕಳುಹಿಸಿಕೊಡುವಂತೆ ಚಿಪ್ಸನ್ ಸಂಸ್ಥೆಯವರಲ್ಲಿ ಕೇಳಿಕೊಳ್ಳಲಾಗಿದೆ. ಅದಕ್ಕೆ ಅವರು ಸಮ್ಮತಿಸಿದ್ದಾರೆ. ಇದರಿಂದ ಅವಘಡದ ತುರ್ತು ಪರಿಸ್ಥಿತಿಯಲ್ಲಿ ಹೆಲಿಕಾಪ್ಟರ್ನಿಂದ ಸಹಾಯ ಆಗಬಹುದು ಎಂದು ಸುದೇಶ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.