ಬೆಳ್ತಂಗಡಿ : ಭಾರತೀಯ ವೇದ-ಉಪನಿಷತ್ತುಗಳು, ರಾಮಾಯಣ, ಮಹಾಭಾರತ ಇತ್ಯಾದಿಗಳು ಎಂದಿಗೂ ಅಸಹಿಷ್ಣುತೆಗೆ ಕಾರಣವಾಗಿಲ್ಲ. ನೆಪಗಳಿಗೋಸ್ಕರ ವಿಚಾರವಾದಿಗಳೆನಿಸಿಕೊಂಡವರು ಕಿಚ್ಚನ್ನು ಹೊತ್ತಿಸುತ್ತಿದ್ದಾರೆ. ಕೆರಳಿಸುವ ಇಂತಹವರಿಗೆ ಭಗವಂತನು ಸನ್ಮತಿಯನ್ನು ನೀಡಲಿ ಎಂದು ಸಾಹಿತಿ ಡಾ| ಪ್ರಧಾನ ಗುರುದತ್ ಆಶಿಸಿದರು.ಅವರು ಗುರುವಾರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭ ನಡೆದ 83 ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.
ಭಾರತದಲ್ಲಿ ಹುಟ್ಟಿಕೊಂಡ ಸಾಹಿತ್ಯ, ಶಾಸನಗಳು ಸಹಿಷ್ಣುತೆಯನ್ನು ಬೆಳೆಸಲು ಕಾರಣವಾಗಿವೆ. ಸೆಮೆಟಿಕ್ ಮತಗಳಲ್ಲಿ, ಇಂಗ್ಲೀಷ್ ಸಾಹಿತ್ಯಗಳಲ್ಲಿ ಸಹಿಷ್ಣುತೆಯ ವಿಚಾರವೇ ಇಲ್ಲ. ರಾಮಾಯಣ, ಮಹಾಭಾರತಗಳು ನಮ್ಮ ಸಂಸ್ಕೃತಿಯ ಪ್ರಧಾನಪಾತ್ರವನ್ನು ವಹಿಸಿವೆ ಎಂದ ಗುರುದತ್ ಸಹಿಷ್ಣುತೆಗೆ ಪೂರಕವಾಗಿ ಅದರಲ್ಲಿನ ವಿವಿಧ ವಿಚಾರಗಳನ್ನು ಉಲ್ಲೇಖಿಸಿದರು.ಧರ್ಮವು ಅಸಹಿಷ್ಣುತೆಗೆ ಎಷ್ಟು ಕಾರಣವಾಗತ್ತದೆ ಅಥವಾ ಇಲ್ಲವೇ ಎಂಬುದು ಚರ್ಚೆಯ ವಿಚಾರ. ಆದರೆ ಇಂದು ದೇಶದಲ್ಲಿ ಕೆಲ ಘಟನೆಗಳನ್ನು ಹಿಡಿದುಕೊಂಡು ಗುಲ್ಲೆಬ್ಬಿಸುತ್ತಿದ್ದಾರೆ. ಸಿಖ್ ಹತ್ಯಾಕಾಂಡ ಆದಾಗ, ತಸ್ಲಿಮಾ, ಸಲ್ಮಾನ್ ರಶ್ದಿಯ ವಿಚಾರವಾಗಿ ಬಾಯ್ಮುಚ್ಚಿದ್ದ ವಿಚಾರವಾದಿಗಳ ವಿಚಾರದ ಹಿಂದೆ ರಾಜಕಾರಣವೇ ಅಡಗಿದೆ. ಸಾಹಿತ್ಯ ಕ್ಷೇತ್ರದ ಬ್ರೋಕರ್ ಎಂದೇ ಹೆಸರಾಗಿರುವ ಅಶೋಕ್ ಬಾಜಪೇಯಿ, ನಯನತಾರಾ ಸೆಹೆಗಲ್ ಇಂತಹವರು ಹೇಳಿರುವುದು ಎಷ್ಟು ಸರಿ ಎಂದು ಆಲೋಚಿಸಬೇಕಾಗಿದೆ ಎಂದರು.
ಪ್ರಶಸ್ತಿ ವಾಪಾಸಾತಿ ಬಗ್ಗೆ ಮಾತನಾಡಿದ ಗುರುದತ್ ಧಾಭೋಲ್ಕರ, ಕಲಬುರ್ಗಿ ಅವರ ಹತ್ಯೆಯ ನೆಪವನ್ನಿಟ್ಟುಕೊಂಡು ೧೬೪೦ ಪ್ರಶಸ್ತಿ ಪುರಸ್ಕೃತರ ಪೈಕಿ ಹಿಂದಿರುಗಿಸಿದವರು ೪೦ ಮಂದಿ ಮಾತ್ರ. ಅದೂ ಕೂಡ ಪ್ರಶಸ್ತಿ ಪತ್ರ ಮಾತ್ರ ಹಿಂದಿರುಗಿಸಿ ಸಹಾಯಧನವನ್ನು ತಮ್ಮಲ್ಲೇ ಇಟ್ಟುಕೊಂಡಿರುವ ಇವರು ವಿಚಾರವಂತಿಕೆಯ ವೇಷ ಹಾಕಿಕೊಂಡು ಇಬ್ಬಂದಿತನ ತೋರುತ್ತಿದ್ದಾರೆ ಎಂದರು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಂಶೋಧಕ ಡಾ| ಷ.ಷೆಟ್ಟರ್ ಅವರು, ನಾವು ಎಷ್ಟೇ ಪಾಶ್ಚಾತ್ಯರಂತೆ ಅನುಕರಣೆ ಮಾಡಲು ಪ್ರಯತ್ನ ಪಟ್ಟರೂ ನಮ್ಮ ಸಂಸ್ಕೃತಿಯ ಬಗ್ಗೆ ಕೊನೆಯ ಮಾತು ನಮ್ಮಿಂದಾನೆ ಎಂಬುದು ನೆನಪಿನಲ್ಲಿಟ್ಟುಕೊಳ್ಳಬೇಕು. ನಮ್ಮ ಭಾಷೆಯ ಬಗ್ಗೆ ನಾವು ಎಷ್ಟೇ ಬೆಳಕು ಚೆಲ್ಲಲು ಪ್ರಯತ್ನಿಸಿದರೂ ಇತರ ಭಾಷಿಕರು ನಮ್ಮ ಭಾಷೆಯ ಬಗ್ಗೆ ಹೆಚ್ಚು ತಿಳಿದುಕೊಂಡಿರುತ್ತಾರೆ. ವೀರ ಶೈವ, ಜೈನ, ದಾಸ, ಆಧುನಿಕ ಸಾಹಿತ್ಯದ ಅಡಿಗಲ್ಲು ಜಾತಿ ಧರ್ಮದ ಆಧಾರದಲ್ಲಿದೆ ಎಂದು ತಿಳಿದುಕೊಳ್ಳುವುದು ದೊಡ್ಡ ತಪ್ಪಾಗಿದೆ. ಸಾಹಿತ್ಯ ಎಂಬುದು ಒಂದು ವರ್ಗ, ಜನಾಂಗದಿಂದ ಬೆಳೆದದ್ದಲ್ಲ ಎಂದರು.
ಅಸಹಿಷ್ಣುತೆ ಇತಿಹಾಸದುದ್ದಕ್ಕೂ ಇದೆ. ಇಂದು ಮುಕ್ತ ಮನಸ್ಸಿನಿಂದ ಸಂಶೋಧನೆ ಮಾಡುವುದೇ ಅಪರಾಧವಾಗಿದೆ. ವಿಶಾಲ ಮನೋವೃತ್ತಿಯನ್ನು ಬೆಳೆಸಲು ಸಾಧ್ಯವಾಗುತ್ತಿಲ್ಲ. ಪ್ರಜಾಪ್ರಭುತ್ವದ ಮೂಲ ಗುಣ ಸಹಿಷ್ಣುತೆಯೇ ಆಗಿದೆ. ಯಾವ ಸಮಾಜ ತನ್ನ ಬಗ್ಗೆ ಮುಕ್ತವಾದ ವಿಚಾರವನ್ನು ಹಂಚಿಕೊಂಡು ಮಂಡನೆ ಮಾಡುತ್ತದೆಯೋ ಅದು ಪ್ರಬುದ್ಧವಾದ ಸಮಾಜವಾಗುತ್ತದೆ ಎಂದ ಅವರು ನಮ್ಮ ಸಾಹಿತ್ಯವನ್ನು ಬೇರೆಯವು ಓದಲು ಅವಕಾಶ ಮಾಡಿಕೊಡಬೇಕು ಮತ್ತು ಬೇರೆ ಸಾಹಿತ್ಯದಲ್ಲಿ ಏನಿದೆ ಎಂಬುದನ್ನು ಅರಿತುಕೊಳ್ಳಬೇಕು. ಇನ್ನೊಬ್ಬರ ಟೀಕೆ ಟಿಪ್ಪಣಿಗಳ ಬಗ್ಗೆ ಸಹಿಷ್ಣುತೆ ಬೆಳೆಸಿಕೊಳ್ಳುವ ಕಾಲ ಬರಬೇಕು ಎಂದರು.
ಸ್ವಾಗತಿಸಿದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರು, ಇಂದು ಸಂಗೀತ, ಕಲೆ, ನೃತ್ಯ, ಸಿನಿಮಾಗಳ ಸಾಹಿತ್ಯ ಪ್ರಕಾರಗಳು ಆಧುನಿಕ ತಂತ್ರಜ್ಞಾನ ಬಳಕೆಯಾಗಿದೆ. ಸಿ.ಡಿ., ಡಿವಿಡಿ, ಸೆಟ್ಲೈಟ್ ಮೊದಲಾದ ಸಾಧನಗಳ ಮೂಲಕ ಜ್ಞಾನ ಪ್ರಸಾರ ಮಾಡುತ್ತಿವೆ. ಇಂದಿನ ಯುವಜನತೆ ಸಾಹಿತ್ಯದಲ್ಲಿ ಆಸಕ್ತಿ ವಹಿಸುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಇನ್ನೊಂದೆಡೆಯಲ್ಲಿ ಎಲ್ಲಿ ಸಾಹಿತ್ಯ ಸಮ್ಮೇಳನ ನಡೆದರೂ ಹಿಂದೆ ಎಂದೂ ಕಾಣದಷ್ಟು ಯುವಜನತೆ ಸಮ್ಮೇಳನದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಾರೆ. ಈ ವಿಪರ್ಯಾಸ ಗಮನಿಸಿದರೆ ಮತ್ತು ಆಧುನಿಕ ಸಾಹಿತಿಗಳಿಗೆ ಸಿಗುವ ಪ್ರೋತ್ಸಾಹ ಗಮನಿಸಿದಾಗ ಈಗ ಸಾಹಿತ್ಯದ ಪ್ರಕಾರಗಳು ಹೆಚ್ಚಿವೆ. ಧಮಸ್ಥಳದಲ್ಲಿ ಸಂಗ್ರಹದಲ್ಲಿರುವ ಅನೇಕ ಪುರಾತನ ಹಸ್ತಪ್ರತಿಗಳನ್ನು ಆಸಕ್ತರ ಬಳಕೆಗೆ ನೀಡಲಾಗುತ್ತಿದೆ. ಸಾಕಷ್ಟು ಜನರು ಇದರ ಸಹಾಯದಿಂದ ಸಂಶೋಧನೆಗಳನ್ನು ನಡೆಸಿದ್ದಾರೆ ಎಂದರು. ಈ ಸಂದರ್ಭ ಅವರು ಉದ್ಘಾಟಕರ ಎರಡು ಗ್ರಂಥಗಳನ್ನು ಬಿಡುಗಡೆಗೊಳಿಸಿದರು.
ಸಾಹಿತ್ಯ ವಿಷಯದ ಬಗ್ಗೆ ಪತ್ರಕರ್ತ ರವಿಹೆಗಡೆ, ಕನ್ನಡ ಕಾವ್ಯದಲ್ಲಿ ವಿಶ್ವಮಾನವ ಕಲ್ಪನೆ ವಿಚಾರವಾಗಿ ಸಾಹಿತಿ ಡಾ| ಲೋಕೇಶ್ ಅಗಸನಕಟ್ಟೆ, ಹಾಸ್ಯ ಸಾಹಿತ್ಯದ ಕುರಿತು ಹಾಸ್ಯ ಸಾಹಿತಿ ಎಂ.ಎಸ್.ನರಸಿಂಹ ಮೂರ್ತಿ ಉಪನ್ಯಾಸಗಳನ್ನು ನೀಡಿದರು. ವೇದಿಕೆಯಲ್ಲಿ ಧ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಪ್ರಭಾಕರ ಉಪಸ್ಥಿತರಿದ್ದರು. ಉಪನ್ಯಾಸಗಳ ನಡುವೆ ಕಾರ್ಕಳ ಯೋಗಿಶ್ ಕಿಣಿಯವರು ಊದಿ ಬಿಡು ನೀ ಪಾಂಚಜನ್ಯವ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ, ಎನಿತು ಜನ್ಮಗಳ ಪಾಪ ಹೊತ್ತು ಹಾಡುಗಳನ್ನು ಪ್ರಸ್ತುತಪಡಿಸಿದರು. ಪ್ರೊ.ಎಂ.ರಾಮಚಂದ್ರ ಅವರು ನಿರ್ವಹಿಸಿದ ಕಾರ್ಯಕ್ರಮದಲ್ಲಿ ಉದ್ಘಾಟಕರ ಸಮ್ಮಾನ ಪತ್ರವನ್ನು ಶ್ರದ್ಧಾ ಅಮಿತ್, ಅಧ್ಯಕ್ಷರ ಸನ್ಮಾನ ಪತ್ರವನ್ನು ಡಿ.ಶ್ರೇಯಸ್ ಕುಮಾರ್ ವಾಚಿಸಿದರು. ವಾಣಿ ಕಾಲೇಜಿನ ಪ್ರಾಚಾರ್ಯ ಡಿ. ಯದುಪತಿ ಗೌಡ ವಂದಿಸಿದರು.
ಈಚೆಗೆ ಚೆನ್ನೈನಲ್ಲಿ ಸುರಿದ ಮಹಾಮಳೆಗೆ ಅಪಾರ ಹಾನಿಯುಂಟಾಗಿದೆ. ಈ ಸಂದರ್ಭ ನಗರವಾಸಿಗಳ ಸಮಸ್ಯೆಗಳ ಬಗ್ಗೆ ಮಾತ್ರ ಕೇಳುತ್ತಿದ್ದೇವೆ. ನಗರಕ್ಕಿಂತಲೂ ಅಲ್ಲಿ ಸುತ್ತಲಿನ ಗ್ರಾಮೀಣ ಪ್ರದೇಶದಲ್ಲಿ ನೆರೆಯಿಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಅಲ್ಲಿನ ಸ್ಥಿತಿಗತಿಯನ್ನು ಅವಲೋಕಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ತೆರಳಲಿದ್ದಾರೆ. ತಕ್ಷಣದ ಪರಿಹಾರಕ್ಕಾಗಿ, ಸಾಂತ್ವನ ನೀಡುವುದಕ್ಕಾಗಿ ರೂ. ೫೦ ಲಕ್ಷದ ಯೋಜನೆಯನ್ನು ರೂಪಿಸಿದ್ದು ಅದನ್ನು ಒದಗಿಸಿಕೊಡುವ ಸಿದ್ದತೆ ನಡೆಯುತ್ತಿದೆ- ಡಾ| ಹೆಗ್ಗಡೆ
ಪ್ರಾಕೃತ ಭಾಷೆಯ ಅವನತಿಯಿಂದ ಸಂಸ್ಕೃತ ಭಾಷೆ ಮೌಖಿಕವಾಗಿ ಬೆಳೆಯಿತು. ಅದರ ಕೈಯನ್ನು ಹಿಡಿದುಕೊಂಡು ಕನ್ನಡ ಬೆಳೆದು ಬಂತು. ಮೂರು ಶತಮಾನಗಳ ಕಾಲ ಸಂಸ್ಕೃತವನ್ನು ಹೆಗಲಮೇಲೆ ಹೊತ್ತದ್ದು ಕನ್ನಡ. ದ್ರಾವಿಡ ಭಾಷೆಗಳ ಉಗಮ ಆದಾಗ ಕನ್ನಡಕ್ಕೆ ಮೊದಲು ಲಿಪಿ ಬಂತು ಆಮೇಲೆ ತಮಿಳಿಗೆ ಬಂತು. ಆದರೆ ಇದನ್ನು ತಮಿಳರು ಒಪ್ಪುವುದಿಲ್ಲ – ಷೆಟ್ಟರ್
ಧರ್ಮ ಮತ್ತು ಸಾಹಿತ್ಯಕ್ಕೆ ನಿಕಟವಾದ ಸಂಬಂಧ ಇದೆ. ವಸ್ತುನಿಷ್ಟವಾಗಿ ನಾವು ಧರ್ಮವನ್ನು ಆಚರಣೆ ಮಾಡಬೇಕು. ಅಸಹಿಷ್ಣುತೆಗೆ ಪರಿಹಾರ ಮಾರ್ಗ ಧರ್ಮದಲ್ಲಿದೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಭಾರತೀಯ ಸಂಸ್ಕೃತಿಯ ಸಾರ ಅಡಗಿದೆ. ಧರ್ಮದ ಅನುಷ್ಠಾನದಿಂದ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ- ಗುರುದತ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.