ಭೂ ಸ್ವಾಧೀನ (ತಿದ್ದುಪಡಿ) ಕಾಯ್ದೆ-2015 ಲೋಕಸಭೆಯಲ್ಲಿ ಅನಮೋದನೆಗೆ ಒಳಗಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ. ರಾಜ್ಯಸಭೆಯಲ್ಲಿ ಭಾರತೀಯ ಜನತಾ ಪಕ್ಷ ಸಹಿತ ಎನ್ಡಿಎ ಮಿತ್ರಕೂಟಕ್ಕೆ ಬಹುಮತ ಇಲ್ಲದಿರುವುದರಿಂದ ಅದು ಪಾಸಾಗಲಿಲ್ಲ. ಮುಂದಿನ ಅಧಿವೇಶನದಲ್ಲಿ ಎರಡನೇ ಬಾರಿ ಮಂಡಿಸಲು ಅದಕ್ಕೆ ರಾಷ್ಟ್ರಪತಿಯವರು ಅನುಮತಿ ನೀಡಿದ್ದಾರೆ.
ಪ್ರಶ್ನೆ ಇರುವುದು ಈ ಮಸೂದೆ ರಾಜ್ಯಸಭೆಯಲ್ಲಿಯೂ ಪಾಸಾಗಿ ಕಾಯ್ದೆಯಾಗಿ ಜಾರಿಗೆ ಬಂದರೆ ಇದರ ಮುಂದಿರುವ ಪರಿಣಾಮಗಳೇನು? ಈ ಕಾಯ್ದೆಯ ನಿಜವಾದ ಲಾಭ ಅಥವಾ ಪ್ರಯೋಜನ ಯಾರಿಗೆ ಎನ್ನುವ ಸಂಗತಿಗಿಂತ ಈ ಕಾಯ್ದೆಯಿಂದ ರೈತ ಅಥವಾ ಕೃಷಿಯನ್ನೇ ನಂಬಿ ಬದುಕುವ ರೈತಾಪಿ ವರ್ಗದವರಿಗೆ ಏನೂ ತೊಂದರೆ ಇಲ್ಲ ಎನ್ನುವುದನ್ನು ಕೇಂದ್ರ ಸರ್ಕಾರ ಜನರಿಗೆ ಮನದಟ್ಟು ಮಾಡಬೇಕು. ಗ್ರಾಮ ಗ್ರಾಮಗಳಲ್ಲೂ ಬಿಜೆಪಿಯ ಕಾರ್ಯಕರ್ತರು ಈ ಕಾಯ್ದೆ ಹೇಗೆ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗುತ್ತದೆ ಎಂದು ತಿಳಿಸಬೇಕು. ಅದಕ್ಕಾಗಿ ಜಿಲ್ಲಾ ಮಟ್ಟಗಳಲ್ಲಿ ಬಿಜೆಪಿ ನಾಯಕರು ಸಮಿತಿಗಳನ್ನು ರಚಿಸಬೇಕು. ಮಾಧ್ಯಮಗಳಲ್ಲಿ ಚರ್ಚೆಯಾಗುವಾಗ ಅದನ್ನು ಸಮರ್ಪಕವಾಗಿ ಮಂಡಿಸಬಲ್ಲ ವಕ್ತಾರರ ಪಡೆಯನ್ನು ರಚಿಸಬೇಕು. ಇದ್ಯಾವುದೂ ಮಾಡದೇ ಹೋದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಂತಹ ಉಪಯುಕ್ತ ಕಾಯ್ದೆ ಮಾಡಿ ದೇಶದ ಒಟ್ಟು ಅಭಿವೃದ್ಧಿಗಾಗಿ ಹಗಲು ರಾತ್ರಿ ಚಿಂತಿಸಿದರೂ ಅದರಿಂದ ಪ್ರಯೋಜನವಾಗಲಾರದು.
ಒಂದು ಸರ್ಕಾರದ ಯಶಸ್ಸು ಇರುವುದು ಕೇವಲ ಯೋಜನೆ ಮಾಡುವುದಲ್ಲ, ಅಥವಾ ದೂರಗಾಮಿ ಅಭಿವೃದ್ಧಿ ರೂಪುರೇಶೆ ಹಾಕುವುದಲ್ಲ. ತಾನು ಮಾಡುವ ಯೋಜನೆಗಳು ಜನರಿಗೆ ಮುಟ್ಟಿವೆಯಾ ಎಂದು ಕೂಡ ನೋಡಬೇಕು. ಸರ್ಕಾರದ ಯೋಜನೆಗಳನ್ನು ಮುಟ್ಟಿಸುವ ಜವಾಬ್ದಾರಿ ಕಾರ್ಯಕರ್ತರದ್ದು. ಆದರೆ ಭೂ ಸ್ವಾಧೀನ ಕಾಯ್ದೆಯ ಉದ್ದೇಶ ಮತ್ತು ಅಗತ್ಯವನ್ನು ಜನರಿಗೆ ಮುಟ್ಟಿಸುವಲ್ಲಿ ಬಿಜೆಪಿ ಹಿಂದೆ ಬಿದ್ದಿದೆ. ಇನ್ನೂ ಈ ಕಾಯ್ದೆಯೊಂದನ್ನೇ ಹಿಡಿದು ಪಾರ್ಲಿಮೆಂಟಿನಲ್ಲಿ ತನ್ನ ಅಸ್ತಿತ್ವವನ್ನು ಹೆಚ್ಚು ಮಾಡಲು ಕಾಂಗ್ರೆಸ್ ಸಹಿತ ಇತರ ಎನ್ಡಿಎಯೇತರ ಪಕ್ಷಗಳು ಶ್ರಮಿಸುತ್ತಿವೆ. ಯಾವಾಗಲೂ ಸರ್ಕಾರಗಳು ಒಂದು ಯೋಜನೆ ಹಾಕುವಾಗ ಅದನ್ನು ಸಹಜವಾಗಿ ವಿಪಕ್ಷಗಳು ವಿರೋಧಿಸುತ್ತವೆ. ಜನರ ಬಳಿಗೆ ಹೋಗಿ ಸರ್ಕಾರ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತದೆ, ಅಂತಹ ಸರ್ಕಾರವನ್ನು ಕೆಳಗಿಳಿಸಿ ಎಂದು ಬೊಬ್ಬೆ ಹೊಡೆಯುತ್ತದೆ. ಕಾಂಗ್ರೆಸ್ ಅದನ್ನು ಯಶಸ್ವಿಯಾಗಿ ನಡೆಸಲು ಪೂರ್ಣ ಸಿದ್ಧತೆ ನಡೆಸಿದೆ. ಯಾಕೆಂದರೆ ಕಾಂಗ್ರೆಸ್ಸಿಗೆ ವಿರೋಧಿಸುವ ಕೆಲಸ ಮಾತ್ರ ಮಾಡಲಿರುವುದು. ಯಾವುದೇ ಪಕ್ಷ ವಿಪಕ್ಷದಲ್ಲಿದಾಗ ಅದು ಸುಲಭ. ಆದರೆ ಈ ಬಾರಿ ಆಡಳಿತ ಪಕ್ಷದಲ್ಲಿರುವುದರಿಂದ ಬಿಜೆಪಿಯ ಜವಾಬ್ದಾರಿ ಹೆಚ್ಚಿರುತ್ತದೆ.
ಆದರೆ ರಾಷ್ಟ್ರೀಯ ಒಂದಿಬ್ಬರು ನಾಯಕರು ಬಿಟ್ಟರೆ ಈ ವಿಷಯದ ಬಗ್ಗೆ ಮಾತನಾಡಲು ಕೆಳಸ್ಥರದ ನಾಯಕರು ಹೆದರುತ್ತಿದ್ದಾರೆ. ಕಾರಣ ಮಸೂದೆ ರೈತರಿಗೆ ಅಥವಾ ಜನಸಾಮಾನ್ಯರಿಗೆ ವಿರೋಧವಾಗಿದೆ ಎಂದಲ್ಲ. ವಿಷಯ ಇರುವುದು ಈ ಕಾಯ್ದೆಯ ಬಗ್ಗೆ ಕಾರ್ಯಕರ್ತರ ಮಟ್ಟದಲ್ಲಿ ಯಾರೂ ಅಧ್ಯಯನ ಮಾಡಿಲ್ಲದಿರುವುದು. ಸರಿಯಾಗಿ ಅಧ್ಯಯನ ಮಾಡಿದರೆ ಭೂ ಸ್ವಾಧೀನ ಕಾಯ್ದೆ ಭೂಮಿ ಉಳ್ಳವರಿಗೆ ಹೇಗೆ ಅನುಕೂಲ, ರೈತನಿಗೆ ಹೇಗೆ ಸಹಕಾರಿಯಾಗುತ್ತದೆ, ಎಷ್ಟರಮಟ್ಟಿಗೆ ಮಾತ್ರ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳಬಹುದು ಇದೆಲ್ಲಾ ಜನರಿಗೆ ಅರ್ಥ ಮಾಡಿಕೊಡಬೇಕು. ಇನ್ನು ನಿಮ್ಮ ಭೂಮಿ ಹೋಗುತ್ತದೆ, ಸರ್ಕಾರ ನಿಮ್ಮ ಭೂಮಿ ಕಿತ್ತು ಕೊಳ್ಳುತ್ತದೆ ಎಂದು ಹೆದರಿಸಿದರೆ ರೈತ ಸುಲಭವಾಗಿ ನಂಬುತ್ತಾನೆ. ಮೊದಲೇ ಶಿವಸೇನೆಯಂತಹ ಪಕ್ಷಗಳೇ ಇದಕ್ಕೆ ವಿರೋಧ ವ್ಯಕ್ತಪಡಿಸಿರುವಾಗ ನಾವು ಒಪ್ಪಲು ಆಗುತ್ತಾ ಎನ್ನುವ ಮನಸ್ಥಿತಿಗೆ ಜನ ಬಂದಿರುತ್ತಾರೆ. ಅಷ್ಟಕ್ಕೂ ಈ ಮಸೂದೆಯನ್ನು ಒಪ್ಪವುದೋ ಬಿಡುವುದೋ ಜನರಿಗೆ ಬಿಟ್ಟದ್ದು, ಆದರೆ ಬಿಜೆಪಿ ಅದನ್ನು ಜನರಿಗೆ ಮನವರಿಕೆ ಮಾಡದೇ ಹೋದರೆ ಏನೂ ಪ್ರಯೋಜನ?
ಉದಾಹರಣೆಗೆ ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣ ಅಂದರೆ ಕಂಕನಾಡಿ ರೈಲು ನಿಲ್ದಾಣ, ವಿಶ್ವದರ್ಜೆಗೆ ಏರಿಸಲು ಕೇಂದ್ರ ತೀರ್ಮಾನಿಸಿತು. ಅದಕ್ಕಾಗಿ ರೈಲ್ವೆ ಬಜೆಟಿನಲ್ಲಿ ಹಣ ಕೂಡ ನಿಗದಿಪಡಿಸಲಾಗಿತ್ತು. ಆದರೆ ಮೇಲ್ದರ್ಜೆಗೆ ಏರಿಸಲು ರೈಲ್ವೆ ನಿಲ್ದಾಣದ ಅಕ್ಕಪಕ್ಕದಲ್ಲಿ ಭೂಮಿಯ ಅವಶ್ಯಕತೆ ಇದೆ. ಆದರೆ ಮಂಗಳೂರು ಜಂಕ್ಷನ್ ಆಸುಪಾಸಿನಲ್ಲಿ ಇರುವುದು ಅರಣ್ಯ ಇಲಾಖೆಯ ಭೂಮಿ. ಅವರು ಅದನ್ನು ಬಿಟ್ಟುಕೊಟ್ಟರು ಒಪ್ಪುತ್ತಿಲ್ಲ. ಅದರ ಪರಿಣಾಮ ಏನು? ನಮ್ಮ ಊರಿನ ರೈಲು ನಿಲ್ದಾಣ ಇನ್ನು ಎಷ್ಟು ವರ್ಷವಾದರೂ ಹಾಗೇ ಇರಬೇಕಾ? ಈಗ ಗ್ರಾಮೀಣ ಪ್ರದೇಶ ತೆಗೆದುಕೊಳ್ಳಿ. ಎಷ್ಟೋ ಜನ ತಮ್ಮ ಬರಡಾಗಿರುವ ಭೂಮಿಯಲ್ಲಿ ಅತ್ತ ಕೃಷಿಯನ್ನು ಮಾಡಲಾಗದೇ ಇತ್ತ ಸೂಕ್ತ ಬೆಲೆಯೂ ಸಿಗದೆ ಅನೇಕ ವರ್ಷಗಳಿಂದ ಹಾಗೆ ಬಿಟ್ಟಿದ್ದಾರೆ. ಅಲ್ಲಿ ಸೂಕ್ತ ಮೂಲಭೂತ ಸೌಲಭ್ಯ ಇಲ್ಲದೆ ಯಾರೂ ಕೂಡ ಅದನ್ನು ಖರೀದಿಸುವುದಿಲ್ಲ. ಅದೇ ಭೂಮಿಯನ್ನು ಮತ್ತು ಅದರ ಸುತ್ತಮುತ್ತಲಿನ ಒಂದಿಷ್ಟು ಭೂಮಿಯನ್ನು ಸರ್ಕಾರ ಒಂದಕ್ಕೆ ನಾಲ್ಕು ಪಟ್ಟು ಹಣ ನೀಡಿ ಖರೀದಿಸಿ ಅಲ್ಲಿ ಮೂಲಭೂತ ಸೌಲಭ್ಯ ಕೊಟ್ಟು, ಯವುದಾದರೂ ಪ್ಯಾಕ್ಟರಿಗೆ ಕೊಟ್ಟರೆ ಎನು ತೊಂದರೆ ಇದೆ, ಒಂದಿಷ್ಟು ಜನರಿಗೆ ಉದ್ಯೋಗವೂ ಸಿಗುತ್ತದೆ. ಊರಿನ ಅಭಿವೃದ್ಧಿಯೂ ಆಗುತ್ತದೆ, ರಾಷ್ಟ್ರದ ಆರ್ಥಿಕ ವ್ಯವಸ್ಥೆಯೂ ಸುಧಾರಿಸುತ್ತದೆ. ಕಾಯ್ದೆಯ ಪರವೋ, ವಿರುದ್ಧವೋ ಮಾತನಾಡುವುದಕ್ಕಿಂತ ಮೊದಲು ಅಧ್ಯಯನ ಮಾಡಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.