ಬೆಳ್ತಂಗಡಿ : ಗುರುವಾಯನಕರೆ ಪೇಟೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿರುವ 5 ಬಸ್ ನಿಲ್ದಾಣಗಳಿಂದ ಇನ್ನಷ್ಟು ಸಮಸ್ಯೆಗಳು ಕಾಣಸಲಿವೆ. ಹೀಗಾಗಿ ಬಸ್ ನಿಲುಗಡೆಯ ವ್ಯವಸ್ಥೆಯನ್ನು ಹಿಂದಿನಂತೆ ಮುಂದುವರಿಸಿಕೊಂಡು ಹೋಗುವಂತೆ ಸಂಬಂಧಪಟ್ಟ ಎಲ್ಲಾ ಜನಪ್ರತಿನಿಧಿಗಳಿಗೆ, ಸರಕಾರಿ ಅಧಿಕಾರಿಗಳಿಗೆ ಬುಧವಾರ ಮನವಿ ಸಲ್ಲಿಸಲಾಗುವುದು. ಗುರುವಾರದಿಂದ ಹಿಂದಿನ ಸ್ಥಿತಿಯಲ್ಲಿಯೇ ಮುಂದುವರಿಯುವಂತೆ ನೋಡಿಕೊಳ್ಳಲಾಗುವುದು ಎಂದು ಗುರುವಾಯನಕರೆಯ ಸಾರ್ವಜನಿಕ ಹಿತರಕ್ಷಣಾ ವೇದಿಕೆ ತೀರ್ಮಾನಿಸಿದೆ.
ಗುರುವಾಯನಕರೆಯ ಕುಲಾಲ ಮಂದಿರದಲ್ಲಿ ಮಂಗಳವಾರ ವೇದಿಕೆಯಡಿ ಗುರುವಾಯನಕರೆಯಲ್ಲಿ 5 ಕಡೆ ನಿರ್ಮಿಸಲಾದ ಬಸ್ ನಿಲ್ದಾಣಗಳಿಂದ ಅಗುತ್ತಿರುವ ತೊಂದರೆಯ ಬಗ್ಗೆ ಚರ್ಚಿಸಲು ನಾಗರಿಕರು ಸಮಾಲೋಚನಾ ಸಭೆ ನಡೆಸಿದರು.
ಸಭೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭೋಜರಾಜ ಪಡಂಗಡಿ ಅವರು, ವೃದ್ದರಿಗೆ, ಮಹಿಳೆಯರಿಗೆ, ಮಕ್ಕಳಿಗೆ ತೊಂದರೆಯಾಗುವಂತಹ ವ್ಯವಸ್ಥೆ ಮಾಡುವುದು ಸರಿಯಲ್ಲ. ಇದನ್ನು ವಿರೋಧಿಸಿ ಯುವಕರು ಮುಷ್ಕರ ಮಾಡಬೇಕು. ಬಂದ್ ಬೇಡ. ಅಲ್ಲದೆ ಈ ಸಮಸ್ಯೆಯ ಬಗ್ಗೆ ಖುದ್ದಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದೇನೆ ಎಂದರು.
ವಕೀಲ ಸುಬ್ರಹ್ಮಣ್ಯ ಕುಮಾರ್ ಅಗರ್ತ ಮಾತನಾಡಿ, ಇದ್ದ ವ್ಯವಸ್ಥೆಯನ್ನು ನಿರ್ವಹಣೆ ಮಾಡಲಾಗದೆ ಇರುವುದರಿಂದ ಸಣ್ಣ ಸಮಸ್ಯೆಯನ್ನು ದೊಡ್ಡದಾಗಿ ಮಾಡಲಾಗಿದೆ. ಸಾಧನೆ ಮಾಡುವ ದೃಷ್ಟಿಯಿಂದ ಇದನ್ನು ಮಾಡಿದ್ದೋ ಎಂದು ಪ್ರಶ್ನಿಸಿದ ಅವರು ಈ ವ್ಯವಸ್ಥೆಯಿಂದ ಅಪಘಾತಗಳು ಹೆಚ್ಚಾಗಲಿವೆ. ಒಂದು ಕಡೆ ಇರುವ ಸಮಸ್ಯೆಯನ್ನು 6 ಕಡೆ ವಿಸ್ತರಿಸಿದಂತಾಗಿದೆ. ಸ್ಥಳೀಯ ಸಂಸ್ಥೆಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅಧಿಕಾರಿಗಳು ಕಚೇರಿಯಲ್ಲಿಯೇ ಕುಳಿತು ಗೊಂದಲ ಉಂಟು ಮಾಡಿದ್ದಾರೆ ಎಂದರು.
ನಾಗರಿಕ ಸೇವಾ ಟ್ರಸ್ಟ್ ಸೋಮನಾಥ ನಾಯಕ್ ಮಾತನಾಡಿ, ವಾಹನ ದಟ್ಟಣೆಯ ನೆಪದಲ್ಲಿ ಪ್ರಯಾಣಿಕರಿಗೆ ತೊಂದರೆ ಕೊಡುವುದು ಸರಿಯಲ್ಲ. ರಾತ್ರಿ ವೇಳೆ, ಮಳೆಗಾಲದಲ್ಲಿ ಮಹಿಳೆಯರ ಪಾಡು ಉಲ್ಬಣವಾಗಲಿದೆ. ಅಲ್ಲದೆ ರಸ್ತೆ ವಿಸ್ತರಣೆಯೂ ಇಲ್ಲಿ ಅಗತ್ಯ.
ಅದಕ್ಕಾಗಿ ಅಂಗಡಿ ಮುಂಗಟ್ಟುಗಳ ಮಾಲಿಕರು ಸ್ವಲ್ಪ ಮಟ್ಟಿಗೆ ತ್ಯಾಗಕ್ಕೂ ಸಿದ್ದರಾಗಬೇಕು. ಅಲ್ಲದೆ ಪೋಲಿಸರು ತಮ್ಮ ಹಠಮಾರಿತನ ಬಿಟ್ಟು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಬಾರದು. ಒಂದು ಕಾಯಿಲೆಗೆ ಕೊಟ್ಟ ಮದ್ದು ಇನ್ನೊಂದು ಕಾಯಿಲೆಯನ್ನು ತಂದಿಟ್ಟ ಹಾಗೆ ಗುರುವಾಯನಕರೆಯ ಸ್ಥಿತಿ ಆಗಿದೆ ಎಂದ ಅವರು ಸನಿಹದಲ್ಲೇ ಟ್ರಸ್ಟ್ ವಶದಲ್ಲಿ 25 ಸೆಂಟ್ಸ್ ಜಾಗವಿದೆ. ಅಲ್ಲದೆ ಅದರ ಸುತ್ತಮುತ್ತ ಪಂ.ಗೆ ಸಂಬಂದಪಟ್ಟ, ಇತರೆ ಸರಕಾರಿ ಜಾಗವಿದ್ದು ಒಟ್ಟಾರೆ ಪರಿಸರದಲ್ಲಿ ಸುಮಾರು 70 ಸೆಂಟ್ಸ್ ಜಾಗ ಲಭ್ಯವಿದೆ. ಹೀಗಾಗಿ ಅಲ್ಲಿ ಸುಸಜ್ಜಿತ ಬಸ್ನಿಲ್ದಾಣ ನಿರ್ಮಿಸುವುದಾದರೆ ಟ್ರಸ್ಟ್ ತನ್ನ ಜಾಗವನ್ನು ಬಿಟ್ಟುಕೊಡಲು ಸಿದ್ದ ಎಂದು ಆಶ್ವಾಸನೆ ನೀಡಿದರು. ಮುಂದಿನ ಚುನಾವಣೆಗೆ ಹೊಸ ಬಸ್ನಿಲ್ದಾಣದ ವಿಚಾರವೂ ಒಂದು ಹಕ್ಕೊತ್ತಾಯ ಅಗಲಿ ಎಂದು ನಾಯಕ್ ಅಭಿಪ್ರಾಯಪಟ್ಟರು. ಮಾಜಿ ಶಾಸಕ ಪ್ರಭಾಕರ ಬಂಗೇರ ಮಾತನಾಡಿ ಎಲ್ಲಾ ಬಸ್ಸುಗಳು ಒಂದೆಡೆ ಬರುವಂತೆ ಶಾಶ್ವತ ಬಸ್ ನಿಲ್ದಾಣಕ್ಕೆ ನಾವೆಲ್ಲ ಪ್ರಯತ್ನಿಸಬೇಕು. ರಿಕ್ಷಾ ಪಾರ್ಕಿಂಗ್, ಫುಟ್ಪಾತ್ ಸರಿಯಾಗಬೇಕು ಎಂದರು.
ಇಷ್ಟು ಸಣ್ಣ ಪೇಟೆಗೆ 6ಬಸ್ ನಿಲ್ದಾಣಗಳು ಬೇಕೆ ? : ಇಲ್ಲಿ ಒಂದೊಂದು ಊರಿಗೆ ಹೋಗಲು ಒಂದೊಂದು ಬಸ್ ನಿಲ್ದಾಣಗಳಿವೆ. ಇದು ಎಲ್ಲಿಯೂ ಇಲ್ಲದ ವ್ಯವಸ್ಥೆ. ಪ್ರಯಾಣಿಕರಿಗೆ ಒಂದೇ ಬಸ್ನಿಲ್ದಾಣದಲ್ಲಿ ಎಲ್ಲಾ ಊರುಗಳಿಗೆ ಹೋಗುವ ಬಸ್ಗಳು ಸಿಗುವಂತಾಗಬೇಕು. ಹೊಸತಾಗಿ ನಿರ್ಮಾಣವಾಗಿರುವ ಬಸ್ನಿಲ್ದಾಣಗಳನ್ನು ಕಿತ್ತೆಸೆಯೋಣ. ಇವು ಸಾರ್ವಜನಿಕರಿಂದ ಅಭಿಪ್ರಾಯಗಳು.
ವೇದಿಕೆಯಲ್ಲಿದ್ದ ನಿವೃತ್ತ ಶಿಕ್ಷಕ ಗೋಪಾಲಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು. ಉದ್ಯಮಿ ರಾಜೇಶ್ ಉಪಸ್ಥಿತರಿದ್ದರು. ಉದ್ಯಮಿ ರಾಜೇಂದ್ರ ನಾಯರ್ ಅಧ್ಯಕ್ಷತೆ ವಹಿಸಿದ್ದರು. ಝಾಕೀರ್ ಹುಸೇನ್ ಸ್ವಾಗತಿಸಿದರು. ತಾ.ಪಂ. ಮಾಜಿ ಸದಸ್ಯ ಪ್ರಭಾಕರ ಶೆಟ್ಟಿ ಉಪ್ಪಡ್ಕ ಪ್ರಸ್ತಾವಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.