ಮಂಗಳೂರು : ಕನ್ನಡದ ಹೆಸರಾಂತ ಚಿತ್ರ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ ೨೫ನೇ ತುಳು ಚಿತ್ರ `ಏರೆಗ್ಲಾ ಪನೊಡ್ಚಿ’ ನವೆಂಬರ್ ೨೭ರಂದು ಬೆಂಗಳೂರು ಹಾಗೂ ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ. ಬಾಡಿಗೆ ವಠಾರವೊಂದರಲ್ಲಿ ನಡೆಯುವ ನಿತ್ಯ ಘಟನಾವಳಿಗಳೇ ಚಿತ್ರದ ಪ್ರಧಾನ ವಸ್ತುವಾಗಿರಲಿದ್ದು, ಚಿತ್ರದ ಟ್ರೈಲರ್ ಹಾಗೂ ಹಾಡುಗಳು ಈಗಾಗಲೇ ಜನಮೆಚ್ಚುಗೆ ಪಡೆದಿದೆ.
ಕೋಡ್ಲು ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ತಯಾರಾಗಿರುವ ಚಿತ್ರಕ್ಕೆ ಕಥೆಯನ್ನು ಬನಶಂಕರಿ ಬರೆದಿದ್ದು, ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ಕೋಡ್ಲು ರಾಮಕೃಷ್ಣ ಅವರೇ ವಹಿಸಿಕೊಂಡಿದ್ದಾರೆ. ಸಚಿನ್ ಶೆಟ್ಟಿ ಕುಂಬ್ಳೆ ಸಂಭಾಷಣೆ -ಸಹನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರವನ್ನು ಎಸ್.ಕೆ.ಶೆಟ್ಟಿ ಹಾಗೂ ಬಿ.ಎಲ್.ಮುರಳಿ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಗಿರಿಧರ ದಿವಾಣ ಸಂಗೀತ ಸಂಯೋಜಿಸಿದ್ದು, ಡಾ/ಉಮೇಶ್ ಭಟ್ ಸಾಹಿತ್ಯಕ್ಕೆ ಹೆಸರಾಂತ ಗಾಯಕರಾದ ಅನುರಾಧ ಭಟ್, ನಕುಲ್ ಅಭ್ಯಂಕರ್, ಸುಪ್ರಿಯಾ ಲೋಹಿತ್ ಹಾಗೂ ಶಿಲ್ಪಾ ಧ್ವನಿ ನೀಡಿದ್ದಾರೆ.
ಚಿತ್ರಕ್ಕೆ ಬಸವರಾಜ ಅರಸ್ ಸಂಕಲನಕಾರರಾಗಿ ದುಡಿದಿದ್ದರೆ, ಶಶಿಧರ ಶೆಟ್ಟರ್ ಛಾಯಾಗ್ರಹಣ ಮಾಡಿದ್ದಾರೆ. ತಮ್ಮ ಲಕ್ಷ್ಮಣ್ ಕಲಾನಿರ್ದೇಶನ ಮಾಡಿದ್ದಾರೆ. ಕನ್ನಡ ಚಿತ್ರರಂಗ ಹಾಗೂ ತುಳುನಾಡಿನ ಖ್ಯಾತ ಕಲಾವಿದರು ಚಿತ್ರಕ್ಕೆ ಬಣ್ಣಹಚ್ಚಿದ್ದು, ಶಿವಧ್ವಜ್, ನೀತೂ, ಸಂದೀಪ್ ಶೆಟ್ಟಿ, ರಕ್ಷಾ ಶೆಣೈ, ಇಳಾ ವಿಟ್ಲ, `ಬಿಗ್ ಬಾಸ್’ ಖ್ಯಾತಿಯ ಅನಿತಾ ಭಟ್, ರೂಪಶ್ರೀ ವರ್ಕಾಡಿ, ಶೋಭಾ ರೈ, ಭೋಜರಾಜ ವಾಮಂಜೂರು, ಸುಂದರ ರೈ ಮಂದಾರ, ಅರವಿಂದ್ ಬೋಳಾರ್, ಶಶಿಧರ ಬೆಳ್ಳಾಯರು, ರವಿ ಸುರತ್ಕಲ್, ಪ್ರದೀಪ್ ಆಳ್ವ, ರಕ್ಷಾ ಪೈ, ಕವಿತಾ ರೈ, ಶೀತಲ್, ತಮ್ಮ ಲಕ್ಷ್ಮಣ ತಾರಾಗಣದಲ್ಲಿದ್ದಾರೆ.
ತುಳುನಾಡಿನ ಗಂಡುಮೆಟ್ಟಿನ ಕಲೆಯಾದ ಯಕ್ಷಗಾನದ ಸೊಗಡು ಚಿತ್ರದಲ್ಲಿ ಸೊಗಸಾಗಿ ಮೂಡಿಬಂದಿದ್ದು, ಮಂಗಳೂರು, ಸುರತ್ಕಲ್ ಬೀಚ್ ಹಾಗೂ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರ ಸಂಪೂರ್ಣ ಹಾಸ್ಯಮಯ ಸನ್ನಿವೇಶಗಳನ್ನು ಒಳಗೊಂಡಿದ್ದು ತುಳುವರನ್ನು ರಂಜಿಸುವ ಎಲ್ಲ ಅಂಶಗಳನ್ನು ಒಳಗೊಂಡಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಚಿತ್ರ ಏಕಕಾಲಕ್ಕೆ ಬಿಡುಗಡೆಯಾಗಲಿದ್ದು, ಚಿತ್ರದ ವಿತರಕ ಮೋಹನ್ದಾಸ್ ಪೈ ಶ್ರಮವಹಿಸಿ ದುಡಿದಿದ್ದಾರೆ.
ಏರೆಗ್ಲಾ ಪನೊಡ್ಚಿ ಸಿನಿಮಾದಲ್ಲಿ ಕೌಟುಂಬಿಕ ಕಥೆಗೆ ಹಾಸ್ಯದ ಟಚ್ ನೀಡಲಾಗಿದೆ. ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳನ್ನು ಸೇರಿಸಲಾಗಿದೆ. ತುಳುರಂಗಭೂಮಿಯ ಬಹುತೇಕ ಕಲಾವಿದರು ಸಿನಿಮಾದಲ್ಲಿರುವುದರಿಂದ ಮನರಂಜನೆಗೆ ಯಾವುದೇ ಕೊರತೆ ಇಲ್ಲ. ಸಂಪೂರ್ಣ ಹಾಸ್ಯದ ಜತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶವೂ ಚಿತ್ರದಲ್ಲಿದೆ ಎಂದು ನಿರ್ದೇಶಕ ಕೋಡ್ಲು ರಾಮಕೃಷ್ಣ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.