ಕಾರ್ಕಳ: ಸಾಮಾಜಿಕ ಪರಿವರ್ತನೆಗಾಗಿ ಚಳುವಳಿ, ಹೋರಾಟ ನಡೆಸಿದವವರನ್ನು ಕೇವಲ ಜಾತಿಗೆ ಸೀಮಿತಗೊಳಿಸಿರುವುದು ಸಮಾಜದ ದುರಂತವಾಗಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಡಾ. ಬಾಬು ಜಗನ್ಜೀವನ್ ರಾಂ, ನಾರಾಯಣಗುರು ಸ್ವಾಮೀಜಿ, ಕನಕದಾಸ, ಬಸವಣ್ಣ ಮೊದಲಾದ ಮಹಾನಾಯಕರನ್ನು ಒಂದು ಸಮಾಜದ ನಾಯಕರೆಂದು ಗುರುತಿಸಿಕೊಂಡು ಅವರನ್ನು ಸಂಕುಚಿತ ಮನೋಭಾವದಿಂದ ಕಾಣಲಾಗುತ್ತಿದೆ. ಅವರೆಲ್ಲರೂ ಸಾಮಾಜಿಕ ಪರಿವರ್ತನೆಗೆ ಮುಂದಾದವರೆಂದು ವಿಧಾನಸಭಾ ಪ್ರತಿಪಕ್ಷ ಮುಖ್ಯ ಸಚೇತಕ ವಿ.ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ತಾ.ಪಂ. ಸಭಾಂಗಣದಲ್ಲಿ ಕಂದಾಯ ಇಲಾಖೆ, ತಾ.ಪಂ., ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ನಡೆದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 124ನೇ ಮತ್ತು ಹಸಿರುಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನಿ ಡಾ. ಬಾಬು ಜಗನ್ ಜೀವನ್ ರಾಂ ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಧುನಿಕ ತಂತ್ರಜ್ಞಾನ ಯುಗದಲ್ಲೂ ಮೇಲು-ಕೀಳು ಭಾವನೆಗಳು ಮುಂದುವರಿಯುತ್ತಾ ಸಾಗುತ್ತಿರುವ ಬೆಳವಣಿಗೆಯೂ ತೀರಾ ಆತಂಕಕಾರಿಯಾಗಿದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು ಇತರ ಸಮಾಜದಂತೆ ಮುಂದುವರಿಯಬೇಕೆಂಬ ಕನಸು ಕಂಡು ಪ್ರತಿಪಾದನೆಯನ್ನು ಅರ್ಥ ಗಂಭೀರವಾಗಿ ಮಂಡಿಸಿದವರು ಅಂಬೇಡ್ಕರ್ ಎಂದ ಅವರು, ಕಾರ್ಕಳದಲ್ಲಿ ಡಾ.ಅಂಬೇಡ್ಕರ್ ಭವನ ಹಾಗೂ ಪ್ರತಿಮೆ ನಿರ್ಮಾಣದ ಕಾರ್ಯ ಅಗಬೇಕೆಂಬ ಬಹುಜನರ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.
ತಾ.ಪಂ. ಅಧ್ಯಕ್ಷೆ ವಿಜಯಕುಮಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕ ಸುನಿಲ್ ಕುಮಾರ್ ಮತ್ತು ತಾ.ಪಂ. ಅಧ್ಯಕ್ಷೆ ವಿಜಯಕುಮಾರಿ ಮಹಾನ್ ನಾಯಕರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿದರು.
ಪುರಸಭೆ ಅಧ್ಯಕ್ಷೆ ರಹಮತ್ ಎನ್.ಶೇಖ್, ಮುಖ್ಯಾಧಿಕಾರಿ ರಾಯಪ್ಪ, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ರವಿಂದ್ರಕುಮಾರ್, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ಜಿಲ್ಲಾ ಸಂಘಟನಾ ಸಂಚಾಲಕ ಅಣ್ಣಪ್ಪ ನಕ್ರೆ, ದಲಿತ ಮುಖಂಡರಾದ ಶ್ರೀನಿವಾಸ ಕಾರ್ಲ, ಶ್ಯಾಮ್ ಕಾರ್ಕಳ ಮತ್ತಿತರರು ಉಪಸ್ಥಿತರಿದ್ದರು.
ಹೂವಪ್ಪ ಮಾಸ್ತರ್ ಹಾಗೂ ಗಣೇಶ್ ರಾಣೆ ಅವರನ್ನು ಶಾಸಕರು ಸನ್ಮಾನಿಸಿದರು. ವಿವಿಧ ಫಲಾನುಭವಿಗಳಿಗೆ ಯೋಜನೆ ಮಂಜೂರು, ಅಂತರ್ಜಾತಿ ವಿವಾಹವಾದ ಜೋಡಿಗಳಿಗೆ ಪ್ರೋತ್ಸಾಹ ಧನ ನೆರವು ನೀಡಲಾಯಿತು.
ತಹಶೀಲ್ದಾರ್ ರಾಘವೇಂದ್ರ ಸ್ವಾಗತಿಸಿದರು. ಸಮಾಜ ಕಲ್ಯಾಣ ಇಲಾಖೆಯ ಜಿ.ಬಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಸಮಾಜಕಲ್ಯಾಣಧಿಕಾರಿ ಎಸ್.ವಿಜಯಕುಮಾರ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.