ಮರಾಠಿ-ಕನ್ನಡಿಗರು ಸಹೋದರರಂತೆ ಬಾಳೋಣ: ಶಾಸಕ ಸರ್ನಾಯ್ಕ್
ಮುಂಬಯಿ : (ದಿ| ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ವೇದಿಕೆ) ಮಹಾರಾಷ್ಟ್ರದ ಶಾಸಕನಾದರೂ ಮುಂಬಯಿ ಕನ್ನಡಿಗರ ಸಮುದಾಯದ ಜೊತೆ ನಿಕಟ ಸಂಪರ್ಕ ಇಟ್ಟು ಕೊಂಡವ ನಾನು. ಇಂದು ನನ್ನದೇ ಕ್ಷೇತ್ರದಲ್ಲಿ ಅಖಿಲಭಾರತ ಕನ್ನಡಿಗ ಪತ್ರಿಕಾ ಸಮಾವೇಶವನ್ನು ಉದ್ಘಾಟಿಸುವ ಅವಕಾಶಸಿಕ್ಕಿದ್ದು ಅಪೂರ್ವ ಭಾಗ್ಯ. ನಿಮ್ಮ ಸಂಘಟನೆಗೆ ಭವಿಷ್ಯದ ಎಲ್ಲಾ ಯೋಜನೆಗಳಿಗೆ ನೆರವಾಗಲು ಒಬ್ಬ ಮರಾಠಿಸೋದರನಾಗಿ ನಾನಿದ್ದೇನೆ. ಭವಿಷ್ಯತ್ತಿನ್ನುದ್ದಕ್ಕೂ ನಾವೆಲ್ಲರೂ ಮರಾಠಿ-ಕನ್ನಡಿಗರು ಸಹೋದರರಂತೆ ಬಾಳೋಣ ಎಂದು ಥಾಣೆ ಶಾಸಕ ಪ್ರತಾಪ್ ಸರ್ನಾಯ್ಕ್ ನುಡಿದರು.
ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ಕಪಸಮ) ಸಂಸ್ಥೆಯು ದಿನಾಂಕ 11-4-2015 ರಂದು ಮುಂಬೈನಲ್ಲಿ ಆಯೋಜಿಸಿದ್ದ ರಾಷ್ಟ್ರದ ಪ್ರಪ್ರಥಮ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಸರ್ನಾಯ್ಕ್ ಮಾತನಾಡಿದರು.
ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಮತ್ತು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಸಂಸ್ಥೆಗಳ ಸಹಯೋಗದೊಂದಿಗೆ ಮುಂಬಯಿ ಉಪನಗರದ ಥಾಣೆ ಪಶ್ಚಿಮದ ಹೊಟೇಲ್ ಧೀರಜ್ನಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಸಮ್ಮೇಳನಾಧ್ಯಕ್ಷತೆಯಲ್ಲಿ ಆಯೋಜಿಸಲಾಗಿರುವ ತ್ರಿದಿನಗಳ ಪತ್ರಕರ್ತರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮರಾಠಿ ಪತ್ರಕಾರ್ ಸಂಘ್ ಮುಂಬಯಿ ಅಧ್ಯಕ್ಷ ದೇವದಾಸ್ ಎಲ್.ಮಠಾಲೆ ಉಪಸ್ಥಿತರಿದ್ದರು.
ಗೌರವ ಅತಿಥಿಗಳಾಗಿ ರಿಪೋರ್ಟರ್ಸ್ ಗೀಲ್ಡ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಮನ್ವಯಾಧಿಕಾರಿ ಕೆ.ವಿ ಪ್ರಭಾಕರ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ನಿಕಟಪೂರ್ವ ಅಧ್ಯಕ್ಷ ಗಂಗಾಧರ ಮೊದಲಿಯಾರ್, ಮಂತ್ರಾಲಯ ಮತ್ತು ವಿಧಿ ಮಂಡಳ್ ವಾರ್ತಾಹಾರ್ ಸಂಘದ ಕಾರ್ಯದರ್ಶಿ ಚಂದ್ರಕಾಂತ್ ಶಿಂಧೆ, ವಿಡಿಯಾ ಸ್ಪೋರ್ಟ್ಸ್ ಅಕಾಡೆಮಿ ಮಹಾರಾಷ್ಟ್ರ ಇದರ ಗೌ| ಪ್ರ| ಕಾರ್ಯದರ್ಶಿ ಕೆಲ್ವಿನ್ ಜೋಶ್ವಾ, ವಿಜಯ ಕರ್ನಾಟಕ ದೈನಿಕದ ಮಂಗಳೂರು ಆವೃತ್ತಿಯ ಸ್ಥಾನೀಯ ಸಂಪಾದಕ ಯು.ಕೆ ಕುಮಾರನಾಥ್, ಉದ್ಯಮಿಗಳಾದ ವಿಜಯ ಕರ್ನಾಟಕ ದೈನಿಕದ ಮಂಗಳೂರು ಆವೃತ್ತಿ ಸ್ಥಾನೀಯ ಸಂಪಾದಕ ಯು.ಕೆ ಕುಮಾರನಾಥ್, ಉದ್ಯಮಿಗಳಾದ ಬೊಳ್ಯಗುತ್ತು ವಿವೇಕ್ ಶೆಟ್ಟಿ, ಎಂ.ಬಿ ಕುಕ್ಯಾನ್, ಕೆ. ಭೋಜರಾಜ್ ಅತ್ತೂರು ಶಿವರಾಮ ಕೆ.ಭಂಡಾರಿ, ಎನ್.ಕೆ ಬಿಲ್ಲವ ನಾವುಂದ, ಕೆ.ಪಿ ಶೇಖರ್ ಎಲ್.ಶೆಟ್ಟಿ, ಶಿವ ಮೂಡಿಗೆರೆ, ಪತ್ರಕರ್ತರ ಸಂಘದ ಡಾ| ಸುನೀತಾ ಎಂ.ಶೆಟ್ಟಿ, ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಡಾ| ಜಿ.ಎನ್ ಉಪಾಧ್ಯ, ಸುರೇಶ್ ಎಸ್.ಭಂಡಾರಿ ಕಡಂದಲೆ, ಜಗನ್ನಾಥ ಶೆಟ್ಟಿ ಬಾಳ ಮತ್ತಿತರರು ಉಪಸ್ಥಿತರಿದ್ದರು.
ಪೊನ್ನಪ್ಪರವರು ಮಾತನಾಡಿ ರಾಜ್ಯ ರಾಜ್ಯಗಳ ಪತ್ರಕರ್ತರ ನಡುವೆ ಸೇತುವೆಯಾಗಿ ದುಡಿಯುವ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಬಗ್ಗೆ ಅಭಿಮಾನ ಹೆಮ್ಮೆ ಎನ್ನಿಸುತ್ತಿದೆ. ಮಾಧ್ಯಮ ಅಕಾಡೆಮಿ ಕರ್ನಾಟಕ ಸರಕಾರಕ್ಕೆ ಸೇರಿದ್ದಾದರೂ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಪತ್ರಕರ್ತರ ಮಧ್ಯೆ ಸಹಕಾರ ವಿಚಾರ ವಿನಿಮಯ ಗುರುತಿಸುವಿಕೆ ಇದರ ಉದ್ದೇಶ. ಈಗಾಗಲೇ ಹೊರನಾಡ ಕನ್ನಡಿಗ ಪತ್ರಕರ್ತರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಿದ್ದೇವೆ, ಇದು ಮುಂದುವರಿಯಲಿದೆ ಎಂದು ಕರೆಯಿತ್ತರು.
ಸ್ವಂತ ನೆಲದಲ್ಲೂ ಇರುವ ಮರಾಠಿ ಪತ್ರಕರ್ತರಿಗಿಂತಲೂ ನಾವು ಕನ್ನಡಿಗ ಪತ್ರಕರ್ತರು ಹೆಚ್ಚು ಸಾಧನಶೀಲರು ಮತ್ತು ಪ್ರಭಾವಿಗಳು ಎಂದು ದೇವದಾಸ್ ಮಠಾಲೆ ನುಡಿದರು.
ಪ್ರಥಮ ಬಾರಿಗೆ ಒಳನಾಡು ಹೊರನಾಡು ಪತ್ರಕರ್ತರ ನಡುವಣ ಸಂವಹನಕ್ಕೆ ನಿಮ್ಮ ಈ ಪತ್ರಕರ್ತರ ಸಂಘಟನೆ ಹೇತುವಾಯಿತು. ನಿಮ್ಮಿಂದ ಸ್ಫೂರ್ತಿ ಪಡೆದು ನಾವೂ ಮಂಗಳೂರಿನಲ್ಲಿ ಸಮಾವೇಶ ಸಮ್ಮೇಳನ ಆಯೋಜಿಸುತ್ತೇವೆ, ನಿಮಗೆಲ್ಲ ಆಮಂತ್ರಿಸುತ್ತೇವೆ. ಅವಸರದ ಪತ್ರಿಕೋದ್ಯಮ ವೃತ್ತಿಯ ಗುಣಮಟ್ಟವನ್ನು ಹಾಳುಗೆಡುತ್ತಿದೆ ಎಂದು ಮನೋಹರ್ ಪ್ರಸಾದ್ ನುಡಿದರು.
ದೇವರು ಕೊಟ್ಟ ಬುದ್ಧಿಮತೆ ಮತ್ತು ಸಂವಹನವನ್ನು ಪತ್ರಕರ್ತರು ಬಹಳ ವಿವೇಚನೆಯಿಂದ ಬಳಸಬೇಕು ಎಂದು ಬಿ.ವಿವೇಕ್ ಶೆಟ್ಟಿ ಆಶಯ ವ್ಯಕ್ತ ಪಡಿಸಿದರು.
ಪತ್ರಕರ್ತರು ಸದಾ ವಿದ್ಯಾರ್ಥಿಗಳಾಗಿರಬೇಕು. ಆದೇಶ ನೀಡುವವರಾಗಬಾರದು. ಸಮ್ಮೇಳನದ ಅಂದೋಲನದ ಹಿಂದೆ ಶ್ರಮ ಇದೆ ಆದುದರಿಂದ ಸಂತೋಷವೂ ಆಗಿದೆ ಎಂದು ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ತಿಳಿಸಿದರು.
ಕಪಸಮ ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಪ್ರಾಸ್ತವಿಕ ನುಡಿಗಳನ್ನಾಡಿ ಪತ್ರಿಕೋದ್ಯಮ ಒಂದು ಸಶಕ್ತ ಮಾಧ್ಯಮ. ದೇಶವನ್ನು ಕಟ್ಟುವ ಕಾಯಕದಲ್ಲಿ ಪತ್ರಕರ್ತರು ನಿರತರಾಗಿದ್ದಾರೆ. ಪ್ರಜೆಗಳ ನೋವು ನಲಿವುಗಳಿಗೆ ಸ್ಪಂದಿಸುವ ಪತ್ರಕರ್ತರು ಒಂದೆಡೆ ಸೇರಿ ಚಿಂತನ-ಮಂಥನ, ಆದಾನ ಪ್ರದಾನ ನಡೆಸುವಂತಾಗಲು ಈ ಸಮಾವೇಶದ ಉದ್ದೇಶವಾಗಿದೆ. ಕರ್ನಾಟಕ-ಮಹಾರಾಷ್ಟ್ರದ ನಡುವಿನ ಬಾಂಧವ್ಯ ಹೆಚ್ಚಿಸುವ ನಿಟ್ಟಿನಿಂದಲೂ ಮುಖ್ಯಮಂತ್ರಿಗಳೊಂದಿಗೆ, ರಾಜ್ಯಪಾಲರೊಂದಿಗೆ ಮುಖಾಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಭಾವೈಕ್ಯವನ್ನು ಬೆಸೆಯುವ ನಿಟ್ಟಿನಿಂದ ಈ ಸಮಾವೇಶ ಮಹತ್ವದ್ದಾಗಿದೆ. ಕನ್ನಡಿಗ ಪತ್ರಕರ್ತರ ಸಂಘ ಹೊರನಾಡಿನಲ್ಲಿ ಕನ್ನಡಿಗರ ಹಿತಕಾಯುವ ಕಾಯದಲ್ಲಿ ನಿರತವಾಗಿದೆ ಎಂದರು.
ಕಪಸಮ ಕಾರ್ಯಕಾರಿ ಸಮಿತಿ ಸದಸ್ಯ ಶ್ಯಾಮ್ ಎಂ.ಹಂಧೆ ಸ್ವಾಗತಿಸಿದರು. ಉಪಾಧ್ಯಕ್ಷ ದಯಾ ಸಾಗರ್ ಚೌಟ ಆಶಯ ಭಾಷಣಗೈದರು. ಗೌ| ಕಾರ್ಯದರ್ಶಿ ಹರೀಶ್ ಕೆ.ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಪ್ರೇಮನಾಥ್ ಶೆಟ್ಟಿ ಮುಂಡ್ಕೂರು ವಂದಿಸಿದರು. ಸಮಾವೇಶದಲ್ಲಿ ಭಾರತ ರಾಷ್ಟ್ರದಾದ್ಯಂತದ ಇನ್ನೂರಕ್ಕೂ ಅಧಿಕ ಪತ್ರಕರ್ತರು, ಡಾ| ಪಿ.ಕೆ ಖಂಡೋಭ, ಪ್ರೊ| ಕೆ. ಚನ್ನಬಸವಪ್ಪ, ಲಕ್ಷಿ ಮಚ್ಚಿನ, ಬೆಳ್ತಂಗಡಿ, ಬಿ.ರವೀ೦ದ್ರ ಶೆಟ್ಟಿ ಮತ್ತು ಶ್ರೀನಿವಾಸ್ ನಾಯಕ್ ಇ೦ದಾಜೆ, ನ್ಯಾ| ವಸಂತ ಎಸ್.ಕಲಕೋಟಿ ಮತ್ತಿತರರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.