ಮಂಗಳೂರು : ಮಂಗಳೂರಿನ ಪ್ರತಿಷ್ಠಿತ ಶಾರದಾ ವಿದ್ಯಾಸಂಸ್ಥೆಗಳ ಅಂಗ ಸಂಸ್ಥೆಯಾದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ತಲಪಾಡಿ ಇದರ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಬೇಸಿಗೆ ಶಿಬಿರ ವಿಕಸನ 2015ರ ಸಮಾರೋಪ ಸಮಾರಂಭವು ಸೋಮವಾರ ಸಂಜೆ ವಿದ್ಯಾ ಸಂಸ್ಥೆಯ ಪ್ರಾಂಗಣದಲ್ಲಿ ಜರುಗಿತು.
ಕಾಸರಗೋಡು ಸರಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಖ್ಯಾತ ಲೇಖಕ ಪ್ರೊ. ಪಿ.ಎನ್.ಮೂಡಿತ್ತಾಯರು ಸಮಾರಂಭದ ಮುಖ್ಯ ಅತಿಥಿಯಾಗಿದ್ದರು. ಮಕ್ಕಳಲ್ಲಿರುವ ವಿಶೇಷ ಪ್ರತಿಭೆಗಳ ವಿಕಾಸಕ್ಕೆ ವಿಕಸನ ಶಿಬಿರದಂತಹ ಬೇಸಿಗೆ ಶಿಬಿರಗಳು ತುಂಬಾ ಸಹಕಾರಿಯಾಗಿದೆ. ಈ ಶಿಬಿರದಲ್ಲಿ ಹಮ್ಮಿಕೊಂಡಿರುವಂಥಹ ವಿವಿಧ ರೀತಿಯ ಚಟುವಟಿಕೆಗಳು ನಿಜಕ್ಕೂ ಮಕ್ಕಳ ಪ್ರತಿಭಾ ವಿಕಾಸಕ್ಕೆ ನೆರವಾಗುವುದರಲ್ಲಿ ಸಂಶಯವಿಲ್ಲ. ಇದರ ಜತೆಯಲ್ಲಿ ನಮ್ಮ ದೇಶದ ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಮಕ್ಕಳಿಗೆ ಅರಿವನ್ನು ಮೂಡಿಸುವ ಕಾಯಕದಿಂದ ಅವರಲ್ಲಿ ದೇಶಭಕ್ತಿಯ ಭಾವನೆಯನ್ನು ಜಾಗೃತಿಗೊಳಿಸಲು ಈ ಶಿಬಿರ ಸಹಕಾರಿಯಾಗಿದೆ ಎಂಬುದಾಗಿ ಪ್ರೊ.ಪಿ.ಎನ್.ಮೂಡಿತ್ತಾಯ ಈ ಸಂದರ್ಭದಲ್ಲಿ ನುಡಿದರು.
ಶಾರದಾ ವಿದ್ಯಾಸಂಸ್ಥೆಗಳ ಶೈಕ್ಷಣಿಕ ಸಲಹೆಗಾರರಾದ ಡಾ| ಲೀಲಾ ಉಪಾಧ್ಯಾಯರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಕ್ಕಳಲ್ಲಿ ಅಂತರ್ಗತವಾಗಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಆ ಪ್ರತಿಭೆಗಳು ಅರಳಿ ವಿಕಸನ ಹೊಂದಲು ಸಾಧ್ಯ. ವಿಕಸನ ಶಿಬಿರದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳ ಅನುಭವ ಕಥನದಿಂದ ಈ ಶಿಬಿರ ಅವರ ಮೇಲೆ ಎಷ್ಟೊಂದು ಪರಿಣಾಮ ಬೀರಿದೆ ಎಂಬುದನ್ನು ಸೂಚಿಸಿದೆ. ಬೇಸಿಗೆಯ ರಜಾ ದಿನಗಳು ಮಕ್ಕಳ ಪಾಲಿಗೆ ಮಜದ ದಿನಗಳಾಗದೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತೆ ಹೆತ್ತವರು, ಹಿರಿಯರು ಅವರನ್ನು ಪ್ರೋತ್ಸಾಹಿಸಬೇಕು ಎಂಬುದಾಗಿ ಡಾ| ಲೀಲಾ ಉಪಾಧ್ಯಾಯರು ಈ ಸಂದರ್ಭದಲ್ಲಿ ನುಡಿದರು.
ವೇದಿಕೆಯಲ್ಲಿ ಶಾರದಾ ವಿದ್ಯಾನಿಕೇತನ ಶಾಲೆಯ ಆಡಳಿತಾಧಿಕಾರಿ ಶ್ರೀ ವಿವೇಕ್ ತಂತ್ರಿ, ಉಪಪ್ರಾಂಶುಪಾಲರಾದ ಶ್ರೀ ವಿನಾಯಕ್ ಬಿ.ಜಿ, ಶಾರದಾ ವಿದ್ಯಾಲಯದ ಉಪಪ್ರಾಂಶುಪಾಲರಾದ ಶ್ರೀ ದಯಾನಂದ ಕಟೀಲ್ ಹಾಗೂ ಶಿಬಿರಾರ್ಥಿಗಳ ಹೆತ್ತವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ತಯಾರಿಸಿದಕರಕುಶಲ ವಸ್ತುಗಳ ಹಾಗೂ ಚಿತ್ರಕಲೆಗಳ ಪ್ರದರ್ಶನ ನಡೆಯಿತು. ಶಿಬಿರದಲ್ಲಿ ಕಲಿಸಿಕೊಡಲಾದ ಗಾನ, ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಕ್ಕಳು ಪ್ರೇಕ್ಷಕರಿಗೆ ನೀಡಿ ಎಲ್ಲರ ಮನವನ್ನು ರಂಜಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.