ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಒಂದು ವ್ಯಕ್ತಿತ್ವ ಇರುತ್ತದೆ. ಕೆಲಸ, ಶಿಕ್ಷಣ, ಅನುಭವ ಮತ್ತು ವಾತಾವರಣ ಇವು ವರ್ತಮಾನವನ್ನು ; ಸಂಸ್ಕಾರಗಳು ಭೂತಕಾಲವನ್ನು ; ಆದರ್ಶವು ಭವಿಷ್ಯಕಾಲವನ್ನು ಸೂಚಿಸುತ್ತವೆ. ಆದ್ದರಿಂದ ವ್ಯಕ್ತಿತ್ವ ನಿರ್ಮಾಣದಲ್ಲಿ ಭೂತ –ವರ್ತಮಾನ-ಭವಿಷ್ಯ ಈ ಮೂರೂ ಪ್ರಧಾನ ಅಂಶಗಳಾಗಿವೆ. ಒಂದು ವಾಹನವನ್ನು ನಡೆಸುವವನಿಗೆ ವಾಹನದ ಮೇಲೆ ಸಂಪೂರ್ಣ ನಿಗ್ರಹ ಇರಬೇಕು. ಆಗಲೇ ಅದನ್ನು ಸರಿಯಾಗಿ ನಡೆಸಬಲ್ಲ ಹಾಗೂ ಅದನ್ನು ಸುಸ್ಥಿತಿಯಲ್ಲಿ ಇಟ್ಟುಕೊಂಡಿರಲು ಸಾಧ್ಯ. ಇದರಂತೆಯೇ ನಮ್ಮ ವ್ಯಕ್ತಿತ್ವವೂ ಸಂಪೂರ್ಣ ನಮ್ಮ ಹಿಡಿತದಲ್ಲಿ ಇರಬೇಕು. ಈ ಪೂರ್ಣತೆ ಅಥವಾ ಸಮಗ್ರತೆಯನ್ನೇ ವ್ಯಕ್ತಿತ್ವ ಎಂದು ಕರೆಯುವುದು. ವ್ಯಕ್ತಿತ್ವ ವಿಕಾಸವು ಭೌತಿಕ, ಬೌದ್ಧಿಕ, ನೈತಿಕ ಮತ್ತು ಆಧ್ಯಾತ್ಮಿಕತೆಗಳ ಸಮಗ್ರ, ಸರ್ವತೋಮುಖ ಬೆಳವಣಿಗೆ. ಹೇಗೆ ದೇಹವು ತನಗೆ ಬೇಕಾದುದನ್ನು ಸ್ವೀಕರಿಸಿ ಮಾರ್ಪಡಿಸಿ ಅರಗಿಸಿಕೊಂಡು ಬೆಳೆಯುತ್ತದೆಯೋ ಹಾಗೆಯೆ ಒಬ್ಬ ವ್ಯಕ್ತಿಯು ತನ್ನ ವ್ಯಕ್ತಿ ವೈಶಿಷ್ಟ್ಯಕ್ಕೆ ಅನುಗುಣವಾಗಿ ಹೊರಗಿನ ಅಂಶಗಳನ್ನು ಸ್ವೀಕರಿಸುತ್ತಾ ಸಾಧ್ಯವಾದುದನ್ನು ಮಾರ್ಪಡಿಸುತ್ತ ಬೆಳೆಯುವುದೇ ವ್ಯಕ್ತಿತ್ವದ ವಿಕಾಸ ಎನ್ನಬಹುದು.
ಯಾವುದೇ ಒಬ್ಬ ವ್ಯಕ್ತಿಗೂ ಒಂದಲ್ಲ ಒಮ್ಮೆ ತನ್ನ ಸಾಧನೆಯ ಹಾದಿಯಲ್ಲಿ ಗುರಿಯ ಬಗೆಗಿನ ದೃಷ್ಟಿಗೆ ಮಂಜುಕವಿದಂತಾಗಿ ಹತಾಷೆಯ ಭಾವ ಆವರಿಸುತ್ತದೆ. ಅಂತಹ ಸಂದರ್ಭದಲ್ಲಿ ಆ ಹತಾಷೆಯನ್ನು ಮೆಟ್ಟಿ ನಿಂತು ಗುರಿ ಸಾಧಿಸಲು ಮನಸ್ಸನ್ನು ದೃಢಗೊಳಿಸುವುದೇ ವ್ಯಕ್ತಿತ್ವ ವಿಕಸನದ ಮೊದಲ ಮೆಟ್ಟಿಲು. ಕೆಲವೊಮ್ಮೆ ತನು ಗೆಲ್ಲಲಾರೆ ಎಂಬ ಸ್ಥಿತಿಯು ಎದುರಾದಾಗ ; ಗೆಲ್ಲಲೇ ಬೇಕು ಎಂಬ ಛವಿದ್ದಾಗ ವಾಮಮಾರ್ಗದ ಮೂಲಕವಾದರೂ ಗೆಲ್ಲಬೇಕು ಎಂದೆನ್ನಿಸಿಬಿಡುತ್ತದೆ. ಆದರೆ ಗೀತೆಯಲ್ಲಿ ಹೇಳಿರುವ ಮಾರ್ಗ ಅದಲ್ಲ. ಗೀತೆಯಲ್ಲಿ ಉಪದೇಶಿತವಾದದ್ದು ಧರ್ಮ ಮಾರ್ಗ. ಎಂತಹ ಕ್ಲಿಷ್ಟ ಸಂದರ್ಭದಲ್ಲೂ ಸಹ ಧರ್ಮವನ್ನು ಬಿಡಬಾರದು. ಧರ್ಮ ಬಿಟ್ಟವರು ಎಂತಹವರಾದರು ಸರಿ ಅವರನ್ನೂ ಬಿಡಬಾರದು. ಧರ್ಮದಿಂದಲೇ ಎಲ್ಲವನ್ನೂ, ಎಲ್ಲರನ್ನೂ ಗೆಲ್ಲಬೇಕು ಎಂದೇ ಹೇಳಿದೆ.
ಭಗವದ್ಗೀತೆ ವ್ಯಕ್ತಿತ್ವ ವಿಕಸನದ ಸಂಜೀವಿನಿ. ಅದೊಂದು ಮೈಂಡ್ ಮ್ಯಾನೇಜ್ಮೆಂಟ್ ಗ್ರಂಥ. ಗೀತೆಯುದ್ದಕ್ಕೂ ಶ್ರೀಕೃಷ್ಣ ಮಾಡಿದ ಪ್ರಮುಖ ಕೆಲಸವೇನೆಂದರೆ ಅರ್ಜುನನ ಮನಸ್ಸನ್ನು ಮ್ಯಾನೇಜ್ ಮಾಡಿದ್ದು. ಮತ್ತು ಇತರರ ಮನಸ್ಸನ್ನು ಮ್ಯಾನುಪುಲೆಟ್ ಮಾಡಿದ್ದು. ಮನಸ್ಸು ಏಕಕಾಲಕ್ಕೆ ಚಂಚಲವೂ ಹೌದು, ಬದಲಾಯಿಸಲು ದುಸಾಧ್ಯವಾದ ಕ್ಲಿಷ್ಟ ಸಂಗತಿಯೂ ಹೌದು. ಅದನ್ನು ನಿಭಾಯಿಸುವುದೊಂದು ಕಲೆ. ನಮ್ಮ ಮನಸ್ಸನ್ನು ನಾವು ನಿಗ್ರಹಿಸುವುದು ಹಾಗೂ ಬೇರೆಯವರ ಮನಸ್ಸನ್ನು ನಾವು ನಿಭಾಯಿಸುವುದು ಇವೆರಡೂ ಪ್ರತ್ಯೇಕ ವಿಷಯಗಳು. ಶ್ರೀಕೃಷ್ಣ ಅರ್ಜುನನ ಮೇಲೆ ಇವೆರಡೂ ತಂತ್ರಗಳನ್ನು ಪ್ರಯೋಗಿಸಿದ. ಒಮ್ಮೆ ಅರ್ಜುನ ತನ್ನ ಮನಸ್ಸನ್ನು ತಾನೇ ಬದಲಿಸಿಕೊಳ್ಳುವಂತೆ ಪ್ರಚೋದನೆ ನೀಡಿದ. ಮತ್ತೊಮ್ಮೆ ಅವನ ಮನಸ್ಸನ್ನು ತಾನು ಬದಲಿಸಲು ಪ್ರಯತ್ನಿಸಿದ. ಸಂಖ್ಯಯೋಗದ ಮೂಲಕ ಬದುಕಿನ ನಶ್ವರತೆಯ ಬಗ್ಗೆ ಹಾಗೂ ಮನಸ್ಸನ್ನು ಸ್ಥಿರಗೊಳಿಸಿಕೊಳ್ಳುವ ಬಗ್ಗೆ ಹೇಳಿದ. ನಂತರ ಕರ್ಮಯೋಗದ ಮೂಲಕ ಬದುಕಿನ ಉದ್ದೇಶವನ್ನು ಬೋಧಿಸಿದ. ಅನಂತರ ಜ್ಞಾನಯೋಗದ ಮೂಲಕ ಅರಿವಿನ ಮಹತ್ವ ಹೇಳಿಕೊಟ್ಟ. ಸನ್ಯಾಸ, ಧ್ಯಾನ, ಜ್ಞಾನ-ವಿಜ್ಞಾನ ಹೀಗೆ ಎಲ್ಲವನ್ನೂ ಹೇಳಿ ಕೊನೆಯಲ್ಲಿ “ಯಥೇಚ್ಚಸಿ ತಥಾ ಕುರು” ಎಂದು ಹೇಳಿ ‘ನಿನಗೆ ಹೇಗೆ ತೋಚುತ್ತದೆಯೂ ಹಾಗೇ ಮಾಡು. ನೀನೇ ಒಂದು ನಿರ್ಧಾರಕ್ಕೆ ಬಾ’ ಎಂದ.
ಶ್ರೀಕೃಷ್ಣ ಯಥೇಚ್ಚಸಿ ತಥಾಕುರು ಎಂದು ಹೇಳಿದ್ದರ ಹಿಂದೆ ಒಂದು ಅದ್ಭುತ ಕಾರಣವಿದೆ. ಈ ಮನಸ್ಸೇ ಹಾಗೆ – ಎಲ್ಲವನ್ನೂ ಕೇಳುತ್ತದೆ. ತನಗೆ ಬೇಕಾದುದ್ದನ್ನು ಮಾತ್ರ ಸ್ವೀಕರಿಸುತ್ತದೆ. ತನಗನುಕೂಲವಾದದ್ದನ್ನು ಮಾತ್ರ ಕಾರ್ಯಗತಗೊಳಿಸುತ್ತದೆ. ವ್ಯಕ್ತಿಯ ವ್ಯಕ್ತಿತ್ವ ವಿಕಾಸವಾಗಬೇಕಾದರೆ ಆತ ತೆಗೆದುಕೊಳ್ಳುವ ನಿರ್ಧಾರ ಆತನ ಮೇಲೆ ಹೇರಿಕೆಯದ್ದಾಗಿರಬಾರದು. ಅದು ಸ್ವಯಂ ನಿರ್ಧಾರವಾಗಿರಬೇಕು. ಯಾಕೆಂದರೆ ಸ್ವಯಂ ನಿರ್ಧಾರದ ಮೇಲೆ ಇರುವ ಪ್ರೀತಿ, ಕಾಳಜಿ, ವಿಶ್ವಾಸ ಹೇರಿಕೆಯಲ್ಲಿ ಇರುವುದಿಲ್ಲ. ಹಾಗಾಗಿಯೇ ಶ್ರೀಕೃಷ್ಣ ಯಥೇಚ್ಚಸಿ ತಥಾ ಕುರು ಎಂದದ್ದು.
ನಾವು ನಮ್ಮ ಮನಸ್ಸನ್ನು ನಿಯಂತ್ರಿಸುವ ಕಲೆಯನ್ನು ತಿಳಿದುಕೊಂಡರೆ ಏನು ಬೇಕಾದರೂ ಸಾಧಿಸಬಹುದು. ಅರ್ಜುನನ ವಿಷಯದಲ್ಲಿ ಶ್ರೀಕೃಷ್ಣ ಮಾಡಿದ ಕೆಲಸವೂ ಇದೇನೇ. ಯುದ್ಧ ಮಾಡುವುದಿಲ್ಲವೆಂದು ಹೇಳಿದರೂ ಅರ್ಜುನನು ಮೂಲತಃ ಕ್ಷತ್ರಿಯನಾಗಿರುವುದರಿಂದ ಅವನ ಒಳ ಮನಸ್ಸಿನಲ್ಲಿ ಗೆಲ್ಲುವ ತುಡಿತ ಇದ್ದೇ ಇರುತ್ತದೆ ಎಂಬುದನ್ನು ಅವನು ಅರ್ಥಮಾಡಿಕೊಂಡ. ಅದಕ್ಕೆ ಪೂರಕವಾಗಿ ಮನವೊಲಿಕೆಯ ಮಾತುಗಳನ್ನಾಡಿದ. ಅರ್ಜುನ ಬೇರೆ ದಾರಿಯಿಲ್ಲದೆ ಯುದ್ಧಕ್ಕೆದ್ದು ನಿಂತ. ನಾವೂ ಹಾಗೆಯೇ. ನಮ್ಮದಾದೊಂದು ಗುರಿಯನ್ನು ಸಿದ್ಧಪಡಿಸಿಟ್ಟುಕೊಂಡ ಮನಸ್ಸು ಕೆಲವೊಮ್ಮೆ ಧೂಳು ಮುಸುಕಿದಂತೆ ಮಬ್ಬಾಗಿ ಗುರಿ ಅಸ್ಪಷ್ಟವಾದಾಗ ಧುಳನ್ನೊರೆಸಿ ಗುರಿಸ್ಪಷ್ಟಪಡಿಸಿಕೊಂಡಾಗ ವ್ಯಕ್ತಿತ್ವ ವಿಕಸನದ ಬಾಗಿಲು ತೆರೆದುಕೊಳ್ಳುತ್ತದೆ. ಗೆಲ್ಲುವ ಕುದುರೆಯಾದ ಮನಸ್ಸು ಗೊಂದಲಕ್ಕೀಡಾದಾಗ ಅದನ್ನು ತಿಳಿಗೊಳಿಸಿ ಅದಕ್ಕೆ ಮೇವುಣಿಸುವುದನ್ನು ಗೀತೆಯಲ್ಲಿ ಯಥೇಚ್ಚವಾಗಿ ಕಾಣಬಹುದು. ನೀನುಯುದ್ಧದಲ್ಲಿ ಗೆದ್ದರೆ ರಾಜ್ಯ ಸಿಗುತ್ತದೆ. ಗೆಲ್ಲದೆ ಸತ್ತರೆ ಸ್ವರ್ಗ ಸಿಗುತ್ತದೆ ಎಂದು ಲಾಭದ ಆಸೆಯ ಬೀಜವನ್ನು ಬಿತ್ತಿ ಹುರಿದುಂಬಿಸಿ ಮನಸ್ಸನ್ನು ಗುರಿಯ ಕಡೆಗೇ ನೋಡುವಂತೆ ಮಾಡುತ್ತಾನೆ ಶ್ರೀಕೃಷ್ಣ. ನಮ್ಮ ಮನಸ್ಸು ಗುರಿಯಾಚೆಗೆ ನೋಡದಂತೆ ಮಾಡಲು ಈ ರೀತಿಯ ಲಾಭದ ಆಮಿಷಗಳನ್ನು ಧನಾತ್ಮಕವಾಗಿ ನೀಡಬೇಕಾಗುತ್ತದೆ. ಗುರಿಯಿಂದ ನಮ್ಮ ದೃಷ್ಟಿ ಬೇರೆಡೆಗೆ ತಿರುಗಿಸಿದಾಗ ಮಾತ್ರ ನಮಗೆ ಗುರಿಯು ಕಷ್ಟದಂತೆ ತೋರುತ್ತದೆ ಎಂದು ಅರಿತು ಗೆದ್ದರೆ ಅಭಿಮಾನ ಸೋತರೆ ಅನುಭವ ಎಂಬ ಸೂತ್ರದೊಂದಿಗೆ ಸೆಣಸಾಡಿದಾಗ ನಮ್ಮ ವಿಕಾಸದ ಉನ್ನತಿಗೆ ಸೋಪಾನ ಹಾಕಿಕೊಂಡಂತಾಗುತ್ತದೆ.
ವ್ಯಕ್ತಿ ಸಮಾಜಕ್ಕೆ ತನ್ನನ್ನು ತಾನು ತೆರೆದುಕೊಂಡಾಗ ಅವನಿಗೆ ಗೌರವಾದರಗಳಿಂದ ಬರಬಹುದಾದ ಸಹಜ ಅಹಂಕಾರವನ್ನು ಮೆಟ್ಟಿ ನಿಂತಾಗ ಮಾತ್ರ ಬೆಳೆಯಲು ಸಾಧ್ಯ. ಅಂತಹ ಎದುರಾಗುವ ಅಹಂಕಾರವನ್ನು ನಿಯಂತ್ರಿಸಲೆಂದೇ ಶ್ರೀಕೃಷ್ಣ ಹೇಳಿದ ಮಾತು “ಕರ್ಮಣ್ಯೇವಾಧಿಕರಸ್ತೆ ಮಾ ಫಲೇಷು ಕದಾಚನ” ಎಂದು. ಕೆಲಸವನ್ನು ಮಾತ್ರ ಮಾಡು ಅದರ ಫಲವನ್ನು ದೇವರಿಗೆ ಬಿಡು ಅರ್ಥಾತ್ ಅದರಿಂದ ಬಂದ ಫಲವನ್ನು ಅವನ ದಯೆ ಎಂದು ಮಾತ್ರ ಸ್ವೀಕರಿಸು. ನಿನ್ನದೆಂದು ಭಾವಿಸಬೇಡ ಎಂದು. ನಿಸ್ವಾರ್ಥಿಯಾಗೆಂದು ಹೇಳಿದ ಶ್ರೀಕೃಷ್ಣ ಅರ್ಜುನನನ್ನು ಸ್ವಾರ್ಥಯೋಚನೆಯಿಂದ ಹೊರದಬ್ಬಿ ನಮ್ಮನ್ನು ಎಚ್ಚರಿಸುತ್ತಾನೆ.
ಗೀತೆಯಲ್ಲಿ ಭಗವಂತ ಉಪದೇಶಿಸುವ ರೀತಿಯೇ ವಿಶೇಷ.
ಮೊದಲು ಹೇಳುತ್ತಾನೆ – ನಿನ್ನ ಒಳ್ಳೆಯದಕ್ಕೆ ಹೇಳುತ್ತೇನೆ ಯುದ್ಧ ಮಾಡು.
ನಂತರ ಹೇಳುತ್ತಾನೆ – ಗೆದ್ದರೆ ರಾಜ್ಯ, ಸತ್ತರೆ ಸ್ವರ್ಗ ಸಿಗುತ್ತದೆ ಯುದ್ಧ ಮಾಡು.
ಆಮೇಲೆ ಹೇಳುತ್ತಾನೆ – ದುಷ್ಟ ಶಕ್ತಿಯನ್ನು ನಾಶ ಮಾಡದಿದ್ದರೆ ನರಕಕ್ಕೆ ಹೋಗುತ್ತೀಯ. ಹಾಗಾಗಿ ಯುದ್ಧ ಮಾಡು.
ಆಮೇಲೆ ಹೇಳುತ್ತಾನೆ – ಜನರಿಗೆ ಒಳ್ಳೆಯದಾಗುತ್ತದೆ. ಅದಕ್ಕಾಗಿಯಾದರೂ ಯುದ್ಧ ಮಾಡು.
ಕೊನೆಯಲ್ಲಿ ಹೇಳುತ್ತಾನೆ- ಧರ್ಮಕ್ಕಾಗಿ ಯುದ್ಧ ಮಾಡು. ಎಂದು.
ಇದು ಒಂದು ವಿಕಾಸದ ಹಂತ. ನಾವು ಮಾಡುವ ಕೆಲಸದ ಬಗ್ಗೆ ನಮ್ಮ ದೃಷ್ಟಿಕೋನ ಹೇಗಿರಬೇಕೆಂಬುದಕ್ಕೆ ಸೂಚ್ಯ ವಿವರಣೆ ಇದು. ನಮ್ಮ ವಿಕಾಸದ ಮೂಲ ಅಗತ್ಯ ಹೊಟ್ಟೆಪಾಡೇ ಇರಬಹುದು. ಆದರೆ ಎಲ್ಲರೂ ಕೇವಲ ಹೊಟ್ಟೆಪಾಡಿಗಾಗಿ ಬದುಕುವುದಿಲ್ಲ. ಬದುಕಿನ ಕನಿಷ್ಠ ಅಗತ್ಯಗಳನ್ನು ಮೀರಿ ಬೆಳೆದ ಮೇಲೆ ಹೇಗೆ ನಮ್ಮ ದೃಷ್ಟಿಕೋನವನ್ನು ಬದಲಿಸಿಕೊಳ್ಳುತ್ತ ಹೋಗಬೇಕೆಂಬುದನ್ನು ಗೀತೆಯಿಂದ ಕಲಿಯಬಹುದು. ವ್ಯಕ್ತಿ – ಸಮಾಜ – ರಾಷ್ಟ ಈ ವಿಕಾಸದ ಹಂತದಲ್ಲಿಯೇ ಉಪದೇಶ ಮಾಡಿರುವ ರೀತಿ ಅನನ್ಯವಾದದ್ದು. ಅದೇ ವೇದ್ಯವಾದದ್ದೂ ಕೂಡ.
ನಮ್ಮಿಂದ ಸಾಧ್ಯವಾಗುವ ಗುರಿಯನ್ನೇ ಇಟ್ಟುಕೊಳ್ಳಬೇಕಾದದ್ದು ಕೂಡಾ ವಿಕಾಸದ ಮೈಲಿಗಲ್ಲಿಗೆ ಪ್ರಮುಖ ಅಂಶವಾಗುತ್ತದೆ. ನಮ್ಮಲ್ಲಿರುವ ಸಾಮರ್ಥ್ಯಕ್ಕೆ ತಕ್ಕಂತೆ ನಮ್ಮ ಗುರಿಯನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಒಬ್ಬ ಸಾಮಾನ್ಯ ಸೈನಿಕನಿಗೆ ಬೋಧಿಸಬೇಕಾದ ಸಂದರ್ಭ ಎದುರಾಗಿದ್ದರೆ ಆಗ ‘ಯುದ್ಧಕ್ಕೆ ನೀನೆಷ್ಟು ಅವಶ್ಯಕ’ ಎಂದು ತಿಳಿಹೇಳುತ್ತಿದ್ದ ಶ್ರೀಕೃಷ್ಣ ಅರ್ಜುನ ಅಸಾಮಾನ್ಯ ಯುದ್ಧಾಳುವಾದ್ದರಿಂದ ಆತನಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ ಎದುರಾಳಿಯ ಇಡೀ ಸೈನ್ಯವನ್ನು ಧೂಳಿಪಟ ಮಾಡಿ ಬಡಿದು ಬಾಯಿಗೆ ಹಾಕಿಕೊಳ್ಳುವಷ್ಟು ಸಾಮರ್ಥ್ಯ ಇದೆಯೆಂದು ತಿಳಿಸಿ ಎಚ್ಚರಿಸಿದ. ನಾವೂ ಹಾಗೆಯೆ. ನಮ್ಮ ಸಾಮರ್ಥ್ಯವನ್ನು ತಿಳಿದು ಅದನ್ನು ಹುರಿದುಂಬಿಸಿಕೊಂಡು ನಮ್ಮ ಅನುಕೂಲಕ್ಕೆ ತಕ್ಕಂತೆ ಗುರಿಯನ್ನು ಇಟ್ಟುಕೊಂಡು ಎಲ್ಲವನ್ನೂ ಪರಿವರ್ತಿಸಿಕೊಳ್ಳುವುದೇ ಉತ್ತಮ ವಿಕಾಸದ ತಂತ್ರ. ಪರಿಹರಿಸಲು ಸಾಧ್ಯವೇ ಇಲ್ಲ ಎಂಬುದರ ಬಗ್ಗೆ ಎಷ್ಟು ಯೋಚಿಸಿದರೂ ಪ್ರಯೋಜನವಿಲ್ಲ. ಅದನ್ನು ಬಿಟ್ಟು ಮುಂದುವರಿಯುವುದೇ ಸೂಕ್ತ.
ಶ್ರೀಕೃಷ್ಣ ಹೇಳುತ್ತಾನೆ –
ಜಾತಸ್ಯಹಿ ಧ್ರುವೋ ಮೃತ್ಯುರ್ಧ್ರುವಂ ಜನ್ಮ ಮೃತಸ್ಯಚ |
ತಸ್ಮಾದಪರಿಹಾರ್ಯೇರ್ಥೆ ನ ತ್ವಂ ಶೋಚಿತುಮರ್ಹಸಿ ||
-ಅರ್ಜುನ, ಹುಟ್ಟಿದವರಿಗೆಲ್ಲ ಸಾವು ನಿಶ್ಚಿತ. ಸತ್ತವನಿಗೆ ಮತ್ತೆ ಜನ್ಮವು ನಿಶ್ಚಿತ. ಹಾಗಾಗಿ ಬಗೆಹರಿಸಲಾಗದ ವಿಷಯಗಳ ಬಗ್ಗೆ ನೀನೇಕೆ ಯೋಚಿಸುತ್ತೀ? ಎಂದು. ಹೌದಲ್ಲವೇ? ಯಾವುದೋ ಒಂದಷ್ಟು ವಿಚಾರಗಳನ್ನು ಹಿಡಿದುಕೊಂಡು ನಾವೆಷ್ಟು ಹೆಣಗಾಡುತ್ತೇವೆ. ಬೆಂಕಿ ಏಕೆ ಸುಡುತ್ತದೆ? ನೀರು ಏಕೆ ಹರಿಯುತ್ತದೆ? ಎಂಬಂತಹ ಗೋಜಲಿನ ಬಗೆಹರಿಯದ ಪ್ರಶ್ನೆಗಳನ್ನೇ ಕೇಳುತ್ತಾ ಕುಳಿತರೆ ಹೇಗೆ? ಬೆಂಕಿ ಸುಡುತ್ತದೆ, ನೀರು ಹರಿಯುತ್ತದೆ ಎಂಬುದನ್ನು ಒಪ್ಪಿನಡೆದಾಗ ಅದರಿಂದಾಗುವ ಅನುಕೂಲತೆಗಳನ್ನು ಗ್ರಹಿಸಿ ಮುಂದುವರೆಯಬಹುದು, ಅದಲ್ಲದೆ ಸ್ವಭಾವವನ್ನೇ ಪ್ರಶ್ನಿಸುತ್ತಿದ್ದರೆ ವಿಕಸವಾಗಲೆಂತು ಸಾಧ್ಯ?
ಮನುಷ್ಯ ಸಂಘಜೀವಿ. ಒಬ್ಬಂಟಿಯಾಗಿ ಜಗತ್ತನ್ನು ಗೆಲ್ಲಲು ಸಾಧ್ಯವಿಲ್ಲ. ನಮ್ಮ ಗೆಲುವಿಗೆ ಸಮಾಜದ ಸಹಕಾರ ಬೇಕಾಗುತ್ತದೆ. ಕೇವಲ ಸಮಾಜದಿಂದ ಮಾತ್ರ ಸ್ವೀಕರಿಸಿ ಸಮಾಜಕ್ಕೆ ಏನನ್ನೂ ಕೊಡದೆ ಸಾಗಿದರೆ ಸಮಾಜ ಕ್ಷೀಣಿಸುತ್ತಾ ಹೋಗುತ್ತದೆ. ಆದ್ದರಿಂದಲೇ ಗೀತೆಯಲ್ಲಿ “ಪರಸ್ಪರಂ ಭಾವ ಯಂತಃ ಶ್ರೀಯಃಪರಮವಾಪ್ಸ್ಯಥ” – ಪರಸ್ಪರ ಸಹಾಯದ ಮೂಲಕ ಪರಮ ಶ್ರೇಯಸ್ಸನ್ನು ಪಡೆಯಬೇಕು ಎಂದಿರುವುದು. ಇತರರ ಹಿತವನ್ನು ಅವಶ್ಯಕವಾಗಿ ಪರಿಗಣಿಸದೆ ಸ್ವಹಿತವನ್ನು ಸಾಧಿಸಲಾಗದು ಎಂದು ಸೂಚ್ಯವಾಗಿ ಹೇಳಿದ ಮಾತು ಭಗವದ್ಗೀತೆಯ ಅಮೃತ ಬಿಂದು.
ಧ್ಯಾನಯೋಗವನ್ನು ಪ್ರತಿಪಾದಿಸುವ ಗೀತೆ ನಿಷ್ಕ್ರೀಯತೆಯ ವಿರೋಧಿ. ಸ್ವಾರ್ಥ, ಆಲಸ್ಯ, ಅಜ್ಞಾನ, ಸಂಕುಚಿತ ಮನೋಭಾವಗಳನ್ನು ಹೊಡೆದೋಡಿಸುವ ಶಕ್ತಿ ಗೀತೆಯಲ್ಲಿದೆ. “ಕ್ಷುದ್ರಂ ಹೃದಯದೌರ್ಬಲ್ಯಂ ತ್ಯಕ್ತ್ವೋತ್ತಿಷ್ಠ ಪರಂತಪ” ಎಂಬ ಗೀತೆಯ ಮಾತು ರಾಗದ್ವೇಷಗಳಿಗೆ ಸಿಲುಕಿ ಹೊರಳಾಡುವ ಮನಸ್ಸಿನ ದೌರ್ಬಲ್ಯವನ್ನು ಮೆಟ್ಟಿನಿಲ್ಲುವಂತೆ ಮಾಡುತ್ತದೆ. ಗೀತೆಯ ಉಪದೇಶ ವ್ಯಕ್ತಿಯ ಅಂತಃಕರಣದಲ್ಲಿ ಹುದುಗಿರುವ ಕ್ಷಾತ್ರಶಕ್ತಿಯನ್ನು ಧರ್ಮ ಮತ್ತು ರಾಷ್ಟ್ರ ರಕ್ಷಣೆಗಾಗಿ ಬಡಿದೆಬ್ಬಿಸುವುದಾಗಿದೆ. ಗೀತೆ ಒಂದೆಡೆ ಮುದುಡಿದ ಮನಸ್ಸನ್ನು ಅರಳಿಸಿದರೆ ಇನ್ನೊಂದೆಡೆ ಕದಡಿದ ಮನಸ್ಸನ್ನು ತಿಳಿಗೊಳಿಸುತ್ತದೆ. ಇದೆ ವ್ಯಕ್ತಿತ್ವ ವಿಕಾಸದ ತಿರುಳು. ಕರ್ಮಯೋಗ ಮತ್ತು ಜ್ನಾನಯೋಗಗಳ ಸಮನ್ವಯ ಗೀತೆಯ ಲಕ್ಷ್ಯವಾಗಿ ವ್ಯಕ್ತಿತ್ವ ವಿಕಾಸದ ಹೆದ್ದೆರೆಯಲ್ಲಿ ನಮ್ಮನ್ನು ಬೆಳಗಿಸುವ ಧರ್ಮ ಸಂವಿಧಾನ ಎಂದರೆ ತಪ್ಪಾಗಲಾರದು.
ಗುರಿಯಿಟ್ಟ ಬಾಣ ದೂರ ಸಾಗಬೇಕಾದರೆ ಹಿಂದಕ್ಕೆ ಎಳೆಯಬೇಕು ಎಂಬ ಮಾತಿನಂತೆ ಬದುಕಿನ ಚತುರತೆಯನ್ನು ಶ್ರೀಕೃಷ್ಣ ಹೀಗೆ ಹೇಳುತ್ತಾನೆ –
ಯದ ಸಂಹರತೇ ಚಾಯಂ ಕುರ್ಮೊಂಗಾನೀವ ಸರ್ವಶಃ |
ಇಂದ್ರಿಯಾಣೀಮಿಂದ್ರಿಯಾರ್ಥೇಭ್ಯಸ್ತಸ್ಯ ಪ್ರಜ್ಞಾ ಪ್ರತಿಷ್ಠಿತಾ ||
-ಅಗತ್ಯ ಬಿದ್ದಾಗ ಆಮೆಯು ತನ್ನ ಅಂಗಾಂಗಗಳನ್ನು ಚಿಪ್ಪಿನ ಒಳಕ್ಕೆಳೆದುಕೊಳ್ಳುವಂತೆ ನಾವು ಕೂಡಾ ನಮಗೆ ಬೇಕಿಲ್ಲದ ವಿಷಯಗಳಿಂದ ಇಂದ್ರಿಯಗಳನ್ನು ಒಳಕ್ಕೆಳೆದುಕೊಳ್ಳಬೇಕು. ಮನಸ್ಸಿಗೆ ಬೇಸರ ಉಂಟುಮಾಡಿದ ಕಾರಣದಿಂದ ಮನಸ್ಸನ್ನು ಹೊರಗೆಳೆದು, ಕಾರಣವನ್ನು ಮರೆಸುವಂತೆ ಮತ್ತೊಂದರಲ್ಲಿ ಮನಸ್ಸನ್ನು ನೆಡುವುದು ಹೇಗೆಂಬುದನ್ನು ಗೀತೆ ತಿಳಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಜನರ ತಿಳುವಳಿಕೆ ಎಲ್ಲಿಗೆ ಬಂದು ನಿಂತಿದೆಯೆಂದರೆ – ವ್ಯಕ್ತಿತ್ವ ವಿಕಾಸ ಮಾಡಿಕೊಂಡವರು ಭಗವದ್ಗೀತೆ ಓದುತ್ತಾರೆ ಎಂದು ಭಾವಿಸಿದ್ದಾರೆಯೇ ಹೊರತು ಭಗವದ್ಗೀತೆಯನ್ನು ಓದಿದರೆ ವ್ಯಕ್ತಿತ್ವ ವಿಕಾಸವಾಗುತ್ತದೆ ಎಂಬ ಸತ್ಯವನ್ನು ಮರೆತಿದ್ದಾರೆ. ಕೆಲವರಿಗೆ ತಾವು ಮೆರೆತಿರುವುದೂ ಮರೆತು ಹೋಗಿದೆ. ಅಂತಹವರು ತಮ್ಮನ್ನೇ ತಾವು ಎಚ್ಚರಿಸಿಕೊಳ್ಳಬೇಕಾಗಿದೆ. ಯಾಕೆಂದರೆ ನಮ್ಮ ಮನಸ್ಸಿಗೆ ನಾವೇ ಅರ್ಜುನ , ನಾವೇ ಶ್ರೀಕೃಷ್ಣ.!
ಸಮಸ್ಯೆಗೊಂದು ಪರಿಹಾರವಿದೆ ಎಂದು ತಿಳಿದಾಗ ಸಮಸ್ಯೆ ಸಮಸ್ಯೆಯಾಗಿ ಉಳಿಯುವುದಿಲ್ಲ. ದುಃಖಕ್ಕೂ ಅರ್ಥವಿದೆ ಎಂದು ತಿಳಿದಾಗ ದುಃಖವು ದುಃಖವಾಗಿ ಉಳಿಯುವುದಿಲ್ಲ. ಈ ತಿಳುವಳಿಕೆಗೆ ಮನಸ್ಸು ತಿಳಿಯಾಗಿ ಇರಬೇಕಾಗುತ್ತದೆ. ತಿಳಿಮನಸ್ಸಿನಲ್ಲಿ ದ್ವಂದ್ವವಿರಲು ಸಾಧ್ಯವಿಲ್ಲ. ಭಗವದ್ಗೀತೆಯಲ್ಲಿ ಎದ್ದು ತೋರುವ ಭಾವವೇ ಇದು. ಗೊಂದಲದಲ್ಲಿದ್ದ ಮನಸ್ಥಿತಿಯನ್ನು ತಿಳಿಗೊಳಿಸಿ ಗುರಿಯತ್ತ ದೃಷ್ಟಿ ನೆಟ್ಟಿಸಿದ್ದು. ಇದೇ ವ್ಯಕ್ತಿತ್ವ ವಿಕಾಸದ ತಿರುಳು.
ಯಾವುದನ್ನು ನಂಬಿ ನಡೆಯಬೇಕು ಎಂದರೆ – ಧರ್ಮ.
ಯಾವುದನ್ನು ಸಂಪಾದಿಸಬೇಕು ಎಂದರೆ – ಜ್ಞಾನ.
ಯಾವುದನ್ನು ತ್ಯಜಿಸಬೇಕು ಎಂದರೆ – ಸ್ವಾರ್ಥ.
ಇದೇ ವ್ಯಕ್ತಿತ್ವ ವಿಕಸನದ ಬೆಳಕಿನ ಹಾದಿ. ಇದನ್ನೇ ಗೀತೆಯಲ್ಲಿ ಕತ್ತಿಯ ಅಲಗಿನಂತೆ ಹೇಳಲಾಗಿದೆ.ಕ್ಷುದ್ರ ಮನಸಿನ ಹತೋಟಿಗೆ ಶ್ರೀಕೃಷ್ಣನ ಉಪದೇಶ ಬಾಣ
ಅದುವೇ ಶ್ರೀಮಧ್ಭಗವದ್ಗೀತೆಯ ಹೂರಣ.
ಇದನರಿತು ಆಚರಿಸಲಿ ಸಾಗಲಿ ನಮ್ಮ ಜೀವನ ಯಾನ
ಹಾಗಾದಾಗ ಸಿದ್ಧಿಸುವುದು ವ್ಯಕ್ತಿತ್ವ ವಿಕಸನ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.