ಇಂದು ವಿಶ್ವಜಗತ್ತಿನ ಮುಂದೆ ಬಲಿಷ್ಠವಾಗಿ ಉದಯವಾಗುತ್ತಿರುವ ಭವ್ಯ ಭಾರತವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಂಧಮುಕ್ತಗೊಳಿಸಲು ಅದೆಷ್ಟೋ ಜೀವಗಳು ಪ್ರಾಣತೆತ್ತಿವೆ. ಸ್ವಾತಂತ್ರ್ಯಕ್ಕಾಗಿ ಅಹಿಂಸೆಯ ಮಾರ್ಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅದೆಷ್ಟೋ ಭಾರತೀಯರನ್ನು ಬ್ರಿಟಿಷರು ಅಮಾನವೀಯವಾಗಿ ಕೊಂದು ಹಾಕಿದ್ದಾರೆ. ಬ್ರಿಟಿಷರ ಮೃಗೀಯ ವರ್ತನೆಗೆ ಉತ್ತಮ ಉದಾಹರಣೆಯಾಗಿ ಇತಿಹಾಸದ ಪುಟದಲ್ಲಿ ಕಹಿ ನೆನಪಾಗಿ ಉಳಿದಿರುವುದೇ ಜಲಿಯನ್ ವಾಲಾಭಾಗ್ ನರಮೇಧ.
ಅಂದು ಅ.13, 1919 ಪಂಜಾಬ್ನ ಅಮೃತಸರದ ಜಲಿಯನ್ ವಾಲಾಭಾಗ್ ಗಾರ್ಡನ್ನಲ್ಲಿ ಸಾವಿರಾರು ಹೋರಾಟಗಾರರು, ಬೈಶಾಕಿ ಯಾತ್ರಾರ್ಥಿಗಳೂ ಜಮಾವಣೆಗೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರರಾದ ಡಾ.ಸತ್ಯಪಾಲ್ ಮತ್ತು ಡಾ.ಸೈಫುದ್ದೀನ್ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಬ್ರಿಟಿಷರು ಸಾರ್ವಜನಿಕ ಸಭೆಗೆ ಹಾಕಿದ್ದ ನಿರ್ಬಂಧವನ್ನೂ ಲೆಕ್ಕಿಸದೆ ಅವರೆಲ್ಲ ಅಹಿಂಸಾತ್ಮಕವಾಗಿ ಪ್ರತಿಭಟನೆ ನಡೆಸಲು ಅಲ್ಲಿ ನೆರೆದಿದ್ದರು.
ಆದರೆ ಕ್ರೂರಿ ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡಯರ್ ತನ್ನ ಕ್ರೂರತ್ವದ ಎಲ್ಲೆ ಮೀರಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಸಾವಿರಾರು ಜನರ ಮೇಲೆ ಗುಂಡಿನ ಮಳೆಗೆರೆಯಲು ಆದೇಶಿಸಿದ. ಬರೋಬ್ಬರಿ 10 ನಿಮಿಷಗಳ ಕಾಲ ಸಿಕ್ಕಸಿಕ್ಕವರ ಮೇಲೆ ಗುಂಡು ಹಾರಿಸಲಾಯಿತು. ಜನರು ತಪ್ಪಿಸಿಕೊಳ್ಳಲು ಪ್ರಯತ್ನಿಸುವ ವೇಳೆ ಗೇಟಿನ ಬಳಿಯೇ ನಿಂತು ಗುಂಡುಗಳನ್ನು ಹಾರಿಸಲಾಯಿತು. ಈ ನರಮೇಧದಲ್ಲಿ 350 ಮಂದಿ ಮೃತರಾದರು, 1,200 ಮಂದಿ ಗಾಯಗೊಂಡರು ಎಂದು ಬ್ರಿಟಿಷ್ ಸರ್ಕಾರ ಬಿಡುಗಡೆಗೊಳಿಸಿರುವ ಅಂಕಿಅಂಶಗಳು ತಿಳಿಸಿತ್ತು. ಆದರೆ 1,000 ಮಂದಿ ಸತ್ತಿದ್ದಾರೆ ಎಂದು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಹೇಳಿದೆ. ತಾನು 1,650 ಸುತ್ತು ಗುಂಡು ಹಾರಿಸಿರುವುದಾಗಿ ಸ್ವತಃ ಡಯರ್ನೇ ಹೇಳಿಕೊಂಡಿದ್ದಾನೆ.
ಬೈಶಾಕಿ ಹುಣ್ಣಿಮೆಯ ಪವಿತ್ರ ದಿನದಂದೇ ಈ ದುರಂತ ನಡೆಯಿತು. ಇದು ಇತಿಹಾಸದಲ್ಲಿ ಜಲಿಯನ್ ವಾಲಾಭಾಗ್ ದುರಂತ ಎಂದೇ ಖ್ಯಾತವಾಗಿದೆ. ಅಮೃತ್ಸರ್ ನರಮೇಧ ಎಂದೂ ಇದನ್ನು ಕರೆಯಲಾಗುತ್ತದೆ. ಈ ಘಟನೆ ಭಾರತೀಯರಿಗೆ ಬ್ರಿಟಿಷ್ರ ಮೇಲೆ ಇದ್ದ ಅಸಹನೆಯ ಕಟ್ಟೆಯನ್ನು ಒಡೆಯುವಂತೆ ಮಾಡಿತ್ತು. ಭಾರತೀಯರ ರಕ್ತ ಕುದಿಯುವಂತೆ ಮಾಡಿತ್ತು. ಭಾರತದ ಸ್ವಾತಂತ್ರ್ಯ ಹೋರಾಟ ಮತ್ತಷ್ಟು ತೀವ್ರಗೊಳ್ಳಲು ಪ್ರೇರಣೆಯಾಯಿತು. ಅಲ್ಲದೇ ಅಸಹಕಾರ ಚಳುವಳಿಗೆ ನಾಂದಿ ಹಾಡಿತು. ಈ ನರಮೇಧ ಬ್ರಿಟಿಷರ ದುರಾಡಳಿತವನ್ನು ಅಂತ್ಯಗೊಳಿಸಲು ಬುನಾದಿಯಾಯಿತು ಎಂದೇ ಇತಿಹಾಸ ತಜ್ಞರು ಅಭಿಪ್ರಾಯಪಡುತ್ತಾರೆ.
ಆ ದಿನ, ಈ ದಿನ ಎಂದು ನಾವು ವರ್ಷಕ್ಕೆ ಹಲವಾರು ದಿನಗಳನ್ನು ಆಚರಿಸುತ್ತೇವೆ. ಆದರೆ ದೇಶಕ್ಕಾಗಿ ಪ್ರಾಣಕೊಟ್ಟವರನ್ನು ನೆನಪಿಸುವ ದಿನ ಬಂದಾಗ ಅದನ್ನು ನಾವು ಕಡೆಗಣಿಸುತ್ತೇವೆ. ಇಂದು ನಾವು ಸ್ವತಂತ್ರವಾಗಿ ಜೀವಿಸುತ್ತಿದ್ದೇವೆ, ಸ್ವಇಚ್ಛೆಯಿಂದ ಬದುಕುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ನಮ್ಮ ದೇಶವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡುಗಡೆ ಮಾಡಿದ ಧೀಮಂತ ಸ್ವಾತಂತ್ರ್ಯ ಹೋರಾಟಗಾರರು. ಅಂತಹ ಸಾವಿರಾರು ಧೀಮಂತರು ಇಂದು ಬ್ರಿಟಿಷರ ಗುಂಡೇಟಿಗೆ ಬಲಿಯಾದ ದಿನ. ಅವರೆಲ್ಲರ ಹುತಾತ್ಮತೆ ನಮಗೆಲ್ಲಾ ಪ್ರೇರಣೆಯಾಗಲಿ. ನಮ್ಮ ದೇಶಪ್ರೇಮವನ್ನು ಬಡಿದೆಬ್ಬಿಸಲಿ, ತಾಯಿ ಭಾರತೀಯ ಸೇವೆ ಮಾಡಲು ಉತ್ಸಾಹ ತುಂಬಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.