ಬೆಳ್ತಂಗಡಿ : ಬದುಕಿನ ಪ್ರತಿಯೊಂದು ಕ್ಷಣವೂ ಅಮೂಲ್ಯವಾದದ್ದು. ಜೀವನದಲ್ಲಿ ಬರುವ ಅವಕಾಶಗಳನ್ನು ಸದುಪಯೋಗಿಸಿಕೊಂಡು ನಾವೂ ಬೆಳಗಬೇಕು ಇನ್ನೊಬ್ಬರನ್ನೂ ಬೆಳಗಿಸಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ನುಡಿದರು.
ಅವರು ಉಜಿರೆ ಶ್ರೀಜನಾರ್ದನ ಸ್ವಾಮಿ ದೇವಳದ ಪ್ರಾಂಗಣದಲ್ಲಿ ನಡೆದ ದೇವಳದ ಆಡಳ್ತೆ ಮೊಕ್ತೇಸರ ಶ್ರೀ ಯು. ವಿಜಯರಾಘವ ಪಡ್ವೆಟ್ನಾಯ ಅವರ ಸಪ್ತತಿ ಅಭಿನಂದನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಯಂತ್ರದ ಪ್ರತಿಯೊಂದು ಭಾಗವೂ ಅಮೂಲ್ಯವಾದಂತೆ ನಮ್ಮ ಬದುಕಿನ ಪ್ರತೀ ನಿಮಿಷವೂ ಅಮೂಲ್ಯವಾದದ್ದು. ಯಾವುದೂ ಸಣ್ಣದು, ದೊಡ್ಡದು ಇಲ್ಲ. ಆಯುಷ್ಯದಲ್ಲಿ ಮನುಷ್ಯ ಮಾಡುವ ಕಾರ್ಯದಲ್ಲಿ ಹೃದಯಕ್ಕೆ ತಟ್ಟುವಂತಹ, ಭಾವನೆಗಳನ್ನು ಉದ್ದೀಪಿಸುವಂತಹ ಕೆಲಸ ಮಾಡುತ್ತಿರುತ್ತೇವೆ. ಇಂತಹವರನ್ನು ಸುಮನಸರು ಎಂದು ಹೇಳುತ್ತಾರೆ. ವಿಜಯರಾಘವ ಪಡ್ವೆಟ್ನಾಯರು ಇಂತಹವರಲ್ಲಿ ಒಬ್ಬರು. ಇವರು ಇನ್ನೊಬ್ಬರನ್ನು ಸುಮನಸರನ್ನಾಗಿ ಮಾಡಲು ಪ್ರಯತ್ನಪಟ್ಟಿದ್ದಾರೆ ಎಂದರು.
ನಗುನಗುತಾ ಇರುವ ಪ್ರವೃತ್ತಿ, ಸರಳವಾಗಿ ಕಾಣಬೇಕೆಂಬ ಇಚ್ಛೆ ಪಡ್ವೆಟ್ನಾಯರದು. ಗುಣಗಳ ಯೋಗ್ಯತೆಯು ಬಲ್ಲವರಲ್ಲಿ ಗುಣಗಳಾಗಿಯೇ ಇರುತ್ತವೆ. ಗುಣಗಳ ಆರಾಧನೆ, ಸಮಾಜಮುಖಿಯಾಗಿ ನಾವು ಹೇಗೆ ಬೆರೆಯಬೇಕು ಎಂಬುದನ್ನು ಪಡ್ವೆಟ್ನಾಯರು ತೋರಿಸಿಕೊಟ್ಟಿದ್ದಾರೆ ಎಂದರು. ಭಗವಂತನ, ಮಹಾಪುರುಷರ, ಸಜ್ಜನರ ಸ್ಮರಣೆ ಗುಣಗಾನ ನಮ್ಮ ಭಾವನಾತ್ಮಕ ಶುದ್ದೀರಕರಣಕ್ಕೆ ಕಾರಣವಾಗುತ್ತದೆ. ಸುಮಧುರ ವಿಚಾರಗಳನ್ನು ಸಂಗ್ರಹಿಸಿದಂತೆ ನಮ್ಮ ಮನಸ್ಸು ಅರಳುತ್ತದೆ. ಕೆಲ ವರ್ಷಗಳ ಹಿಂದೆ ಪಡ್ವೆಟ್ನಾಯರಿಗೆ ಸಂಘರ್ಷವನ್ನು, ಸಂಕಷ್ಟವನ್ನು ಎದುರಿಸುವ ಸನ್ನಿವೇಶ ಬಂದಿತ್ತು. ಆದರೆ ಅಂದು ಅವರು ಯಾವುದಕ್ಕೂ ಬಗ್ಗದೆ ಗಟ್ಟಿಯಾಗಿ ನಿಂತಿದ್ದರಿಂದ ಇಂದು ಅವರು ಉಜಿರೆಯ ಪರಿಸರದಲ್ಲಿ ಬೆಳಗುತ್ತಿದ್ದಾರೆ ಎಂದರು.
ಆಶೀರ್ವಚನ ನೀಡಿದ ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ವ್ಯಕ್ತಿಯ ವ್ಯಕ್ತಿತ್ವ ಜಲದಂತೆ ಪಾರದರ್ಶಕವಾಗಿರಬೇಕು. ಅಂತಹ ವ್ಯಕ್ತಿತ್ವವನ್ನು ಪಡ್ವೆಟ್ನಾಯರು ಹೊಂದಿರುವುದು ಸಂತಸ ತಂದಿದೆ. ತನ್ನ ಕರ್ತವ್ಯದ ಮೂಲಕ ಅವರು ಪರಿಸರದ ಜನತೆಯ ಪ್ರೀತಿ, ವಿಶ್ವಾಸ, ಅಭಿಮಾನಗಳನ್ನು ಪಡೆದುಕೊಂಡಿದ್ದಾರೆ ಎಂದರು.
ಸಮ್ಮಾನಕ್ಕೆ ಉತ್ತರಿಸಿದ ವಿಜಯರಾಘವ ಪಡ್ವೆಟ್ನಾಯರು, ನನ್ನ ಹಿರಿಯರು ಮನೆಯನ್ನು ಕೇಂದ್ರವನ್ನಾಗಿಟ್ಟುಕೊಂಡು ನಡೆಸುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ನನ್ನ ಜೀವನಕ್ಕೆ ಸ್ಪೂರ್ತಿಯನ್ನು ನೀಡಿದೆ. ಹೀಗಾಗಿ ಧಾರ್ಮಿಕ, ಕಲೆಗಳನ್ನು ಮುಖ್ಯವಾಗಿ ಯಕ್ಷಗಾನ ಕಲೆ ಇಂದು ಜನಾರ್ದನ ಸ್ವಾಮಿ ದೇಗುಲದಲ್ಲಿ ಮುಂದುವರಿಸಲು ಕಾರಣವಾಗಿದೆ. ಧರ್ಮಸ್ಥಳಕ್ಕೂ ನನ್ನ ಮನೆತನಕ್ಕೂ ಇರುವ ಅವಿನಾಭಾವ ಸಂಬಂಧದಿಂದಾಗಿ ಮತ್ತು ಉಜಿರೆ ಪರಿಸರದ ಜನತೆಯ ಅಭಿಮಾನದಿಂದ ದೇವಳವನ್ನು ಮುನ್ನಡೆಸುತ್ತಾ ಬಂದಿದ್ದೇನೆ. ಈ ಕಾರ್ಯಕ್ರಮದಿಂದ ನನಗೆ ಇನ್ನಷ್ಟು ಜವಾಬ್ದಾರಿಗಳು ಹೆಚ್ಚಿವೆ ಎಂದು ಭಾವಿಸಿದ್ದೇನೆ ಎಂದರು.
ವೇದಿಕೆಯಲ್ಲಿ ಹೇಮಾವತಿ ವಿ. ಹೆಗ್ಗಡೆ, ಧರ್ಮಸ್ಥಳ ಹರ್ಷೇಂದ್ರ ಕುಮಾರ್, ಕುಸುಮಾ ಪಡ್ವೆಟ್ನಾಯ, ಶ್ರೀ ಯು. ವಿಜಯರಾಘವ ಪಡ್ವೆಟ್ನಾಯ ಸಪ್ತತಿ ಅಭಿನಂದನಾ ಸಮಿತಿ ಗೌರವ ಸಲಹೆಗಾರ, ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಪ್ರಭಾಕರ್, ಇನ್ನೋರ್ವ ಗೌರವ ಸಲಹೆಗಾರ ಹಿರಿಯರಾದ ಸುಬ್ರಾಯ ಶೆಣೈ, ಉಪಾಧ್ಯಕ್ಷ ಹರೀಶ್ ಕುಮಾರ್, ಉಪಸ್ಥಿತರಿದ್ದರು.
ಸಮಿತಿ ಅಧ್ಯಕ್ಷ ಡಾ| ಬಿ. ಯಶೋವರ್ಮ ಸ್ವಾಗತಿಸಿ ಪ್ರಸ್ತಾವಿಸಿದರು. ಉಪಾಧ್ಯಕ್ಷ ಪ್ರತಾಪಸಿಂಹ ನಾಯಕ್ ಅಭಿನಂದನಾ ಭಾಷಣ ಮಾಡಿ, ಅಭಿನಂದನಾ ಪತ್ರ ವಾಚಿಸಿದರು. ಕಾರ್ಯದರ್ಶಿ ಜಗದೀಶ್ ವಂದಿಸಿದರು. ಸಂಸ್ಕೃತ ಉಪನ್ಯಾಸಕ ಡಾ| ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಸಮಾರಂಭಕ್ಕೆ ಮೊದಲು ಉಜಿರೆ ಶ್ರೀರತ್ನವರ್ಮ ಕ್ರೀಡಾಂಗಣದಿಂದ ಭವ್ಯವಾದ, ಆಕರ್ಷಕ ಮೆರವಣಿಗೆಯಲ್ಲಿ ಪಡ್ವೆಟ್ನಾಯ ದಂಪತಿಗಳನ್ನು ವೇದಿಕೆಗೆ ಕರೆತರಲಾಯಿತು. ಜಟಕಾಬಂಡಿ, ಕೊಂಬು, ಕಹಳೆ, ಕೀಲು ಕುದುರೆ, ಕರಂಗೋಲು, ಯಕ್ಷಗಾನ ವೇಷಗಳು, ಕರಗ, ಮಹಿಳೆಯರಿಂದ ಡೊಳ್ಳು, ನವಿಲು ನೃತ್ಯ, ಕೇರಳದ ಕರಗ, ಕೇರಳ ಚಂಡೆ, ಕುದುರೆ ಸವಾರರು, ಮಹಿಳಾ ಭಜನಾ ತಂಡ, ಶ್ರೀ ಜನಾರ್ದನ ಸ್ವಾಮಿಯ ರಥ ಮೆರವಣಿಗೆ ಕಳೆಕಟ್ಟುವಂತೆ ಮಾಡಿತ್ತು. ಕಾರ್ಯಕ್ರಮದಲ್ಲಿ ಗಣ್ಯರು ಪಡ್ವೆಟ್ನಾಯ ದಂಪತಿಯನ್ನು ಸಮ್ಮಾನಿಸಿದರು.
ಸಮಾರಂಭದಲ್ಲಿ ಡಾ| ಹೆಗ್ಗಡೆಯವರು ಧರ್ಮಭೂಷಣ ಎಂಬ ಸ್ಮರಣಸಂಚಿಕೆಯನ್ನು, ಕಾಣಿಯೂರು ಶ್ರೀಗಳು ಪಡ್ವೆಟ್ನಾಯರ ಬಗ್ಗೆ ಸಾಕ್ಷ್ಯಚಿತ್ರದ ಸಿಡಿಯನ್ನು ಅನಾವರಣಗೊಳಿಸಿದರು. ಕೊನೆಯಲ್ಲಿ ಪಡ್ವೆಟ್ನಾಯರಿಗೆ ಸಾರ್ವಜನಿಕರು ಗೌರವಾರ್ಪಣೆ ಮಾಡಿದರು. ೭೦ ಮಂದಿ ಗಾಯಕರು ಅಭಿವಂದನಾ ಗೀತೆಯನ್ನು ಪ್ರಸ್ತುತಪಡಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.