ಉತ್ತರಪ್ರದೇಶದ 28 ವರ್ಷದ ಯುವಕ ಅಭಿಷೇಕ್ ಕುಮಾರ್ ಶರ್ಮಾ ಸ್ವಚ್ಛ ಭಾರತದ ಪ್ರಚಾರಕ್ಕಾಗಿ ದೇಶದಾದ್ಯಂತ ಕಳೆದ ಒಂದು ವರ್ಷದಿಂದ ಸೈಕ್ಲಿಂಗ್ ಪ್ರವಾಸ ನಡೆಸುತ್ತಿದ್ದಾರೆ. ಈ ಮೂಲಕ ಜನರಿಗೆ ದೇಶವನ್ನು ಸ್ವಚ್ಛವಾಗಿಡುವಂತೆ ಪ್ರೇರೇಪಿಸುತ್ತಿದ್ದಾರೆ.
ಇದುವರೆಗೆ ಅಭಿಷೇಕ್ ಅವರು ಸ್ವಚ್ಛ ಭಾರತವನ್ನು ಪ್ರಚಾರ ಮಾಡುತ್ತಾ 16 ರಾಜ್ಯಗಳ 10 ಸಾವಿರ ಗ್ರಾಮಗಳನ್ನು, ಬರೋಬ್ಬರಿ 14 ಸಾವಿರ ಕಿ.ಮೀಗಳನ್ನು ಕ್ರಮಿಸಿದ್ದಾರೆ. ಪರಿಸರ ಸಂಶೋಧಕನಾಗಿರುವ ಇವರು, ದೇಶದ ಉದ್ದಗಲಕ್ಕೂ ಸ್ವಚ್ಛತೆ, ನೈರ್ಮಲ್ಯದ ಸಂದೇಶ ನೀಡುತ್ತಾ ಸಾಗುತ್ತಿದ್ದಾರೆ. 2014, ನ.10ರಂದು ಅವರು ಸೈಕಲ್ ಯಾತ್ರೆಯನ್ನು ಆರಂಭಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ದೊಡ್ಡ ಅಭಿಯಾನವನ್ನೇ ಆರಂಭಿಸಿದ್ದಾರೆ. ದೇಶವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ನಮಗೆ ಸಿಕ್ಕಿರುವ ದೊಡ್ಡ ಅವಕಾಶವಿದು ಎನ್ನುವ ಅಭಿಷೇಕ್, ಪರಿಸರ ವಿಜ್ಞಾನದಲ್ಲಿ ಪದವಿ ಪಡೆದಿದ್ದಾರೆ, ತ್ಯಾಜ್ಯ ನಿರ್ವಹಣಾ ಕಾರ್ಯದಲ್ಲಿ 3 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ತನ್ನೆಲ್ಲಾ ಅನುಭವ ಮತ್ತು ಕಲಿಕೆಯನ್ನು ಒಟ್ಟುಗೂಡಿಸಿ ದೇಶದ ಜನರಿಗೆ ಈ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಅವರು ಮಾಡುತ್ತಿದ್ದಾರೆ.
ಇವರ ಈ ಸಾಧನೆಗೆ ಮೆಚ್ಚಿ ಪ್ರಧಾನಿ ನರೇಂದ್ರ ಮೋದಿ ಇವರನ್ನು ತನ್ನ ಬಳಿ ಕರೆಸಿಕೊಂಡು ಶಬ್ಬಾಸ್ಗಿರಿ ನೀಡಿದ್ದಾರೆ. ಇನ್ನೂ ಹೆಚ್ಚಿನ ಕಾರ್ಯ ಮಾಡುವಂತೆ ಹರಿದುಂಬಿಸಿದ್ದಾರೆ.
ನನ್ನ ಕುಟುಂಬ ನನ್ನ ಸೈಕಲ್ ಯಾತ್ರೆಗೆ ಬೆಂಬಲ ನೀಡಿರಲಿಲ್ಲ, ನನ್ನ ಕಾರ್ಯ ಹುಚ್ಚುತನವೆಂದೇ ಅವರು ಪರಿಗಣಿಸಿದ್ದರು, ಆದರೆ ಯಾವಾಗ ಮೋದಿ ನನ್ನನ್ನು ಕರೆಸಿ ಶ್ಲಾಘಿಸಿದರೋ ಆಗ ಅವರಿಗೆಲ್ಲಾ ನಾನು ಅತ್ಯುತ್ತಮ ಕಾರ್ಯ ಮಾಡುತ್ತಿದ್ದೇನೆ ಎಂಬ ಅರಿವಾಯಿತು ಎನ್ನುತ್ತಾರೆ ಅಭಿಷೇಕ್.
ಯಾತ್ರೆಗೆಂದು ತಮ್ಮ ಸೈಕಲನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಿರುವ ಅವರು, ಅದರಲ್ಲಿ ಅವರ ಫೋನ್ ನಂಬರ್, ಹೆಸರು, ಸಂದೇಶಗಳನ್ನು ಒಳಗೊಂಡ ಪೋಸ್ಟರ್, ಭಾರತದ ಧ್ವಜ, ಎಲ್ಇಡಿ ಲೈಟ್, ಲಗೇಜ್ ಕ್ಯಾರಿಯರ್ ಹೀಗೆ ಎಲ್ಲವನ್ನೂ ಅಳವಡಿಸಿಕೊಂಡಿದ್ದಾರೆ.
ಹಳ್ಳಿಗಳಲ್ಲಿ ಸ್ವಚ್ಛತೆ ಬಗ್ಗೆ ಸೆಷನ್ಸ್ ನೀಡುತ್ತಾರೆ, ಈ ಸೆಷನ್ಸ್ಗೆ ಅವರಿಟ್ಟ ಹೆಸರು ’ಸಾಫ್ ಸಫಾಯಿ ಕಿ ಚೌಪಲ್’ ಎಂದು. ಶೌಚಾಲಯ ನಿರ್ಮಾಣ, ಆರೋಗ್ಯ ಮುಂತಾದವುಗಳ ಬಗ್ಗೆ ಇಲ್ಲಿ ಅವರು ಹಳ್ಳಿಗರಿಗೆ ತಿಳಿ ಹೇಳುತ್ತಾರೆ. ಅಲ್ಲದೇ ತಾನು ಭೇಟಿಯಾಗುವ ಜನರಲ್ಲಿ ’ಸಿಕ್ಕಸಿಕ್ಕಲ್ಲಿ ಕಸ ಹಾಕಲ್ಲ, ಸುತ್ತಲ ಪ್ರದೇಶವನ್ನು ಸ್ವಚ್ಛವಾಗಿಡುತ್ತೇನೆ’ ಎಂಬ ಕೈಬರಹದ ಪೋಸ್ಟರ್ ರೆಡಿ ಮಾಡಿಸಿ ಅದರಲ್ಲಿ ಜನರ ಸಹಿ ಹಾಕಿಸುತ್ತಾರೆ. ಅದರೊಂದಿಗೆ ಫೋಟೋಗ್ರಾಫ್ ತೆಗೆದುಕೊಳ್ಳುತ್ತಾರೆ. ಇದನ್ನು ಮನೆಯಲ್ಲಿ ಇಟ್ಟುಕೊಳ್ಳುವಂತೆ ಹೇಳುತ್ತಾರೆ. ಇದು ಜನರ ಮೇಲೆ ಮಾನಸಿಕ ಪರಿಣಾಮ ಬೀರಿ ಸ್ವಚ್ಛತೆಯೆಡೆಗೆ ಮನ ವಾಲುವಂತೆ ಮಾಡುತ್ತದೆ ಎಂದು ಅಭಿಷೇಕ್ ಅಭಿಪ್ರಾಯ.
ಇದುವರೆಗೆ 3 ಸಾವಿರ ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿರುವ ಅವರು, ಅವರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸಿದ್ದಾರೆ. ಟಿ ಅಂಗಡಿಯವರಿಗೆ ಪ್ಲಾಸ್ಟಿಕ್ ಕಪ್ನ ಬದಲು ಇರುವ ಪರ್ಯಾಯಗಳ ಬಗ್ಗೆ ವಿವರಿಸಿದ್ದಾರೆ. ಇವರಿಂದ ಪ್ರೇರಿತಗೊಂಡು ಹಲವಾರು ಮಂದಿ ತಮ್ಮ ಪ್ರದೇಶಗಳಿಗೆ ಕಸದ ಬುಟ್ಟಿಗಳನ್ನು ಹಂಚಿಕೆ ಮಾಡಿದ್ದಾರೆ. ಅಲ್ಲದೇ ಇವರಂತೆಯೇ ಸೈಕಲ್ ಏರಿ ಸ್ವಚ್ಛತೆಯ ಸಂದೇಶ ಸಾರಲು ಮುಂದಾಗಿದ್ದಾರೆ.
ಸ್ವಚ್ಛ ಭಾರತ ಎಂದು ಒಂದು ದಿನ ಕೈಯಲ್ಲಿ ಪೊರಕೆ ಹಿಡಿದು ಫೋಟೋಗೆ ಫೋಸ್ ನೀಡುವ ಜನರ ನಡುವೆ ಅಭಿಷೇಕ್ ನಿಜಕ್ಕೂ ವಿಭಿನ್ನವಾಗಿ ನಿಲ್ಲುತ್ತಾರೆ. ಅವರ ಈ ಕಾರ್ಯ ಎಲ್ಲರಿಗೂ ಮಾದರಿಯಾಗಲಿ, ಭಾರತ ಸ್ವಚ್ಛವಾಗಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.