‘ಅಮೃತಸರದಲ್ಲಿ ಬೆಳಗಿನ ಉಪಹಾರ, ಪಾಕಿಸ್ಥಾನದಲ್ಲಿ ಮಧ್ಯಾಹ್ನದ ಊಟ, ಅಫ್ಘಾನಿಸ್ಥಾನದಲ್ಲಿ ಸಂಜೆಯ ಭೋಜನ ನಡೆಯುವಂತಾಗಬೇಕು’ ಎಂದು ೮ ವರ್ಷಗಳ ಹಿಂದೆ, ಅಂದರೆ 2007 ರ ಜ. 8 ರಂದು ನಡೆದ ಭಾರತೀಯ ವಾಣಿಜ್ಯ ಮತ್ತು ಒಕ್ಕೂಟದ ಸಭೆಯಲ್ಲಿ ಆಗಿನ ಪ್ರಧಾನಿ ಡಾ.ಮನಮೋಹನಸಿಂಗ್ ಹೇಳಿದ್ದರು. ಭಾರತ ಮತ್ತು ಪಾಕಿಸ್ಥಾನ ನಡುವೆ ಶಾಂತಿಯುತ ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಡಾ.ಸಿಂಗ್ ಹೇಳಿದ್ದ ಮಾತು ಅದಾಗಿತ್ತು. ಇದು ನನ್ನ ಕನಸು ಕೂಡ ಹೌದು ಎಂದು ಡಾ. ಸಿಂಗ್ ಆಗ ಹೇಳಿದ್ದರು. ಅವರು ಪ್ರಧಾನಿಯಾಗಿದ್ದಾಗ ಈ ಕನಸು ನನಸಾಗಲೇ ಇಲ್ಲ. ಅಷ್ಟೇಕೆ, 10 ವರ್ಷಗಳ ಕಾಲ ಪ್ರಧಾನಿಯಾಗಿದ್ದರೂ ಅವರಿಗೆ ನೆರೆಯ ಪಾಕಿಸ್ಥಾನಕ್ಕೆ ಒಮ್ಮೆ ಕೂಡ ಅಧಿಕೃತ ಭೇಟಿ ನೀಡಲಾಗಲಿಲ್ಲ. ತಮಾಷೆಯೆಂದರೆ, ಡಾ.ಮನಮೋಹನ್ಸಿಂಗ್ ಹುಟ್ಟಿದ್ದು ಪಾಕಿಸ್ಥಾನದಲ್ಲೇ!
ಸಿಂಗ್ ಅವರ 8 ವರ್ಷಗಳ ಹಿಂದಿನ ಆ ಹೇಳಿಕೆಯಲ್ಲಿ ಮೋದಿ ಕೊಂಚ ಬದಲಾವಣೆ ಮಾಡಿದ್ದಾರೆ. ಕಾಬೂಲ್ನಲ್ಲಿ ಬೆಳಗಿನ ಉಪಾಹಾರ ಸೇವಿಸಿದ ಮೋದಿ ಸಂಜೆಯ ಭೋಜನವನ್ನು ಪಾಕಿಸ್ಥಾನದಲ್ಲಿ ಅಲ್ಲಿನ ಪ್ರಧಾನಿ ನವಾಜ್ ಷರೀಫ್ ಜೊತೆ ಉಂಡು, ರಾತ್ರಿ ಊಟಕ್ಕೆ ದಿಲ್ಲಿಗೆ ಮರಳಿದ್ದಾರೆ. ಒಂದು ರೀತಿಯಲ್ಲಿ ಮನಮೋಹನ್ ಸಿಂಗ್ ಅವರ ಕನಸನ್ನು ನನಸು ಮಾಡಿದ್ದಾರೆ!
ಮೋದಿ ಪಾಕಿಸ್ಥಾನಕ್ಕೆ ಹೀಗೆ ದಿಢೀರ್ ಭೇಟಿ ನೀಡಿದ್ದು ಹಲವರಿಗೆ ಕುತೂಹಲ ಮೂಡಿಸಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಆಘಾತವನ್ನೇ ಉಂಟುಮಾಡಿದೆ. ಪೂರ್ವ ನಿರ್ಧರಿತವಲ್ಲದ ಇಂತಹ ಭೇಟಿಯಿಂದ ಏನು ಪ್ರಯೋಜನ? ಇದೊಂದು ದುಸ್ಸಾಹಸ. ದೇಶದ ಭದ್ರತೆ ಮೇಲೆ ಮೋದಿಯ ಈ ಪ್ರಯತ್ನ ಗಂಭೀರ ಪರಿಣಾಮ ಬೀರಲಿದೆ. ಇದೊಂದು ಉದ್ದಿಮೆಯ ಹಿತಾಸಕ್ತಿಯ ಭೇಟಿಯೇ ಹೊರತು, ರಾಷ್ಟ್ರೀಯ ಹಿತಾಸಕ್ತಿಯ ಭೇಟಿಯಲ್ಲ… ಹೀಗೆ ತಲೆಗೊಂದರಂತೆ ಕಾಂಗ್ರೆಸ್ ಮುಖಂಡರು ಟೀಕೆಯ ಪ್ರವಾಹವನ್ನೇ ಹರಿಸಿದ್ದಾರೆ. ಕಟ್ಟರ್ ಶತ್ರು ರಾಷ್ಟ್ರವಾಗಿರುವ ಪಾಕಿಸ್ಥಾನಕ್ಕೆ ಕಟ್ಟರ್ ಬಲಪಂಥೀಯ ಪಕ್ಷಕ್ಕೆ ಸೇರಿದ ಪ್ರಧಾನಿಯೊಬ್ಬರು ದಿಢೀರ್ ಭೇಟಿ ನೀಡಿದ್ದನ್ನು ಕಾಂಗ್ರೆಸ್ ಪಕ್ಷದ ಮುಖಂಡರು ನಿಜವಾಗಲೂ ಸ್ವಾಗತಿಸಬೇಕಿತ್ತು. ಅವರ ಪಕ್ಷದ ಹಿಂದಿನ ಪ್ರಧಾನಿ ಡಾ.ಸಿಂಗ್ಗೆ ಸಾಧ್ಯವಾಗದುದನ್ನು ಬಿಜೆಪಿಯ ಪ್ರಧಾನಿ ಮೋದಿ ಮಾಡಿದಾಗ ಅದನ್ನು ಶ್ಲಾಘಿಸಬೇಕಿತ್ತೇ ಹೊರತು ಈ ರೀತಿಯ ಟೀಕೆಗಳ ವಾಗ್ಬಾಣ ಬಿಡುವುದಲ್ಲ. ಪ್ರಧಾನಿ ಮೋದಿ ದೇಶದ ಜನತೆ, ವಿರೋಧಪಕ್ಷ ಹಾಗೂ ಸಂಸತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಹೀಗೆ ಮಾಡಬಾರದಿತ್ತು ಎಂಬ ಕಾಂಗ್ರೆಸ್ ಪಕ್ಷದ ಟೀಕೆಯನ್ನು ಕೇಳಿದರೆ ಅಳಬೇಕೋ, ನಗಬೇಕೋ ಗೊತ್ತಾಗುತ್ತಿಲ್ಲ. ಯಾವುದೇ ರಾಜತಾಂತ್ರಿಕ ನಡೆಯನ್ನು ಇಡುವ ಮುನ್ನ ದೇಶದ ಜನತೆ, ವಿರೋಧಪಕ್ಷ ಹಾಗೂ ಸಂಸತ್ತಿನ ಗಮನಕ್ಕೆ ತಂದೇ ಮಾಡಬೇಕೆಂಬ ನಿಯಮವೇನಿಲ್ಲ. ಹಾಗೆ ಮಾಡುವ ಅಗತ್ಯವೂ ಇಲ್ಲ. ಹಲವು ಸಲ ರಾಜತಾಂತ್ರಿಕವಾಗಿ ಕೆಲವು ದಿಢೀರ್ ನಿರ್ಧಾರಗಳನ್ನು ಕೈಗೊಳ್ಳಬೇಕಾಗುತ್ತದೆ. ಪೂರ್ವನಿರ್ಧಾರವಾಗಿರುವುದಿಲ್ಲ. ಅದರ ಪರಿಣಾಮಗಳು ಏನಾಗಬಹುದು ಎಂಬುದನ್ನು ಮುಂದೆ ಕಾದು ನೋಡಬೇಕು. ಮೋದಿ ಆಫ್ಘನ್ ಪ್ರವಾಸ ಮುಗಿಸಿ ನೇರವಾಗಿ ಭಾರತಕ್ಕೆ ವಾಪಸ್ಸಾಗಬೇಕಿದ್ದ ಸಂದರ್ಭದಲ್ಲಿ, ದಿಢೀರನೆ ತಮ್ಮ ಯೋಜನೆ ಬದಲಿಸಿ ಪಾಕಿಸ್ಥಾನಕ್ಕೆ ತೆರಳುವ ಮೂಲಕ ಉಭಯ ದೇಶಗಳನ್ನೂ ಬೆರಗುಗೊಳಿಸಿದ್ದಾರೆ. ಉಭಯ ದೇಶಗಳ ಬಾಂಧವ್ಯ ವೃದ್ಧಿಯಲ್ಲಿ ಅವರ ಈ ನಡೆ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿರುದಂತೂ ನಿಜ.
ಒಂದು ದೇಶದ ಪ್ರಧಾನಿಯಾದವರು ಇನ್ನೊಂದು ದೇಶಕ್ಕೆ ಹೀಗೆ ದಿಢೀರನೆ ಭೇಟಿ ನೀಡಬಹುದೇ? ಭೇಟಿಗೆ ಮುನ್ನ ಅವರ ಬರುವಿಕೆ ಬಗ್ಗೆ ಅಧಿಕೃತ ಮಾಹಿತಿ ನೀಡಬೇಡವೇ? ರಾಜತಾಂತ್ರಿಕ ಮಟ್ಟದಲ್ಲಿ ಭೇಟಿ ಕಾರ್ಯಕ್ರಮ ನಿಗದಿಯಾಗಬೇಡವೇ? ಹೀಗೆ ಶತ್ರು ರಾಷ್ಟ್ರವೊಂದಕ್ಕೆ ದಿಢೀರನೆ ಭೇಟಿ ನೀಡುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತಾಗದೇ? ಪಾಕ್ನಲ್ಲಿರುವ ಉಗ್ರರೇನಾದರೂ ಮೋದಿ ಭೇಟಿಯ ವೇಳೆ ಅವರಿಗೆ ಪ್ರಾಣಹಾನಿ ಎಸಗುವ ಕೃತ್ಯವೆಸಗಿದ್ದರೆ ಅದಕ್ಕೆ ಯಾರು ಹೊಣೆಗಾರರಾಗುತ್ತಿದ್ದರು… ಹೀಗೆ ಇಂತಹ ಹಲವು ಪ್ರಶ್ನೆಗಳು ಮೋದಿ ಭೇಟಿಯ ಬಳಿಕ ಚರ್ಚೆಗೆ ಗ್ರಾಸವಾಗುತ್ತಿವೆ. ಇಂತಹ ಚರ್ಚೆಗಳಲ್ಲಿ ಒಂದಿಷ್ಟು ಹುರುಳು ಕೂಡ ಇದೆ. ಮೋದಿ ಪಾಕಿಸ್ಥಾನಕ್ಕೆ ದಿಢೀರ್ ಭೇಟಿ ನೀಡಿದಾಗ, ಲಾಹೋರ್ ನಗರದಾದ್ಯಂತ ಹೈ ಅಲರ್ಟ್ ಘೋಷಿಸಲಾಗಿತ್ತು. ಇಡೀ ನಗರವನ್ನು ಸೇನೆಯ ಸುಪರ್ದಿಗೆ ವಹಿಸಲಾಗಿತ್ತು. ಉಗ್ರರು ಈ ಸಂದರ್ಭದ ಲಾಭ ಪಡೆದುಕೊಳ್ಳದಂತೆ ಎಲ್ಲ ಬಗೆಯ ಎಚ್ಚರಿಕೆಯನ್ನು ಅಲ್ಲಿನ ಸೈನ್ಯ ವಹಿಸಿತ್ತು. ಹಾಗಾಗಿ ಮೋದಿ ಪಾಕಿಸ್ಥಾನದಲ್ಲಿದ್ದ ಸುಮಾರು 2 ಗಂಟೆ ಕಾಲ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಬಹುಶಃ ಮೋದಿಯ ಪಾಕ್ ಭೇಟಿ ಅಧಿಕೃತವಾಗಿದ್ದಿದ್ದರೆ, ಮೊದಲೇ ನಿಗದಿಯಾಗಿದ್ದಿದ್ದರೆ ಅಲ್ಲಿ ಭಾರತ ವಿರೋಧಿಗಳಿಂದ ಕಪ್ಪು ಬಾವುಟ ಪ್ರದರ್ಶನ, ಉಗ್ರರ ಅಟ್ಟಹಾಸದ ಪ್ರತೀಕವಾದ ಮಿಂಚಿನ ಕ್ಷಿಪಣಿ ದಾಳಿ ಇತ್ಯಾದಿ ಅಪಸವ್ಯಗಳು ಜರುಗುವ ಸಾಧ್ಯತೆ ಇರುತ್ತಿತ್ತು. ಆದರೆ ದಿಢೀರ್, ನಿಗದಿಯಾಗದ ಈ ಭೇಟಿಯಿಂದಾಗಿ ಅಂತಹ ಅಪಸವ್ಯಗಳಿಗೆ ಅವಕಾಶವೇ ಇರಲಿಲ್ಲ.
ಸ್ವಾತಂತ್ರ್ಯಾನಂತರ ಪಾಕಿಸ್ಥಾನಕ್ಕೆ ಭೇಟಿ ನೀಡಿದ ಭಾರತದ ಪ್ರಧಾನಿಗಳು ಮೂವರು ಮಾತ್ರ. ಒಬ್ಬರು ನೆಹರು, ನಂತರ ರಾಜೀವ್ಗಾಂಧಿ ಹಾಗೂ ಕೊನೆಯದಾಗಿ ವಾಜಪೇಯಿ. ಈ ಮೂವರು ಎರಡೆರಡು ಸಲ ಭೇಟಿ ನೀಡಿದ್ದರು. ಈಗ ಮೋದಿ ನಾಲ್ಕನೆಯವರು. ಮುಂದಿನ ವರ್ಷ ಸಾರ್ಕ್ ಸಮ್ಮೇಳನಕ್ಕೆ ಮತ್ತೆ ಮೋದಿ ಪಾಕಿಸ್ಥಾನಕ್ಕೆ ಹೋಗುವವರಿದ್ದಾರೆ. ಕಳೆದ ವರ್ಷ ಮೋದಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ಪಾಕ್ ಪ್ರಧಾನಿ ನವಾಜ್ ಷರೀಫ್ಗೆ ಆಹ್ವಾನ ನೀಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಷರೀಫ್ ಕೂಡ ಸಮಾರಂಭಕ್ಕೆ ಬಂದು ಶುಭ ಹಾರೈಸಿದ್ದರು. 26/11 ರ ದಾಳಿಕೋರರ ಮೇಲೆ ಪಾಕಿಸ್ಥಾನ ಕ್ರಮ ಕೈಗೊಳ್ಳವವರೆಗೂ ಆ ದೇಶದ ಜೊತೆ ಮಾತುಕತೆ ಇಲ್ಲ ಎಂಬ ಹಿಂದಿನ ಯುಪಿಎ ಸರ್ಕಾರದ ನಿರ್ಧಾರದ ಹೊರತಾಗಿಯೂ ಪಾಕಿಸ್ಥಾನದ ಜೊತೆಗೆ ಮೋದಿ ಸರ್ಕಾರ ಶಾಂತಿಯುತ ಸಂಬಂಧ ಹೊಂದಲು ಬಯಸುತ್ತದೆ ಎಂಬ ಸಂದೇಶ ಆಗ ರವಾನೆಯಾಗಿತ್ತು. ಆದರೆ ಈ ಸ್ನೇಹಮಯ ವಾತಾವರಣ ಹೆಚ್ಚು ಸಮಯ ಉಳಿಯಲಿಲ್ಲ ಎಂಬುದು ವಾಸ್ತವ. ಪಾಕಿಸ್ಥಾನದ ಜೊತೆ ಆರಂಭವಾದ ಮಾತುಕತೆಯನ್ನು ಕೇಂದ್ರ ಸರ್ಕಾರ ದಿಢೀರ್ ಸ್ಥಗಿತಗೊಳಿಸಿತ್ತು. 2 ತಿಂಗಳ ನಂತರ ಮತ್ತೆ ಮಾತುಕತೆ ಆರಂಭವಾಗಿ, ರಾಷ್ಟ್ರೀಯ ಭದ್ರತಾ ಸಲಹೆಗಾರರ ಹಾಗೂ ವಿದೇಶಾಂಗ ಸಚಿವರ ಮಟ್ಟದವರೆಗೂ ಮಾತುಕತೆ ಮುಂದುವರೆಯಿತು. ಈಗ ಖುದ್ದು ಪ್ರಧಾನಿಯೇ ಪಾಕಿಸ್ಥಾನಕ್ಕೆ ಹೋಗಿದ್ದಾರೆ. ಪಾಕ್ ಜೊತೆ ಹೊಸ ಸ್ನೇಹ ಚಿಗುರಲಾರಂಭಿಸಿದೆ ಎಂದು ಮಾಧ್ಯಮಗಳು ಬಣ್ಣಿಸಿವೆ. ಭಾರತದ ಜೊತೆಗಿನ ಸಂಬಂಧವನ್ನು ಹಾಳು ಮಾಡುವಂತಹ ಹೇಳಿಕೆಗಳನ್ನು ನೀಡಬಾರದು ಎಂದು ನವಾಜ್ ಷರೀಫ್ ಅವರು ಕಳೆದ ವಾರವಷ್ಟೇ ತಮ್ಮ ಸಚಿವರಿಗೆ ಸೂಚನೆ ನೀಡಿದ್ದರು. ಪಾಕಿಸ್ಥಾನದ ಪ್ರಧಾನಿಯೊಬ್ಬರು ಹೀಗೆ ಬಹಿರಂಗವಾಗಿ ಕಠಿಣ ನಿಲುವು ತೋರಿದ್ದು ಇದೇ ಮೊದಲು. ಇವೆಲ್ಲವೂ ಎರಡೂ ರಾಷ್ಟ್ರಗಳ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆ.
ಈ ಸ್ನೇಹಪೂರ್ಣ ಭೇಟಿ ಒಂದು ದೃಷ್ಟಿಯಿಂದ ಒಳ್ಳೆಯದೇ. ಆದರೆ ಇದರ ಇನ್ನೊಂದು ಆಯಾಮದ ಬಗ್ಗೆಯೂ ಗಂಭೀರವಾಗಿ ಯೋಚಿಸಬೇಕಾಗಿದೆ. ಭಾರತ – ಪಾಕಿಸ್ಥಾನದ ನಡುವೆ ಸ್ನೇಹ ಮೂಡುವ ವಾತಾವರಣ ಸೃಷ್ಟಿಯಾಗುತ್ತಿದ್ದಂತೆ ಮೊದಲು ಮೇಲೇಳುವುದು ಭಯೋತ್ಪಾದಕರು. ಕಾಶ್ಮೀರದ ಗಡಿಯಲ್ಲಿ, ಭಾರತದ ಆಯಕಟ್ಟಿನ ಜಾಗಗಳಲ್ಲಿ ಉಗ್ರರ ಕಿತಾಪತಿ ತಕ್ಷಣ ಕಿಡಿಹೊತ್ತಿಕೊಳ್ಳುವ ಸಂಭವವೇ ಹೆಚ್ಚು. ಭಾರತ-ಪಾಕ್ ಸ್ನೇಹದ ವಾತಾವರಣಕ್ಕೆ ಮೊದಲು ಹುಳಿ ಹಿಂಡುವವರೇ ಈ ಉಗ್ರರು. ಏಕೆಂದರೆ ಭಾರತ ಹಾಗೂ ಪಾಕಿಸ್ಥಾನದ ನಡುವೆ ಬಾಂಧವ್ಯದ ಬೆಸುಗೆಯಾದರೆ ಈ ಉಗ್ರರಿಗೆ ನಷ್ಟವೇ ಹೆಚ್ಚು. ಅವರಿಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು, ಭಯೋತ್ಪಾದನೆ ಮುಂದುವರೆಸಲು ಅವಕಾಶದ ಬಾಗಿಲುಗಳೆಲ್ಲಾ ಮುಚ್ಚಿಹೋದಂತಾಗುತ್ತದೆ.
ಪಾಕಿಸ್ಥಾನ ಈ ಬಾರಿ ಮಾತ್ರ ಉಗ್ರರ ಇಂತಹ ಪ್ರಯತ್ನಕ್ಕೆ ಅವಕಾಶ ನೀಡಬಾರದು. ಪಾಕಿಸ್ಥಾನ ಉಗ್ರರ ಅಡಗುದಾಣ ಎನ್ನುವುದು ಇಡೀ ಜಗತ್ತಿಗೇ ಗೊತ್ತು. ಭಾರತದಾದ್ಯಂತ ಸರಣಿ ಬಾಂಬ್ ಸ್ಫೋಟ ಕೃತ್ಯ ನಡೆಸಿದ, ಈಗಲೂ ಅಂತಹ ಕೃತ್ಯಗಳಿಗೆ ಸ್ಕೆಚ್ ಹಾಕುವ ದಾವುದ್ ಇಬ್ರಾಹಿಂ ಅಡಗಿರುವುದು ಪಾಕಿಸ್ಥಾನದಲ್ಲೇ. ಅಮೆರಿಕಾದ ಅವಳಿ ಕಟ್ಟಡಗಳನ್ನು ನಾಶಗೊಳಿಸಿದ ಬಿನ್ ಲಾಡೆನ್ ಅಡಗಿದ್ದೂ ಕೂಡ ಪಾಕ್ ನೆಲದಲ್ಲೇ. ಇನ್ನುಳಿದ ಪರಮ ಪಾತಕಿ ಉಗ್ರರ ಮುಖಂಡರು ಕೂಡ ಈಗ ಅಡಗಿರುವುದು ಅದೇ ಪಾಕಿಸ್ಥಾನದಲ್ಲಿ. ಪಾಕ್ನಲ್ಲಿ ಅಡಗಿದ್ದ ಬಿನ್ ಲಾಡನ್ನನ್ನು ಅಮೆರಿಕಾ ನೇರ ದಾಳಿ ನಡೆಸಿ ಆತನನ್ನು ಮುಗಿಸಿದೆ. ದಾವುದ್ ಇಬ್ರಾಹಿಂನನ್ನು ತನ್ನ ವಶಕ್ಕೆ ನೀಡಬೇಕೆಂದು ಭಾರತ ಪಾಕಿಸ್ಥಾನಕ್ಕೆ ಪದೇಪದೇ ಆಗ್ರಹಿಸಿದೆ. ಆದರೆ ಪಾಕಿಸ್ಥಾನ ಮಾತ್ರ ದಾವುದ್ ಈ ದೇಶದಲ್ಲಿಲ್ಲ ಎಂದು ಸುಳ್ಳು ಹೇಳುತ್ತಲೇ ಬಂದಿದೆ. ಈಗಲಾದರೂ ಅದು ಹೀಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ, ಭಾರತಕ್ಕೆ ದಾವುದ್ನನ್ನು ಹಿಡಿದು ಕೊಟ್ಟರೆ, ಮೋದಿ ಪಾಕಿಸ್ಥಾನಕ್ಕೆ ದಿಢೀರ್ ಭೇಟಿ ನೀಡಿದ್ದು ಸಾರ್ಥಕವಾಗುತ್ತದೆ. ನವಾಜ್ ಷರೀಫ್ ಮೊಮ್ಮಗಳಿಗೆ ಮುಖತಃ ಶುಭಾಶಯ ಹೇಳಿದ್ದಕ್ಕೊಂದು ಅರ್ಥವಿರುತ್ತದೆ.
ಪಾಕಿಸ್ಥಾನದೊಂದಿಗೆ ಸ್ನೇಹದ ಹಸ್ತ ಚಾಚಲು ಮೊದಲು ಮುಂದಾಗಿದ್ದು ಭಾರತವೇ ಎಂಬ ಸಂದೇಶ ಈ ಭೇಟಿಯಿಂದ ಇಡೀ ಜಗತ್ತಿಗೆ ರವಾನೆಯಾಗಿದೆ. ಉಭಯ ದೇಶಗಳ ಮಧುರ ಬಾಂಧವ್ಯಕ್ಕೆ ಈ ದಿಢೀರ್ ಭೇಟಿ ಮುನ್ನುಡಿ ಬರೆದಿದೆ. ಭಾರತದ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಹಾಗೂ ಮತ್ತಿತರ ಬಿಜೆಪಿಯೇತರ ಪಕ್ಷಗಳು ಈ ಭೇಟಿಯ ಬಗ್ಗೆ ಏನಾದರೂ ಒದರಿಕೊಳ್ಳಲಿ, ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಏಕೆಂದರೆ ಮೋದಿ ಏನು ಮಾಡಿದರೂ ಅದನ್ನು ಟೀಕಿಸುವುದೇ ಕಾಂಗ್ರೆಸ್ ಮುಖಂಡರ ಜಾಯಮಾನ. ಅದು ಬಿಟ್ಟು ಅವರಿಗೆ ಬೇರೆ ಏನೂ ಗೊತ್ತಿಲ್ಲ. ಹಿಂದೆ ಬಾಂಗ್ಲಾ ದೇಶವನ್ನು ಆಗಿನ ಪ್ರಧಾನಿ ಇಂದಿರಾಗಾಂಧಿ ಸ್ವತಂತ್ರಗೊಳಿಸುವಲ್ಲಿ ಯಶಸ್ವಿಯಾದಾಗ, ವಿರೋಧ ಪಕ್ಷದ ನಾಯಕರಾಗಿದ್ದ ವಾಜಪೇಯಿ ಇಂದಿರಾ ಅವರನ್ನು ‘ದುರ್ಗೆ’ ಎಂದು ಮುಕ್ತ ಕಂಠದಿಂದ ಶ್ಲಾಘಿಸಿದ್ದರು. ಅಂತಹ ವಿವೇಚನೆ, ಮುತ್ಸದ್ದಿತನ, ರಾಜಕೀಯ ಜಾಣ್ಮೆ ವಾಜಪೇಯಿ ಅವರದ್ದಾಗಿತ್ತು. ಆದರೆ ಕಾಂಗ್ರೆಸ್ ಮುಖಂಡರಿಗೆ ಅಂತಹ ಮುತ್ಸದ್ದಿತನವಾಗಲೀ, ರಾಜಕೀಯ ಜಾಣ್ಮೆಯಾಗಲೀ ಎಲ್ಲಿಂದ ಬರಬೇಕು?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.