ಬೀಜಿಂಗ್: ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾದ ನಡುವೆ ಇರುವ ದೊಡ್ಡ ವಿವಾದವಿದೆ ಎಂದು ಚೀನಾ ಮತ್ತೊಮ್ಮೆ ಹೇಳಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಹು ಚುನ್ಯಿಂಗ್ ‘ಅರುಣಾಚಲ ಪ್ರದೇಶಕ್ಕೆ ಸಂಬಂಧಿಸಿದಂತೆ ಚೀನಾ ಮತ್ತು ಭಾರತದ ಮಧ್ಯೆ ದೊಡ್ಡ ವಿವಾದ ಇದೆ. ಇದು ನಿರಾಕರಿಸಲಾಗದ ಸಂಗತಿ’ ಎಂದಿದ್ದಾರೆ.
ಅಲ್ಲದೇ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪರಸ್ಪರ ಸ್ವೀಕಾರಾರ್ಹವಾದ ಒಪ್ಪಂದಕ್ಕೆ ಬರಲು ಪೂರಕವಾದ ವಾತಾವರಣ ನಿರ್ಮಾಣವಾಗಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವನ್ನು ಚೀನಾ ಒಪ್ಪಿಕೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
‘ಚೀನಾ ಮತ್ತು ಭಾರತ ಗಡಿಗೆ ಸಂಬಂಧಿಸಿದಂತೆ ಚೀನಾ ಯಾವತ್ತೂ ಸ್ಥಿರ ಮತ್ತು ಸ್ಪಷ್ಟವಾದ ದೃಷ್ಟಿಕೋನ ಹೊಂದಿದೆ. ಗಡಿಯಲ್ಲಿ ಶಾಂತಿ ಕಾಪಾಡಲು ಎರಡೂ ದೇಶಗಳ ಜಂಟಿ ಪ್ರಯತ್ನ ಅಗತ್ಯ ಮತ್ತು ಗಡಿ ವಿವಾದ ಸಂಧಾನಕ್ಕೆ ಅನುಕೂಲಕರ ವಾತಾವರಣ ಸೃಷ್ಟಿ ಮಾಡಬೇಕು’ ಹು ಅಭಿಪ್ರಾಯಪಟ್ಟಿದ್ದಾರೆ.
ಅರುಣಾಚಲ ಪ್ರದೇಶ ದಕ್ಷಿಣ ಟಿಬೆಟ್ನ ಒಂದು ಭಾಗ ಎಂಬುದು ಚೀನಾದ ವಾದ. ಆದರೆ ಈ ವಾದವನ್ನು ಭಾರತ ನಿರಾಕರಿಸಿದೆ. ಅಲ್ಲದೇ ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಹಲವಾರು ಬಾರಿ ಚೀನಾಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಿದೆ.
ಮುಂದಿನ ತಿಂಗಳು ಚೀನಾಗೆ ಭೇಟಿ ನೀಡಲಿರುವ ಮೋದಿ ಗಡಿ ವಿಷಯವನ್ನು ಪ್ರಸ್ತಾಪಿಸುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.