ಬೆಳ್ತಂಗಡಿ : ಕ್ಷೇತ್ರದಲ್ಲಿ ಕಾನೂನು ತಪ್ಪಿಯಾವುದೇ ಕೆಲಸ ಆಗಿಲ್ಲ. ಹಿಂದಿನವರು ಹಾಕಿಕೊಂಡು ಬಂದ ಪರಂಪರೆಯನ್ನು ಚಾಚೂ ತಪ್ಪದೆ ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಭಕ್ತರ ಭಕ್ತಿ, ಸೇವೆಗಳಿಂದ ಕ್ಷೇತ್ರ ಇನ್ನಷ್ಟು ಜಾಜ್ವಲ್ಯ ಮಾನವಾಗಿ ಬೆಳಗುತ್ತಿದೆ ಎಂದು ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಹೇಳಿದರು. ಅವರು ಭಾನುವಾರ ಅಮೃತವರ್ಷಿಣಿ ಸಭಾಭವನದಲ್ಲಿ ಲಕ್ಷದೀಪೋತ್ಸವ ಪ್ರಯುಕ್ತ ಉಜಿರೆಯಿಂದ ಧರ್ಮಸ್ಥಳದ ತನಕ ನಡೆದ ೩ ನೇ ವರ್ಷದ ಪಾದಯಾತ್ರೆಯಲ್ಲಿ ಭಾಗಿಯಾದವರನ್ನು ಉದ್ದೇಶಿಸಿ ಮಾರ್ಗದರ್ಶನ ಮಾಡಿದರು.
೩ನೇ ವರ್ಷದಲ್ಲಿ ಪಾದಯಾತ್ರಿಕರ ಸಂಖ್ಯೆ ದುಪ್ಪಟ್ಟಾಗಿದೆ. ಜನರು ಕ್ಷೇತ್ರದ ಕೀರ್ತಿಗೆ ಚ್ಯುತಿ ಬಾರದಂತೆ ನಮಗೆ ಬೆಂಬಲ ಕೊಟ್ಟಿದ್ದಾರೆ. ಇದರಿಂದ ನನಗೆ ಮತ್ತು ನನ್ನ ಕುಟುಂಬ ವರ್ಗಕ್ಕೆ ಹೃದಯ ತುಂಬಿ ಬಂದಿದೆ ನಿರಾಳವಾಗಿದ್ದೇನೆ. ಧರ್ಮಾಧಿಕಾರಿಯ ಪೀಠ ನನಗೆ ಭಾರವಾಗಿಲ್ಲ ಬದಲಾಗಿ ನನಗೆ ಹೊಣೆಗಾರಿಕೆಯನ್ನು ನೀಡಿದೆ. ದೇವರು ಕೊಟ್ಟ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜನರ ಸೇವೆ ಮಾಡಿದ್ದೇನೆ. ಕ್ಷೇತ್ರದ ಎಲ್ಲಾ ಸೇವಾ ಚಟುವಟಿಕೆಗಳು ನನ್ನಿಂದ ಆಗಿದೆ ಎಂದು ನಾನು ಭಾವಿಸಿಲ್ಲ. ಇದೆಲ್ಲಾ ಮುಂಜುನಾಥ ಸ್ವಾಮಿ ನನ್ನಿಂದ ಮಾಡಿಸಿದ್ದಾನೆ ಎಂದುಕೊಂಡಿದ್ದೇನೆ. ದೇವರ ಕಾರ್ಯಕ್ಕೆ ಚ್ಯುತಿ ಬಾರದಂತೆ ಶಿಸ್ತು ಇದೆ ಎಂದ ಅವರು ಕಳೆದ ಮೂರು ವರ್ಷಳಿಂದ ಕ್ಷೇತ್ರದ ಕೀರ್ತಿ ಇನ್ನಷ್ಟು ಬೆಳಿಗಿದೆ. ಭಕ್ತರ ಸಂಖ್ಯೆ ಹೆಚ್ಚಿದೆ ಎಂದರು.
ಧರ್ಮಸ್ಥಳದ ಬಗ್ಗೆ ಆರೋಪ ಮಾಡುವವರು ಒಂದನ್ನಾದರೂ ಪುರಾವೆ ಸಹಿತ ಸಾಬೀತು ಮಾಡಲಿ ಎಂದು ಶಾಸಕ ಕೆ.ವಸಂತ ಬಂಗೇರ ಈಚೆಗೆ ಹೇಳಿರುವುದನ್ನು ಅವರು ಸ್ಮರಿಸಿದರು.ಭಕ್ತರ ಅನುಕೂಲಕ್ಕಾಗಿ ದೇವರದರ್ಶನದ ಸಮಯದಲ್ಲಿ ಬದಲಾವಣೆ, ಕಾಲಮಿತಿಯಕ್ಷಗಾನ ಪ್ರದರ್ಶನ ಮೊದಲಾದ ಕ್ರಾಂತಿಕಾರಕ ಪರಿವರ್ತನೆ ಮಾಡಲಾಗಿದೆ. ಶ್ರೀ ಸ್ವಾಮಿಯ ಅನುಗ್ರಹದಿಂದ, ಪ್ರೀತಿ, ವಿಶ್ವಾಸದಿಂದ ಇನ್ನಷ್ಟು ಸೇವಾ ಕಾರ್ಯಗಳನ್ನು ಮಾಡುವುದಾಗಿ ಅವರು ಹೇಳಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಪಾದಯಾತ್ರೆಯ ಸಂಘಟಕರಲ್ಲಿ ಒಬ್ಬರಾದ ವಕೀಲ ಪ್ರತಾಪಸಿಂಹ ನಾಯಕ್ ಮಾತನಾಡಿ, ಕ್ಷೇತ್ರದಿಂದ ಇನ್ನಷ್ಟು ಜನೋಪಯೋಗಿ ಕಾರ್ಯಗಳು ನಡೆಯಬೇಕೆಂಬ ಅಪೇಕ್ಷೆ ಎಲ್ಲರದ್ದು. ಭಕ್ತ ಸಮೂಹ ಎಂದೆಂದಿಗೂ ಡಾ| ಹೆಗ್ಗಡೆಯವರ ಬೆಂಬಲಕ್ಕಿದೆ ಎಂದು ಈ ಪಾದಯಾತ್ರೆ ತೋರಿಸಿಕೊಟ್ಟಿದೆ. ವೇದಿಕೆಯಲ್ಲಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಯು. ವಿಜಯರಾಘವ ಪಡ್ವೆಟ್ನಾಯ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಇದ್ದರು. ಕಿಶೋರ್ ಹೆಗ್ಡೆ ಸ್ವಾಗತಿಸಿದರು. ಗಂಗಾಧರ ಕಾರ್ಯತಡ್ಕ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.