ನವದೆಹಲಿ : ಅಯೋಧ್ಯಾ ರಾಮ ಮಂದಿರ ನಿರ್ಮಾಣ ಮತ್ತೆ ಚರ್ಚೆಗೆ ಬಂದಿರುವ ನಡುವೆಯೇ ಬಾಬ್ರಿ ಮಸೀದಿ ಇರುವ ಸ್ಥಳದಲ್ಲಿ ಹಿಂದೂ ಮಂದಿರದ ಅವಶೇಷಗಳಿದ್ದವು ಎಂಬ ಅಂಶವನ್ನು ಭಾರತೀಯ ಪುರಾತತ್ವ ಇಲಾಖೆಯ ಮಾಜಿ ಅಧಿಕಾರಿ ಕೆ. ಕೆ. ಮೊಹಮ್ಮದ್ ಹೇಳಿದ್ದಾರೆ.
ಬಾಬ್ರಿ ಮಸೀದಿ ಸೇರಿದಂತೆ, ಕುತುಬ್ ಮಿನಾರ್, ತಾಜ್ ಮಹಲ್ ಹಾಗೂ ದೇಶದ ಕೆಲ ಮಸೀದಿಗಳನ್ನು ಹಿಂದೂ ಮಂದಿರಗಳ ಅವಶೇಷಗಳ ಅಡಿಯಲ್ಲಿ ನಿರ್ಮಿಸಲಾಗಿದೆ. ಆದರೆ, ಎಡಪಂಥೀಯರು ಇತಿಹಾಸವನ್ನು ತಿರುಚಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಮುಹಮ್ಮದ್ ಆರೋಪಿಸಿದ್ದಾರೆ.
ಮಲಯಾಳಂನಲ್ಲಿ ಇವರು ಬರೆದ ‘ನಾನ್ ಎನ್ ಭಾರತೀಯನ್’ ಎಂಬ ಪುಸ್ತಕದಲ್ಲಿ ಈ ಎಲ್ಲಾ ಮಾಹಿತಿ ನೀಡಿರುವುದನ್ನು ಫಸ್ಟ್ ಪೋಸ್ಟ್ ವೆಬ್ಸೈಟ್ ವರದಿ ಮಾಡಿದೆ.
1976-77 ರಲ್ಲಿ ಪ್ರೊ| ಬಿ.ಬಿ. ಲಾಲ್ ನೇತೃತ್ವದ ತಂಡ ಬಾಬ್ರಿ ಮಸೀದಿಯ ಜಾಗದಲ್ಲಿ ಹಿಂದೂ ಮಂದಿರದ ಅವಶೇಷಗಳಿರುವುದನ್ನು ಪತ್ತೆ ಮಾಡಿದ್ದು, ಸ್ಥಳದಲ್ಲಿ ಒಟ್ಟು 14 ಸ್ತಂಭಗಳು ಸಿಕ್ಕಿದ್ದವು. ಸ್ತಂಭಗಳಲ್ಲಿ ಇರುವ ಗೋಪುರಗಳು, ಆಕೃತಿಗಳು 11 ಮತ್ತು 12ನೇ ಶತಮಾನದಲ್ಲಿದ್ದ ಗೋಪುರಗಳಿಗೆ ಹೋಲಿಕೆಯಾಗುತ್ತಿದ್ದವು. ಬಾಬ್ರಿ ಮಸೀದಿ ವಿವಾದ ಇದ್ದ ಸಮಯದಲ್ಲಿ ಈ ವಿಷಯವಾಗಿ ಹಲವಾರು ಆಂಗ್ಲ ದೈನಿಕಗಳಿಗೆ ಲೇಖನಗಳನ್ನು ಕಳುಹಿಸಿದ್ದರೂ ಯಾವುದೂ ಸುದ್ದಿಯಾಗಲಿಲ್ಲ. ಒಂದು ದಿನಪತ್ರಿಕೆ ಮಾತ್ರ ಓದುಗರ ವಿಭಾಗದಲ್ಲಿ ಚಿಕ್ಕದಾಗಿ ಈ ಮಾಹಿತಿಯನ್ನು ಪ್ರಕಟಿಸಿತ್ತು. ಎಡಪಂಥೀಯ ಇತಿಹಾಸಕಾರರಿಂದಾಗಿ ಬಾಬ್ರಿ ಮಸೀದಿ ವಿವಾದವು ಕಗ್ಗಂಟಾಗಿ ಉಳಿಯಿತು ಎಂದು ಮೊಹಮ್ಮದ್ ಉಲ್ಲೇಖಿಸಿದ್ದಾರೆ.
ಎಡಪಂಥೀಯರ ಮಾತಿಗೆ ಮರುಳಾಗದೆ ಇದ್ದಿದ್ದರೆ ವಿವಾದ ಎಂದೋ ಕೊನೆಗೊಳ್ಳುತ್ತಿತ್ತು. ರೋಮಿಲಾ ಥಾಪರ್, ಬಿಪಿನ್ ಚಂದ್ರ, ಎಸ್. ಗೋಪಾಲ್ ಮತ್ತಿತರರು ಅಲ್ಲಿ ಹಿಂದೂ ಮಂದಿರ ಇರಲಿಲ್ಲ ಎಂದು ವಾದಿಸಿದ್ದರು. ಇವರಿಗೆ ಇರ್ಫಾನ್ ಹಬೀಬ್, ಆರ್.ಎಸ್. ಶರ್ವ, ಡಿ.ಎನ್. ಝಾ, ಸೂರಜ್ ಬೆನ್ ಮತ್ತು ಅಖ್ತರ್ ಅಲಿ ಮುಂತಾದವರು ಬೆಂಬಲ ನೀಡಿದ್ದರು ಎಂದು ಮೊಹಮ್ಮದ್ ವಿಷಾದಿಸಿದ್ದಾರೆ.
ಭಾರತೀಯ ಪುರಾತತ್ವ ಇಲಾಖೆಯ ಉತ್ತರ ಪ್ರಾದೇಶಿಕ ನಿರ್ದೇಶಕರಾಗಿದ್ದ ಕೆ.ಕೆ. ಮೊಹಮ್ಮದ್ 2012ರಲ್ಲಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಅವರು ಹೈದರಾಬಾದ್ನಲ್ಲಿ ಆಗಾ ಖಾನ್ ಟ್ರಸ್ಟ್ ಪ್ರಾಜೆಕ್ಟ್ನ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಕೆ. ಕೆ. ಮೊಹಮ್ಮದ್ ಅವರ ವಿಚಾರಕ್ಕೆ ಕೆಲ ಇತಿಹಾಸಕಾರರು ಬೆಂಬಲ ಸೂಚಿಸಿದ್ದರೆ, ಇನ್ನು ಕೆಲವರು ಈ ಅಂಶಗಳು ನಿರಾಧಾರ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.