ಹೈದ್ರಾಬಾದ್ : ಸೊಳ್ಳೆಗಳ ಮೂಲಕ ಹರಡಿ ಮೆದುಳಿನ ಬೆಳವಣಿಗೆ ಮೇಲೆ ಗಂಭೀರ ಪರಿಣಾಮ ಬೀರುವ ಝಿಕಾ ವೈರಸ್ ಸದ್ಯಕ್ಕೆ ಇಡೀ ವಿಶ್ವವನ್ನೇ ತಲ್ಲಣಗೊಳಸಿರುವ ಮಾರಕ ರೋಗ. ಇದೀಗ ಝಿಕಾ ವೈರಸ್ಗೆ ಭಾರತದಲ್ಲಿನ ಸಂಸ್ಥೆಯೊಂದು ಔಷಧಿಯನ್ನು ಕಂಡುಹಿಡಿದಿರುವುದಾಗಿ ಹೇಳಿಕೊಂಡಿದೆ.
ಹೈದರಾಬಾದಿನ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಸಂಸ್ಥೆ ಸಂಶೋಧಕರು ಝಿಕಾ ವೈರಸ್ಗೆ ಔಷಧಿಯನ್ನು ಕಂಡುಹಿಡಿದಿದ್ದು, ಇದು ಝೀಕಾ ವೈರಸ್ಗೆ ಪ್ರಪಂಚದಲ್ಲೇ ಮೊತ್ತ ಮೊದಲ ಬಾರಿಗೆ ಕಂಡುಹಿಡಿದ ಲಸಿಕೆಯಾಗಲಿದೆ.
9 ತಿಂಗಳ ಮೊದಲೇ ಈ ರೋಗಕ್ಕೆ ಲಸಿಕೆ ಕಂಡು ಹಿಡಿಯಲು ಪೇಟೆಂಟ್ ಕೋರಿ ಅರ್ಜಿ ಸಲ್ಲಿಸಿದ್ದೆವು. ಪೇಟೆಂಟ್ ಕೋರಿ ಅರ್ಜಿ ಸಲ್ಲಿಸಿದ ಮೊದಲ ಕಂಪನಿ ನಮ್ಮದಾದ್ದರಿಂದ ಸರ್ಕಾರದಿಂದ ಪೇಟೆಂಟ್ ಕೂಡ ಪಡೆದಿದ್ದೇವೆ ಎಂದು ಸಂಸ್ಥೆ ಹೇಳಿದೆ.
ವಿದೇಶದಿಂದ ಆಮದು ಮಾಡಿಕೊಂಡ ಜೀವಂತ ಝಿಕಾ ವೈರಸ್ ಮಾದರಿಗಳನ್ನು ಪರೀಕ್ಷಿಸಿ ಎರಡು ರೀತಿಯ ಲಸಿಕೆಗಳನ್ನು ಸಿದ್ದಪಡಿಸಲಾಗಿದೆ. ಈಗಾಗಲೇ ಒಂದನ್ನು ಪ್ರಾಣಿಗಳ ಮೇಲೆ ಪ್ರಯೋಗ ನಡೆಸುವ ಹಂತಕ್ಕೆ ಬಂದಿದ್ದೇವೆ. ಭಾರತ ಸರ್ಕಾರ ಹಾಗೂ ಭಾರತ ವೈದ್ಯಕೀಯ ಸಂಶೋಧನಾ ಪ್ರಾಧಿಕಾರದಿಂದ ಹೆಚ್ಚಿನ ನೆರವಿನ ನಿರೀಕ್ಷೆಯಿದೆ. ಕೇಂದ್ರವು ಪರವಾನಗಿ ನಿಯಂತ್ರಣ ಹಾಗೂ ಔಷಧ ನಿರ್ಮಾಣಕ್ಕೆ ಸಹಕರಿಸಿದರೆ 4 ತಿಂಗಳಲ್ಲಿ 10 ಲಕ್ಷಕ್ಕೂ ಅಧಿಕ ಲಸಿಕೆಗಳನ್ನು ಸಿದ್ಧಪಡಿಸಿ ರೋಗ ಇರುವ ರಾಷ್ಟ್ರಗಳಿಗೆ ರವಾನಿಸಬಹುದು ಎಂದು ಹೇಳಿದೆ.
ಬ್ರಿಕ್ಸ್ ರಾಷ್ಟ್ರಗಳ ಭಾಗವಾಗಿರುವ ನಾವು ಬ್ರೆಜಿಲ್ ಮತ್ತು ಕೊಲಂಬಿಯಾ ದೇಶಗಳಿಗೆ ಸಹಾಯ ಮಾಡಬೇಕು. ಈ ಲಸಿಕೆಗೆ ಝಿಕಾವ್ಯಾಕ್ ಎಂದು ಹೆಸರಿಡಲಾಗಿದ್ದು, ಈ ಲಸಿಕೆಗಳನ್ನು ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ತಯಾರಿಸಲು ಪ್ರಧಾನಿ ನರೇಂದ್ರ ಮೋದಿಯವರು ನಿರ್ಧಾರ ತೆಗೆದುಕೊಳ್ಳಬೇಕು. ನಾವು ಸಹಾಯ ಮಾಡಲು ಉತ್ಸುಹಕರಾಗಿದ್ದೇವೆ ಎಂದು ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ಹಾಗೂ ನಿರ್ದೇಶಕ ಡಾ.ಕೃಷ್ಣಾ ಯಲಾ ಅವರು ತಿಳಿಸಿದ್ದಾರೆ.
ಭಾರತ್ ಬಯೋಟೆಕ್ ಸಂಸ್ಥೆ ಸಿದ್ಧಪಡಿಸಿರುವ ಈ ಲಸಿಕೆಗಳನ್ನು ತಜ್ಞರಿಂದ ಮತ್ತೊಮ್ಮೆ ಪರೀಕ್ಷಿಸಿ ಅಂತಿಮಗೊಳಿಸಲಾಗುವುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪ್ರಾಧಿಕಾರ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.