ಗ್ರಾಮ ಪಂಚಾಯತ್ ಚುನಾವಣೆ ಹತ್ತಿರ ಬರುತ್ತಿದೆ. ಮೇ ತಿಂಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ರಾಜ್ಯ ಸಜ್ಜಾಗುತ್ತಿದೆ. ತಾಂತ್ರಿಕವಾಗಿ ನೋಡಿದರೆ ಗ್ರಾಮ ಪಂಚಾಯತ್ ಚುನಾವಣೆಗಳಲ್ಲಿ ಯಾವುದೇ ಅಭ್ಯರ್ಥಿ ಪಕ್ಷಗಳ ಚಿಹ್ನೆಗಳ ಅಡಿಯಲ್ಲಿ ಸ್ಪರ್ಧಿಸುವಂತಿಲ್ಲ. ಮಹಾತ್ಮ ಗಾಂಧೀಜಿಯವರ ಕನಸು ಮತ್ತು ಗುರಿ ಕೂಡ ಅದೇ ಆಗಿತ್ತು. ಅದೇನೊ ಸರಿ. ಆದರೆ ವಿಷಯ ಇರುವುದು ಯಾವುದೇ ಗ್ರಾಮ ಪಂಚಾಯತ್ ಚುನಾವಣೆಗಳು ರಾಜಕೀಯದ ಗಂಧಗಾಳಿ ಇಲ್ಲದೆ ನಡೆಯುತ್ತದಾ? ಸಾಧ್ಯವೇ ಇಲ್ಲ. ಗೆದ್ದ ಬಳಿಕ ಗೆದ್ದ ವ್ಯಕ್ತಿಗಳು ತಮ್ಮ ಪಕ್ಷಗಳ ನಾಯಕರ ಆದೇಶದಂತೆ ನಡೆದುಕೊಳ್ಳುತ್ತಾರೆ. ಇನ್ನೂ ಯಾವುದೇ ರಾಜ್ಯ ಅಥವಾ ಕೇಂದ್ರ ಸರ್ಕಾರಕ್ಕೆ ತಮ್ಮ ಯೋಜನೆಗಳು ಜನರಿಗೆ ಮುಟ್ಟಿದೆವೆಯೋ ಇಲ್ಲವೋ ಎಂದು ತಿಳಿಯಲು ಗ್ರಾಮ ಪಂಚಾಯತ್ ಚುನಾವಣೆಗಳೇ ಆಧಾರ. ಆ ನಿಟ್ಟಿನಲ್ಲಿ ಎಲ್ಲಾ ಪಕ್ಷಗಳು ಶಕ್ತಿ ಮೀರಿ ತಮ್ಮ ಸರ್ವ ಬಲಾಬಲವನ್ನು ಈ ಚುನಾವಣೆಗಳಲ್ಲಿ ಹಾಕಿಕೊಂಡು ಬರುತ್ತಿರುವುದು ಸುಳ್ಳೆನಲ್ಲ. ಭಾರತೀಯ ಜನತಾ ಪಕ್ಷ, ಕಾಂಗ್ರೆಸ್ ಮತ್ತು ಜ್ಯಾತ್ಯಾತೀತ ಜನತಾದಳ ಮೂರು ಕೂಡ ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಗೆ ಸಜ್ಜಾಗಿವೆ. ಮೊದಲಿಗೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಬಗ್ಗೆ ನೋಡೋಣ. ಮೇ ಹೊತ್ತಿಗೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಮರಳಿ ಎರಡು ವರ್ಷಗಳು ಮುಗಿಯಲು ಬಂದಿರುತ್ತದೆ. ಯಾವ ವಿಷಯದ ಮೇಲೆ ತಮ್ಮ ಬೆಂಬಲಿತ ಅಭ್ಯರ್ಥಿಗಳು ಮತ ಕೇಳುತ್ತಾರೆ. ಸಂಶಯವೇ ಇಲ್ಲ.
ಕಾಂಗ್ರೆಸ್ನ ಮುಂದೆ ಇರುವುದು ಭೂ ಸ್ವಾಧೀನ ಮಸೂದೆ-೨೦೧೫. ಈ ವಿಷಯ ಇಟ್ಟುಕೊಂಡೆ ಈ ಬಾರಿ ಕಾಂಗ್ರೆಸ್ ಗ್ರಾಮ ಮಟ್ಟದಲ್ಲಿ ಜನರ ಬಳಿಗೆ ಹೋಗಲಿದೆ. ಗ್ರಾಮಗಳಲ್ಲಿ ಜನರಿಗೆ ಈ ವಿಷಯದ ಬಗ್ಗೆ ನಿಜವಾದ ಆತಂಕ ಇದೆ. ನಮ್ಮ ಭೂಮಿಯನ್ನು ಕೇಂದ್ರ ಸರ್ಕಾರ ಕಸಿದುಕೊಳ್ಳುತ್ತದೆಯಂತೆ, ನಾವು ಏನೂ ಹೇಳಲು ಸಾಧ್ಯವಿಲ್ಲವಂತೆ ಎನ್ನುವ ಭಯದ ವಾತಾವರಣ ಈಗಾಗಲೇ ಗ್ರಾಮಗಳಲ್ಲಿ ಹಾಸು ಹೊಕ್ಕಾಗಿದೆ. ಈ ಹಂತದಲ್ಲಿ ಹೌದು ಕಣ್ರೀ, ಬಿಜೆಪಿಯ ಕಡೆಯಿಂದ ಯರಾದರೂ ಬಂದು ಓಟು ಕೇಳಿದರೆ ಕೊಡಬೇಡಿ, ಅವರು ನಿಮ್ಮ ಭೂಮಿಯನ್ನು ನುಂಗಿ ಬಿಡುತ್ತಾರೆ ಎಂದು ಹೇಳುವುದು ಕಾಂಗ್ರೆಸ್ಸಿಗೆ ಏನೂ ಕಷ್ಟವಾಗುವುದಿಲ್ಲ. ಜನ ಕೂಡ ಅದನ್ನು ಸುಲಭವಾಗಿ ನಂಬಿ ಬಿಡುತ್ತಾರೆ. ಇದು ಗ್ರಾಮ ಮಟ್ಟದ ಚುನಾವಣೆ ಆಗಿರುವುದರಿಂದ ಇಲ್ಲಿ ವಿಷಯ ಭೂ ಸ್ವಾಧೀನಕ್ಕಿಂತ ಬೇರೆ ಇರುವುದೇ ಇಲ್ಲ.
ಯಾವುದೇ ರೈತ ತನ್ನ ಭೂಮಿ, ಜಮೀನನ್ನು ಸರ್ಕಾರಗಳು ಕಿತ್ತುಕೊಳ್ಳುವುದನ್ನು ಊಹಿಸುವುದಿಲ್ಲ. 1954 ರಿಂದ ಭಾರತದಲ್ಲಿ ಭೂಮಿಯನ್ನು ಕಳೆದುಕೊಂಡ ರೈತರಲ್ಲಿ75% ರೈತರಿಗೆ ಯೋಗ್ಯವಾಗಿ ಸಿಗಬೇಕಾದ ಪರಿಹಾರ ಇನ್ನೂ ಸಿಕ್ಕಿಲ್ಲ ಎನ್ನುವುದು ನಿಜ. ಇನ್ನೂ ಉಳುವವನೇ ಭೂಮಿಯ ಒಡೆಯ ಎನ್ನುವ ಕಾನೂನನ್ನು ತಂದವರು ನಾವು, ಈಗ ಬಿಜೆಪಿಯವರು ನಾವು ಕೊಟ್ಟ ಭೂಮಿಯನ್ನು ಕಿತ್ತುಕೊಂಡು ನಿಮ್ಮನ್ನು ಮತ್ತೇ ಬೀದಿಗೆ ತರುತ್ತಾರೆ ಎನ್ನುವ ಘೋಷಣೆಯನ್ನು ಮಾಡಲು ಕಾಂಗ್ರೆಸ್ಸಿನ ಚಿಂತಕರ ಚಾವಡಿ ಸಜ್ಜಾಗುತ್ತಿದೆ. ಅದು ಸರಿಯಾಗಿ ಕಾರ್ಯ ರೂಪಕ್ಕೆ ಬಂದರೆ ಮತ್ತೇ ಸಂಶಯವೇ ಇಲ್ಲ. ಬಿಜೆಪಿ ಗ್ರಾಮ ಮಟ್ಟದಲ್ಲಿ ತನ್ನ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ರಾತ್ರಿ-ಹಗಲು ಒಂದು ಮಾಡಿ ದುಡಿಯಬೇಕಾಗಬಹುದು.
ಹಾಗಾದರೆ ಕಾಂಗ್ರೆಸ್ಸಿನ ಈ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಬಿಜೆಪಿ ಸಜ್ಜಾಗಿದೆಯಾ? ಇಲ್ಲವೇ ಇಲ್ಲ. ಲವ್ ಜಿಹಾದ್, ಗೋ ಹತ್ಯೆ , ಭ್ರಷ್ಟಾಚಾರ ದಂತಹ ವಿಷಯಗಳನ್ನು ಮಾತನಾಡುವುದು ಸುಲಭ. ಆದರೆ ಇಂತಹ ಕಾಯ್ದೆಯ ಬಗ್ಗೆ ಜನರಿಗೆ ಅರ್ಥವಾಗುವಂತೆ ಹೇಳುವುದು ಅಷ್ಟೆನೂ ಸುಲಭವಲ್ಲ. ಇದಕ್ಕೆ ಗ್ರಾಮ ಮಟ್ಟದಲ್ಲಿ ಶ್ರಮಿಸುವ ಕಾರ್ಯಕರ್ತರಿಗೆ ಮಾಹಿತಿಬೇಕು. ನಾಳೆ ಒಂದು ಗ್ರಾಮದಲ್ಲಿ ಒಬ್ಬ ರೈತ ” ಏನ್ರಪ್ಪ, ನಮ್ಮ ಭೂಮಿಯನ್ನು ಕೇಂದ್ರ ಸರ್ಕಾರ ಕಸಿಯುತ್ತೇ ಎಂದು ಯಾರೋ ಹೇಳುತ್ತಿದ್ದರಲ್ಲಾ, ನಿಜಾನಾ?” ಎಂದು ಮತ ಕೇಳಲು ಬಂದ ಬಿಜೆಪಿಯ ಕಾರ್ಯಕರ್ತನಿಗೆ ಕೇಳಿದರೆ ಅವನ ಬಳಿ ಉತ್ತರವಿಲ್ಲ. ಅವನ ಬಳಿ ಯಾಕೆ, ಎಷ್ಟೋ ಜಿಲ್ಲಾ ಬಿಜೆಪಿ ಮುಖಂಡರಿಗೆನೆ ಈ ಕಾಯ್ದೆ ಗೊತ್ತೇ ಇಲ್ಲ, ವಕ್ತಾರರಿಗೂ ಈ ಕಾಯ್ದೆಯನ್ನು ಸಮರ್ಥಿಸಲು ಪದಗಳು ಸಿಗುತ್ತಿಲ್ಲ. ಇನ್ನೂ ಬಿಜೆಪಿಯ ಎಷ್ಟೋ ಜನಪ್ರತಿನಿಧಿಗಳು, ಮಾಜಿ ಜನಪ್ರತಿನಿಧಿಗಳು ಈಗಾಗಲೇ ಈ ಕಾಯ್ದೆ ತಮಗೆ ವಿರೋಧವಿದೆ ಎಂದು ತಮ್ಮ ತಮ್ಮಲ್ಲೇ ತೀರ್ಮಾನಿಸಿ ಆಗಿದೆ. ಸರಿಯಾಗಿ ಅಧ್ಯಯನ ಮಾಡದೇ ಈ ಕಾಯ್ದೆ ನಮಗೆ ಮುಳುವು ಆಗಬಹುದು ಎಂದು ಎನಿಸಿ ಆಗಿದೆ.
ಈ ಮೂಲಕ ಬಿಜೆಪಿಯ ಮುಖಂಡರು ಯುದ್ಧದ ಮೊದಲೇ ಶಸ್ತ್ರ ಕೆಳಗಿಟ್ಟು ಬಿಡ್ತಾರಾ ಎನ್ನುವಂತೆ ತೋರುತ್ತಿದೆ. ಅಲ್ಲಿ ಮೊನ್ನೆ ನಡೆದ ಕಾರ್ಯಕಾರಣಿಯಲ್ಲಿ ಈ ಮಸೂದೆಯ ಬಗ್ಗೆ ಜನ ಸಾಮಾನ್ಯನಿಗೆ ತಿಳಿಯುವಂತೆ ಹೇಳಿ ಅಂದರೆ ಎಷ್ಟೋ ಬಿಜೆಪಿಯ ಗ್ರಾಮ, ತಾಲೂಕು ಮಟ್ಟದ ನಾಯಕರು ಆ ಕಾಯ್ದೆ ಕೇಳಿದರೆ ಹಾವು ತುಳಿದವರಂತೆ ಆಡುತ್ತಿದ್ದಾರೆ. ಇನ್ನೂ ಪ್ರತಿ ಜಿಲ್ಲೆಯಲ್ಲಿರುವ ಬಿಜೆಪಿಯ ವಕೀಲರ ಪ್ರಕೋಷ್ಟದ ನಾಯಕರು ಕಾನೂನು, ಸೆಕ್ಷನ್ ಎಲ್ಲಾ ತಮ್ಮ ಭಾಷೆಯಲ್ಲಿ ವಿವರಿಸಿದರೆ ಅರ್ಥ ಮಾಡುವ ಪರಿಸ್ಥಿತಿಯಲ್ಲಿ ಗ್ರಾಮದ ರೈತ ಇಲ್ಲ. ಒಟ್ಟಿನಲ್ಲಿ ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಗೆ ನಿದ್ರೆಯಲ್ಲಿ ಇದ್ದ ಕಾಂಗ್ರೆಸ್ ಪಕ್ಷಕ್ಕೆ ಟಾನಿಕ್ ಕೊಟ್ಟು ಎಬ್ಬಿಸಿದ ಕೀರ್ತಿ ಯಾರಿಗೆ ಸೇರುತ್ತೋ, ಕಾದು ನೋಡಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.