News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಯಂತ ಕಾಯ್ಕಿಣಿಗೆ 2015 ನೇ ಸಾಲಿನ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ

jayanth-kaykini’ಅಕ್ಷಯ’ ಪತ್ರಿಕೆಯ ಗೌ| ಪ್ರ| ಸಂಪಾದಕರಾದ ಶ್ರೀ ಎಂ. ಬಿ. ಕುಕ್ಯಾನ್ ಅವರು ಪ್ರಾಯೋಜಿಸಿ ಬಿಲ್ಲವರ ಎಸೋಸಿಯೇಶನ್ ಸಂಯೋಜಿಸುತ್ತಿರುವ 2015 ನೇ ಸಾಲಿನ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿಗೆ ಮಂಗಳೂರಿನ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು 25000/ ರೂ. ನಗದು, ಪ್ರಶಸ್ತಿ ಫಲಕ, ಸನ್ಮಾನ ಪತ್ರಗಳನ್ನೊಳಗೊಂಡಿದೆ. ಹಿರಿಯ ಸಾಹಿತಿಗಳಾದ ವಿ.ಗ. ನಾಯಕ ಹಾಗೂ ಡಾ| ಸುನೀತಾ ಶೆಟ್ಟಿಯರನ್ನೊಳಗೊಂಡ ಸಾಹಿತ್ಯ ಪ್ರಶಸ್ತಿ ನಿರ್ಣಾಯಕ ಸಮಿತಿಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮುಂಬಯಿ ಹಾಗೂ ಅವಿಭಜಿತ ದಕ್ಷಿಣ ಕನ್ನಡಕ್ಕೆ ಮೀಸಲಾದ ಈ ಬಾರಿಯ ಪ್ರಶಸ್ತಿಯು ಸಾಹಿತ್ಯ ಹಾಗೂ ಸಿನೇಮಾ ಕ್ಷೇತ್ರದಲ್ಲಿ ಸೇವೆಯನ್ನು ಗಯ್ಯುತ್ತ ವಿಮರ್ಶಕರ ಹಾಗೂ ವಾಚಕರ ಪ್ರಶಂಸೆಯನ್ನು ಗಳಿಸಿರುವ ಜಯಂತ ಕಾಯ್ಕಿಣಿ ಅವರಿಗೆ ಸಲ್ಲುತ್ತದೆ.

ಜಯಂತ ಕಾಯ್ಕಿಣಿ, ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರು. ಮುಂಬಯಿಯಲ್ಲಿ 13 ವರ್ಷ ಬಯೊಕೆಮಿಸ್ಟ್ ಆಗಿ ದುಡಿದು, 2000 ರಿಂದೀಚೆಗೆ ಬೆಂಗಳೂರಿಗೆ ಬಂದು ‘ಫ್ರೀಲಾನ್ಸರ್’ ಆಗಿ ಬರವಣಿಗೆ ನಡೆಸಿದ್ದಾರೆ. ಇವರ ಸಾಹಿತ್ಯ, ಸಿನೇಮಾ ಸಾಧನೆ ಹೀಗಿವೆ. ಕವಿ (ರಂಗದಿಂದೊಂದಿಷ್ಟು ದೂರ, ಕೋಟಿತೀರ್ಥ, ಶ್ರಾವಣ ಮಧ್ಯಾಹ್ನ, ನೀಲಿಮಳೆ, ಒಂದು ಜಿಲೇಬಿ), ಕತೆಗಾರ (ತೆರೆದಷ್ಟೇ ಬಾಗಿಲು, ದಗಡೂ ಪರಬನ ಅಶ್ವಮೇಧ, ಅಮೃತಬಳ್ಳಿ ಕಷಾಯ. ಬಣ್ಣದ ಕಾಲು, ತೂಫಾನ್‌ಮೇಲ್, ಚಾರ್‌ಮಿನಾರ್), ನಾಟಕಕಾರ (ಸೇವಂತಿ ಪ್ರಸಂಗ, ಜತೆಗಿರುವನು ಚಂದಿರ, ಇತಿ ನಿನ್ನ ಅಮೃತಾ), ಅಂಕಣಕಾರ (ಬೊಗಸೆಯಲ್ಲಿ ಮಳೆ, ಶಬ್ದತೀರ), ಸಂಪಾದಕ (ಭಾವನಾ ಮಾಸಿಕ), ಟೆಲಿವಿಜನ್ ಸಂದರ್ಶಕ (ಕುವೆಂಪು, ಕಾರಂತ, ಬೇಂದ್ರೆ, ರಾಜಕುಮಾರ್ ಕುರಿತ ‘ಈ ಟೀವಿ’ಯ ‘ನಮಸ್ಕಾರ’ ಸರಣಿ), ಚಿತ್ರಕಥೆ- ಸಂಭಾಷಣೆಗಾರ (ದ್ವೀಪ, ಪೂರ್ವಾಪರ, ಚಿಗುರಿದ ಕನಸು, ರಮ್ಯಚೈತ್ರಕಾಲ), ಗೀತರಚನೆಕಾರ (ಮುಂಗಾರುಮಳೆ, ಮಿಲನ, ಗೆಳೆಯ, ಗಾಳಿಪಟ, ಹಾಗೆ ಸುಮ್ಮನೆ, ಮೊಗ್ಗಿನ ಮನಸು, ಇಂತಿ ನಿನ್ನ ಪ್ರೀತಿಯ, ಮನಸಾರೆ, ಜಂಗ್ಲಿ, ಬಿರುಗಾಳಿ, ಪಂಚರಂಗಿ, ಪೃಥ್ವಿ, ಕೃಷ್ಣನ್ ಲವ್ ಸ್ಟೋರಿ, ಲೈಫು ಇಷ್ಟೇನೆ, ಚಿಂಗಾರಿ, ಪರಮಾತ್ಮ, ಅಣ್ಣ ಬಾಂಡ್… ಇತ್ಯಾದಿ)

2010 ರಲ್ಲಿ ನಾಸಿಕ್ ಮುಕ್ತ ವಿದ್ಯಾಪೀಠವು ಆರಂಭಿಸಿದ, ಪ್ರತಿಷ್ಠಿತ ‘ಕುಸುಮಾಗ್ರಜ’ ರಾಷ್ಟ್ರೀಯ ಸಾಹಿತ್ಯ ಪುರಸ್ಕಾರ ಪಡೆದ ಮೊದಲ ಭಾರತೀಯ ಲೇಖಕರಾಗಿರುವ ಜಯಂತರಿಗೆ, 2011 ರಲ್ಲಿ ತುಮಕೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಮನ್ನಣೆಯನ್ನು ನೀಡಿದೆ. ನಾಲ್ಕು ಬಾರಿ ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಪ್ರಶಸ್ತಿ, ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ, ಬಿ.ಎಚ್. ಶ್ರೀಧರ ಕಥಾ ಪ್ರಶಸ್ತಿ, ದೆಹಲಿಯ ‘ಕಥಾ’ ಪುರಸ್ಕಾರ, ಕರ್ನಾಟಕ ಸರ್ಕಾರದ ಅತ್ಯುತ್ತಮ ಚಲನಚಿತ್ರ ಸಂಭಾಷಣೆಗಾರ, ಅತ್ಯುತ್ತಮ ಗೀತರಚನೆಕಾರ ಪ್ರಶಸ್ತಿಗಳ ಜತೆ ಎರಡು ಬಾರಿ ‘ಫಿಲ್ಮ್‌ಫೇರ್’ ಶ್ರೇಷ್ಠ ಗೀತರಚನೆಕಾರ ಪ್ರಶಸ್ತಿಗಳೂ ಇವರಿಗೆ ಸಂದಿವೆ. ಇವರ ಸಿನಿಮಾ ಹಾಡುಗಳ ಸಂಕಲನ ‘ಎಲ್ಲೋ ಮಳೆಯಾಗಿದೆ’ ಪ್ರಕಟಣೆಗೊಂಡಿದೆ.

ಬಿಲ್ಲವ ಭವನದಲ್ಲಿ 17-01-2016 ರಂದು ಜರಗಲಿರುವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಜಯಂತ ಕಾಯ್ಕಿಣಿಯವರಿಗೆ ಪ್ರದಾನಿಸಲಾಗುವುದು. ಈ ಸಮಾರಂಭಕ್ಕೆ ಅತಿಥಿಗಳಾಗಿ ವಿ.ಗ. ನಾಯಕ, ಡಾ| ಸುನೀತಾ ಶೆಟ್ಟಿ, ಭಾಗವಹಿಸಲಿರುವರು. ಪ್ರಶಸ್ತಿ ಪ್ರಾಯೋಜಕರಾಗಿರುವ ಹಿರಿಯ ಸಾಹಿತಿ ಶ್ರೀ ಎಂ.ಬಿ. ಕುಕ್ಯಾನ್‌ರವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಕಾರ್‍ಯಕ್ರಮವನ್ನು ಬಿಲ್ಲವ ಮಹಾಮಂಡಳದ ಅಧ್ಯಕ್ಷರಾದ ಜಯ ಸಿ. ಸುವರ್ಣರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಬಿಲ್ಲವರ ಎಸೋಸಿಯೇಶನ್‌ನ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ರವರು ವಹಿಸಲಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top