ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರ ವತಿಯಿಂದ ಕಲ್ಲಡ್ಕದಲ್ಲಿ ವಿವೇಕ ಜ್ಯೋತಿ ರಥವನ್ನು ವಿಶೇಷವಾಗಿ ಸ್ವಾಗತಿಸಲಾಯಿತು.
ಸ್ವಾಮಿ ವಿವೇಕಾನಂದರು ಹಿಂದತ್ವದ ಶ್ರೇಷ್ಠತೆಯನ್ನು ಜಗತ್ತಿಗೆ ಸಾರಿದವರು. ಅವರ ಜೀವನ ಹಾಗೂ ಸಂದೇಶವು ರಾಷ್ಟ್ರಕ್ಕೆ ಮಾರ್ಗದರ್ಶಿಯಾಗಿದೆ. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಮೂಲಕ ವಿವೇಕಾನಂದರ ಹಿಂದುತ್ವದ ಸಂದೇಶವನ್ನು ಮತ್ತೆ ನೆನಪಿಸಬೇಕಾಗಿದೆ. ವಿದ್ಯಾವರ್ಧಕ ಸಂಘದ ಶತಮನೋತ್ಸವ ಸಂದರ್ಭದ ವಿವೇಕಾನಂದ ಜಯಂತಿ, ಧ್ಯಾನಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಜನವರಿ 12 ರಂದು ಎಲ್ಲರೂ ಪಾಲ್ಗೊಳ್ಳಬೇಕಾಗಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಸಂಚಾಲಕ ಡಾ|| ಪ್ರಭಾಕರ ಭಟ್ ತಿಳಿಸಿದರು.
ಪುತ್ತೂರು ವಿದ್ಯಾವರ್ಧಕ ಸಂಘದ ವತಿಯಿಂದ ಶತಮನೋತ್ಸವದ ಅಂಗವಾಗಿ ಜ.5 ರಂದು ಪುತ್ತೂರು ಮಹಾಲಿಂಗ ದೇವಸ್ಥಾನದಿಂದ ಹೊರಟ ವಿವೇಕ ಜ್ಯೋತಿ ರಥವನ್ನು ಕಲ್ಲಡ್ಕದಲ್ಲಿ ವಿಶೇಷ ಸ್ವಾಗತ ನೀಡಿ ಬಳಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಥಯಾತ್ರೆಯ ಪ್ರಮುಖರಾದ ಬೆಟ್ಟಂಪಾಡಿ ಪ್ರಿಯದರ್ಶಿನಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಜೇಶ್ ದಿಕ್ಸೂಚಿ ಭಾಷಣ ಮಾಡಿದರು. ಈ ಪುಣ್ಯ ಕೆಲಸದಲ್ಲಿ ಶತಮಾನೋತ್ಸವದ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾಕೇಂದ್ರಗಳ ಬೃಹತ್ ಸಂಗಮವಾಗಲಿದೆ. 1915 ರಲ್ಲಿ ಆರಂಭಗೊಂಡು, 33 ಸಂಸ್ಥೆಗಳು ಸಂಸ್ಕಾರದ ಜೊತೆಗೆ ಶಿಕ್ಷಣವನ್ನು ನೀಡುತ್ತಿವೆ. 18000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದು, ಕೇಂದ್ರವು ಅತ್ಯುತ್ತಮ ವಿದ್ಯಾಸಂಸ್ಥೆಯಾಗಿದೆ. ಗ್ರಾಮ ವಿಕಾಸದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಮುಖಿಯಾಗಿ ಬೆಳೆಯುತ್ತಿದೆ ಎಂದರು.
ವೇದಿಕೆಯಲ್ಲಿ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸತೀಶ್ ಶಿವಗಿರಿ, ಪ.ಪೂ ಕಾಲೇಜಿನ ಪ್ರಾಚಾರ್ಯ ವಸಂತ ಬಲ್ಲಾಳ, ಮುಖ್ಯೋಪಾಧ್ಯಾಯರಾದ ರವಿರಾಜ್ ಶ್ರೀಮಾನ್ ಉಪಸ್ಥಿತರಿದ್ದರು. ಆರಂಭದಲ್ಲಿ ವಿವೇಕ ರಥವನ್ನು ಕಲ್ಲಡ್ಕದಲ್ಲಿ ಸ್ವಾಗತಿಸಿ, ಪೇಟೆಯಲ್ಲಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು, ಶಿಕ್ಷಕರು ಘೋಷ್ ವಾದನದೊಂದಿಗೆ ಪಥಸಂಚಲನ ಮಾಡಿದರು. ವಿದ್ಯಾಕೇಂದ್ರದ ೩೦೦೦ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಡಾ. ಕಮಲಾ ಪ್ರಭಾಕರ ಭಟ್ ಇವರು ವಿವೇಕ ಜ್ಯೋತಿಯನ್ನು ಸ್ವೀಕರಿಸಿ ವಿವೇಕಾನಂದರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ವಿದ್ಯಾರ್ಥಿಗಳು ಪ್ರೇರಣಾ ಗೀತೆ ಹಾಡಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ರಮೇಶ್ ಎನ್. ಸ್ವಾಗತಿಸಿದರು. ಶಾರೀರಿಕ ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ ನಿರೂಪಿಸಿ, ಶಿಕ್ಷಕ ವಿನೋದ್ಶೆಟ್ಟಿ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.