ಸುಳ್ಯ: ಸುಳ್ಯ ನಗರದಲ್ಲಿ ಮತ್ತೆ ಜಾಂಡೀಸ್(ಕಾಮಾಲೆ) ಕಾಯಿಲೆಯ ಮಾರಿ ಅಪ್ಪಳಿಸಿದೆ. ಸುಳ್ಯ ನಗರದ ಕೆಲವು ಭಾಗದಲ್ಲಿ ಹಲವು ದಿನಗಳಿಂದ ವ್ಯಾಪಕವಾಗಿ ಜಾಂಡೀಸ್ ಬಾಧೆ ಕಂಡು ಬಂದಿದೆ.
ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಮಂದಿ ಜಾಂಡೀಸ್ ಬಾಧೆಯಿಂದ ಬಳಲಿ ಚಿಕಿತ್ಸೆ ಪಡೆದಿದ್ದಾರೆ. ಸುಳ್ಯದಲ್ಲಿ ಹಿಂದೆಯೂ ಕೆಲ ವರ್ಷಗಳಲ್ಲಿ ಬೇಸಿಗೆಯಲ್ಲಿ ಜಾಂಡೀಸ್ ರೋಗ ಕಂಡು ಬಂದಿತ್ತು. ಈ ವರ್ಷ ಜಾಂಡೀಸ್ ರೋಗ ನಗರದ ಕೆಲ ಭಾಗದಲ್ಲಿ ವ್ಯಾಪಕವಾಗಿದ್ದು ಕಳೆದ 15 ದಿನಗಳಿಗಿಂತಲೂ ಹೆಚ್ಚು ಸಮಯದಿಂದ ಜಾಂಡೀಸ್ ರೋಗದ ಲಕ್ಷಣಗಳು ಕಂಡು ಬಂದಿದ್ದು ಹಲವು ಮಂದಿಗೆ ಬಾಧಿಸಿದೆ.
ಕುಡಿಯುವ ನೀರು ಕಲುಷಿತಗೊಂಡಿರುವುದರಿಂದ ಕಾಮಾಲೆ ರೋಗ ಹರಡಲು ಕಾರಣವಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. ಚೆನ್ನಾಗಿ ಕುದಿಸಿ ಆರಿಸಿದ ನೀರನ್ನೇ ಕುಡಿಯುವುದರಿಂದ ಮತ್ತು ಆಹಾರ ತಯಾರಿಕೆಗೆ ಶುದ್ಧವಾದ ನೀರನ್ನೇ ಬಳಸುವುದರಿದ ಜಾಂಡೀಸ್ ಬರುವುದನ್ನು ತಡೆಗಟ್ಟಬಹುದು. ರೋಗ ಬಾಧಿಸಿದವರು ವೈದ್ಯರ ಸಲಹೆಯನ್ನು ಪಾಲಿಸಿ ಚೆನ್ನಾಗಿ ವಿಶ್ರಾಂತಿ ಪಡೆದರೆ ರೋಗ ನಿಯಂತ್ರಣ ಮಾಡಬಹುದು. ತೆರೆದಿಟ್ಟ ಆಹಾರ ಮತ್ತು ಕುದಿಸದ ನೀರನ್ನು ಸೇವಿಸಬಾರದು ಎಂದು ತಾಲೂಕು ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ತಿಳಿಸಿದ್ದಾರೆ.
ಜಾಂಡೀಸ್ ಬಾಧೆ ಕಂಡು ಬಂದಿರುವ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ನಗರ ಪಂಚಾಯತ್ ರೋಗ ತಡೆಗೆ ಕ್ರಮಕ್ಕೆ ಮುಂದಾಗಿದೆ. ಶುಕ್ರವಾರ ವಿಶೇಷ ಸಭೆ ನಡೆಸಿದ ನಗರ ಪಂಚಾಯತ್ ಆಡಳಿತ, ನಗರದಲ್ಲಿ ಲೈಸೆನ್ಸ್ ಇಲ್ಲದೆ ಕಾರ್ಯಾಚರಿಸುವ ಮತ್ತು ಶುಚಿತ್ವವನ್ನು ಕಾಪಾಡದ ಬೀದಿ ಬದಿಯ ಸಣ್ಣ ಅಂಗಡಿಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ. ಅಲ್ಲದೆ ಹೋಟೆಲ್, ಬಾರ್ ಮತ್ತು ರೆಸ್ಟಾರೆಂಟ್, ಹಾಸ್ಟೆಲ್ ಮತ್ತಿತರ ಕಡೆಗಳಲ್ಲಿ ಶುದ್ಧ ಮತ್ತು ಕುದಿಸಿ ಆರಿಸಿದ ನೀರನ್ನೇ ಕುಡಿಯಲು ಮತ್ತು ಆಹಾರ ತಯಾರಿಕೆಗೆ ಬಳಸುವಂತೆ ಸೂಚಿಸಲು ನಿರ್ಧರಿಸಲಾಗಿದೆ. ಪಯಸ್ವಿನಿ ನದಿ ಕಲುಷಿತಗೊಳ್ಳುವುದರಿಂದಲೂ ಜಾಂಡೀಸ್ ಹರಡಲು ಕಾರಣವಾಗುತ್ತಿದೆ ಎಂದು ಹೇಳಲಾಗಿದ್ದು ನದಿಯ ನೀರು ಮಲಿನಗೊಳ್ಳದಂತೆ ಕ್ರಮ ಕಯಗೊಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ನಗರ ಪಂಚಾಯತ್ ಅಧ್ಯಕ್ಷ ಎನ್.ಎ.ರಾಮಚಂದ್ರ, ಉಪಾಧ್ಯಕ್ಷೆ ಮೀನಾಕ್ಷಿ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್ ಹೆಗ್ಡೆ, ಸದಸ್ಯರಾದ ಕೆ.ಎಂ.ಮುಸ್ತಫಾ, ಕೆ.ಗೋಕುಲ್ದಾಸ್, ಗಿರೀಶ್ ಕಲ್ಲುಗದ್ದೆ, ಕಿರಣ್ ಕುರುಂಜಿ, ಪ್ರಮುಖರಾದ ಎಂ.ಬಿ.ಸದಾಶಿವ, ಜಯಂತ ಶೆಟ್ಟಿ, ತಾಲೂಕು ಆರೋಗ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.