News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅವರಂತೆಯೇ ನಾವೂ ದೇಶಕ್ಕಾಗಿ ಬದುಕೋಣ

ಆ ನಾಳೆ ಬರಲೇ ಇಲ್ಲ

ಮದುವೆಯಾಗಿ ಇನ್ನೂ ಹತ್ತು ತಿಂಗಳು ಕೂಡ ಕಳೆದಿರಲಿಲ್ಲ. ಇಂತಹ ಸಂದರ್ಭದಲ್ಲಿ ಮೆಚ್ಚಿನ ಮಡದಿಯಿಂದ ಪತ್ರವೊಂದು ಬಂದರೆ ಅದನ್ನು ತತ್‌ಕ್ಷಣ ತೆರೆದೋದಬೇಕೆಂಬ ಕಾತರ ಯಾರಿಗೆ ತಾನೆ ಇರುವುದಿಲ್ಲ?

29ರ ಹರೆಯದ ಮೇಜರ್ ರಾಜೇಶ್ ಅಧಿಕಾರಿಗೆ ಆತನ ಮಡದಿ ಕಿರಣ್ ಬರೆದ ಕಾಗದ ತಲುಪಿದಾಗ ಆತ 16 ಸಾವಿರ ಅಡಿ ಎತ್ತರದ ಹಿಮವತ್ಪರ್ವತದ ತಪ್ಪಲಲ್ಲಿದ್ದ. ಒಂದು ಕೈಯಲ್ಲಿ ಭೂಪಟ, ಇನ್ನೊಂದರಲ್ಲಿ ಎ.ಕೆ. 47 ರೈಫಲ್. ತೊಲೊಲಿಂಗ್ ಪರ್ವತದೆತ್ತರದಲ್ಲಿ ಪಾಕ್ ಅತಿಕ್ರಮಣಕಾರರು ಕಟ್ಟಿಕೊಂಡಿದ್ದ ಬಂಕರ್ ಧ್ವಂಸ – ರಾಜೇಶ್ ಅಧಿಕಾರಿಯ ಗುರಿಯಾಗಿತ್ತು.

`ಅರೆ, ಈಗ ಪುರುಸೊತ್ತಿಲ್ಲ. ನಾಳೆ ಕಾರ್ಯಾಚರಣೆ ಮುಗಿದ ಬಳಿಕ ಇದನ್ನು ಆರಾಮವಾಗಿ ಓದೋಣ’ ಎಂದು ಹೆಂಡತಿಯ ಕಾಗದವನ್ನು ಮಡಚಿ ಭದ್ರವಾಗಿ ಜೇಬೊಳಗಿಟ್ಟ. ಕಡಿದಾದ ಕೊಡಲಿಯ ಮೊನೆಯಂತಹ ಹಿಮಬಂಡೆಗಳನ್ನು ದಾಟುತ್ತಾ ಅಧಿಕಾರಿ ಹಾಗೂ ಆತನ ತಂಡ ನಿಶ್ಚಿತಗುರಿ ತಲುಪಿದ ಕೂಡಲೇ ಶತ್ರು ಪಡೆಯತ್ತ ಗುಂಡು ಹಾರಿಸತೊಡಗಿದರು. ವೈರಿಪಡೆಯ ಬಂಕರ್ ಈ ದಾಳಿಗೆ ಕುಸಿದುಬಿತ್ತು. ಆದರೆ ಅಷ್ಟರಲ್ಲಿ ಗುಂಡೊಂದು ಎಗರಿ ಬಂದು ಅಧಿಕಾರಿಯ ಎದೆಯನ್ನು ಸೀಳಿತು. ಆತ ಧರಾಶಾಯಿಯಾದ. ನೈನಿತಾಲ್‌ನಲ್ಲಿರುವ ಮನೆಗೆ ಅಧಿಕಾರಿಯ ಪಾರ್ಥಿವ ಶರೀರ ತಲುಪಿದ್ದು ಇದಾಗಿ ಒಂದು ವಾರದ ಅನಂತರ.

ಉತ್ತರಪ್ರದೇಶದ ಗಢವಾಲಾದಲ್ಲಿರುವ ಪ್ರತಿ ಮೂರನೇ ಮನೆಯಿಂದ ಒಬ್ಬ ಸೈನ್ಯಕ್ಕೆ ಸೇರಿದ್ದಾರೆ. ನೈನಿತಾಲ್‌ನಲ್ಲಿರುವ ಅಧಿಕಾರಿಯ ಕುಟುಂಬ ಕೂಡ ಈ ವಿಚಾರದಲ್ಲಿ ಹಿಂದೆ ಬಿದ್ದಿರಲಿಲ್ಲ. ರಾಜೇಶ್ ಅಧಿಕಾರಿಯ ತಾಯಿ ಮಾತ್ರ ಮಗನ ಸಾವಿನ ಸುದ್ದಿಯನ್ನು ನಂಬಲಿಲ್ಲ. ಆತ ಎಲ್ಲೋ ರಣರಂಗದಲ್ಲಿ ಕಾದಾಡುತ್ತಿದ್ದಾನೆ, ಒಂದಲ್ಲ ಒಂದು ದಿನ ಮನೆಗೆ ಮರಳುತ್ತಾನೆ – ಎಂದು ಹೇಳುತ್ತಾ ತನಗೆ ಪ್ರಿಯವಾದ ಹಿಂದಿ ಚಿತ್ರಗೀತೆಗಳನ್ನು ಕೇಳುತ್ತಾ ವಿಶ್ವಾಸದಿಂದಿದ್ದಳು. ಆದರೆ ಮಗನ ಮೃತದೇಹ ಮನೆಗೆ ಮರಳಿದಾಗ ಆಕೆ ಕೊನೆಗೂ ವಾಸ್ತವತೆಯನ್ನು ಒಪ್ಪಿಕೊಳ್ಳಬೇಕಾಯಿತು.

ಮಡದಿ ಬರೆದಿದ್ದ ಕಾಗದ ರಾಜೇಶ್ ಅಧಿಕಾರಿಯ ಜೇಬಿನೊಳಗೇ ಬೆಚ್ಚಗೆ ಉಳಿಯಿತು. ಆಕೆ ಏನು ಬರೆದಿದ್ದಳೋ… ನಾಳೆ ಕಾರ್ಯಾಚರಣೆ ಮುಗಿದ ಮೇಲೆ ಓದಿಕೊಳ್ಳುವೆನೆಂದು ಅಧಿಕಾರಿ ಹೇಳಿದ್ದ. ಆದರೆ ಆ ನಾಳೆ ಅಧಿಕಾರಿಯ ಬಾಳಿನಲ್ಲಿ ಬರಲೇ ಇಲ್ಲ.

 ***

kargil_1-for-article

ಹಠ ಹಿಡಿದು ಮಿಲಿಟರಿಗೆ ಸೇರಿದ

`ಸುಖದಿಂದ ಸಂಸಾರ ನಡೆಸಿದ್ದ ನನ್ನ ಮಗಳು ಸುನೀತ ಈಗ ವಿಧವೆಯಾದ ದುಃಖ ನನಗಿದೆ. ಆದರೆ ನನ್ನ ಅಳಿಯದೇವರು ರಾಷ್ಟ್ರ ಸೇವೆಗಾಗಿ ಪ್ರಾಣವನ್ನೇ ಮುಡಿಪಾಗಿಟ್ಟ ಹೆಮ್ಮೆಯೂ ನನಗಿದೆ’.

– ಜಮ್ಮು – ಕಾಶ್ಮೀರದ ಬಳಿ ಫುಲ್‌ಮಾವಾ ಎಂಬಲ್ಲಿ ಪಾಕಿಸ್ಥಾನದ ಉಗ್ರಗಾಮಿಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯಲ್ಲಿ ವೀರಮರಣವಪ್ಪಿದ ಚಿಕ್ಕೋಡಿ ತಾಲ್ಲೂಕಿನ ಕೆರೂರ ಎಂಬ ಪುಟ್ಟ ಗ್ರಾಮದ ವೀರಯೋಧ ಸಿದ್ದಗೌಡ ಬಸಗೌಡ ಪಾಟೀಲ ಅವರ ಮಾವ ದತ್ತು ಕಲ್ಲಪ್ಪ ರೇಂದಾಳೆಯವರಿಗೆ ತನ್ನ ಅಳಿಯನ ಬಗ್ಗೆ ಅದೆಂಥ ಹೆಮ್ಮೆ!

ಅಳಿಯ ಸಿದ್ದಗೌಡ ಧಾಡಸಿ ಮನುಷ್ಯ. ಮೊದಲಿನಿಂದಲೂ ಆತನಿಗೆ ದೇಶಸೇವೆ ಮಾಡಬೇಕೆಂಬ ಅದಮ್ಯ ಹಂಬಲ. ಅದಕ್ಕಾಗಿಯೇ ಶಿಕ್ಷಣವನ್ನು ಅರ್ಧಕ್ಕೇ ಬಿಟ್ಟು ಸೈನ್ಯಕ್ಕೆ ಸೇರುವ ತಯಾರಿ ನಡೆಸಿದ್ದ. `ಕೊನೆಗೂ ತನ್ನ ಹಠ ಸಾಧಿಸಿ ದೇಶಸೇವೆ ಮಾಡುತ್ತಲೇ ವೀರಸ್ವರ್ಗ ಸೇರಿದ’ ಎಂದು ದತ್ತುಕಲ್ಲಪ್ಪ ಹೆಮ್ಮೆಯಿಂದ ಹೇಳುತ್ತಾರೆ.

ಸಿದ್ದಗೌಡನಿಗೆ ಒಟ್ಟು ನಾಲ್ವರು ಸಹೋದರರು, ಒಬ್ಬ ಸಹೋದರಿ. ಮನೆಯ ಕುಡಿ ಇವನಾಗಿದ್ದರಿಂದ ಎಲ್ಲರಿಗೂ ಈತನ ಮೇಲೆ ಪ್ರೀತಿ. ಚಿಕ್ಕೋಡಿಯ ಆರ್.ಡಿ. ಪ್ರೌಢಶಾಲೆಯ ವಿದ್ಯಾರ್ಥಿಯಾಗಿದ್ದ ಸಿದ್ದಗೌಡನಿಗೆ ಎನ್‌ಸಿಸಿಯಲ್ಲಿ ವಿಶೇಷ ಆಸಕ್ತಿ. ಮನೆಯಲ್ಲಿ ತಾಯಿ ಶ್ರೀಮಂತಿ ಮಿಲಿಟರಿ ಬೇಡ ಎಂದಿದ್ದರು. ಆದರೂ ಹಟ ಬಿಡದ ಸಿದ್ದಗೌಡ 1993 ರಲ್ಲಿ ದೇಶಸೇವೆಗೆ ಹೊರಟೇ ಬಿಟ್ಟ. ಮೊದಲು ಪಂಜಾಬಿನ ಜಲಂಧರಕ್ಕೆ. ಅಲ್ಲಿ ಕೇಂದ್ರೀಯ ಪೊಲೀಸ್ ಮೀಸಲು ಪಡೆಯಲ್ಲಿ ಕೆಲಸ. ಅನಂತರ ತ್ರಿಪುರಾಕ್ಕೆ ವರ್ಗಾವಣೆ. ಕಾರ್ಗಿಲ್ ಯುದ್ಧದ ವೇಳೆಗೆ ಜಮ್ಮುವಿಗೆ ಹೋಗಿದ್ದ. ಸಿದ್ದ ಗೌಡನಿಗೆ ಮಿಲಿಟರಿಯಲ್ಲಿ ಕೆಲಸ ಸಿಗುವುದೇ ತಡ ಕಂಕಣ ಭಾಗ್ಯವೂ ಕೂಡಿಬಂತು. 1997 ರ ಏಪ್ರಿಲ್  6 ರಂದು ಸುನೀತಾಳೊಂದಿಗೆ ವಿವಾಹ ನೆರವೇರಿತು.

ಆದರೆ ಸುನೀತಾಳಿಗೆ ಈಗೆಲ್ಲಿಯ ಕುಂಕುಮ ಭಾಗ್ಯ! ಕೆರೂರ ಗ್ರಾಮದ ಆ ಪುಟ್ಟ ಮನೆಯಲ್ಲಿ ಸ್ಮಶಾನ ಮೌನ. ಎಲ್ಲರ ಮನಸ್ಸು ವಿಹ್ವಲಗೊಂಡಿದೆ. `ದೇಶಕ್ಕಾಗಿ ಪ್ರಾಣ ಕೊಟ್ಟೆಲ್ಲೋ ನನ್ನ ಮಗನ…’ ಎಂದು ತಾಯಿ ಶ್ರೀಮಂತಿ ಒಳಗಿನ ಕೋಣೆಯ ಮೂಲೆಯಲ್ಲಿ ಕುಳಿತು ರೋದಿಸುತ್ತಿದ್ದರೆ ಸುನೀತಾ ಮಾತ್ರ ಅಳಲೂ ಸಾಧ್ಯವಾಗದೆ ಗರಬಡಿದು ಕುಳಿತಿದ್ದಾಳೆ.

***

ಯಹಾಂ ಕಲ್ ಹೈ ಕಿಸ್‌ನೇ ದೇಖಾ?

`ಏಕ್ ಪಲ್‌ಮೇ ಹೈ ಸಚ್ ಸಾರೀ ಜಿಂದಗೀ ಕಾ. ಇಸ್ ಪಲ್‌ಮೇ ಜೀ ಲೋ ಯಾರಾನ್, ಯಹಾಂ ಕಲ್ ಹೈ ಕಿಸ್‌ನೇ ದೇಖಾ’

– ಕ್ಯಾಪ್ಟನ್ ಹನೀಫ್ ಉದ್ದೀನ್ ಆಗಾಗ ಗುನುಗುನಿಸುತ್ತಿದ್ದ ಹಾಡಿದು. ಈ ಹಾಡನ್ನು ಬರೆದಿದ್ದು ಹನೀಫನ ಸಹೋದರ ಸಮೀರ್. ಹನೀಫ್ ತನ್ನ ಸೈನಿಕ ಗೆಳೆಯರಿಗಾಗಿ ಈ ಹಾಡನ್ನು ಆಗಾಗ ರಾಗವಾಗಿ ಹೇಳುತ್ತಿದ್ದ. `ಹಾಡು ಹೇಳುವ ಯೋಧ’ನೆಂದೇ ಆತ ಎಲ್ಲರಿಗೂ ಚಿರಪರಿಚಿತ. ಕಗ್ಗಲ್ಲಿನ ಹಿಮಬಂಡೆಗಳನ್ನು ತುಳಿಯುತ್ತ, ಬೀಸುವ ಬಿರುಗಾಳಿ ಸಹಿಸುತ್ತ ಶತ್ರು ಪಾಳೆಯದತ್ತ ಮುನ್ನಡೆಯಬೇಕಾದ ಕಷ್ಟಕರ, ಅಸಹನೀಯ ಕ್ಷಣಗಳಲ್ಲಿ ಆತನ ಸಂಗಡಿಗರಿಗೆ ಹನೀಫನ ಸುಶ್ರಾವ್ಯ ಧ್ವನಿಯಿಂದ ಹರಿದುಬರುತ್ತಿದ್ದ ಹಾಡೇ ಪ್ರೇರಣಾಸ್ರೋತ. ಮರುಭೂಮಿಯಲ್ಲೊಂದು ಓಯಸಿಸ್ ದೊರಕಿದಂತೆ. ಮನೆಯಲ್ಲಿ ಆರಾಮವಾಗಿ ಕುಳಿತು ಟಿ.ವಿ. ನೋಡಿದಾಗ ಉಂಟಾಗುವ ಸಂತಸ ಈ ಹಾಡು ಕೇಳಿದಾಗ ಸೈನಿಕರಿಗೆ ಆಗುತ್ತಿತ್ತು. `ರಣರಂಗದಲ್ಲಿರಲಿ, ಮಿಲಿಟರಿ ಕ್ಯಾಂಪ್‌ಗಳಲ್ಲಿರಲಿ ಹನೀಫನ ಹಾಡುಗಳಿಗೆ ಅಡೆತಡೆಯೇ ಇರಲಿಲ್ಲ. ಹಾಸ್ಯ, ವಿನೋದ, ಹಾಡು ಹಾಗೂ ಪರಾಕ್ರಮ ಆತನ ಜೀವನದ ಅವಿಭಾಜ್ಯ ಅಂಗಗಳು’ – ಎಂದು ಹನೀಫನ ದೊಡ್ಡಣ್ಣ ನಫೀಜ್ ನೆನಪಿಸಿಕೊಳ್ಳುತ್ತಾರೆ.

ಹನೀಫ್ 1996 ರಲ್ಲಿ ಇಂಡಿಯನ್ ಮಿಲಿಟರಿ ಅಕಾಡೆಮಿಗೆ ಸೇರ್ಪಡೆಯಾದ. ಸೈನ್ಯಕ್ಕೆ ಸೇರಿದ್ದು 1997 ರ ಜೂನ್ 7ರಂದು. ಹನೀಫನ ಬದುಕಿನ ತಾವರೆ ಅರಳಿದ್ದು ಹೀಗೆ. ಕಾರ್ಗಿಲ್‌ನ ಕಡಿದಾದ ತುರ್ತುಕ್ ಪರ್ವತ ಪ್ರದೇಶದಲ್ಲಿ ಶತ್ರುಗಳೊಂದಿಗೆ ಹನೀಫ್ ಹಾಗೂ ಆತನ 11 ರಜಪುತಾನ ರೈಫಲ್ಸ್ ಪಡೆ ಕೊನೆವರೆಗೂ ಉಗ್ರ ಹೋರಾಟ ನಡೆಸಿದರು. ಇವರ ಬಳಿ ಇದ್ದುದು ಚಿಕ್ಕ ಬಂದೂಕುಗಳು. ಶತ್ರುಗಳ ಬಳಿಯಾದರೋ ಅತ್ಯಾಧುನಿಕ ಮೆಷಿನ್‌ಗನ್, ಗ್ರೆನೇಡ್‌ಗಳು. ಒಂದೇ ಸಮನೆ ಶತ್ರುಗಳಿಂದ ಗುಂಡಿನ ಸುರಿಮಳೆ. ಜೊತೆಗೆ ಸಾಯಿಸಿದಷ್ಟೂ ಮುಗಿಯದಿರುವ ಶತ್ರು ಸೈನಿಕರು. ಹನೀಫ್ ಹಾಗೂ ಸಂಗಡಿಗರು ಹೆದರದೆ ಕೊನೆವರೆಗೂ ಕಾದಾಡಿದರು. ಶತ್ರುಗಳ ಮದ್ದುಗುಂಡುಗಳು ಮಾತ್ರ ಹನೀಫ್ ಹಾಗೂ ಅವರ ಜೊತೆಗಿದ್ದ ವೀರ ಸೈನಿಕರನ್ನು ಚಿಂದಿ ಚಿಂದಿ ಮಾಡಿದವು. ಆದರೆ ತುರ್ತುಕ್ ಪರ್ವತ ಪ್ರದೇಶ ಕೊನೆಗೂ ಭಾರತದ ವಶವಾಯಿತು. ರಜಪುತಾನ ರೈಫಲ್ಸ್ ಪಡೆಯ ಸೈನಿಕರ ವೀರಮರಣ ವ್ಯರ್ಥವಾಗಲಿಲ್ಲ. ಕ್ಯಾ. ಹನೀಫ್ ಉದ್ದೀನ್‌ನ ಕಳೇಬರ ಪತ್ತೆಯಾಗಿದ್ದು ಮಾತ್ರ ಆತ ಗತಿಸಿ 42 ದಿನಗಳ ಬಳಿಕ.

`ಹನೀಫ್ ದೇಶಕ್ಕಾಗಿ ಹುತಾತ್ಮನಾಗಿದ್ದಾನೆ. ವೈರಿ ಪಡೆಯ ರುಂಡ ಚೆಂಡಾಡುತ್ತ ಮಡಿದನೆಂದರೆ ಅದಕ್ಕಿಂತ ದೊಡ್ಡ ಸಾಧನೆ ಇನ್ನಾವುದಿದ್ದೀತು?’ – ಹನೀಫನ ತಾಯಿ ಹೇಮಾ ಅಜೀಜ್ ಮಗನ ಸಾಹಸಕ್ಕೆ ಹೆಮ್ಮೆಪಡುವ ಪರಿ ಇದು!

***

1999 ರ ಕಾರ್ಗಿಲ್ ಕದನದಲ್ಲಿ ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಸುಮಾರು 522 ವೀರ ಯೋಧರ ಇಂತಹ ಕಥೆಗಳನ್ನು ಓದುತ್ತಿದ್ದರೆ ಎಂತಹ ಹೇಡಿಗಾದರೂ ರೋಮಾಂಚನವಾಗದೆ ಇರದು. ಟೈಗರ್‌ಹಿಲ್ಸ್, ತೊಲೊಲಿಂಗ್ ಹಿಮಪರ್ವತಗಳು ಸಿಖ್ಖರು, ಪಂಜಾಬಿಗಳು, ಗೂರ್ಖರು, ಬಿಹಾರಿಗಳು, ನಾಗಾಗಳು, ಬಂಗಾಲಿಗಳು, ಮಲೆಯಾಳಿಗಳು, ಮರಾಠರು, ಜಾಟರು, ಕನ್ನಡಿಗರು, ತಮಿಳರು… ಹೀಗೆ ಎಲ್ಲರ ರಕ್ತದಿಂದ ತೊಯ್ದಿವೆ. ಈ ರಕ್ತದ ಕಲೆಗಳ ಮೇಲೆ ಈಗ ಹಿಮ ಹರಡಿಕೊಂಡಿರಬಹುದು. ಆದರೆ ಅವರೆಲ್ಲರ ತ್ಯಾಗ, ಬಲಿದಾನಗಳು ಎಂದಿಗೂ ಅಳಿಯಲಾರವು. ಭಾರತಕ್ಕೆ ಅದೆಂತಹ ಅದಮ್ಯ ಶಕ್ತಿ ಇದೆಯೆಂದು ಚರಿತ್ರೆ ಓದಿದ ಮುಂದಿನ ಪೀಳಿಗೆ ಖಂಡಿತ ಆಶ್ಚರ್ಯಚಕಿತವಾಗದೆ ಇರದು. ಭಾರತದ ಆತ್ಮಶಕ್ತಿ ಸುಪ್ತವಾಗಿರಬಹುದು. ಆದರೆ ಸಮಯ ಬಂದಾಗ ಅದು ಜಾಗೃತವಾಗಿ ಇಡೀ ದೇಶವನ್ನು ಬಡಿದೆಬ್ಬಿಸಬಲ್ಲುದೆಂಬುದಕ್ಕೆ ಕಾರ್ಗಿಲ್ ಕದನ ಒಂದು ಜ್ವಲಂತ ಸಾಕ್ಷಿ.

ನಾಗಾಲ್ಯಾಂಡ್‌ನ ಕೊಹಿಮಾದಲ್ಲಿ ಅರ್ಧ ಶತಮಾನದ ಹಿಂದೆ ಸ್ಥಾಪಿಸಲಾದ ಒಂದು ಪ್ರತಿಮೆ ಇದೆ. ಯುದ್ಧದಲ್ಲಿ ಹೋರಾಡಿ ಕೆಳಗೆ ಕುಸಿಯುತ್ತಿರುವ ಯೋಧನೊಬ್ಬನ ಪ್ರತಿಮೆ ಅದು. ಅದರ ಕೆಳಗೊಂದು ವಾಕ್ಯ: `ನೀವು ಮನೆಗೆ ಹೋದಾಗ ಮನೆಯಲ್ಲಿದ್ದವರಿಗೆ ಹೇಳಿ – ನಿಮ್ಮ ನಾಳೆಗಳಿಗಾಗಿ ನಾವು ನಮ್ಮ ಈ ದಿನಗಳನ್ನು ತ್ಯಾಗ ಮಾಡಿದ್ದೇವೆ’. ಈ ಕೆತ್ತನೆ ಈಗ ಮಳೆಗೆ ತೊಯ್ದು ಚಳಿ ಗಾಳಿಗೆ ತುಯ್ದು ಮಸುಕಾಗಿದೆ. ಬರಹ ಮಸುಕಾದರೇನು? ತಾಯ್ನಾಡಿನ ರಕ್ಷಣೆಗಾಗಿ ಹೋರಾಡುತ್ತಿರುವ ಯೋಧರ ವೀರಗಾಥೆ ಇಂದಿಗೂ ಅಕ್ಷರಶಃ ಈ ಮಾತನ್ನು ಮತ್ತೆ ಮತ್ತೆ ನೆನಪಿಸುತ್ತಿದೆ. ಕಾರ್ಗಿಲ್ ಕದನ ಭೂಮಿಯಿಂದ ಹೆಣವಾಗಿ ಹುಟ್ಟೂರಿಗೆ ಪೆಟ್ಟಿಗೆಯಲ್ಲಿ ಬಂದ ಪ್ರತಿಯೊಬ್ಬ ಯೋಧರೂ ನಮ್ಮೆಲ್ಲರ ನಾಳೆಗಳಿಗಾಗಿ ತಮ್ಮ ಅಮೂಲ್ಯ ಈ ದಿನಗಳನ್ನು ಬಲಿದಾನ ಮಾಡಿದ್ದಾರೆ.

ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ , ಟಿ.ವಿ. ಚಾನೆಲ್‌ಗಳಲ್ಲಿ ಜಾಹೀರಾತೊಂದು ತೇಲಿ ಬರುತ್ತಿತ್ತು – `They didn’t go down fighting for their lives in Kargil: but for ‘. ಅದರ ಹಿಂದೆಯೇ ಇನ್ನೊಂದು ವಾಕ್ಯ ತೇಲಿ ಬರುತ್ತಿತ್ತು: `They die for a stranger. And that stranger is you’.

ಕಾರ್ಗಿಲ್ ಕದನದಲ್ಲಿ 522 ಕ್ಕೂ ಹೆಚ್ಚು ಯೋಧರು ನಮಗಾಗಿ, ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ. ಕಾರ್ಗಿಲ್ ಕದನ ನಡೆದು 15 ವರ್ಷಗಳು ಸಂದಿದ್ದರೂ ಜುಲೈ ತಿಂಗಳು ಬಂದಾಗಲೆಲ್ಲ ಅದೇಕೋ ಈ ಹುತಾತ್ಮರ ನೆನಪಾಗಿ ಕಣ್ಣಾಲಿಗಳು ಒದ್ದೆಯಾಗುತ್ತವೆ. ಈ ಯೋಧರ ಸಾಹಸ, ತ್ಯಾಗವಿಲ್ಲದಿರುತ್ತಿದ್ದರೆ ನಾವು ಕಾರ್ಗಿಲ್ ಪ್ರದೇಶ ಸೇರಿದಂತೆ ಇನ್ನಷ್ಟು ದೇಶದ ಭಾಗವನ್ನು ಖಂಡಿತ ಕಳೆದುಕೊಳ್ಳಬೇಕಾಗಿತ್ತು.

ಭಾರತದ ಇತ್ತೀಚಿನ ಇತಿಹಾಸವೆಂದರೆ, ಅದರಲ್ಲಿರುವುದು ನಮ್ಮ ಯೋಧರ ತ್ಯಾಗ, ಪರಾಕ್ರಮ ಹಾಗೂ ಬಲಿದಾನದ ವೀರಗಾಥೆಗಳೇ. 1948 ರ ಜಮ್ಮು-ಕಾಶ್ಮೀರ ಕಾರ್ಯಾಚರಣೆಯಲ್ಲಿ 1104, 1962 ರ ಚೀನಾ ವಿರುದ್ಧದ ಯುದ್ಧದಲ್ಲಿ 3250, 1965 ರ ಪಾಕಿಸ್ಥಾನ ವಿರುದ್ಧದ ಯುದ್ಧದಲ್ಲಿ 3264, 1971 ರ ಬಾಂಗ್ಲಾದೇಶ ವಿಮೋಚನೆ ಯುದ್ಧದಲ್ಲಿ 3843, 1987 ರ ಶ್ರೀಲಂಕಾದ ಐಪಿಕೆಎಫ್ ಕಾರ್ಯಾಚರಣೆಯಲ್ಲಿ 1157 ಹಾಗೂ 1999ರ ಕಾರ್ಗಿಲ್ ಕದನದಲ್ಲಿ 522 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಇದಲ್ಲದೆ ಬ್ರಿಟಿಷರ ಕಾಲದಲ್ಲಿ ಒಂದನೆಯ ಹಾಗೂ ಎರಡನೆಯ ಮಹಾಯುದ್ಧದಲ್ಲಿ ಮಡಿದ ಭಾರತೀಯ ಯೋಧರ ಸಂಖ್ಯೆಯೂ ಸಾಕಷ್ಟಿದೆ. ಭಾರತದಲ್ಲಿ ಬಲಿದಾನವಾದಷ್ಟು ಯೋಧರ ಸಂಖ್ಯೆ ಜಗತ್ತಿನ ಇನ್ನಾವುದೇ ದೇಶದಲ್ಲಿ ಇರಲಿಕ್ಕಿಲ್ಲ. ಹಾಗಾಗಿಯೇ ಜಗತ್ತಿನಲ್ಲಿ ಅತೀ ಹೆಚ್ಚು ಯೋಧ ವಿಧವೆಯರನ್ನು ಹೊಂದಿರುವ ದೇಶ ನಮ್ಮದು. ಒಂದು ಅಂದಾಜಿನ ಪ್ರಕಾರ ನಮ್ಮ ದೇಶದಲ್ಲಿ ಯೋಧ ವಿಧವೆಯರ ಸಂಖ್ಯೆ 25 ಸಾವಿರ. ಆದರೆ ದೇಶಕ್ಕಾಗಿ ಹೋರಾಡಿ ಮಡಿದ ತಮ್ಮ ಪತಿಯ ಬಗ್ಗೆ ಈ ವಿಧವಾ ಪತ್ನಿಯರ ಪೈಕಿ ಯಾರಿಗೂ ಬೇಸರವಿಲ್ಲ , ಬದಲಿಗೆ ಹೆಮ್ಮೆಯಿದೆ. ಯೋಧರೂ ಅಷ್ಟೆ , ಕೇವಲ ಯುದ್ಧ ರಂಗದಲ್ಲಿ ಮಾತ್ರವಲ್ಲ , ದೇಶದ ವಿವಿಧೆಡೆ ಭೂಕಂಪ, ಚಂಡಮಾರುತ, ಸುನಾಮಿ ಇತ್ಯಾದಿ ನೈಸರ್ಗಿಕ ವಿಪತ್ತುಗಳು ಬಂದೊದಗಿದಾಗ ನೆರವಿಗಾಗಿ ಧಾವಿಸುವವರಲ್ಲಿ ಮೊದಲಿಗರೂ ಅವರೇ. ಪ್ರಜಾತಂತ್ರದ ನಿಜವಾದ ರಕ್ಷಕರು ತಾವೆಂಬ ಉಜ್ವಲ ನಿದರ್ಶನವನ್ನು ಭಾರತೀಯ ಯೋಧರು ಪ್ರದರ್ಶಿಸಿದ್ದಾರೆ.

ಆದರೆ ಇಂತಹ ಯೋಧರನ್ನು ನಾವೆಲ್ಲ ವರ್ಷಕ್ಕೊಮ್ಮೆ (ಕೆಲವೊಮ್ಮೆ ಅದು ಕೂಡ ಇಲ್ಲ) ನೆನಪಿಸಿಕೊಂಡರೆ ಸಾಕೆ? ದೇಶದ ಆಸ್ತಿಯಾಗಿರುವ, ನಮ್ಮೆಲ್ಲರ ನೆಮ್ಮದಿಯ ಬದುಕಿಗೆ ನೆರಳಾಗಿರುವ ಅವರ ಬಗ್ಗೆ ಇಷ್ಟೇ ಸಾಕೆ? ಅವರಂತೆ ಎಲ್ಲರೂ ಯೋಧರಾಗಲು ಸಾಧ್ಯವಾಗದಿರಬಹುದು. ಆದರೆ ಅವರಂತೆ ದೇಶಕ್ಕಾಗಿ ಬದುಕುವ ಪಾಠವನ್ನು ನಾವೆಲ್ಲ ಕಲಿತರೆ ಅದೇ ಈ ವೀರಯೋಧರಿಗೆ ನಾವು ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ.

ಮೊನ್ನೆ ಜುಲೈ 26 ರಂದು ಕಾರ್ಗಿಲ್ ವಿಜಯದ ದಿನಾಚರಣೆ. ಅದೆಷ್ಟು ಮಂದಿ ದೇಶಾದ್ಯಂತ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರೋ ಗೊತ್ತಿಲ್ಲ. ಕೇವಲ ಶ್ರದ್ಧಾಂಜಲಿ ಸಲ್ಲಿಸುವುದಕ್ಕಷ್ಟೇ ನಾವು ಸೀಮಿತರಾಗದೆ, ಅವರಂತೆಯೇ ದೇಶಕ್ಕಾಗಿ ಬದುಕುವುದನ್ನು ರೂಢಿಸಿಕೊಳ್ಳಬೇಡವೆ?

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top