ಕಾರ್ಕಳ : ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತು ಮೆಚ್ಚಿಕೊಂಡಿರುವುದರಿಂದ ಇಡೀ ವಿಶ್ವದ ಚಿತ್ತ ಭಾರತದತ್ತ ವಾಲಿದೆ ಎಂದು ರಾಜ್ಯ ವಿಪಕ್ಷದ ಮುಖ್ಯ ಸಚೇತಕ ಹಾಗೂ ಶಾಸಕ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಅವರು ಶ್ರೀ ಕ್ಷೇತ್ರ ಕುಂಟಾಡಿ ಶ್ರೀ ರಕ್ತೇಶ್ವರಿ ದೈವಸ್ಥಾನದಲ್ಲಿ ಭಾನುವಾರ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ, ಭಾರತದ ಶ್ರೀಮಂತಿಕೆ, ಪ್ರವಾಸಿ ಕ್ಷೇತ್ರಗಳು, ಸಾಮಾಜಿಕ ವ್ಯವಸ್ಥೆಯತ್ತ ಅನ್ಯ ದೇಶಗಳು ನೋಡದೆ ನಮ್ಮ ಹಿರಿಯರ ಆಧ್ಯಾತ್ಮಿಕ ಚಿಂತನೆಗಳತ್ತ ಆಕರ್ಷಿತರಾಗಿರುವುದು ಸಂತಸದ ವಿಷಯ. ತಂತ್ರಜ್ಞಾನಗಳು ಬೆಳೆದಂತೆ ಆಧುನಿಕತೆಯು ಎಲ್ಲಾ ಕ್ಷೇತ್ರಗಳಿಗೂ ದೊಡ್ಡ ಪ್ರಮಾಣದಲ್ಲಿ ಪ್ರವೇಶಿಸಿದರೂ ಮನಸ್ಸಿನ ನೆಮ್ಮದಿಗಾಗಿ ದೇವಸ್ಥಾನಗಳೇ ಆಶ್ರಯ ತಾಣಗಳಾಗಿವೆ. ದೇವಸ್ಥಾನಗಳನ್ನು ಕೇಂದ್ರವಾಗಿಟ್ಟುಕೊಂಡು ಧರ್ಮ, ಸಂಸ್ಕೃತಿಯ ಜಾಗೃತಿ, ಉಳಿವುಗಳ ಕೆಲಸ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ಬಿ.ಪ್ರಥ್ವಿರಾಜ್ ರೈ ಮಾತನಾಡಿ ದೈವಸ್ಥಾನದ ಅಭಿವೃದ್ಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಮುಖ್ಯ ಅತಿಥಿ ಜಿ.ಪಂ. ಅಧ್ಯಕ್ಷೆ ಸವಿತಾ ಶಿವಾನಂದ ಕೋಟ್ಯಾನ್ ಸನ್ಮಾನ ಸ್ವೀಕರಿಸಿ, ಹಿರಿಯರು ತಿಳಿಸಿಕೊಟ್ಟ ಧರ್ಮ, ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ ಎಂದರು.
ಮಾಜಿ ಶಾಸಕ ಹೆಚ್. ಗೋಪಾಲ ಭಂಡಾರಿ ಮಾತನಾಡಿ, ಉತ್ತಮವಾದುದನ್ನು ಉತ್ತಮವೆಂದು ಬಿಂಬಿಸಬೇಕು. ಸಾಧನೆಗೈದವರನ್ನು ಪ್ರೋತ್ಸಾಹಿಸಬೇಕು. ಇದರಿಂದ ಇತರರಿಗೆ ಸ್ಪೂರ್ತಿಯ ಸೆಲೆಯಾಗುತ್ತದೆ ಎಂದು ಅವರು, ಈ ಧಾರ್ಮಿಕ ಸಭೆಯಲ್ಲಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮ ಶ್ಲಾಘಿಸಿ, ಹುಟ್ಟು ಬದುಕು ನಮ್ಮ ಕೈಯಲಿಲ್ಲ. ಜೀವನ ನಮ್ಮ ಕೈಯಲ್ಲಿದೆ. ಧರ್ಮದ ಮೂಲಕ ಜೀವನವನ್ನು ಕಳೆಯಬೇಕೆಂದರು.
ನಗರಾಭಿವೃದ್ಧಿ ಸಚಿವರ ಕಾರ್ಯದರ್ಶಿ ಹರೀಶ್ ಹೆಗ್ಡೆ ಮಾತನಾಡಿ, ದೇವಳಗಳ ಸಮಿತಿಯಲ್ಲಿದ್ದುಕೊಂಡು ಕಾರ್ಯನಿರ್ವಹಿಸುವುದು ಪ್ರಸ್ತುತ ಸವಾಲಿನ ಪ್ರಶ್ನೆಯಾಗಿದೆ. ಎಲ್ಲರಲ್ಲೂ ಹೊಂದಾಣಿಕೆ ಮಾಡಿಕೊಂಡು ದೇವಳದ ಅಭಿವೃದ್ದಿಯಲ್ಲಿ ತೊಡಗಿಸಿಕೊಳ್ಳುವ ಮಹತ್ವದ ಜವಾಬ್ದಾರಿ ಸಮಿತಿಗಿದೆ ಎಂದರು. ದೈವಸ್ಥಾನದ ಅರ್ಚಕ ರಂಗನಾಥ ಭಟ್, ಗುತ್ತು ಬರ್ಕೆಯ ಮುಖ್ಯಸ್ಥರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸವಿತಾ ಶಿವಾನಂದ ಕೋಟ್ಯಾನ್, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಚಂದಯ್ಯ ಹೆಗ್ಡೆ, ರಂಗನಾಥ ಭಟ್, ರವಿರಾಜ್ ಪಾಂಡಿ, ಆನಂದ ಶೆಟ್ಟಿ, ಸುರೇಂದ್ರ ಅಮೀನ್, ಶಕುಂತಳ ಅಮೀನ್, ಜಯರಾಜ್ ರೈ, ರಾಮಚಂದ್ರ ಆಚಾರ್ಯ, ರಾಘವ ಆಚಾರ್ಯ, ನಿವ್ಯಾ, ಕಿಶೋರ್ ದರ್ಬೆ, ಶಿವಾನಂದ, ಹರೀಶ್ ನಾಯಕ್, ಪ್ರವೀರ್ ಪಾಂಡಿ, ಉಷಾರಾಣಿ ರೈ ಮೊದಲಾದವರನ್ನು ಸನ್ಮಾನಿಸಲಾಯಿತು.
ಅನಾರೋಗ್ಯಕ್ಕಾಗಿ ರಾಜು ನಾಯಕ್ ಕುಟುಂಬಕ್ಕೆ ದೈವಸ್ಥಾನದ ವತಿಯಿಂದ ಸಹಾಯಧನದ ಚೆಕ್ಕನ್ನು ಆಡಳಿತ ಮೊಕ್ತೇಸರ ಕೆ.ಬಿ.ಪ್ರಥ್ವಿರಾಜ್ ರೈ ವಿತರಿಸಿದರು. ಕೆ. ಕೃಷ್ಣರಾಜ್ ರೈ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಶಿವಾನಂದ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಶೆಟ್ಟಿ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯರಿಂದ ನೃತ್ಯ ಕಾರ್ಯಕ್ರಮ ಹಾಗೂ ನಮನ ಕಲಾವಿದೆರ್ ನಿಟ್ಟೆ ಇವರಿಂದ ತುಳು ಹಾಸ್ಯಮಯ ನಾಟಕ “ಪನಂದೆ ಪೋಯೆರ್” ಪ್ರದರ್ಶನಗೊಂಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.