ಅವರು ಹೆಚ್ಚಿನ ವಿದ್ಯಾಭ್ಯಾಸ ಮಾಡಲಿಲ್ಲ. ಬಡತನದಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಆದರೆ ತಮಗೆ ಸಾಧ್ಯವಾಗದುದನ್ನು ಅವರು ಸಾವಿರಾರು ಜನರಿಗೆ ನೀಡಿದರು. ಶಿಕ್ಷಣ ಸಂಸ್ಥೆಗಳನ್ನು ತೆರೆದು ಸಹಸ್ರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡಿದರು. ಅವರು ತಮ್ಮ ಏಕೈಕ ಮಗಳಿಗೆ ಕೈಯಾರೆ ಧಾರೆಯೆರೆಯುವ ಭಾಗ್ಯ ಪಡೆದಿರಲಿಲ್ಲ. ಆದರೇನು, 30 ಕ್ಕೂ ಹೆಚ್ಚು ಅನಾಥ ಹೆಣ್ಣುಮಕ್ಕಳಿಗೆ ಅವರು ತಂದೆಯಾಗಿ ನಿಂತು ಧಾರೆಯೆರೆದರು. ಬ್ರಾಹ್ಮಣರನ್ನು ಸಂಘಟಿಸುವುದೆಂದರೆ ಕಪ್ಪೆಗಳನ್ನು ತಕ್ಕಡಿಯಲ್ಲಿ ಹಾಕಿತೂಗಿದಂತೆ. ಆದರೆ ಅವರು ಬ್ರಾಹ್ಮಣ ಸಮುದಾಯವನ್ನು ಒಗ್ಗೂಡಿಸಿ, ಆ ಸಂಘಟನೆಗೆ ಜೀವ ತುಂಬಿದರು. ಐದು ಬಾರಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿ ಇತಿಹಾಸ ಬರೆದರು.
ಮೊನ್ನೆ ಜ. 30 ರಂದು ಹುತಾತ್ಮರ ದಿನದಂದೇ ಈ ಲೋಕಕ್ಕೆ ವಿದಾಯ ಹೇಳಿದ ಡಾ. ಬಿಎನ್ವಿ ಸುಬ್ರಹ್ಮಣ್ಯಂ ಅವರ ಬಗೆಗೆ ಸಂಕ್ಷಿಪ್ತವಾಗಿ ನಾಲ್ಕೇ ಸಾಲುಗಳಲ್ಲಿ ಹೇಳಬಹುದಾದ ಹೃದ್ಯ ಮಾತುಗಳಿವು. ಅವರ ಬಗ್ಗೆ ಹೇಳಿದಷ್ಟೂ ಮುಗಿಯುವುದಿಲ್ಲ. ಏಕೆಂದರೆ ಅವರು ತನಗಾಗಿ, ತನ್ನ ಕುಟುಂಬಕ್ಕಾಗಿ ಮಾತ್ರ ಬದುಕಿರಲಿಲ್ಲ. ಅವರು ಬದುಕಿದ್ದುದು ಎಲ್ಲರಿಗಾಗಿ. ಅವರ ಸಮೀಪ ಬಂದವರಿಗೆಲ್ಲಾ ಅವರು ತಣ್ಣನೆಯ ನೆರಳಾದರು. ಇತರರ ಕಷ್ಟ-ಕಾರ್ಪಣ್ಯ ಕಂಡು ಮರುಗಿದರು. ಅಷ್ಟೇ ಅಲ್ಲ, ನೊಂದ ಜೀವಗಳಿಗೆ ಆಸರೆಯಾದರು. ಅವರ ನಿಧನದ ಸುದ್ದಿ ಕೇಳಿ ದುಃಖಿಸದವರೇ ವಿರಳ ಎಂದರೆ ಉತ್ಪ್ರೇಕ್ಷೆಯಲ್ಲ.
ಹುಟ್ಟಿದ್ದು ಹಾಸನ ಜಿಲ್ಲೆಯ ಬೆಟ್ಟದಪುರದ ಸಂಕೇತಿ ಸಮುದಾಯಕ್ಕೆ ಸೇರಿದ ಬಡಕುಟುಂಬದಲ್ಲಿ. ಬಡತನದ ಕಾರಣದಿಂದಾಗಿ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲಾಗಲಿಲ್ಲ. 15 ತಿಂಗಳ ಐಟಿಐ ಮಾದರಿಯ ಕೌಶಲ ತರಬೇತಿ ಪಡೆದ ಅವರು ಉದ್ಯೋಗ ಅರಸಿ ಬಂದಿದ್ದು ಬೆಂಗಳೂರಿಗೆ. ಸಣ್ಣ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದರು. ಈ ನಡುವೆ ವಿವಾಹವಾಗಿ ಒಂದು ಹೆಣ್ಣು ಮಗುವಿನ ತಂದೆಯೂ ಆದರು. ಆದರೆ ದುರಾದೃಷ್ಟ. ಮಗಳು ಜ್ಯೋತಿ ಹೆಚ್ಚು ವರ್ಷ ಅವರೊಂದಿಗೆ ಇರಲಿಲ್ಲ. ಕಾಲೇಜು ಓದುತ್ತಿರುವಾಗಲೇ ಅನಾರೋಗ್ಯದಿಂದ ತಂದೆ-ತಾಯಿಯನ್ನು ಬಿಟ್ಟಗಲಿದಳು. ಇದ್ದೊಬ್ಬ ಪುತ್ರಿ ಕಾಲವಾದರೆ ತಂದೆ-ತಾಯಿಯಾದವರು ಮಂಕುಹಿಡಿದು ಮುಂದೇನೆಂದು ತೋಚದೆ ಕುಳಿತುಕೊಳ್ಳುವುದೇ ಹೆಚ್ಚು. ಆದರೆ ಬಿಎನ್ವಿ ಅವರಿಗೆ ಅದೇ ಒಂದು ಬದುಕಿನ ಟರ್ನಿಂಗ್ ಪಾಯಿಂಟ್ ಆಯಿತು. ಮಗಳು ಜ್ಯೋತಿ ಅಗಲಿದರೇನು, ಅಂತಹ ಜ್ಯೋತಿಯೆಂಬ ಜ್ಯೋತಿಯನ್ನು ಬೇರೆ ಮಕ್ಕಳ ಕಣ್ಣಲ್ಲಿ ಕಂಡರಾಗದೇ? ಎಂಬ ಯೋಚನೆಯೊಂದು ಸುಳಿಯಿತು. ಕನಕಪುರ ರಸ್ತೆಯ ಯೆಲಚೇನ ಹಳ್ಳಿಯಲ್ಲಿ ಜ್ಯೋತಿ ಕೇಂದ್ರೀಯ ವಿದ್ಯಾಲಯ ಎಂಬ ಹೆಸರಿನ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು. ಮಗಳ ನೆನಪಿಗಾಗಿ ಬಿಎನ್ವಿ ಹುಟ್ಟು ಹಾಕಿದ ಮೊದಲ ಶಿಕ್ಷಣ ಸಂಸ್ಥೆ ಅದು. ನರ್ಸರಿಯಿಂದ ತೊಡಗಿ ಹೈಸ್ಕೂಲ್ತನಕ ಅಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬುದು ಅವರ ಉದ್ದೇಶವಾಗಿತ್ತು. ಶಾಲೆಗೊಂದು ಸರಿಯಾದ ಕಟ್ಟಡವೂ ಇರಲಿಲ್ಲ. ಶಾಲೆಯೇನೋ ಆರಂಭವಾಗಿತ್ತು, ಆದರೆ ಮಕ್ಕಳೇ ಬರುತ್ತಿರಲಿಲ್ಲ. ಮನೆ-ಮನೆಗೆ ತೆರಳಿದ ಸುಬ್ರಹ್ಮಣ್ಯಂ ಅವರೇ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರನ್ನು ವಿನಂತಿಸಿಕೊಂಡರು. ಕ್ರಮೇಣ ಶಾಲೆಗೆ ಮಕ್ಕಳು ಬರಲಾರಂಭಿಸಿದರು. ಮಕ್ಕಳ ಸಂಖ್ಯೆ ಹೆಚ್ಚಿತು.
1989 ರಲ್ಲಿ ಆರಂಭಗೊಂಡ ಜ್ಯೋತಿ ಕೇಂದ್ರೀಯ ವಿದ್ಯಾಲಯ ಇಂದು ಬೆಂಗಳೂರಿನ ಒಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ರೂಪುಗೊಂಡಿದ್ದು ಹೀಗೆ. ಈಗ ಆ ಶಾಲೆಗೆ ಮಕ್ಕಳನ್ನು ಸೇರಿಸಬೇಕೆಂದು ಬಯಸಿದರೂ ಅಲ್ಲಿ ಸೀಟು ಸಿಗುವುದೇ ಕಷ್ಟ. ಅಷ್ಟೊಂದು ಒತ್ತಡ ಅಲ್ಲಿದೆ. ಹೈಸ್ಕೂಲ್ ಜೊತೆಗೆ ಪದವಿಪೂರ್ವ ಕಾಲೇಜು ಕೂಡಾ ಕಾರ್ಯನಿರ್ವಹಿಸುತ್ತಿದೆ. ಕನಕಪುರ ರಸ್ತೆಯ ತಾತಗುಣಿ ಪ್ರದೇಶದಲ್ಲಿ ಜೆ.ಐ.ಟಿ. ಹೆಸರಿನ ಇಂಜಿನಿಯರಿಂಗ್ ಕಾಲೇಜ್ ತಲೆ ಎತ್ತಿ ಈಗ ಮೊದಲ ತಂಡದ ವಿದ್ಯಾರ್ಥಿಗಳು ಪದವಿ ಪಡೆದು ಹೊರಬಂದಿದ್ದಾರೆ. ಜ್ಯೋತಿ ಕೇಂದ್ರೀಯ ವಿದ್ಯಾಲಯದಲ್ಲಿ ಓದಿದ ಅದೆಷ್ಟೋ ನೂರಾರು, ಸಾವಿರಾರು, ವಿದ್ಯಾರ್ಥಿಗಳು ಇಂದು ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾ ಮೊದಲಾದ ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮುಂದುವರೆಸಿ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದಾರೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಬಿಎನ್ವಿ ಅವರಿಗೆ ಹಠಾತ್ ಅನಾರೋಗ್ಯ ಕಾಣಿಸಿಕೊಂಡಾಗ, ಬೆಂಗಳೂರಿನವರಿಗಿಂತ ಮೊದಲು ಈ ವಿಷಯ ತಿಳಿದಿದ್ದು ವಿದೇಶದಲ್ಲಿರುವ ಅವರ ಹಳೆಯ ವಿದ್ಯಾರ್ಥಿಗಳಿಗೆ. ವಾಟ್ಸ್ ಆಪ್ ಮೂಲಕ ಅವರ ಅನಾರೋಗ್ಯ ಸಂದೇಶ ಹರಿದಾಡಿದಾಗ ಇಲ್ಲಿನವರಿಗೆ ಆ ವಿಷಯ ತಿಳಿದು ಆಸ್ಪತ್ರೆಗೆ ಧಾವಿಸಿದ್ದರು.
ಪ್ರತಿ ವರ್ಷ ಜ್ಯೋತಿ ಕೇಂದ್ರೀಯ ವಿದ್ಯಾಲಯದಲ್ಲಿ ನಡೆಯುವ ವಾರ್ಷಿಕ ದಿನಾಚರಣೆ ಸಂದರ್ಭದಲ್ಲಿ ಅಧ್ಯಕ್ಷರಾದ ಬಿಎನ್ವಿ ಅವರಾಡುವ ನುಡಿಗಳು ಎಲ್ಲರ ಕಿವಿಗಳಲ್ಲೂ ಅನುರಣಿಸುತ್ತಿರುತ್ತವೆ. ‘ಇಲ್ಲಿ ಸೇರಿರುವ ಎಲ್ಲ ವಿದ್ಯಾರ್ಥಿಗಳ ಕಣ್ಣಲ್ಲಿ ನಾನು ನನ್ನ ಮಗಳು ಜ್ಯೋತಿಯನ್ನು ಕಾಣುತ್ತಿರುವೆ. ನನಗೆ ಅತ್ಯಂತ ಸಮಾಧಾನ ನೀಡುವ ಸಂಗತಿ ಅದೊಂದೇ’. ಬೇರೆ ಮಕ್ಕಳನ್ನು ತನ್ನದೇ ಮಕ್ಕಳೆಂದು ಭಾವಿಸುವ, ಆ ಮಕ್ಕಳ ಕಣ್ಣಲ್ಲಿ ತನ್ನ ಅಗಲಿದ ಮಗಳನ್ನು ಕಾಣುವ ಉದಾತ್ತ ಗುಣ ಅದೆಷ್ಟು ಜನರಲ್ಲಿದೆ. ಬಿಎನ್ವಿ ಅವರು ಪ್ರತಿಯೊಬ್ಬರಿಗೂ ಆಪ್ತರಾಗಿರುವುದು ಇಂತಹ ಗುಣದಿಂದಾಗಿಯೇ.
ಬಿಎನ್ವಿಯವರ ಜ್ಯೋತಿ ಫಾರ್ಮ್ನಲ್ಲಿ ಕೆಲಸ ಮಾಡುತ್ತಿದ್ದವನೊಬ್ಬ ತೀರಿಹೋದ. ಆತನ ವಿಧವೆ ಪತ್ನಿಗೆ ಮುಂದೇನು ಎಂಬ ಚಿಂತೆ. ಆದರೆ ಬಿಎನ್ವಿ ಆಕೆಯ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ಕೊಡಿಸಿದರು. ಆಕೆಗೆ ಶಾಲೆಯಲ್ಲಿ ಆಯ ಕೆಲಸ ನೀಡಿದರು. ಶಾಲೆಯ ಇನ್ನೊಬ್ಬ ಆಯ ಅವಳ ಮೊಮ್ಮಗಳು ಅದೇ ಹೈಸ್ಕೂಲ್ನಲ್ಲಿ ಈಗ ಟೀಚರ್! ಇದು ಸಾಧ್ಯವಾಗಿದ್ದು ಬಿಎನ್ವಿ ಅವರ ನೆರವಿನಿಂದಾಗಿ. ಒಮ್ಮೆ ಜ್ಯೋತಿ ಶಾಲೆಯಲ್ಲಿ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಇಬ್ಬರು ಹೆಣ್ಣುಮಕ್ಕಳು ಬಿಎನ್ವಿಯವರ ಬಳಿ ಬಂದು ಅವರ ಕಾಲ್ಮುಟ್ಟಿ ನಮಸ್ಕರಿಸಿದರು. ಇವರು ಯಾರು ಗೊತ್ತೇ ಎಂದು ನನ್ನ ಬಳಿ ಬಿಎನ್ವಿ ಕೇಳಿದರು. ನನಗೆ ಅವರ ಪರಿಚಯವಿರಲಿಲ್ಲ. ಅವರೇ ಪರಿಚಯ ಮಾಡಿಕೊಟ್ಟರು. ಅದೇ ಶಾಲೆಯಲ್ಲಿ ಆಯ ಕೆಲಸ ನಿರ್ವಹಿಸುತ್ತಿರುವವರೊಬ್ಬರ ಮಕ್ಕಳು. ಈಗ ಜೆಐಟಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು. ಶಾಲೆಯಲ್ಲಿ ಯಕಃಶ್ಚಿತ್ ಆಯ ಆಗಿರುವವರ ಮಕ್ಕಳು ಇಂಜಿನಿಯರಿಂಗ್ ಓದಲು ಸಾಧ್ಯವೇ? ಎಂದು ನನಗೆ ಆಚ್ಚರಿ. ಆದರೆ ಬಿಎನ್ವಿ ಅವರು ಆ ಮಕ್ಕಳಿಗೂ ಉಚಿತವಾಗಿ ಇಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಿದ್ದರು.
ಬ್ರಾಹ್ಮಣರೆಂದರೆ ಮಡಿವಂತರು, ಇತರ ಜಾತಿಯವರನ್ನು ಅಸ್ಪೃಶ್ಯರೆಂದು ಕಾಣುವವರು ಎಂದೆಲ್ಲಾ ಸಾಧಾರಣವಾಗಿ ದೂರುವುದುಂಟು. ಬಿಎನ್ವಿ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷರಾಗಿದ್ದರೂ ಅವರೊಳಗೊಬ್ಬ ‘ಸಮಾಜ ಸುಧಾರಕ’ ಜಾಗೃತನಾಗಿದ್ದ. ಮಾನವೀಯತೆ ಎಂಬುದು ಅವರ ರಕ್ತದೊಂದಿಗೇ ಬೆಸೆದಿತ್ತು. ಕಷ್ಟದಲ್ಲಿ ಇರುವವರು ಯಾರೇ ಇರಲಿ, ಯಾವುದೇ ಜಾತಿಯವರಾಗಿರಲಿ ಅವರಿಗಾಗಿ ಬಿಎನ್ವಿ ಮರುಗುತ್ತಿದ್ದರು. ಅಂತಹವರ ಬಾಳನ್ನು ಹಸನಾಗಿಸಲು ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದರು. ಆದರೆ ಅವರೆಂದೂ ಈ ಕುರಿತು ಪರಾಕು ಪಂಪು ಒತ್ತಿಕೊಂಡಿದ್ದಿಲ್ಲ. Down to earth – ಎಂಬ ಮಾತಿಗೆ ಅವರು ಅನ್ವರ್ಥವಾಗಿದ್ದರು. ಮಾತನಾಡುತ್ತಿದ್ದುದು ತುಂಬಾ ಕಡಿಮೆ. ಆದರೆ ಕೃತಿ ಮಾತ್ರ ಬೆಟ್ಟದಷ್ಟು. ಹಿಡಿದ ಕೆಲಸವನ್ನು ಪೂರ್ತಿಗೊಳಿಸದೆ ಅವರೆಂದೂ ವಿಶ್ರಮಿಸುತ್ತಿರಲಿಲ್ಲ. ಅದು ಶಾಲೆಯ ಕೆಲಸವಿರಲಿ, ಇಂಜಿನಿಯರಿಂಗ್ ಕಾಲೇಜಿನ ಕಟ್ಟಡದ ಕಾಮಗಾರಿಯಿರಲಿ, ಬ್ರಾಹ್ಮಣ ಮಹಾಸಭಾದ ಸಮ್ಮೇಳನವಿರಲಿ, ಮಹಿಳಾ ಹಾಸ್ಟೆಲ್ ಕೆಲಸವಿರಲಿ – ಯಾವುದೇ ಇದ್ದರೂ ಅದು ಪೂರ್ತಿಯಾಗಬೇಕು. ಸಮರ್ಪಕವಾಗಿ ಆಗಬೇಕು ಎಂಬ ತುಡಿತ. ಇಂತಹ ಮನೋಭಾವದಿಂದಾಗಿಯೇ ಸುಬ್ರಹ್ಮಣ್ಯಂ ಅವರು ಕಟ್ಟಿ ಬೆಳಸಿದ ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು, ವೇದಪಾಠಶಾಲೆ, ಬ್ರಾಹ್ಮಣ ಮಹಾಸಭಾ… ಇತ್ಯಾದಿ ಎಲ್ಲವೂ ಈಗ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿವೆ. ಆ ಸಂಸ್ಥೆಗಳ ಬಗ್ಗೆ ಸಾರ್ವಜನಿಕರು ಮುಕ್ತ ಪ್ರಶಂಸೆ ಮಾಡಲು ಸಾಧ್ಯವಾಗಿದೆ.
ಬಿಎನ್ವಿ ಅವರ ಒಬ್ಬಳೇ ಪುತ್ರಿ ಜ್ಯೋತಿ ಕಾಲೇಜು ಓದುತ್ತಿರುವಾಗಲೇ ಕಾಲವಾಗಿದ್ದರಿಂದ ಅವರಿಗೆ ಕನ್ಯಾದಾನ ಮಾಡುವ ಅದೃಷ್ಟ ಇರಲಿಲ್ಲ. ಆದರೆ ಬೆಂಗಳೂರಿನ ಗಾಂಧಿಬಜಾರಿನಲ್ಲಿರುವ ಅಬಲಾಶ್ರಮದಲ್ಲಿರುವ ಅನೇಕ ಹೆಣ್ಣುಮಕ್ಕಳಿಗೆ ಅವರು ಕನ್ಯಾದಾನ ಮಾಡುವ ಅದೃಷ್ಟ ಪಡೆದಿದ್ದರು. ಮೊದಲ ಬಾರಿಗೆ ಅನಾಥ ಹೆಣ್ಣುಮಗಳೊಬ್ಬಳಿಗೆ ತಂದೆಯ ಸ್ಥಾನದಲ್ಲಿ ನಿಂತು ಕನ್ಯಾದಾನ ಮಾಡಬೇಕೆಂದು ಬಿಎನ್ವಿಯವರನ್ನು ಅಬಲಾಶ್ರಮದ ಪ್ರಮುಖರಾದ ಬಿ.ವಿ. ಶೇಷ ಅವರು ವಿನಂತಿಸಿಕೊಂಡಾಗ ಬಿಎನ್ವಿಯವರ ಕಣ್ಣಲ್ಲಿ ನೀರು. ‘ನನ್ನ ಬದುಕಿನಲ್ಲಿ ಕನ್ಯಾದಾನದ ಭಾಗ್ಯವೇ ಇನ್ನಿಲ್ಲ ಎಂದು ಭಾವಿಸಿದ್ದೆ. ಆದರೆ ಈಗ ನೀವಾಗಿ ಅಂತಹ ಭಾಗ್ಯ ಒದಗಿಸಿದ್ದೀರಿ’ ಎಂದು ಕಣ್ತುಂಬಿ, ಕೈಹಿಡಿದು ಹೇಳಿದ್ದರಂತೆ. ಅದಾದ ಬಳಿಕ ಸುಮಾರು ೩೦ಕ್ಕೂ ಹೆಚ್ಚು ಅನಾಥ ಹೆಣ್ಣುಮಕ್ಕಳಿಗೆ ಧಾರೆಯೆರೆದ ಭಾಗ್ಯ ಅವರದು. ವಧುವಿಗೆ ಸೀರೆ, ವರನಿಗೆ ಧೋತಿ-ಶಲ್ಯ, ಜೊತೆಗೆ ಪುರೋಹಿತರಿಗೆ ಸಂಭಾವನೆ ಇತ್ಯಾದಿ ಎಲ್ಲವನ್ನೂ ಬಿಎನ್ವಿಯವರೇ ಪ್ರತೀ ಬಾರಿ ನೀಡುತ್ತಿದ್ದರು. ಪ್ರತೀ ವರ್ಷ ದೀಪಾವಳಿ, ಯುಗಾದಿ ಹಬ್ಬದ ಸಂದರ್ಭದಲ್ಲಿ ಪರಿಚಿತರೆಲ್ಲರಿಗೂ ಅವರಾಗಿಯೇ ದೂರವಾಣಿ ಕರೆಮಾಡಿ ಶುಭಾಶಯ ಕೋರುತ್ತಿದ್ದರು. ಅಬಲಾಶ್ರಮದ ಪ್ರತಿಯೊಬ್ಬರಿಗೂ ಫೋನ್ಮಾಡಿ ಶುಭಾಶಯ ತಿಳಿಸುತ್ತಿದ್ದರು. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾಗಿ, ಬ್ರಾಹ್ಮಣ ಸಭಾದ ಅಧ್ಯಕ್ಷರಾಗಿ, ಕೈಗಾರಿಕೋದ್ಯಮಿಯಾಗಿ ಹೈ-ಫೈ ಸ್ಥಾನದಲ್ಲಿರುವ ಒಬ್ಬ ವ್ಯಕ್ತಿ ಹೀಗೆ, ಇಷ್ಟೊಂದು ಸರಳವಾಗಿ ಎಲ್ಲರೊಂದಿಗೆ ಆತ್ಮೀಯತೆಯಿಂದ ಇರಲು ಸಾಧ್ಯವೇ? ಎಂಬ ಪ್ರಶ್ನೆ ಅವರ ಆಪ್ತರಿಗೂ ಅನಿಸಿದ್ದುಂಟು. ಆದರೆ ಸುಬ್ರಹ್ಮಣ್ಯಂ ಅವರು ಇದ್ದಿದ್ದೇ ಹಾಗೆ. ಹಾಗೆಂದೇ ಮೊನ್ನೆ ಜ. 30ರಂದು ತೀರಿಕೊಂಡಾಗ ಅಂತಿಮ ದರ್ಶನಕ್ಕೆ ಜನಸ್ತೋಮವೇ ಹರಿದು ಬಂದಿತ್ತು. ಕಣ್ಣೀರು ಅಲ್ಲಿ ಮಡುಗಟ್ಟಿ ನಿಂತಿತ್ತು. ಜ್ಯೋತಿ ಕೇಂದ್ರೀಯ ವಿದ್ಯಾಲಯದ ಪ್ರಿನ್ಸಿಪಾಲ್ ಸುಮಾ ಮೇಡಂ, ವೈಸ್-ಪ್ರಿನ್ಸಿಪಾಲ್ ವಿಜಯಾ ಮೇಡಂ ಅವರ ಕಣ್ಣುಗಳಲ್ಲಿ ತೊಟ್ಟಿಕ್ಕಿದ ಕಣ್ಣೀರು ಇನ್ನೂ ಇಂಗಿಲ್ಲ. ಬಿಎನ್ವಿ ಅವರ ನೆನಪಾದರೆ ಸಾಕು, ಅವರಿಬ್ಬರ ಕಣ್ಣು ತುಂಬಿ ಬರುತ್ತದೆ. ಅವರೇನೂ ಬಿಎನ್ವಿಯವರ ಸಂಬಂಧಿಕರಲ್ಲ. ಆದರೆ ಅದಕ್ಕಿಂತಲೂ ಮಿಗಿಲಾದ ಅವ್ಯಕ್ತ, ಅವಿನಾಶಿ ಸಂಬಂಧ ಕಟ್ಟಿಹಾಕಿದೆ.
ಬಿಎನ್ವಿ ಸುಬ್ರಹ್ಮಣ್ಯಂ ಈಗ ಕೇವಲ ನೆನಪು. ಬದುಕಿದ್ದಾಗ ಒಂದು ಕ್ಷಣವೂ ಅವರು ಸುಮ್ಮನೆ ಕುಳಿತವರಲ್ಲ. ನಿರಂತರ ಚಟುವಟಿಕೆ, ಬ್ರಾಹ್ಮಣ ಸಭಾದ ಕೆಲಸ ಕಾರ್ಯಗಳಿಗಾಗಿ ರಾಜ್ಯದಾದ್ಯಂತ ಓಡಾಟ, ಒಂದಲ್ಲಾ ಒಂದು ಕೆಲಸ ಅಂಟಿಸಿಕೊಂಡೇ ಬದುಕಿನ ಕೊನೆಯವರೆಗೂ ಅತ್ಯಂತ ಕ್ರಿಯಾಶೀಲರಾಗಿದ್ದರು. ‘ಅವರ ಜೊತೆ ಒಟ್ಟಿಗೆ ಕುಳಿತು ಮಧ್ಯಾಹ್ನ ಊಟ ಮಾಡುವ ಭಾಗ್ಯ ಒಂದು ದಿನವೂ ನನಗೆ ದೊರಕಲಿಲ್ಲ’ ಎಂದು ಪತ್ನಿ ಸೀತಮ್ಮ ಈಗ ನೊಂದು ಹೇಳುತ್ತಾರೆ. ಬೆಳಗಿನಿಂದ ಸಂಜೆಯವರೆಗೆ ಏನು ಮಾಡಬೇಕು, ಎಲ್ಲಿರಬೇಕು ಎಂಬ ಬಿಎನ್ವಿ ದಿನಚರಿ ನಿಗದಿಯಾಗಿರುತ್ತಿತ್ತು. ಸಾಧಾರಣವಾಗಿ ಮಧ್ಯಾಹ್ನ ಶಾಲೆಯಲ್ಲೇ ಊಟ ಮುಗಿಸುತ್ತಿದ್ದರು. ಬೆಳಗ್ಗೆ 10ಕ್ಕೆ ಮನೆಯಿಂದ ಹೊರಟರೆ ಮತ್ತೆ ಅವರು ಮರಳುತ್ತಿದ್ದುದು ರಾತ್ರಿ ವೇಳೆಗೆ. ಪ್ರವಾಸವಿದ್ದರಂತೂ ದಿನಗಟ್ಟಲೆ ಹೊರಗಿರುತ್ತಿದ್ದರು. ಇಳೀ ವಯಸ್ಸಿನಲ್ಲೂ ಪ್ರವಾಸ ಮಾಡುತ್ತಲೇ ತಮ್ಮ ಬದುಕಿನ ಪ್ರವಾಸ ಕೊನೆಗೊಳಿಸಿದ್ದು ಮಾತ್ರ ವಿಧಿಲೀಲೆ.
ಬಿಎನ್ವಿಯವರಂತಹವರು ವಿರಳರಲ್ಲಿ ವಿರಳರು. ಇತರರು ಅವರಿಂದ ಕಲಿಯಬೇಕಾದುದು ಹಿಮಾಲಯದಷ್ಟು. ಬಿಎನ್ವಿ ಅವರಂತಹ ಮೌನ ತಪಸ್ವಿಗಳ, ಪ್ರಾತಃಸ್ಮರಣೀಯರ ಸಂತತಿ ಸಾವಿರವಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.