ವಿನೂತನ ಆವಿಷ್ಕಾರ ಸೋಲಾರ್ ಕೀಟ ನಿಯಂತ್ರಣ ಸಾಧನ ಭಾರತದಲ್ಲಿ ಮೊದಲಬಾರಿಗೆ.ದಾಳಿಂಬೆ ಬೆಳೆಯುವ ರೈತನಿಂದ ರೈತರಿಗಾಗಿ ಕರ್ನಾಟಕದಲ್ಲಿ ಹೊಸ ಬಗೆಯ ಸೋಲಾರ್ ವಿದ್ಯುತ್ ಕೀಟ ನಿಯಂತ್ರಣ ಸಾಧನ ಆವಿಷ್ಕಾರ. ದಾಳಿಂಬೆ ಬೆಳೆಗಾರರಿಗೆ ಕಾಡುವ ಕೀಟಗಳ ಹತೋಟಿಗೆ ಸ್ವತಹ ದಾಳಿಂಬೆ ಬೆಳೆಗಾರರಾದ ಕರಿಬಸಪ್ಪ.ಎಂ.ಜಿ. ಮಲೆಬೆನ್ನೂರು. ದಾವಣಗೆರೆ ಜಿಲ್ಲೆಯವರು. ಇವರ ಸಂಶೋಧನೆಯ ಫಲವಿದು.
ಭಾರತ ಸರಕಾರದ ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ನಲ್ಲಿ ಕಾಪಿರೈಟ್ ಗಾಗಿ ಎಲ್ಲಾ ಬಗೆಯ ದಾಖಲಾತಿಗಳನ್ನು ಸಲ್ಲಿಸಿದ್ದಾರೆ. ಹಾಗೂ ಸ್ವತಹ ಅವರೇ ಈ ಸಾಧನಗಳನ್ನು ರೈತರಿಗೆ ಕಡಿಮೆ ಬೆಲೆಯಲ್ಲಿ ತಯಾರಿಸಿ ಕೊಡುತ್ತಾರೆ. ವಿಶೇಷವಾಗಿ ದಾಳಿಂಬೆ ಬೆಳೆಗಾರರಿಗೆ, ತರಕಾರಿ ಹಾಗೂ ಎಲ್ಲಾ ಬಗೆಯ ಬೆಳೆಗಳ ಕೀಟ ಭಾಧೆಗೆ ಬಳಸಬಹುದು. ವಿಷಮಯ ಔಷಧಿ ಬಳಕೆ ಕಡಿಮೆಯಾಗಿ ಆಹಾರ ಪದಾರ್ಥಗಳು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎನ್ನುವುದು ಹಾಗೂ ಔಷಧಿ ಖರ್ಚು ಕಡಿಮೆಯಾಗಲಿದೆ ಎನ್ನುವುದೇ ಮುಖ್ಯ ಉದ್ದೇಶ. ಸೋಲಾರ್ ಪ್ಯಾನೆಲ್ ಗಳಿಗೆ 10 ವರ್ಷ ವಾರಂಟಿ, ಬ್ಯಾಟರಿಗೆ ಒಂದು ವರ್ಷ ವಾರಂಟಿ ಇದೆ. ಒಂದು ಲೀಟರ್ ಔಷಧಿ ಖರ್ಚಿನಲ್ಲಿ ಖರಿದಿಸಿ ಹತ್ತಾರು ವರ್ಷ ಬಳಸಬಹುದು ಎನ್ನುವುದೇ ವಿಶೇಷ.
ಸೋಲಾರ್ ಪ್ಯಾನೆಲ್ ಕೆಳಗಡೆ ಇರುವ ಬೇಸಿನ್ ನಲ್ಲಿ ನೀರಿಗೆ 5 ಹನಿ ಸೋಪ್ ಆಯಿಲ್ ಹಾಕಬೇಕು ಹಾಗೂ ಕೊಳೆತ ಬಾಳೆಹಣ್ಣು, ಕೊಳೆತ ಪಪ್ಪಾಯ ಹಣ್ಣನ್ನು ಅದರಲ್ಲಿ ಇರುವ ಸ್ಟ್ಯಾಂಡಿನಲ್ಲಿ ಇಡಬೇಕು. ಕೊಳೆತ ಹಣ್ಣಿನ ಮಧುರ ವಾಸನೆಗೆ, ಹಾಗೂ ಹಳದಿ ಮಿಶ್ರಿತ ಬಣ್ಣಕ್ಕೆ, ಬೆಳೆಕಿಗೆ ಹಾಗೂ ನಿಗದಿತ ಎತ್ತರಕ್ಕೆ ಆಕರ್ಷಿತವಾಗಿ ಬರುವ ಕೀಟಗಳು ಬೇಸಿನ್ ನಲ್ಲಿ ಬಿದ್ದು ಸಾಯುತ್ತವೆ. ಹಾಗೂ ಪಾರದರ್ಶಕ ನೀರಿನಲ್ಲಿ ಕಾಣುವ ಬೆಳಕಿನ ಪ್ರತಿಬಿಂಬ ಕೀಟಗಳ ಆಕರ್ಶಿಸಿದಾಗ ಅದರಲ್ಲಿ ಬಿದ್ದು ಸಾಯುತ್ತವೆ. ಆ ನೀರನ್ನು ಎರಡುಮೂರೂ ದಿನಕೊಮ್ಮೆ ಬದಲಿಸಿದರೆ ಕೆಲಸ ಮುಗಿದಂತೆ. ಕತ್ತಲಾದಾಗ ತಾನೇ ಆನ್ ಆಗಿ.ಬೆಳಕು ಹರಿದಾಗ ತಾನೇ ಆಫ್ ಆಗುತ್ತದೆ. ಗ್ಲಾಸ್ ಮಾದರಿಯ ಮಾಡೆಲ್ 4800=00 ಸಿಂಗಲ್ ಲೈಟ್ ಮಾಡೆಲ್ 5800 ಹಾಗೂ ಎರಡು ಲೈಟ್ ಮಾದರಿ 10500 ರೂ ಇರುತ್ತದೆ ಎಂದು ತಿಳಿಸಿದ್ದಾರೆ. ದಾಳಿಂಬೆ ಬೆಳೆಗೆ ಸಿಂಪಡಿಸುವ ಒಂದು ಲೀಟರ್ ಔಷಧಿ ಬೆಲೆ 11,000 ಸಾವಿರ ಇದೆ.
ಕೇವಲ ಇಪ್ಪತ್ತು ದಿನ ಕೆಲಸ ಮಾಡುವ ಔಷಧಿ ಬದಲು ಸೋಲಾರ್ ಕೀಟ ನಿಯಂತ್ರಣ ಸಾಧನ ಅಳವಡಿಸಿ ಸರಿಯಾಗಿ ನಿರ್ವಹಣೆ ಮಾಡಿದರೆ ಇಪ್ಪ್ಪತ್ತು ವರ್ಷ ಬಾಳಿಕೆ ಬರುತ್ತದೆ ಎಂದುವಿವರಿಸುತ್ತಾರೆ. ದುಬಾರೀ ಔಷಧಿ ಖರ್ಚಿನಿಂದ ಸಾಲದ ಸುಳಿಗೆ ಸಿಲುಕುವ ರೈತರಿಗೆ ಇದೊಂದು ವರದನವಾಗಬಹುದು. ಆಹಾರ ಪದಾರ್ಥಗಳು ಕೂಡ ವಿಷಮಯ ಆಗುವುದು ತಪ್ಪುತ್ತದೆಎನ್ನುತ್ತಾರೆ ಕರಿಬಸಪ್ಪ. ಹಲವಾರು ರೈತರು ಕೃಷಿ ತಜ್ಞರು ಭೇಟಿ ಕೊಟ್ಟು ಮೆಚ್ಚುಗೆ ವ್ಯಕ್ತಪಡಿಸಿ ತಮಗೂ ಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದು ವಿವರಿಸಿದರು. ಬೋಳುಗುಡ್ಡದಲ್ಲಿ ಏನು ಮಾಡಬಹುದು? ಹೀಗಂತ ಎಲ್ಲರೂ ಅಂದು ಕೊಳ್ಳುವ ಹೊತ್ತಿಗೆ ಕರಿಬಸಪ್ಪ ಅಲ್ಲಿ ಜಮೀನು ಕೊಂಡು ಕೊಂಡಿದ್ದರು. ಅರೆ ಮಳೆ ನಂಬಿ ಇನ್ನೇನು ಬೆಳೀತಾರೆ ಅಂತ ಮೂಗುಮುರಿಯುವವರಿಗೆ ನೀರು ಉಳಿಸಿ, ಬೆಳೆ ತೆಗೆದು ತೋರಿಸಿದ್ದಾರೆ.
“ಗಿಡಗಳು ನೂರರಲ್ಲಿ ತೊಂಬತ್ತೆ„ದು ಭಾಗ ನೀರು ಹಾಗೂ ಸೂರ್ಯನ ಕಿರಣಗಳಿಂದ ಆಹಾರ ತಯಾರಿಸುತ್ತದೆ ಎಂದು ಓದಿದ ನೆನಪಿದೆ. ಅದು ಅಕ್ಷರಶಃ ಸತ್ಯ. ಇಲ್ನೋಡಿ ಈ ಬಾಳೆಯದುಮೂರನೆಯ ಕೂಳೆ ಬೆಳೆ, ಗೊನೆ ಬಿಟ್ಟಿದೆ. ಹೆಚ್ಚು ಕಡಿಮೆ ನಲವತ್ತು ಕಾಯಿಗಳಿವೆ.ನೀರಿನ ಹೊರತು ಇನ್ನೇನನ್ನೂ ಹಾಕಿಲ್ಲ’ ಎನ್ನುತ್ತಾ ತಮ್ಮ ಕೃಷಿಯಲ್ಲಿನ ಖುಷಿ ಹಂಚಿಕೊಳ್ಳುತ್ತಾ ಜಮೀನು ಸುತ್ತು ಹಾಕಿಸಿದರು ಕರಿಬಸಪ್ಪ ಮಲ್ಲನಗೌಡ್ರು.
ದೂರದಿಂದ ನೋಡಿದರೆ ಗುಡ್ಡದ ಬದಿಯಲ್ಲೊಂದು ಚಿಕ್ಕ ಕಾಡು ಬೆಳೆದಂತೆ ಕಂಡುಬರುವ ಇವರ ತೋಟದಲ್ಲಿ ವೈದ್ಯಮಯ ಗಿಡಗಳು, ಅಪರೂಪದ ಔಷಧಿ ಸಸ್ಯಗಳು ಚಿಗುರೊಡೆದು ನಿಂತಿವೆ.ಗೊಬ್ಬರವನ್ನೇ ಉಣ್ಣದ ಅನೇಕ ಗಿಡಗಳು ಪೈಪೋಟಿಯಲ್ಲಿ ಬೆಳೆದು ನಿಂತಿವೆ. ಕೇವಲ ನೀರಿನಿಂದಲೇ ಬೆಳೆದ ಬೆಟ್ಟದ ನೆಲ್ಲಿ ಫಲ ತುಂಬಿಕೊಂಡಿದೆ. ಕಲ್ಲು ಬಂಡೆಯ ನಡುವೆತಲೆಯೆತ್ತಿ ನಿಂತ ಹುಣಸೆ ಮರ ಕಾಯಿ ಬಿಡುವ ಹಂತದಲ್ಲಿದೆ. ನೆಟ್ಟ ಮೇಲೆ ಹತ್ತಿರ ಸುಳಿಯದಿದ್ದರೂ ಹಲಸು ಹಸನಾಗಿ ಎತ್ತರಕ್ಕೇರಿದೆ. ಅಗಲವಾಗಿ ವ್ಯಾಪಿಸಿರುವ ಬಿದಿರುಸುತ್ತಲಿನ ಬೇಲಿಗೆ ಸರಕಾಗಿದೆ. ಇಲ್ಲಿ ನೀರು ಹರಿಯುವ ಕಾಲುವೆಯೂ ಉಪಯೋಗಗೊಂಡಿದೆ.
ಕುತೂಹಲದಿಂದ ಕೃಷಿ ವೀಕ್ಷಿಸುವ ಆಸಕ್ತಿ ಇದ್ದರೆ ಹಿರೆಕೆರೂರು ತಾಲೂಕಿನ ಕಿರಿಗೆರೆಯಕರಿಬಸಪ್ಪ ಅವರ ಜಮೀನಿಗೆ ಭೇಟಿ ಕೊಡಬೇಕು. ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನಮಲೆಬೆನ್ನೂರು ಗ್ರಾಮದಲ್ಲಿ ವಾಸವಾಗಿದ್ದರೂ ಇವರದು ಕೃಷಿ ಜಮೀನಿನ ಭೇಟಿ ನಿತ್ಯನಿರಂತರ.ಭತ್ತ ಬೆಳೆಯೊಂದನ್ನೇ ನೆಚ್ಚಿಕೊಂಡಿದ್ದ ಇವರಿಗೆ ತೋಟಗಾರಿಕೆ ಬೆಳೆಯತ್ತ ಒಲವು. ಆದರೆ ಸೂಕ್ತವಾಗಬಲ್ಲ ಜಮೀನು ಇರಲಿಲ್ಲ. ಹಾಗಾಗಿ ಖರೀದಿಸಿದರು.ಹೆಚ್ಚಿನ ಕಲ್ಲು ಹಾಸು ಹೊಂದಿರುವ ಗುಡ್ಡ ಪ್ರದೇಶ. ನೀರಿನ ಸೆಲೆ ಇರಲಿಲ್ಲ. ಮುಳ್ಳು ಕಂಟಿಗಳೂ ಬೆಳೆದಿರದ ಜಮೀನಿನಲ್ಲಿ ಕೃಷಿ ಮಾಡಲು ಸಾಧ್ಯವಿಲ್ಲ ಎಂದು ಹಿಂದಿನ ಮಾಲಿಕಮಾರಿದ್ದರು. ಕೊಂಡುಕೊಂಡ ನಾಲ್ಕು ಎಕರೆಯೂ ಗುಡ್ಡದ ಜಮೀನು. ‘ನಾಲ್ಕೆಕರೆ ಗುಡ್ಡ ಖರೀದಿಗಿಂತ ಒಂದೆಕರೆ ನೀರಾವರಿ ಜಮೀನು ಕೊಂಡರೆ ಕುಳಿತು ಉಣ್ಣಬಹುದಿತ್ತು’ ಎಂದುಕೊಂಕು ನುಡಿದಿದ್ದರು ಹಲವರು.
ಗುಡ್ಡವನ್ನೂ ಕೃಷಿಗೆ ಒಗ್ಗಿಸುವ ಅದಮ್ಯ ಉತ್ಸಾಹ ಇವರದು. ಪರರ ಮಾತುಗಳಿಗೆ ಲಕ್ಷ್ಯ ಕೊಡದೇ ಗುಡ್ಡದಲ್ಲಿ ಹಸಿರು ಚಿಗುರಿಸುವ ಕಾಯಕಕ್ಕೆ ತೊಡಗಿದರು. ಗುಡ್ಡದಲ್ಲಿ ನೇರವಾಗಿ ಬೆಳೆ ಬೆಳೆಯುವ ಹಾಗಿರಲಿಲ್ಲ. ಸಮತಟ್ಟು ಮಾಡುವ ಅಗತ್ಯವಿತ್ತು. ನಾಲ್ಕೆಕರೆ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಲು ಸಿದ್ದತೆ ನಡೆಸಿದರು. ಮೇಲ್ಭಾಗದಲ್ಲಿನ ಕಲ್ಲು, ಮಣ್ಣನ್ನು ಒಡೆದು ಕೆಳಗೆ ಸಾಗಿಸಿದರು. ಮೂರು ಹಂತಗಳಾಗಿ ಸಮತಟ್ಟುಗೊಳಿಸಿದರು. ಕಲ್ಲುಗಳೇ ಅಧಿಕವಿದ್ದುದರಿಂದ ಬೇರೆಡೆಯಿಂದ ಮಣ್ಣನ್ನು ತಂದು ತುಂಬಿಸುವುದು ಅನಿವಾರ್ಯವಾಯ್ತು. ಕಲ್ಲು ಹಾಸು ಜಾಸ್ತಿ ಇರುವಲ್ಲಿ 3-4 ಅಡಿಗಳಷ್ಟು ಮಣ್ಣು ತುಂಬಿಸಿದರು. ಹತ್ತಿರದಲ್ಲೇ ಹಾದು ಹೋಗಿರುವ ನದಿಯಿಂದ ನೀರು ಹಾಯಿಸಿಕೊಂಡು ಕೃಷಿ ಯೋಗ್ಯ ಭೂಮಿಯನ್ನಾಗಿ ಪರಿವರ್ತಿಸಿದರು. ಒಂದಷ್ಟು ಸಾಲವನ್ನು ಮೈಮೇಲೆ ಎಳೆದುಕೊಂಡರೂ ಗುಡ್ಡ ಕರಗಿ ಕೃಷಿ ಯೋಗ್ಯವಾಗಿದ್ದು ಇವರಿಗೆ ನೆಮ್ಮದಿ ಮೂಡಿಸಿತ್ತು.
ಬೆಳೆ ವೈವಿದ್ಯ : ವಿವಿಧ ಬಗೆಯ ಅಪರೂಪದ ಸಸ್ಯಗಳು ಇಲ್ಲಿನ ವಿಶೇಷತೆ. ಜಮೀನಿನ ಸುತ್ತಲೂ ಅರಣ್ಯ ಸಸ್ಯಗಳನ್ನು ಬೆಳೆಸಿದ್ದಾರೆ. ಬದುಗಳಲ್ಲಿ ಅಡಿಕೆ, ತೆಂಗು, ಯಾಲಕ್ಕಿ ಗಿಡಗಳು ಸ್ಥಾನಪಡೆದುಕೊಂಡಿವೆ. ನೀರು ಹರಿದು ಹೋಗುವ ಕಾಲುವೆಯಲ್ಲಿ ಬಾಳೆ, ಶ್ರೀಗಂಧ ಗಿಡಗಳನ್ನು ಬೆಳೆಸಿದ್ದಾರೆ. ತೇಗ, ಸಿಲ್ವರ್, ಹೆಬ್ಬೇವು, ರಕ್ತಚಂದನ, ಅತ್ತಿ, ಆಲ, ಬಿಲ್ವವೃಕ್ಷ, ರುದ್ರಾಕ್ಷಿ, ನಾಗಲಿಂಗ ಪುಷ್ಪ, ಅಶೋಕ ವೃಕ್ಷ, ನೇರಳೆ, ನೆಲ್ಲಿ, ನೆಲ ನೆಲ್ಲಿ, ಹುಣಸೆ, ಬಿದಿರು, ಕಾಡು ಬಾದಾಮಿ ಮುಂತಾದ ಗಿಡ ವೈವಿಧ್ಯತೆ ಇಲ್ಲಿದೆ. ಲವಂಗ,ಚಕ್ಕೆ, ದಾಲಿcನಿ, ಯಾಲಕ್ಕಿ, ಕಾಳು ಮೆಣಸು ಗಿಡಗಳೊಂದಿಗೆ ಮಾವು, ಬಾಳೆ, ಹಲಸು, ರಾಮಫಲ, ಸೀತಾಫಲ, ಲಕ್ಷ್ಮಣ ಫಲ, ಚಿಕ್ಕು, ವಾಟರ್ ಆಪಲ್, ಸಣ್ಣ ಪೇರಳೆ,ಮಲೇಶಿಯನ್ ಗ್ರೀನ್ ಆಪಲ್, ಸ್ಟಾರ್ ಫೂ›ಟ್, ಖರ್ಜುರ, ಸಿಂಗಾಪೂರ ಚೆರ್ರಿ, ಗಜ ನಿಂಬೆ, ಅಂಜೂರ, ಪಪ್ಪಾಯ ಮುಂತಾದ ಹಣ್ಣಿನ ಸಸ್ಯಗಳನ್ನು ಬೆಳೆಸಿದ್ದಾರೆ.
ದಾಳಿಂಬೆ ಕೃಷಿ : ಇವರ ಮುಖ್ಯ ಆದಾಯದ ಬೆಳೆ ದಾಳಿಂಬೆ. 1200 ಗಿಡ ನಾಟಿ ಮಾಡಿದ್ದಾರೆ. ಗಿಡಗಳು ಚಿಕ್ಕದಿರುವಾಗ ಅಂತರ್ ಬೇಸಾಯವಾಗಿ ಜೋಳ, ತೊಗರಿ ಬೆಳೆದು ಆದಾಯ ಗಳಿಸಿದ್ದರು.ದಾಳಿಂಬೆ ಗಿಡಗಳಿಗೆ ತಿಂಗಳಿಗೊಮ್ಮೆ ಪ್ರತೀ ಗಿಡಕ್ಕೆ ಅರ್ಧ ಲೀಟರ್ ಜೀವಾಮೃತ ಹಾಕುತ್ತಾರೆ. ಗಿಡಗಳು ಇಳುವರಿ ನೀಡುತ್ತಿವೆ. ಈಗಾಗಲೆ ಒಂದು ಹಂತದ ಕಟಾವು ಮುಗಿಸಿ8.50 ಟನ್ ಫಸಲು ಪಡೆದು 16,0000 ಆದಾಯ ಗಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.