ಕಡಲ ನಗರಿ ಮಂಗಳೂರು ಅಂದ್ರೆ ಸಾಕು ಬೀಚ್ಗಳ ತಾಣ, ಪ್ರವಾಸಿಗರ ಪಾಲಿನ ಸ್ವರ್ಗ ಅಂತೆಲ್ಲಾ ಕರೆಸಿಕೊಳ್ಳೋ ಜಿಲ್ಲೆ. ಆದರೆ ಗಲಾಟೆ, ಘರ್ಷಣೆ ಮತ್ತು ಇತರೆ ಅಪರಾಧ ಪ್ರಕರಣಗಳ ವಿಚಾರದಲ್ಲೂ ಮಂಗಳೂರು ಹಿಂದೆ ಬಿದ್ದಿಲ್ಲ. ಹೀಗಾಗಿಯೇ ಮಂಗಳೂರು ಪೊಲೀಸರು ಮತ್ತು ಜಿಲ್ಲಾಡಳಿತ ಜಂಟಿಯಾಗಿ ಬುದ್ಧಿವಂತರ ಜಿಲ್ಲೆಯನ್ನು ಅಪರಾಧ ಮುಕ್ತವನ್ನಾಗಿಸೋ ಉದ್ದೇಶದಿಂದ ದಿಟ್ಟ ಹೆಜ್ಜೆ ಇಟ್ಟಿದೆ. ಈ ಮೂಲಕ ಮಂಗಳೂರನ್ನು ಶಾಂತಿಪ್ರಿಯ ನಗರವನ್ನಾಗಿಯೇ ಉಳಿಸೋಕೆ ಪಣ ತೊಟ್ಟಿದೆ. ಅಷ್ಟಕ್ಕೂ ಈ ಉದ್ದೇಶದ ಈಡೇರಿಕೆಗೆ ಇಲಾಖೆ ಕೈಗೊಂಡಿರುವ ಕ್ರಮಗಳು ಏನೂ ಎಂಬುದನ್ನು ತಿಳಿಯೋಣ.
ಮಂಗಳೂರು ಇಡೀ ರಾಜ್ಯದಲ್ಲೇ ಅತ್ಯಂತ ಸುಂದರ ನಗರ. ಒಂದು ಕಡೆ ಕಣ್ಣು ಹಾಯಿಸಿದಷ್ಟು ಕಾಣುವ ಸ್ವಚ್ಚಂಧ ಸಮುದ್ರ, ಇನ್ನೊಂದು ಕಡೆ ಹಸಿರುಗಾಡಿನ ಪಶ್ಚಿಮ ಘಟ್ಟ. ಹೀಗೆ ಒಂದಲ್ಲ, ಎರಡಲ್ಲ. ಪ್ರವಾಸಿಗರನ್ನು ಆಕರ್ಷಣೆಯ ಕೇಂದ್ರವಾಗಿ ಮಂಗಳೂರು ದಿನದಿಂದ ದಿನಕ್ಕೆ ಅತ್ಯಂತ ವೇಗವಾಗಿ ಬೆಳೆಯುತ್ತಾ ಇದೆ. ಆದರೆ ಇಂತಹ ಊರಲ್ಲಿ ಅಪರಾಧ ಚಟುವಟಿಕೆಗಳಿಗೇನೂ ಕಮ್ಮಿಯಿಲ್ಲ.
ದಿನ ಬೆಳಗಾದ್ರೆ ಕೊಲೆ, ದರೋಡೆ, ಕಿಡಿಗೇಡಿ ಕೃತ್ಯಗಳು, ನೈತಿಕ ಪೊಲೀಸ್ಗಿರಿಯಂತಹ ಘಟನೆಗಳು ವರದಿಯಾಗ್ತಲೇ ಇವೆ. ಆದರೆ ಮಂಗಳೂರು ಪೊಲೀಸರು ಎಷ್ಟೇ ಪ್ರಯತ್ನ ಪಟ್ಟರೂ ಇದನ್ನು ನಿಯಂತ್ರಣಕ್ಕೆ ತರೋಕೆ ಸಾಧ್ಯವಾಗುತ್ತಲೇ ಇಲ್ಲ. ಹೀಗಾಗಿ ಸ್ವತಃ ಜಿಲ್ಲಾಡಳಿತವೇ ಪೊಲೀಸ್ ಇಲಾಖೆಯ ಜೊತೆ ಸೇರಿಕೊಂಡು ಮಂಗಳೂರನ್ನು ಅಪರಾಧ ಮುಕ್ತವನ್ನಾಗಿರೋ ದಿಟ್ಟ ಹೆಜ್ಜೆ ಇಟ್ಟಿದೆ. ಇದರ ಮೊದಲ ಭಾಗವಾಗಿ ನಗರದ ಎಲ್ಲಾ ಪ್ರಮುಖ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಆಳವಿಡಿಕೆಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಆದೇಶ ನೀಡಿದ್ದಾರೆ.
ಸರ್ಕಾರದ ವ್ಯಾಪ್ತಿಗೆ ಒಳಪಡುವ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಪ್ರಮುಖ ಪ್ರದೇಶಗಳು, ಮುಜುರಾಯಿ ವ್ಯಾಪ್ತಿಯ ಎಲ್ಲಾ ದೇವಸ್ಥಾನಗಳಿಗೆ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಸೂಚನೆ ನೀಡಲಾಗಿದೆ. ಉಳಿದಂತೆ ಖಾಸಗಿ ಪ್ರದೇಶಗಳಾದ ಮಾಲ್ಗಳು, ಕಾಂಪ್ಲೆಕ್ಸ್ಗಳು, ಪೆಟ್ರೋಲ್ ಬಂಕ್, ಬಾರ್ ಎಂಡ್ ರೆಸ್ಟೋರೆಂಟ್, ಬ್ಯಾಂಕ್ಗಳು, ಸಣ್ಣ ಪುಟ್ಟ ವಸ್ತ್ರ ಮಳಿಗೆಗಳು ಸೇರಿದಂತೆ ಎಲ್ಲಾ ಕಡೆಗಳಲ್ಲಿ ಆಯಾ ಸಂಸ್ಥೆಯವರೇ ಕ್ಯಾಮೆರಾ ಅಳವಡಿಸುವಂತೆ ಜಿಲ್ಲಾಡಳಿತ ಒಂದು ತಿಂಗಳ ಗಡುವು ನೀಡಿದೆ. ಈ ಮೂಲಕ ಕಳ್ಳತನ ಸೇರಿದಂತೆ ಇತರೆ ಅಪರಾಧ ಪ್ರಕರಣಗಳನ್ನು ಮಟ್ಟ ಹಾಕುವುದು ಜಿಲ್ಲಾಡಳಿತದ ಉದ್ದೇಶ. ಇದರ ಜೊತೆಗೆ ಖಾಸಗಿ ವ್ಯಾಪ್ತಿಗೆ ಒಳಪಡುವ ಮಸೀದಿ, ಚರ್ಚ್ಗಳ ಆಡಳಿತಕ್ಕೂ ಈ ತಿಂಗಳ ಅಂತ್ಯದೊಳಗೆ ಕ್ಯಾಮೆರಾ ಅಳವಡಿಕೆ ಮಾಡುವಂತೆ ಖಡಕ್ ಆದೇಶ ನೀಡಲಾಗಿದೆ. ಈ ಹಿಂದೆ ಕೋಮು ಗಲಭೆ ನಡೆದ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿರುವುದರಿಂದ ಗಲಭೆ ನಿಯಂತ್ರಣಕ್ಕೆ ಬಂದ ಕಾರಣಕ್ಕೆ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ.
ಇನ್ನು ಜಿಲ್ಲಾಡಳಿತ ಆದೇಶ ನೀಡಿದೆ ಅಂತ ಖಾಸಗಿ ಸಂಸ್ಥೆಯವರು ಕಳಪೆ ಗುಣಮಟ್ಟದ ಕ್ಯಾಮೆರಾ ಅಳವಡಿಸುವಂತಿಲ್ಲ. ಬದಲಾಗಿ ಉತ್ತಮ ಗುಣಮಟ್ಟದ ಏಳು ಸಾವಿರ ಬೆಲೆ ಬಾಳೋ ಐಪಿ ಸಿಸಿ ಕ್ಯಾಮೆರಾಗಳನ್ನೇ ಅಳವಡಿಸಬೇಕು. ಈ ಮೂಲಕ ಎಲ್ಲಾ ದೃಶ್ಯಗಳು ಸ್ಪಷ್ಟವಾಗಿ ಒಂದು ತಿಂಗಳ ಕಾಲ ಉಳಿಯುವಂತಿರಬೇಕು ಅಂತ ಸೂಚನೆ ನೀಡಲಾಗಿದೆ.
ಜಿಲ್ಲಾಡಳಿತ ಮತ್ತು ಪೊಲೀಸ್ ಮೂಲಗಳ ಪ್ರಕಾರ ನಗರಾದ್ಯಂತ ಒಟ್ಟು 15 ಸಾವಿರ ಕಾಮೆರಾಗಳನ್ನು ಅಳವಡಿಸುವುದಕ್ಕೆ ಆದೇಶ ನೀಡಲಾಗಿದೆ. ಮಾಲ್ಗಳಲ್ಲಿ ಮತ್ತು ಸಣ್ಣ ಪುಟ್ಟ ಕಾಂಪ್ಲೆಕ್ಸ್ಗಳ ಮುಂಭಾಗದಲ್ಲಿ ಅಳವಡಿಸಿದ್ದರೆ ಅಹಿತಕರ ಘಟನೆಗಳು ನಡೆದರೆ ಆರೋಪಿಗಳ ಪತ್ತೆ ಸುಲಭವಾಗುತ್ತೆ ಅನ್ನೋದು ಇಲಾಖೆಯ ಯೋಚನೆ. ಸದ್ಯ ಈ ಆದೇಶದಂತೆ ಕೆಲ ಕಡೆಗಳಲ್ಲಿ ಸಿಸಿ ಕ್ಯಾಮೆರಾವನ್ನು ಪಾಲಿಕೆ ಆಡಳಿತ ಮತ್ತು ಖಾಸಗಿ ಸಂಸ್ಥೆಗಳು ಅಳವಡಿಸಿದ್ದರೆ ಇನ್ನು ಕೆಲವರು ಈ ತಿಂಗಳ ಅಂತ್ಯದೊಳಗೆ ಅಳವಡಿಸುವುದಾಗಿ ತಿಳಿಸಿದ್ದಾರೆ. ಇದರ ಜೊತೆಗೆ ಜಿಲ್ಲಾಡಳಿತದ ಈ ಯೋಜನೆಗೆ ಪೊಲೀಸ್ ಇಲಾಖೆ ಕೂಡ ಕೈ ಜೋಡಿಸಿದ್ದು, ಖಾಸಗಿ ಬಸ್ಗಳಲ್ಲೂ ಎರಡು ಸಿಸಿ ಕ್ಯಾಮೆರಾ ಅಳವಡಿಸುವಂತೆ ಬಸ್ ಮಾಲಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದರ ಜೊತೆಗೆ ಅಪರಾಧ ಚಟುವಟಿಕೆಗಳನ್ನು ತಡೆಯೋ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸೋ ಕಾರ್ಯವೂ ನಡೆದಿದೆ. ಇದಕ್ಕಾಗಿ ಮಂಗಳೂರು ಪೊಲೀಸ್ ಇಲಾಖೆ ಮೊಬೈಲ್ ಆಪ್ ಒಂದನ್ನು ರೂಪಿಸಿದ್ದು, ಈ ಮೂಲಕ ಜನರು ನೇರವಾಗಿ ತಂತ್ರಜ್ನಾನವನ್ನು ಬಳಸಿಕೊಂಡು ಇಲಾಖೆಯ ಜೊತೆ ಸಂಪರ್ಕ ಬೆಳೆಸುವಂತೆ ಮಾಡಲಾಗಿದೆ. ಇದರಲ್ಲಿ ಟ್ರಾಫಿಕ್ ಸಮಸ್ಯೆ, ಅಪರಾಧ ಚಟುವಟಿಕೆ ಮುಂತಾದ ಘಟನೆಗಳ ಬಗ್ಗೆ ಜನರೇ ನೇರವಾಗಿ ಫೋಟೋ ಸಮೇತ ಇಲಾಖೆಯ ಆಪ್ ಬಳಸಿ ಮೊದಲ ಹಂತದ ದೂರನ್ನು ಸಲ್ಲಿಕೆ ಮಾಡಬಹುದು. ತದನಂತರ ಇಲಾಖೆ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಅಂತ ಮಂಗಳೂರು ಪೊಲೀಸ್ ಆಯುಕ್ತ ಮುರುಗನ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಮಂಗಳೂರನ್ನು ಅಪರಾಧ ಮುಕ್ತವನ್ನಾಗಿಸೋ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ದಿಟ್ಟ ಹೆಜ್ಜೆ ಇಟ್ಟಿದೆ. ಹೀಗಾಗಿಯೇ ತಂತ್ರಜ್ಞಾನವನ್ನು ಬಳಸಿಕೊಂಡೇ ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕೋ ಕಾರ್ಯಕ್ಕೆ ಮುಂದಾಗಿದೆ. ಆದರೆ ಇಲಾಖೆಯ ಈ ಯೋಜನೆಗಳಿಗೆ ಕರಾವಳಿಯ ಶಾಂತಿಪ್ರಿಯ ನಾಗರಿಕರು ಕೂಡ ಕೈ ಜೋಡಿಸೋ ಆಗತ್ಯವಿದೆ. ಹೀಗಾದಲ್ಲಿ ಮುಂದಿನ ದಿನಗಳಲ್ಲಿ ಮಂಗಳೂರು ಅಪರಾಧ ಮುಕ್ತ ನಗರವಾಗಿ ಬದಲಾಗುವುದರಲ್ಲಿ ಅನುಮಾನವೇ ಇಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.