ನ್ಯಾಯಾಂಗದ ಘನತೆ ಗೌರವವನ್ನು ಹಾಳುಗೆಡಹುವ ರಿಯಲ್ ಎಸ್ಟೇಟ್ ಕುಳಗಳು, ಕ್ರಿಮಿನಲ್ಗಳು ಸಾಕಷ್ಟು ಮಂದಿ ಇದ್ದಾರೆ. ನ್ಯಾಯಾಂಗಕ್ಕೆ ಕಳಂಕ ಮೆತ್ತುವ ಪೊಲೀಸ್ ಅಧಿಕಾರಿಗಳೂ, ರಾಜಕಾರಣಿಗಳೂ ಇದ್ದಾರೆ. ನ್ಯಾಯಾಂಗಕ್ಕೆ ಮಸಿ ಬಳಿಯುವ ಪತ್ರಕರ್ತರೂ ಇದ್ದಾರೆ. ಆದರೆ ನ್ಯಾಯಾಂಗದ ಬುಡಕ್ಕೇ ಕೊಡಲಿ ಏಟು ಹಾಕುವ ನ್ಯಾಯಾಧೀಶರೂ ಇದ್ದಾರೆ ಎಂದರೆ ನಿಮಗೆ ಅಚ್ಚರಿಯಾಗಬಹುದಲ್ಲವೆ?
ಆದರಿದು ನಿಜ. ದೇಶದ ನ್ಯಾಯಾಂಗ ಇತಿಹಾಸದಲ್ಲೇ ವಿಲಕ್ಷಣವಾದ ಆದೇಶವೊಂದನ್ನು ಹೊರಡಿಸುವ ಮೂಲಕ ಮದ್ರಾಸ್ ಹೈಕೋರ್ಟ್ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಬಹುದೊಡ್ಡ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ. ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸುವಾಗ ಸಾಮಾನ್ಯವಾಗಿ ನ್ಯಾಯಾಧೀಶರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ರಾಗ, ದ್ವೇಷಗಳಿಂದ, ಸ್ವಹಿತಾಸಕ್ತಿಯಿಂದ ದೂರ ಇರುವುದಾಗಿ ಶಪಥ ತೊಡುವುದುಂಟು. ಸಂವಿಧಾನ, ದೇಶದ ಅಖಂಡತೆ, ನ್ಯಾಯಾಂಗ ವ್ಯವಸ್ಥೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದೇ ಧಕ್ಕೆ ಉಂಟು ಮಾಡುವುದಿಲ್ಲ ಎಂದು ಆ ಪ್ರಮಾಣವಚನದಲ್ಲಿ ಹೇಳುವುದುಂಟು. ನ್ಯಾಯಾಧೀಶರಲ್ಲಿ ಈ ಬಗೆಯ ಗುಣಗಳು ಇರಬೇಕಾಗಿರುವುದು ಅಗತ್ಯವೂ ಹೌದು. ಏಕೆಂದರೆ ಅವರು ನ್ಯಾಯದೇವತೆಯ ಪ್ರತಿರೂಪ. ಪರ ಅಥವಾ ವಿರೋಧ ಪಕ್ಷ ವಹಿಸದೆ, ನ್ಯಾಯನಿಷ್ಠುರರಾಗಿ ತೀರ್ಪುಗಳನ್ನು ನೀಡಬೇಕಾಗಿರುವುದು ಅವರ ಪ್ರಮುಖ ಕರ್ತವ್ಯ. ಆದರೆ, ಈಗ ಆ ನಂಬಿಕೆ, ವಿಶ್ವಾಸದ ಬುಡವನ್ನೇ ಅಲಗಾಡಿಸುವಂತಹ ಪೆಟ್ಟನ್ನು ನ್ಯಾ ಸಿ.ಆರ್. ಕರ್ಣನ್ ಕೊಟ್ಟಿದ್ದಾರೆ. ತಮ್ಮನ್ನು ಕೊಲ್ಕತ್ತಾ ಹೈಕೋರ್ಟ್ಗೆ ವರ್ಗಾವಣೆ ಮಾಡಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಹೊರಡಿಸಿದ್ದ ಆಡಳಿತಾತ್ಮಕ ಆದೇಶಕ್ಕೆ ತಾವೇ ಸ್ವತಃ ತಡೆಯಾಜ್ಞೆ ಕೊಟ್ಟಿದ್ದಾರೆ. ಅಲ್ಲದೆ ವರ್ಗಾವಣೆ ಆದೇಶಕ್ಕೆ ಸಂಬಂಧಿಸಿದಂತೆ ಲಿಖಿತ ಹೇಳಿಕೆ ಸಲ್ಲಿಸಬೇಕೆಂದು ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೇ ತಾಕೀತು ಮಾಡಿದ್ದಾರೆ! ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಂದರೆ ಇಡೀ ದೇಶದ ನ್ಯಾಯಾಂಗ ವ್ಯವಸ್ಥೆಗೇ ಸುಪ್ರೀಂ ಇದ್ದಂತೆ. ಅವರ ಮಾತನ್ನು ಉಳಿದ ನ್ಯಾಯಮೂರ್ತಿಗಳು ವಿಧೇಯತೆಯಿಂದ, ಗೌರವದಿಂದ ಕೇಳಬೇಕು. ಆದರೀಗ ಹೈಕೋರ್ಟ್ ನ್ಯಾಯಮೂರ್ತಿಯೇ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗೆ ತಾಕೀತು ಮಾಡುವ ದಾರ್ಷ್ಟ್ಯ ತೋರಿರುವುದು ನ್ಯಾಯಾಂಗ ಇತಿಹಾಸದಲ್ಲಿ ಒಂದು ವಿಲಕ್ಷಣವಾದ ಘಟನೆ. ಇದು ಸಭ್ಯತೆ, ಸೌಜನ್ಯದ ಎಲ್ಲೆ ಮೀರಿದ ನ್ಯಾಯಾಧೀಶರ ಕೆಟ್ಟ ನಡವಳಿಕೆ. ಅದನ್ನೀಗ ಸುಪ್ರಿಂಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ನ್ಯಾ. ಕರ್ಣನ್ ಅವರಿಗೆ ಯಾವುದೇ ನ್ಯಾಯಾಂಗ ಅಥವಾ ಆಡಳಿತಾತ್ಮಕ ಕರ್ತವ್ಯ ನಿರ್ವಹಿಸಬಾರದು ಎಂದು ನಿರ್ದೇಶಿಸುವ ಮೂಲಕ ಕರ್ಣನ್ ಅವರ ಅತಿರೇಕದ ಆಟಗಳಿಗೆ ಕಡಿವಾಣ ಹಾಕಿದೆ. ಇದೊಂದು ಸ್ವಾಗತಾರ್ಹ ಕ್ರಮ.
ನ್ಯಾ. ಸಿ.ಎಸ್. ಕರ್ಣನ್ ಅವರು ವಿವಾದ ಸೃಷ್ಟಿಸುತ್ತಿರುವುದು ಇದೇ ಮೊದಲ ಸಲವಲ್ಲ. ಮದ್ರಾಸ್ ಹೈಕೋರ್ಟ್ನ ನ್ಯಾಯಧೀಶರಾದಾಗಿನಿಂದಲೂ ಕರ್ಣನ್ ಒಂದಲ್ಲ ಒಂದು ವಿವಾದಾತ್ಮಕ ಹೇಳಿಕೆಗಳಿಗೆ ಗ್ರಾಸವಾಗುತ್ತಲೇ ಇದ್ದಾರೆ. 2009 ರ ಮಾರ್ಚ್ 30 ರಂದು ಹೈಕೋರ್ಟ್ ನ್ಯಾಯಾಧೀಶರಾಗಿ ನೇಮಕವಾದ ಬಳಿಕ ಕರ್ಣನ್ ನ್ಯಾಯಾಂಗದ ಕುರಿತು ಒಂದಲ್ಲ ಒಂದು ಬಗೆಯ ದೂರುಗಳನ್ನು ಸಲ್ಲಿಸುತ್ತಲೇ ಇದ್ದಾರೆ.
ಮೊಟ್ಟಮೊದಲು ಕರ್ಣನ್ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದು 2011 ರ ನವೆಂಬರ್ನಲ್ಲಿ. ಅವರು ಆಗ ಪರಿಶಿಷ್ಟ ಜಾತಿಯ ರಾಷ್ಟ್ರೀಯ ಆಯೋಗಕ್ಕೆ (ಎನ್ಸಿಎಸ್ಸಿ) ದೂರೊಂದನ್ನು ಸಲ್ಲಿಸಿದ್ದರು. ತಾನೊಬ್ಬ ದಲಿತ ಎಂಬ ಕಾರಣಕ್ಕೆ ತನ್ನ ಸಹೋದ್ಯೋಗಿ ನ್ಯಾಯಾಧೀಶರು ತನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂಬುದು ಆ ದೂರಿನ ಸಾರಾಂಶ. ಮದುವೆ ಸಮಾರಂಭವೊಂದರಲ್ಲಿ ಸಹೋದ್ಯೋಗಿ ನ್ಯಾಯಾಧೀಶರೊಬ್ಬರು ಬೇಕೆಂದೇ ತನ್ನ ಕಾಲನ್ನು ತುಳಿಯುವ ಮೂಲಕ ತನ್ನನ್ನು ಅವಮಾನಿಸಿದರು ಎಂದು ಆ ದೂರಿನಲ್ಲಿ ಕರ್ಣನ್ ಆರೋಪಿಸಿದ್ದರು. ಆಗ ಎನ್ಸಿಎಸ್ಸಿ ಅಧ್ಯಕ್ಷರಾಗಿದ್ದ ಪಿ.ಎಲ್. ಪುನಿಯಾ ಅವರು ಕರ್ಣನ್ ಅವರ ಈ ದೂರನ್ನು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಸ್.ಹೆಚ್. ಕಪಾಡಿಯಾ ಅವರಿಗೆ ರವಾನಿಸಿ ಈ ಬಗ್ಗೆ ಅಂತಿಮ ಆದೇಶ ನೀಡಲು ಕೇಳಿಕೊಂಡಿದ್ದರು.
ಎರಡು ವರ್ಷಗಳ ಬಳಿಕ, 2014 ರ ಜನವರಿಯಲ್ಲಿ ನ್ಯಾ. ಕರ್ಣನ್ ಅವರು ನ್ಯಾಯಮೂರ್ತಿಗಳ ಹುದ್ದೆ ಕುರಿತ ಶಿಫಾರಸ್ಸಿಗೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಕೇಸ್ ಒಂದು ನಡೆಯುತ್ತಿದ್ದಾಗ ದಿಢೀರನೆ ಕೋರ್ಟ್ ಹಾಲ್ಗೆ ಪ್ರವೇಶಿಸಿ, ನ್ಯಾಯಮೂರ್ತಿಗಳ ಆಯ್ಕೆ ಸರಿಯಾಗಿಲ್ಲ. ನಾನು ಇದರ ವಿರುದ್ಧ ಅಫಿಡವಿಟ್ ಸಲ್ಲಿಸುವೆ ಎಂದು ಅದೇ ಕೋರ್ಟ್ ಹಾಲ್ನಲ್ಲಿ ಘೋಷಿಸಿದ್ದರು. ಮಾರ್ಚ್ ತಿಂಗಳಲ್ಲಿ ಸುಪ್ರಿಂಕೋರ್ಟ್ ಕರ್ಣನ್ ಅವರ ಈ ಬಗೆಯ ವಿಲಕ್ಷಣ ನಡವಳಿಕೆಯನ್ನು ಖಂಡಿಸಿ ಹೇಳಿದ್ದೇನೆಂದರೆ “ನ್ಯಾಯಮೂರ್ತಿ ಕರ್ಣನ್ ಅವರ ಈ ನಡವಳಿಕೆ ಅತ್ಯಂತ ಅನಪೇಕ್ಷಿತ, ಅನಿರೀಕ್ಷಿತ ಹಾಗೂ ನ್ಯಾಯಾಂಗದ ಘನತೆಗೆ ಮಸಿ ಬಳಿಯುವಂತಹುದು”. ಆಗ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಆರ್.ಕೆ. ಅಗರವಾಲ್ ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ. ಸದಾಶಿವಂ ಅವರಿಗೆ ಪತ್ರವೊಂದನ್ನು ಬರೆದು, ಕರ್ಣನ್ ಅವರನ್ನು ಬೇರೆ ಯಾವುದಾದರೂ ಹೈಕೋರ್ಟ್ಗೆ ವರ್ಗಾವಣೆ ಮಾಡಲು ಆಗ್ರಹಿಸಿದ್ದರು.
ಆದರೆ ಆಗಲೂ ಕರ್ಣನ್ ಮುಖ್ಯ ನ್ಯಾಯಮೂರ್ತಿ ಆರ್.ಕೆ. ಅಗರವಾಲ್ ಅವರ ಈ ಆದೇಶದ ವಿರುದ್ಧ ಕುಪಿತರಾಗಿ ಮತ್ತೆ ಎನ್ಸಿಎಸ್ಸಿಗೆ ದೂರು ಸಲ್ಲಿಸಿದ್ದರು. ಯಾವುದೇ ಸೂಕ್ತ ಕಾರಣವಿಲ್ಲದೆ ಜಾತಿ ದ್ವೇಷದ ಕಾರಣಕ್ಕಾಗಿ ನನ್ನನ್ನು ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ನನ್ನ ವಿರುದ್ಧದ ಆರೋಪ ಸಾಬೀತಾಗುವವರೆಗೆ ನನ್ನನ್ನು ವರ್ಗಾವಣೆ ಮಾಡುವಂತಿಲ್ಲ ಎಂದು ನ್ಯಾ. ಅಗರವಾಲ್ ಅವರಿಗೆ ತಾಕೀತು ಮಾಡಿದ್ದರು!
2015 ರ ಮಧ್ಯದಲ್ಲಿ ಅವರು ಹೈಕೋರ್ಟ್ನ ಒಬ್ಬ ಹಾಲಿ ನ್ಯಾಯಮೂರ್ತಿಯ ವಿರುದ್ಧ ಲೈಂಗಿಕ ದೌರ್ಜನ್ಯ ಹೊರಿಸಿದ್ದರು. ಹೀಗೆ ನ್ಯಾ. ಕರ್ಣನ್ ಒಂದಲ್ಲ ಒಂದು ಆರೋಪಗಳನ್ನು ಮಾಡುತ್ತಲೇ ಸಾಕಷ್ಟು ವಿವಾದ ಸೃಷ್ಟಿಸಿದ್ದರು.
ಕೋಲ್ಕತ್ತಾ ಹೈಕೋರ್ಟ್ಗೆ ವರ್ಗಾವಣೆ ಮಾಡಿದಕ್ಕಾಗಿ ಸಿಜೆಐ ಅವರ ಆದೇಶಕ್ಕೇ ತಡೆಯಾಜ್ಞೆ ನೀಡುವುದೆಂದರೆ ಅದೊಂದು ಅತಿರೇಕದ ಕ್ರಮ. ಸಿಜೆಐ ದೇಶದ ಯಾವುದೇ ನ್ಯಾಯಾಲಯದ ನ್ಯಾಯಮೂರ್ತಿಗಳನ್ನು ಬೇರೆ ಬೇರೆ ಕಾರಣಗಳಿಗಾಗಿ ವರ್ಗಾವಣೆ ಮಾಡುವ ಅಧಿಕಾರ ಹೊಂದಿದ್ದಾರೆ. ಅದನ್ನು ಯಾವ ನ್ಯಾಯಮೂರ್ತಿಗಳೂ ಪ್ರಶ್ನಿಸುವಂತಿಲ್ಲ. ಆದರೆ ನ್ಯಾ. ಕರ್ಣನ್ ಕೇವಲ ಪ್ರಶ್ನಿಸಿದ್ದಷ್ಟೇ ಅಲ್ಲ, ತಮ್ಮ ವರ್ಗಾವಣೆಯ ಆದೇಶಕ್ಕೆ ತಡೆಯಾಜ್ಞೆ ನೀಡಿ ಇನ್ನೊಂದು ಗೊಂದಲ ಸೃಷ್ಟಿಸಿದ್ದಾರೆ. ಅಷ್ಟೇ ಅಲ್ಲ, ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸುವುದಾಗಿ ಕರ್ಣನ್ ಬೆದರಿಕೆ ಒಡ್ಡಿದ್ದಾರೆ. ಇದೆಲ್ಲವೂ ಅವರ ಅಧಿಕಾರ ವ್ಯಾಪ್ತಿ ಮೀರಿದ್ದು. ಜೊತೆಗೆ ಅವರಿಗೆ ಈ ದೇಶದ ಸಂವಿಧಾನದ ಬಗ್ಗೆ ಮತ್ತು ಸಹಜ ನ್ಯಾಯ ಪರಿಪಾಲನೆಯ ಬಗ್ಗೆ ಎಳ್ಳಷ್ಟೂ ಗೌರವವಿಲ್ಲ ಎಂಬುದಕ್ಕೆ ಇದೊಂದು ನಿದರ್ಶನ.
ಕರ್ಣನ್ ನ್ಯಾಯಮೂರ್ತಿಗಳಿಗೆ ಶೋಭೆ ತಾರದ ಇನ್ನೊಂದು ಕೆಲಸವನ್ನೂ ಮಾಡಿದ್ದಾರೆ. ನ್ಯಾಯಧೀಶರಾದವರು ಅವರು ಯಾವುದೇ ಜಾತಿ, ಪಂಥಕ್ಕೆ ಸೇರಿರಲಿ, ಒಮ್ಮೆ ನ್ಯಾಯಾಧೀಶರಾದ ಬಳಿಕ ಅವರು ಅದೆಲ್ಲವನ್ನೂ ಮರೆತು ಆ ಹುದ್ದೆಯನ್ನು ನಿರ್ವಹಿಸಬೇಕು. ತನ್ನ ಜಾತಿಪ್ರೇಮವನ್ನು ಕರ್ತವ್ಯದ ಸಂದರ್ಭದಲ್ಲಿ ತಪ್ಪಿಯೂ ಎತ್ತಿಹಿಡಿಯುವಂತಿಲ್ಲ. ಆದರೆ ಕರ್ಣನ್ ತಮ್ಮ ಜಾತಿಯನ್ನು, ರಾಜಕಾರಣವನ್ನು ಎಳೆದು ತಂದಿದ್ದಾರೆ. ಭಾರತದಲ್ಲಿ ಹುಟ್ಟಿರುವುದಕ್ಕಾಗಿ ತಮಗೆ ನಾಚಿಕೆಯಾಗುತ್ತದೆ ಎಂಬ ಮಾತುಗಳನ್ನು ಸಹ ಆಡಿದ್ದಾರೆ. ಜಾತಿ ಪದ್ಧತಿಯೇ ಇಲ್ಲದ ದೇಶವೊಂದಕ್ಕೆ ವಲಸೆ ಹೋಗಲು ಬಯಸಿರುವುದಾಗಿ ಹೇಳಿದ್ದಾರೆ. ತಾವು ದಲಿತ ಎಂಬ ಕಾರಣಕ್ಕೆ ತಮ್ಮನ್ನು ಪದೇಪದೇ ಬಲಿಪಶು ಮಾಡಲಾಗುತ್ತಿದೆ ಎಂಬುದು ಕರ್ಣನ್ ಅವರ ಮುಖ್ಯ ಆರೋಪ. ಹಾಗೇನಾದರೂ ಅದು ನಿಜವೇ ಆಗಿದ್ದಲ್ಲಿ ಅದಕ್ಕೆ ಪರಿಹಾರ ಪಡೆಯಲು ಅವರಿಗೆ ಕಾನೂನಿನಲ್ಲಿಯೇ ಬೇಕಾದಷ್ಟು ಮಾರ್ಗಗಳಿವೆ. ಅದನ್ನು ಬಿಟ್ಟು ದಲಿತ ಎಂಬುದನ್ನೇ ವೈಭವೀಕರಿಸಿ, ಚಿತ್ರವಿಚಿತ್ರ ವರ್ತನೆಗಳಿಗೆ, ತೋಚಿದಂತೆ ಹೊರಡಿಸುವ ಆದೇಶಗಳಿಗೆ ಗುರಾಣಿ ಮಾಡಿಕೊಳ್ಳುವುದು ಉನ್ನತ ನ್ಯಾಯಾಲಯವೊಂದರ ನ್ಯಾಯಮೂರ್ತಿ ಹುದ್ದೆ ಅಲಂಕರಿಸಿರುವ ವ್ಯಕ್ತಿಗೆ ಏನೇನೂ ಶೋಭೆ ತರುವ ಸಂಗತಿಯಲ್ಲ.
ಭಾರತದ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಸ್ವತಃ ದಲಿತರಾಗಿದ್ದರೂ ಭಾರತದ ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ, ಪತ್ರಿಕಾರಂಗಗಳು ರಾಗ, ದ್ವೇಷಗಳಿಲ್ಲದೇ, ಸ್ವಹಿತಾಸಕ್ತಿಗಳಿಂದ ದೂರವಿದ್ದು ಕರ್ತವ್ಯ ನಿರ್ವಹಿಸಬೇಕೆಂದು ಕರೆ ನೀಡಿದ್ದರು. ದಲಿತರ ಪರವಾಗಿ ನ್ಯಾಯಾಂಗದಲ್ಲಿ ವಿಶೇಷ ರಿಯಾಯ್ತಿಗಳನ್ನು ಅವರು ಸೃಷ್ಟಿಸಿರಲಿಲ್ಲ. ಕಾನೂನು ಎಲ್ಲರಿಗೂ ಒಂದೇ. ಕಾನೂನಿಗೆ ಎಲ್ಲರೂ ತಲೆಬಾಗಬೇಕು. ದಲಿತ ನ್ಯಾಯಮೂರ್ತಿಗಳಾದರೆ ಅವರಿಗೊಂದು ಬೇರೆಯೇ ಕಾನೂನು ಅನ್ವಯವಾಗುತ್ತದೆ ಎಂದೇನೂ ಅಂಬೇಡ್ಕರ್ ಸಾರಿರಲಿಲ್ಲ. ಕರ್ಣನ್ ಮಾತ್ರ ತಮಗೆ ತೋಚಿದಂತೆ ನ್ಯಾಯಾಂಗದ ತತ್ವಗಳನ್ನು ಅನ್ವಯಿಸಿಕೊಳ್ಳುತ್ತಿರುವುದು ವಿಪರ್ಯಾಸ.
ಕರ್ಣನ್ ಅವರಿಗೆ ಪ್ರಚಾರದ ವ್ಯಾಧಿ ಅಂಟಿಕೊಂಡಂತಿದೆ ದಲಿತನಾಗಿರುವ ಕಾರಣ ತನ್ನನ್ನು ಬಲಿಪಶು ಮಾಡಲಾಗುತ್ತಿದೆ ಎಂದು ಅವರು ಪದೇಪದೇ ತಮ್ಮ ಸಂತ್ರಸ್ತತನ ಬಿಂಬಿಸಿಕೊಳ್ಳುತ್ತಿರುವುದು ಕೇವಲ ಒಂದು ಪ್ರಹಸನದಂತೆ ಗೋಚರವಾಗುತ್ತಿದೆ. ನ್ಯಾಯಾಂಗದಲ್ಲಿ ನೇಮಕಾತಿ, ವರ್ಗಾವಣೆಯಂತಹ ಆಡಳಿತಾತ್ಮಕ ವಿಚಾರಗಳಿವೆ. ಅದರ ಬಗ್ಗೆ ನಿರ್ಧಾರ ಕೈಗೊಳ್ಳಲು ಹೈಕೋರ್ಟ್, ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸಂವಿಧಾನವೇ ಅಧಿಕಾರ ಕೊಟ್ಟಿದೆ. ಇಷ್ಟಕ್ಕೂ ನ್ಯಾಯಮೂರ್ತಿಗಳ ವರ್ಗಾವಣೆ ವಿಚಾರ ಹೊಸತೇನಲ್ಲ. ಅಗತ್ಯಕ್ಕೆ ತಕ್ಕಂತೆ ವರ್ಗಾವಣೆ ಆಗಾಗ ನಡೆಯುತ್ತಲೇ ಇರುತ್ತದೆ. ಈ ವರ್ಗಾವಣೆ ಹಿನ್ನಲೆಯಲ್ಲಿ ಜಾತಿದ್ವೇಷ ಇದೆ ಎಂದು ನ್ಯಾಯಮೂರ್ತಿಯೊಬ್ಬರು ವಾದಿಸಿದರೆ ಅದಕ್ಕೇನರ್ಥ? ತಾನು ಈ ವರ್ಗಾವಣೆಗೆ ಬೆಲೆ ಕೊಡುವುದಿಲ್ಲ ಎಂಬ ಕರ್ಣನ್ ಅವರ ಧೋರಣೆ ಅಶಿಸ್ತಿನ ಪರಮಾವಧಿಯೇ ಸರಿ. ಇಂತಹ ಅಶಿಸ್ತು ಅವರು ತೋರಿಸುತ್ತಿರುವುದು ಇದೇ ಮೊದಲಸಲವೇನಲ್ಲ ಹಿಂದೆ ಒಮ್ಮೆ ಅವರು ಕೆಳಕೋರ್ಟ್ಗಳ ನ್ಯಾಯಾಧೀಶರ ನೇಮಕ ವಿಚಾರದಲ್ಲಿ ಮದ್ರಾಸ್ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಿದ್ದರು. ಅಲ್ಲದೇ ಮುಖ್ಯ ನ್ಯಾಯಮೂರ್ತಿ ವಿರುದ್ಧ ನ್ಯಾಯಾಂಗ ನಿಂದನೆ ಮತ್ತು ಪರಿಶಿಷ್ಟರ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿ ವಿಚಾರಣೆ ನಡೆಸುವ ಎಚ್ಚರಿಕೆ ಕೊಟ್ಟಿದ್ದರು. ಆಗಲೂ ಸುಪ್ರಿಂಕೋರ್ಟ್ ಅವರ ತೀರ್ಮಾನಗಳನ್ನು ತಡೆ ಹಿಡಿದಿತ್ತು. ಕೆಲ ವರ್ಷಗಳಿಂದ ನ್ಯಾಯಮೂರ್ತಿಗಳ ನೇಮಕಾತಿ ಕೊಲಿಜಿಯಿಂ ಮೂಲಕ ನಡೆಯುತ್ತಿದೆ. ಕರ್ಣನ್ ಅವರ ವಿಲಕ್ಷಣ ನಡವಳಿಕೆ ನೋಡಿದಾಗ ಕೊಲಿಜಿಯಂ ಇದನ್ನೆಲ್ಲ ಊಹಿಸಿರಲಿಲ್ಲವೇ ಎಂಬ ಪ್ರಶ್ನೆಗಳು ಏಳುವುದು ಸಹಜ.
ತಾನೊಬ್ಬ ದಲಿತ ಎಂಬ ಕಾರಣವೊಡ್ಡಿ ನ್ಯಾಯಾಂಗದ ಘನತೆ, ಗೌರವಗಳಿಗೆ ಅಪಚಾರ ಮಾಡಿದ ಇನ್ನಷ್ಟು ನ್ಯಾಯಾಧೀಶರಿದ್ದಾರೆ. ಕರ್ನಾಟಕ ರಾಜ್ಯ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ.ಡಿ. ದಿನಕರನ್ ಅಕ್ರಮ ಆಸ್ತಿ ಮಾಡಿದ್ದಲ್ಲದೇ ಹಲವು ಮೊಕದ್ದಮೆಗಳಲ್ಲಿ ಸಂಶಯಾಸ್ಪದ ತೀರ್ಪು ನೀಡಿದ್ದಕ್ಕಾಗಿ ಅವರಿಗೆ ಸುಪ್ರಿಂಕೋರ್ಟ್ ನ್ಯಾಯಮೂರ್ತಿಯಾಗಿ ಸಿಗಬೇಕಿದ್ದ ಬಡ್ತಿಗೆ ತಡೆ ಬಿದ್ದಿತ್ತು. ಸುಪ್ರಿಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಕೆ.ಜಿ. ಬಾಲಕೃಷ್ಣನ್ ಅವರ ಮೇಲೂ ಭ್ರಷ್ಟಾಚಾರದ ಕಳಂಕ ಅಂಟಿಕೊಂಡಿದ್ದರೂ ಅವರು, ಮಾನವ ಹಕ್ಕು ಆಯೋಗ (ಎನ್ಎಚ್ಆರ್ಸಿ) ಅಧ್ಯಕ್ಷತೆಗೆ ರಾಜೀನಾಮೆ ನೀಡಿರಲಿಲ್ಲ. ಸಿಜೆಐ ಆಗಿದ್ದಾಗಲೇ ಅವರು ಆ ಹುದ್ದೆಯನ್ನು ದುರುಪಯೋಗ ಪಡಿಸಿಕೊಂಡಿದ್ದರು, ಸ್ವಜನಪಕ್ಷಪಾತದ ಕಳಂಕ ಅಂಟಿಸಿಕೊಂಡಿದ್ದರು ಎಂಬುದಕ್ಕೆ ಸಾಕಷ್ಟು ದಾಖಲೆಗಳಿವೆ. ಆದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಪ್ರಜಾತಂತ್ರದ ಪ್ರಮುಖ ಆಧಾರಸ್ತಂಭವಾಗಿರುವ ನ್ಯಾಯಾಂಗ ವ್ಯವಸ್ಥೆ ಎಂದಿಗೂ ಹಳಿ ತಪ್ಪಕೂಡದು. ನ್ಯಾಯಮೂರ್ತಿಗಳಾದವರು ನ್ಯಾಯಾಂಗ ವ್ಯವಸ್ಥೆಯ ಘನತೆ ಗೌರವಗಳನ್ನು ಎತ್ತಿಹಿಡಿಯಬೇಕೇ ಹೊರತು ಅದನ್ನು ಹಾಳುಗೆಡವಕೂಡದು. ಆದರೆ ಕರ್ಣನ್ ಅವರ ನಡವಳಿಕೆ ಸಂಪೂರ್ಣ ವ್ಯತಿರಿಕ್ತವಾಗಿದೆ. ಬೇಲಿಯೇ ಎದ್ದು ಹೊಲ ಮೇಯುವ ಪರಿ ಅವರದು. ಸುಪ್ರಿಂಕೋರ್ಟ್ ಈ ಪ್ರಕರಣವನ್ನು ಹೇಗೆ ನಿರ್ವಹಿಸುತ್ತದೋ ಎಂಬ ಕುತೂಹಲ ಈಗ ಸಾರ್ವಜನಿಕರದ್ದು. ನ್ಯಾಯಾಂಗದ ಘನತೆ ಗೌರವಕ್ಕೆ ಧಕ್ಕೆ ಬರುವ ಪರಿಸ್ಥಿತಿ ನಿರ್ಮಾಣವಾದಾಗ, ಅಂತಹ ಪರಿಸ್ಥಿತಿಯನ್ನು ನಿರ್ಮಿಸಿದವರು ಸ್ವತಃ ನ್ಯಾಯಾಧೀಶರೇ ಆಗಿದ್ದರೂ ಅವರ ವಿರುದ್ಧ ಕಾಲಮಿತಿಯಲ್ಲಿ ಒಂದು ದೃಢನಿರ್ಧಾರ ತೆಗೆದುಕೊಳ್ಳುವ ಅಗತ್ಯವಂತೂ ಖಂಡಿತ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.